ತರ್ಜುಮೆ
ತರ್ಜುಮೆ ಮಾಡುವುದೆಂದರೆ
ವ್ಯತ್ಯಸ್ತ ಭಾಷೆಯ ಪದಗಳ
ಯಥಾವತ್ ತಂದು ಶಬ್ದ ಜೋಡಿಸಿದಂತಲ್ಲ…
ನಿರ್ಭಾವ ವಾಕ್ಯಗಳು ಬಲಹೀನ..!
ಸುಳಿಗಾಳಿಗೆ ಚದುರಿ ಕಾರ್ಮೋಡ,
ಮತ್ತದೇ ನಿರ್ಲಿಪ್ತ ನೀಲಭಾನು..!
ಭಾಷಾಂತರವೆಂದರೆ ಸುಮ್ಮನಲ್ಲ
ಕಡಲೆದೆಯ ಬಗೆದು, ಕವಾಟಗಳ ತೆರೆದು
ನೆತ್ತರಿನ ಲೆಕ್ಕಾಚಾರ ಹಾಕಿದಂತೆ..
ಹೃತ್ಕರ್ಣ ಹೃತ್ಕಕ್ಷಿಗಳಿಗೂ ಸಿಗದ ಶುದ್ದತೆಯ ಅಂದಾಜು..
ಇಂಗಾಲ ಪ್ರಾಣವಾಯುಗಳ ತುಲನ..!!
ಎದೆ ಸೀಳಿ ಅಕ್ಷರ ಹುಡುಕಿದಂತೆ..!!
ಸುಖಾಸುಮ್ಮನೆ ತೀರಕ್ಕಪ್ಪಳಿಸುವ
ಆರ್ಭಟದ ಅಲೆಗಳಂತಲ್ಲ
ಭಾವ-ಶೂನ್ಯ , ಅರ್ಥಹೀನ…!!
ಅನುವಾದವೆಂದರೆ ರೇಶಿಮೆಯ ಸೀರೆ ನೇಯ್ದಂತೆ
ಅದೇನು ಸುಲಭ ಗ್ರಾಸವಲ್ಲ..!
ಹದವರಿತು ಶಬ್ಧಗಳ ಹೆಣೆದು
ನೇಮದಿಂದ ಎಳೆಗಳ ನೇಯಬೇಕು.
ಬಿದಿರಿನ ಚಂದ್ರಿಕೆಯಲಿ ನಾಜೂಕಾಗಿ
ಹುಳುಗಳ ಹಣ್ಣಾಗಿಸಬೇಕು..!!
ಕಕೂನ್ ಗಳ ಬೇಯಿಸಿ, ಪ್ಯೂಪಾವನ್ನು ಕೊಲ್ಲಬೇಕು
ಭಾವತೀವ್ರತೆಯನ್ನು ಕೊಂದಲ್ಲ !!
ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರಬಹುದು
ಕೆಲವೊಮ್ಮೆ ಕೊಲ್ಲದೇ ವಿಧಿಯಿಲ್ಲ..!!
ಮೂಲಪದಗಳ ಜಾಡುಹಿಡಿದು
ಅರ್ಥಕೇನು ಧಕ್ಕೆ ತರದೆ ಕಟ್ಟಿದರೆ,
ಗೀಜಗನ ಗೂಡಷ್ಟು ಅಚ್ಚುಕಟ್ಟು..!
ತೊರೆಯ ಹರಿವ ಪಾರದರ್ಶಕತೆ
ಚಿಗುರೊಡೆದ ಚೊಚ್ಚಲೆಲೆಯ ನುಣುಪು;
ಕಡಲೊಡಲ ನದಿಯೊಲವು ಸಂದಣಿಸಿದಂತೆ..!
ಶೃಂಗರಿಸಿ ವಧುವ ಹಸೆಗೇರಿಸಿದಂತೆ..!!
ಬೇರನು ಹಣ್ಣಾಗಿಸುವ ಪ್ರಕ್ರಿಯೆ..
-ಅರ್ಚನಾ ಎಚ್ , ಬೆಂಗಳೂರು
ಭಾಷಾಂತರ ಆಯಾಮಗಳ ಕುರಿತು ಕವನದಲ್ಲಿ ಚೆನ್ನಾಗಿ ವಿವರಿಸಲಾಗಿದೆ . ಧನ್ಯವಾದಗಳು ಅರ್ಚನಾ ಸಹೋದರಿ
ಧನ್ಯವಾದಗಳು
ಸೊಗಸಾದ ಅರ್ಥಪೂರ್ಣ ಕವನ, ಇಷ್ಟವಾಯಿತು
ಧನ್ಯವಾದಗಳು ಮೇಡಮ್..
ಭಾಷಾಂತರದ ಪ್ರಕ್ರಿಯೆಯ ವರ್ಣನೆ ಸೊಗಸಾಗಿದೆ
ಧನ್ಯವಾದಗಳು ಸರ್
ಭಾಷಾಂತರದಲ್ಲಿನ ಭಾವಾಭಿವ್ಯಯಕ್ತಿ ಬಗೆಗಿನ ತಮ್ಮ ಕವನ ಸೊಗಸಾಗಿದೆ.
ಧನ್ಯವಾದಗಳು…