ಪುಸ್ತಕ ಪ್ರೀತಿ
ಅಕ್ಷರ ಗೊತ್ತಿರುವವರೆಲ್ಲಾ ಓದುವುದನ್ನು ಇಷ್ಟ ಪಡುವುದು ಮಾಮೂಲು. ಪ್ರಕ್ಷುಬ್ಧಗೊಂಡ ಮನವನ್ನು ತಿಳಿಗೊಳಿಸಲು ಸಂಗೀತ ಆಲಿಸುವಂತೆ ಯಾವುದೇ ಒಳ್ಳೆಯ ಪುಸ್ತಕ ಓದುವುದು ಕೂಡ ಅತ್ಯುತ್ತಮ ಸಾಧನ. ಪುಸ್ತಕ ಪ್ರೀತಿಯು ಓದುಗನನ್ನು ಬೇರೆಯೇ ಲೋಕಕ್ಕೆ ಒಯ್ಯುವುದು ನಿಜಕ್ಕೂ ಅದ್ಭುತ!
ಈಗಿನ ದಿನಗಳಲ್ಲಿ, ಹೆಚ್ಚಿನ ಎಲ್ಲಾ ದಿನಗಳೂ ಆಯಾಯ ಸಂಬಂಧಿತ ವಿಷಯಗಳಿಗಾಗಿ ಪ್ರಾಮುಖ್ಯತೆಗಳನ್ನು ಹೊಂದಿವೆ. ಅಂತೆಯೇ ಎಪ್ರಿಲ್ 23ನೇ ದಿನವನ್ನು ಅಂತರಾಷ್ಟ್ರೀಯ ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತದೆ. 1995ನೇ ಇದೇ ದಿನದಂದು ಇದರ ಆಚರಣೆ ಆರಂಭವಾಯಿತೆನ್ನಬಹುದು. ವಿಲಿಯಂ ಶೇಕ್ಸ್ಪಿಯರ್ ಸಹಿತ ಹಲವಾರು ಪ್ರಖ್ಯಾತ ಲೇಖಕರ ಜನನ ಅಥವಾ ಮರಣ ಇದೇ ತಾರೀಕಿನಂದು ನಡೆದಿರುವುದರಿಂದ ಎಪ್ರಿಲ್ 23ನೇ ತಾರೀಕನ್ನು ವಿಶ್ವ ಪುಸ್ತಕ ದಿನಕ್ಕಾಗಿ ಆರಿಸಲಾಯಿತು.
ಮೂಲಭೂತವಾಗಿ; ಜಗತ್ತಿನಲ್ಲಿ ಪ್ರತಿಯೊಂದು ಮಗುವಿಗೂ, ಹಾಗೂ ಪ್ರತಿಯೊಬ್ಬರಿಗೂ ತಮ್ಮದೇ ಆದ ಪುಸ್ತಕವನ್ನು ಒದಗಿಸುವ ನಿಟ್ಟಿನಲ್ಲಿ ತನ್ನ ಯೋಜನೆಗಳನ್ನು ರೂಪಿಸುವುದು ಈ ದಿನದ ಉದ್ದೇಶವಾಗಿದೆ. ಇದು ಮಾತ್ರವಲ್ಲದೆ; ಯಾವುದೇ ಸಾಹಿತ್ಯಕ್ಕೆ ಉತ್ತೇಜನ ಮತ್ತು ಅದರ ಸಂರಕ್ಷಣೆಯ ಬದ್ಧತೆಯೂ ಜೊತೆಗಿದೆ. UNESCO(United Nations Educational Scientific and Cultural Organization) ಸಂಸ್ಥೆಯು ಪುಸ್ತಕ ಓದುವುದು, ಪುಸ್ತಕದ ಪ್ರಕಟಣೆ ಹಾಗೂ ಅದರ ಹಕ್ಕುಗಳ ಬಗ್ಗೆ ಆಂದೋಲನ ಹಾಗೂ ಪ್ರಚಾರಗಳಿಗೆ ಒತ್ತುಕೊಡುತ್ತದೆ.
