ಮುಳ್ಳುಸೌತೆಯ ಒಳ್ಳೊಳ್ಳೆ ಅಡುಗೆಗಳು…
ವರ್ಷದ ಹೆಚ್ಚಿನ ಸಮಯದಲ್ಲಿ ಸುಲಭವಾಗಿ ಲಭ್ಯವಿರುವ ಸೌತೆಕಾಯಿಯ ಇನ್ನೊಂದು ಪ್ರಬೇಧವನ್ನು ಕರಾವಳಿಯಲ್ಲಿ ‘ಮುಳ್ಳುಸೌತೆ’ ಎನ್ನುತ್ತಾರೆ. ಎಳೆಯ ಕಾಯಿಯಾಗಿರುವಾಗ ಹಸಿರು ಬಣ್ಣದಲ್ಲಿರುವ ಸೌತೆಕಾಯಿಯ ಮೇಲೆ ಮುಳ್ಳುಗಳಿರುವುದು ಇದಕ್ಕೆ ಕಾರಣ. ಬಲಿತ ಮೇಲೆ ಹಳದಿ ಬಣ್ಣಕ್ಕೆ ತಿರುಗುವ ಮುಳ್ಳುಸೌತೆಯನ್ನು ತರಕಾರಿಯಾಗಿ ಬಳಸಿ ವಿವಿಧ ಅಡುಗೆ ತಯಾರಿಸಬಹುದು.
ಹಿಂದಿನ ರಾತ್ರಿ ನೆನೆಸಿದ ಅಕ್ಕಿ, ಸ್ವಲ್ಪ ಉಪ್ಪು , ಬಲಿತ [ ಹಣ್ಣಾದ] ಮುಳ್ಳುಸೌತೆ ಹೋಳು ತಿರುಳು (ಸಿಪ್ಪೆತೆಗೆದುದು) ಸೇರಿಸಿ ನುಣ್ಣಗೆ ರುಬ್ಬಿ.ಬೇಕಾದರೆ ಮಾತ್ರ ನೀರು ಸೇರಿಸಿ ದೋಸೆ ಮಾಡಬಹುದು.
ನೆನೆಸಿದ ಅಕ್ಕಿ ಉಪ್ಪು ಸ್ವಲ್ಪ ತೆಂಗಿನ ತುರಿ ನುಣ್ಣಗೆ ಹೆಚ್ಚು ನೀರು ಹಾಕದೆಯೆ ರುಬ್ಬಿ. ಮುಳ್ಳುಸೌತೆಯ ತಿರುಳುಸಿಪ್ಪೆ ತೆಗೆದು ಚಿಕ್ಕದಾಗಿ ತುಂಡುಮಾಡಿ ಚೂರು ಉಪ್ಪು ಹಾಕಿ ಬೆರೆಸಿಕೊಂಡು ಅಕ್ಕಿ ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ. ಬಾಡಿಸಿದ ಬಾಳೆಲೆಯಲ್ಲಿ ಸ್ವಲ್ಪ ಸ್ವಲ್ಪವೆ ಹಾಕಿ ಸುತ್ತಿ ಹಬೆಯಲ್ಲಿ ಬೇಯಿಸಿದರೆ ಮುಳ್ಳುಸೌತೆಯ ಕಡುಬು ಸಿದ್ಧವಾಗುತ್ತದೆ. ಇಡ್ಲಿಯಂತೆಯೂ ಬೇಯಿಸಬಹುದು.
ಸಿಪ್ಪೆ ತಿರುಳು ತೆಗೆದು ಮುಳ್ಳುಸೌತೆಯನ್ನು ಸಣ್ಣಗೆ ಹೆಚ್ಚಿಕೊಂಡು ಚೂರೇ ಉಪ್ಪುಹಾಕಿ ಕರಗಿ ಹೋಗದಂತೆ ಹದವಾಗಿ ಬೇಯಿಸಿ, ಬೆಲ್ಲ ಹಾಕಿ ಒಂದು ಕುದಿ ಬಂದಾಗ ತೆಂಗಿನಕಾಯಿ ಹಾಲು ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ಪಾಯಸ ಚೆನ್ನಾಗಿ ಕುದಿಸಿ ಇಳಿಸಿ .ಏಲಕ್ಕಿ ಪುಡಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ.