ಇಂದಿನ ದಿನಗಳಲ್ಲಿ ಪುಸ್ತಕ ಕೊಳ್ಳುವುದರ ಜೊತೆಗೆ ಓದುವುದು ಕೂಡಾ ಕಡಿಮೆಯಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ನಿಜಕ್ಕೂ ಜನರ ಪುಸ್ತಕ ಪ್ರೀತಿ ಎಂದಿನಂತೆಯೇ ಮುಂದುವರಿದಿರುವುದು; ವರ್ಷದಲ್ಲಿ ಪ್ರಕಟವಾಗುತ್ತಿರುವ ನೂರಾರು ಭಾಷೆಗಳ ಸಾವಿರಾರು ಪುಸ್ತಕಗಳನ್ನು ಗಮನಿಸಿದರೆ ತಿಳಿಯುವುದು. ಈ ಪುಸ್ತಕಗಳಲ್ಲಿಯೂ ಎಷ್ಟೆಲ್ಲಾ ವೈವಿಧ್ಯತೆಗಳು! ಆಧ್ಯಾತ್ಮಿಕ, ವೈಚಾರಿಕ, ವೈಜ್ಞಾನಿಕ, ಹಾಸ್ಯ, ಮುಂತಾದ ಸಾಹಿತ್ಯಗಳು; ಕವನ, ನಾಟಕ, ಪ್ರಬಂಧ ಇತ್ಯಾದಿಗಳ ಸರಮಾಲೆಗಳು, ವಾರ ಪತ್ರಿಕೆ, ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ, ತಿಂಗಳಲ್ಲಿ ಪ್ರಕಟವಾಗುವ ಪುಸ್ತಕಗಳೋ ವಿವಿಧ ಭಾಷೆಗಳಲ್ಲಿ ನೂರಾರು!
ಇವುಗಳೆಲ್ಲ, ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ತಲಪುತ್ತಿರುವುದು ಪುಸ್ತಕದ ಭವಿಷ್ಯ ಇನ್ನೂ ಉಜ್ವಲವಾಗಿರುವುದನ್ನು ಸೂಚಿಸುತ್ತದೆ. ಚಿಕ್ಕಂದಿನಿಂದಲೇ ನನಗೆ ಬಹಳ ಓದುವ ಪ್ರೀತಿ ಇದ್ದುದರಿಂದ, ಪುಸ್ತಕ ಪ್ರೀತಿ ಸಹಜವಾಗಿಯೇ ಬೆಳೆದಿತ್ತೆನ್ನಬಹುದು. ತೀರಾ ಹಳ್ಳಿ ಕುಟುಂಬದಲ್ಲಿ ನಾನೇ ಚಿಕ್ಕವಳಿದ್ದುದರಿಂದ ರಜಾದಿನಗಳಲ್ಲಿ ಜೊತೆಗೆ ಆಟವಾಡಲು ಕೂಡಾ ಯಾರೂ ಇರುತ್ತಿರಲಿಲ್ಲ. ಮನೆ ಸದಸ್ಯರಿಗೆ ಬಹಳ ಓದುವ ಹವ್ಯಾಸವಿದ್ದುದರಿಂದ ಮನೆಗೆ ಆಗಾಗ ಸಾರ್ವಜನಿಕ ಗ್ರಂಥಾಲಯದಿಂದ ಒಳ್ಳೊಳ್ಳೆಯ ಕಾದಂಬರಿಗಳನ್ನು ತರುತ್ತಿದ್ದರು. ತ್ರಿವೇಣಿಯವರ ಮನೋವೈಜ್ಞಾನಿಕ ಕಾದಂಬರಿ, ತ.ರಾ.ಸುರವರ ಐತಿಹಾಸಿಕ ಕಾದಂಬರಿ, ಎಚ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ…ಎಲ್ಲಾ ಓದಿದ್ದೇ ಓದಿದ್ದು! ಆಹಾ.. ಆ ಆನಂದವೇ ಬೇರೆ.. ಅದು ಮಾತ್ರವಲ್ಲದೆ, ಬೀಗ ಜಡಿದ, ಹಳೆಯ, ಮರದ ಪೆಟಾರಿಯಲ್ಲಿ, ಇನ್ನೂ ಹಳೆಯದಾದ ಚಂದಮಾಮ, ಬಾಲಮಿತ್ರ ಪುಸ್ತಕಗಳು ಸೊಗಸಾಗಿ ಹೊಲಿದು,ಭದ್ರವಾಗಿ ಕುಳಿತಿರುತ್ತಿದ್ದವು. ಪ್ರತೀ ವಾರ್ಷಿಕ ರಜೆಗಳಲ್ಲಿ, ಇದುವೇ ಪುಸ್ತಕಗಳನ್ನು, ಹಿರಿಯರಲ್ಲಿ ಕಾಡಿ ಬೇಡಿ ಪಡೆದು, ಆಗ ತಾನೇ ಕೊಂಡುಕೊಂಡ ಅಚ್ಚ ಹೊಸ ಪುಸ್ತಕವೋ ಎಂಬಂತೆ, ಆಕರಾಸ್ಥೆಯಿಂದ, ಒಂದಕ್ಷರವನ್ನೂ ಬಿಡದೆ ಓದುವುದು ನನ್ನ ಅತ್ಯಂತ ಪ್ರೀತಿಯ ಕೆಲಸ.ಒಮ್ಮೆ ಕೈಗೆತ್ತಿಕೊಂಡರೆ, ಪುಸ್ತಕ ಓದಿ ಮುಗಿಸುವ ವರೆಗೂ ,ಅದನ್ನು ಕೆಳಗಿಡುತ್ತಿರಲಿಲ್ಲವೆನ್ನಿ..ಊಟದ ನೆನಪೂ ಇಲ್ಲದೆ!