ನೆನೆಸಿದ ಅಕ್ಕಿ ಸ್ವಲ್ಪ ತೆಂಗಿನಕಾಯಿ ಹೆಚ್ಚು ನೀರುಹಾಕದೆ ರುಬ್ಬಿ . ಸಿಪ್ಪೆತಿರುಳು ತೆಗೆದ ಮುಳ್ಳುಸೌತೆಯನ್ನು ತುರಿಮಣೆಯಲ್ಲಿ ತುರಿದು ಬೇಕಾದಷ್ಟು ಬೆಲ್ಲ ಚೂರೇ ಉಪ್ಪು ಹಾಕಿ ಕಲಸಿ ರುಬ್ಬಿದ ಹಿಟ್ಟಿಗೆ ಸೇರಿಸಿ. ಪಡ್ಡು ಮಾಡುವಂತೆ ಬೇಯಿಸಬಹುದು. ಅಪ್ಪವನ್ನೂ ಮಾಡಬಹುದು .ಅಥವಾ ಮುಳ್ಕವೂ ಸರಿಯೇ. ಬೆಲ್ಲದ ಬದಲು ನೀರುಳ್ಳಿ. ಶುಂಠಿ ಕೊತ್ತಂಬರಿ ಕರಿಬೇವಿನ ಸೊಪ್ಪು ಚಿಕ್ಕದಾಗಿ ಕತ್ತರಿಸಿಕೊಂಡುತೆಂಗಿನತುರಿ / ಚಿಕ್ಕ ಹೋಳು ಹಾಕಿ ಖಾರದ ರುಚಿಯದನ್ನೂ ಮಾಡಿ ಸವಿಯಬಹುದು.
ಮುಳ್ಳುಸೌತೆಯ ಸಿಪ್ಪೆ ತಿರುಳು ತೆಗೆದು ಕತ್ತರಿಸಿ ಉಪ್ಪು ಹುಳಿ ಬೆಲ್ಲ ಹಾಕಿ ಬೇಯಿಸಿ ಬೇಳೆಯೊಂದಿಗೆ ಸಾಂಬಾರ್ ಚೆನ್ನಾಗಿರುತ್ತದೆ.ಹಾಗೆಯೇ ಹೋಳುಗಳನ್ನು ಉಪ್ಪು ಚಿಟಿಕೆ ಅರಷಿನದೊಂದಿಗೆ ಬೇಯಿಸಿ, ಕಾಯಿ ಹಸಿಮೆಣಸು ರುಬ್ಬಿ ಮಜ್ಜಿಗೆ / ಮೊಸರು ಸೇರಿಸಿ ಸ್ವಲ್ಪವೇ ಕುದಿ ಬಂದಾಗ ಇಳಿಸಿಟ್ಟು ತುಪ್ಪದಲ್ಲಿ ಸಾಸುವೆ ಕೆಂಪುಮೆಣಸಿನ ಒಗ್ಗರಣೆ ಹಾಕಿದರೆ ಹವ್ಯಕ ಅಡುಗೆಯಾದ ಮೇಲಾರ / ಮಜ್ಜಿಗೆ ಹುಳಿ ತಯಾರು.
ಮುಳ್ಳುಸೌತೆ ತಿರುಳನ್ನು ರುಬ್ಬಿ ಸೋಸಿದ ರಸಕ್ಕೆ ಉಪ್ಪು ಹಾಕಿ ಹಸಿಮೆಣಸು ಶುಂಠಿ ಜಜ್ಜಿ ಹಾಕಿ ಕುದಿಸಿ ಇಳಿಸಿ. ಕರಿಬೇವು ಸಾಸುವೆ ಜೀರಿಗೆ ಯೊಂದಿಗೆ ಎಣ್ಣೆ/ ತುಪ್ಪದ ಒಗ್ಗರಣೆ ಹಾಕಿದರೆ ರುಚಿಯಾದ ಸಾರು / ಸೂಪ್ ಆಗುವುದು. ಮುಳ್ಳುಸೌತೆ ಸಿಪ್ಪೆಯನ್ನು ಉಪ್ಪು, ಹುಳಿ, ಚೂರೇ ಬೆಲ್ಲ ಹಾಕಿ ಬೇಯಿಸಿ. ಕೊತ್ತಂಬರಿ ,ಇಂಗು, ಒಣಮೆಣಸು ಸ್ವಲ್ಪ ಎಣ್ಣೆಹಾಕಿ ಹುರಿದುಕೊಳ್ಳಿ. ಬೇಯಿಸಿಟ್ಟ ಸಿಪ್ಪೆ, ತೆಂಗಿನ ತುರಿ, ಹುರಿದ ಮಸಾಲೆ ಎಲ್ಲ ಒಟ್ಟಿಗೆ ರುಬ್ಬಿ ಕರಿಬೇವು ಹಾಕಿ ಒಗ್ಗರಣೆ ಇಟ್ಟಾಗ ರುಚಿಯಾದ ಚಟ್ಣಿ ತಯಾರು.