ಈಗ, ನಮ್ಮ ಮನೆಯವರಿಗೂ ಓದುವ ಹವ್ಯಾಸವಿರುವುದರಿಂದ, ಪುಟ್ಟ ಗ್ರಂಥಾಲಯವೊಂದು ಮನೆಯೊಳಗೆ ತನ್ನದೇ ಸ್ಥಾನ ಪಡೆದಿದೆ. ವೃತ್ತಿಯಲ್ಲಿದ್ದಾಗ ಓದಲು ಬಿಡುವಿಲ್ಲವೆಂದು ನೂರಾರು ವಾರ ಮತ್ತು ಮಾಸಿಕ ಪತ್ರಿಕೆಗಳನ್ನು, ನಿವೃತ್ತಿ ಬಳಿಕ ನಿಧಾನವಾಗಿ ಓದುವೆನೆಂದು ಕೂಡಿಟ್ಟಿದ್ದೆ. ಆದರೇನು..ಆ ಬಳಿಕವೂ ಓದಲಾಗದೆ, ಸರಕಾರಿ ಶಾಲಾ ಮಕ್ಕಳ ಗ್ರಂಥಾಲಯಕ್ಕೆ ಒಪ್ಪಿಸಿದ ಬಳಿಕ ಮನಸ್ಸಿಗೆ ನೆಮ್ಮದಿ ಎನಿಸಿತು. ಆ ಶಾಲೆಯ ಮಕ್ಕಳು ತುಂಬಾ ಇಷ್ಟಪಟ್ಟು ಓದುತ್ತಿರುವರೆಂದು ತಿಳಿದು ಮನಸ್ಸು ಖುಷಿಗೊಂಡಿತು. ಮಕ್ಕಳು ಚಿಕ್ಕಂದಿನಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು; ಅವರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ. ಈಗಿನ ವೈಜ್ಞಾನಿಕ ಕಾಲಸ್ಥಿತಿಯಲ್ಲಿ ಇ-ಪತ್ರಿಕೆಗಳು, ಡಿಜಿಟಲ್ ಪುಸ್ತಕಗಳು ಯುವಜನತೆಯ ಮೇಲೆ ತಮ್ಮದೇ ಪ್ರಭಾವ ಬೀರುತ್ತಿವೆ. ಇನ್ನೂ ಮುಂದುವರಿದು, ಯಾವುದಕ್ಕೂ ಕಣ್ಣೇ ಹಾಯಿಸದೆ, ಪುಸ್ತಕವನ್ನಿಡೀ ಕೇಳುವ ಸವಲತ್ತು ಕೂಡಾ ಸಿಗುತ್ತಿದೆ. ಆದ್ದರಿಂದ ಸಾಹಿತ್ಯಕ್ಕೆಂದೂ ಸಾವಿಲ್ಲ, ಅದು ಹಿಂದಿನಿಂದಲೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ ಎಂಬುದೇ ಸಂತಸದ ಸಂಗತಿ.
-ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ
ಧನ್ಯವಾದಗಳು
ಚೆಂದದ ದರಹ…ನಾನೂ ಬಾಲ್ಯಕ್ಕೆ ಜಾರಿದೆ..ನಮ್ಮ ಕಾಲದ ಮಕ್ಕಳಿಗೆ ಚಂದಮಾಮ, ಬಾಲಮಿತ್ರಗಳೇ ಓದುವ ಹವ್ಯಾಸವನ್ನು ಬೆಳೆಸಿವೆ ಅನಿಸುತ್ತದೆ.
ಧನ್ಯವಾದಗಳು ಮಾಲಾ
” ಒಂದು ವೇಳೆ ಗ್ರಂಥಗಳಿಲ್ಲದಿದ್ದರೆ ದೇವರೇ ಮೂಕನಾಗಿ ಬಿಡುತ್ತಾನಂತೆ. ನ್ಯಾಯದೇವತೆ ನಿದ್ರಿಸುತ್ತಾಳೆ; ವಿಜ್ಞಾನದೇವತೆ ವಿಶ್ರಾಂತಿ ಪಡೆಯುತ್ತಾಳೆ, ತತ್ವಜ್ಞಾನ ಕುಂಟುತ್ತದೆ, ಉಳಿದೆಲ್ಲವೂ ಅಂಧಕಾರವಾಗಿ ಬಿಡುತ್ಯದೆ” ಇದು ಡೆನ್ಮಾರ್ಕ್ ದೇಶದ ಗ್ರಂಥಪಾಲಕನೊಬ್ಬ 1672 ರಲ್ಲಿಯೇ ಹೇಳಿದ್ದಾನಂತೆ.