ಎಳೆಯ ಕಾಯಿಯನ್ನು ತುರಿದು / ಸಣ್ಣಗೆ ಹೆಚ್ಚಿ ಸಾಸುವೆ , ತೆಂಗಿನತುರಿ ರಬ್ಬಿ ಹಾಕಿ ಮಜ್ಜಿಗೆ / ಮೊಸರು ಸೇರಿಸಿ ಉಪ್ಪು ಬೆರೆಸಿ ಸಾಸಿವೆ ಮಾಡಬಹುದು. ಎಳೆಯದಾದ ಕಾಳುಮೆಣಸು ಹಾಕುವದೂ ಇದೆ .ತೆಳ್ಳಗಾಗಿ (ಚಿಪ್ಸ್ ತರಹ) ಹೆಚ್ಚಿ ಉಪ್ಪಿನೊಂದಿಗೆ ಹಸಿಮಣಸು ಜಜ್ಜಿ ಹಾಕಿ ಬೆರೆಸಿದರೆ “ಸಳ್ಳಿ”ಸಿದ್ದ.
ಬಲಿತು/ ಹಣ್ಣಾದ ಮುಳ್ಳುಸೌತೆಯ ದಾಸ್ತಾನು ಹಳ್ಳಿಮನೆಗಳಲ್ಲಿಯೂ ಈಗ ಇರುವುದು ಕಡಿಮೆ. ಈ ತರಕಾರಿ ಮಳೆಗಾಲ ಮುಗಿಯುವ ಸಮಯಕ್ಕೆ ಕಟಾವು ಮಾಡುವರು. ನಮ್ಮೂರಿನ ಮನೆಗಳಲ್ಲಿ ಹಿಂದೆ ದೀಪಾವಳಿ ವರೆಗೆ ದಾಸ್ತಾನಿಟ್ಟು ಗೋಪೂಜೆಗೆ ಕಡುಬು(ಕೊಟ್ಟಿಗೆ) ಮಾಡಿ ಹಟ್ಟಿಯ ಗೋವುಗಳಿಗೆ ನೈವೇದ್ಯ ಮಾಡಿ ತಿನಿಸುವ ಸಂಪ್ರದಾಯ , ಹಬ್ಬದ ವಿಶೇಷ.
-ಪಾರ್ವತಿ ಕೃಷ್ಣ ಭಟ್, ಬೆಂಗಳೂರು
ಮುಳುಸೌತೆಯ ಸವಿ ಉಣಿಸಿದಿರಿ ..ಧನ್ಯವಾದಗಳು ಅಕ್ಕಾ..
ಕೃತಜ್ಞತೆಗಳು.
ಎಷ್ಟೊಂದು ಆರೋಗ್ಯಕರವಾದ, ರುಚಿಕಟ್ಟಾದ ಅಡುಗೆಗಳು! ಚೆಂದದ ಬರಹ .
ಬಾಲ್ಯದಲ್ಲಿ ಹಳದಿ ಮುಳ್ಳುಸೌತೆಯನ್ನು ಸಾಕಷ್ಟು ತಿಂದಿದ್ದೆ. ಈಗ ನಗರದಲ್ಲಿ ಈ ತಳಿಯ ಮುಳ್ಳುಸೌತೆ ಕಾಣಸಿಗದ ಕಾರಣ, ಲಭ್ಯವಿರುವ ಹಸಿರು ಸೌತೆಕಾಯಿಯನ್ನು ಬಳಸಿ ಕೆಲವು ಅಡುಗೆ ಮಾಡಲು ಸಾಧ್ಯವಾಗುತ್ತದೆ.
super
ಒಳ್ಳೆಯ ದಾಗಿ ಬರೆದಿದ್ದೀರಾ ಪಾರ್ವತಿ ಅತ್ತಿಗೆ…
ಮುಳ್ಳು ಸೌತೆಕಾಯಿ ತಿರುಳಿನ ಸಾರು ವಿಶೇಷವಾಗಿ ತಿಳಿಯಿತು.
ಸಾಕಷ್ಟು ನೀರಿನಂಶವಿರುವ ಒಂದು ತರಕಾರಿ ಮುಳ್ಳುಸೌತೆ. ಇದರಿಂದ ತಯಾರಿಸಬಹುದಾದ ಹಲವು ಅಡುಗೆಗಳ ಪರಿಚಯವಾಯಿತು ನಿಮ್ಮ ಬರಹದಿಂದ.
ಬರಹ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.ಈಅವಕಾಶ ಮಾಡಿಕೊಟ್ಟ ಹೇಮಮಾಲಾ Thank you .!
ಬಾಯಿಯಲ್ಲಿ ನೀರೂರಿಸುವ ವಿವಿಧ ರಸ ಪಾಕಗಳನ್ನು ನಮಗೆ ಉಣಬಡಿಸಿರುವಿರಿ. ಧನ್ಯವಾದಗಳು.