ಇದು ನೆನಪಾಯಿತು…
ಶಂಕರಿ ಶರ್ಮರ ಲೇಖನ ಓದಿ ಸಂತೋಷ ಪಟ್ಟೆ.
ಧನ್ಯವಾದಗಳು ವಿಜಯಕ್ಕ.
ಇತ್ತೀಚೆಗೆ ತಂತ್ರಜ್ಞಾನ ಮುಂದುವರಿದು ಬೇರೆ ಬೇರೆ ಡಿಜಿಟಲ್ ಸಂಗತಿಗಳು ಬಂದಿದ್ದರೂ ಕೂಡಾ ಪುಟಗಳನ್ನ ತೆರೆಯುತ್ತಾ, ಸ್ಪರ್ಶಿಸುತ್ತಾ ಪುಸ್ತವನ್ನು ಓದುವುದರಲ್ಲಿರುವ ಮಜವೇ ಬೇರೆ.
ನೀವಂದುದು ನಿಜ. ಪುಸ್ತಕ ಹಿಡಿದು ಓದುವ ಆನಂದವೇ ಬೇರೆ.
ಓದಿ ತುಂಬಾಖುಷಿ aethakka .ಪುಸ್ತಕ ಓದುವಹುಚ್ಚು ನನಗೂ ಇತ್ತು .ಮೊದಲೆಲ್ಲ ಪುಸ್ತಕ ಓದುವವರೆ
ಇದ್ದರು ಈಗ ಮೊಬೈಲ್ ಬಂದಮೇಲೆ ನಿಂತಿದೆ .ಕಂಪ್ಯೂಟರಲ್ಲೊ ಮೊಬೈಲಲ್ಲೊ .ತಲ್ಲೀನರಾಗುವರು
ಮೆಚ್ಚುಗೆಗೆ ಕೃತಜ್ಞತೆಗಳು.
ನಾನೂ ಚಿಕ್ಕಂದಿನಲ್ಲಿ ಬಹಳ ಇಷ್ಟಪಟ್ಟು ಪುಸ್ತಕಗಳನ್ನು ಓದುತ್ತಿದ್ದೆ…ಸುಂದರವಾದ ಲೇಖನ
ಧನ್ಯವಾದಗಳು ಹರ್ಷಿತಾರಿಗೆ.
ಪುಸ್ತಕ ಓದುವ ಪ್ರೀತಿ ಬಗ್ಗೆ ಚೆನ್ನಾಗಿ ಬರೆದಿರಿ. ಪುಸ್ತಕ ಓದುವವರ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಈಗ ಏನಿದ್ದರೂ ಗೂಗಲ್ ಮೊರೆ ಹೋಗುತ್ತಾರೆ. ಏನಿದ್ದರೂ ಪುಸ್ತಕ ಕೈಲಿ ಹಿಡಿದು ಓದುವ ಸಂತಸ ವೆ ಬೇರೆ.
ನಿಮ್ಮ ಮೆಚ್ಚುಗೆಗೆ ಕೃತಜ್ಞತೆಗಳು ಅಕ್ಕ.
ಚಂದಮಾಮ ಚಂದದ ಕಥೆಗಾದರೆ ಕಸ್ತೂರಿ ತಿಳುವಳಿಕೆಗೆ ನನಗೆ ಚಿಕ್ಕಂದಿನ ಪುಸ್ತಕಗಳು.ಮನೆಯ ಹಿರಿಯರ ಪುಸ್ತಕ ಪ್ರೀತಿ ಮಕ್ಕಳ ಮೊಮ್ಮಕ್ಕಳ ವರೆಗೆ ..ಈಗಿನ ಡಿಜಿಟಲ್ ಯುಗದ ಮೊಮ್ಮಕ್ಕಳೂ ಪುಸ್ತಕ ಹಿಡಿದು ಕೂರುವುದನ್ನು ಕಂಡಾಗ ತೃಪ್ತಿ ಮನಸ್ಸಿಗೆ.ಲೇಖನ ಖಷಿಯಾಯಿತು.
ಧನ್ಯವಾದಗಳು
ಓದುವವರ ಸಂಖ್ಯೆ corona ಅವಧಿಯಲ್ಲಿ ಜಾಸ್ತಿ ಆಗಿರುವುದು ನಿಜವೇ. !!!!!
ಸುಂದರ ಬರಹ
ತುಂಬ ಚೆನ್ನಾಗಿದೆ.