ಪುಸ್ತಕ ನೋಟ : ಬದುಕಲು ಕಲಿಯಿರಿ
ಮೊದಮೊದಲು ಓದುವ ಹವ್ಯಾಸ ಶುರುವಾಗಿದ್ದು ಪುಟ್ಟ ಕೈಗಳಲ್ಲಿ ಮಕ್ಕಳಿಗಾಗೇ ಮಾಡಿರುತ್ತಿದ್ದ ಪೊರಕೆ ಹಿಡಿದು ಕಸ ಗುಡಿಸುವಾಗ ಸಿಗುವ ತುಂಡು ಕಾಗದಗಳಲ್ಲಿ. ಹೊಸದಾಗಿ ಕಲಿತ ಅಕ್ಷರಗಳನ್ನು ಹುಡುಕುವ ಸಾಹಸದಲ್ಲಿ ಸಮಯದ ಪರಿವೆಯಿಲ್ಲದೆ ತೊಡಗಿ ಬೆನ್ನಿನ ಮೇಲೆ ಬೀಳುತ್ತಿದ್ದ ಗುದ್ದುಗಳಿಂದ ಅಂತ ನೆನಪು.
ಬಹುಶಃ ನಾನಾಗ ಆರನೇ ತರಗತಿಯಲ್ಲಿದ್ದೆ. ಆ ಕಾಲದ ಎಲ್ಲಾ ಮಕ್ಕಳಂತೆ ನನಗೂ “ಚಂದಮಾಮ” ನೇ ಮೊದಲ ಒಡನಾಡಿ. ಅದರಲ್ಲಿ ಬರುತ್ತಿದ್ದ ಕಥೆಗಳು, ಅಧ್ಬುತ ಪಾತ್ರಗಳು, ಕಲ್ಪನೆಗೆ ರೆಕ್ಕೆ ಮೂಡಿಸುವ ಸುಂದರವಾದ, ಬಣ್ಣಬಣ್ಣದ ಚಿತ್ರಗಳು ಓಹ್ ಆ ಕಾಲವೇ ಹಾಗೆ. ಹಾಗೇ ಓದಿನ ಪಯಣ ಸಾಗ್ತಾ ಸಾಗ್ತಾ ಇಂಥಾ ಪ್ರಕಾರವೆನ್ನದೇ ಓದಿದ ಕಥೆ, ಕಾದಂಬರಿ, ನಾಟಕ, ಕಾವ್ಯ, ಚುಟುಕು, ಜೀವನ ಚರಿತ್ರೆ, ಆಧ್ಯಾತ್ಮ, ಪುರಾಣ, ಜಾನಪದ, ವಿಜ್ಞಾನ, ಪತ್ತೇದಾರಿ . ಹೀಗೆ ಅರ್ಥ ಆಗ್ಲಿ ಬಿಡ್ಲೀ ಸಿಕ್ಕಿದ್ದೆಲ್ಲ ಓದೋ ಹವ್ಯಾಸ ಎಷ್ಟರ ಮಟ್ಟಿಗೆ ಬೆಳೀತು ಅಂದ್ರೆ, ಓದುವುದೇ ಒಂದು ಹುಚ್ಚಾಯ್ತು. ಆ ಹುಚ್ಚು ಇನ್ನೂ ಬಿಟ್ಟಿಲ್ಲ. ಇಷ್ಟರ ಮಧ್ಯೆ ಇಷ್ಟವಾದ ಪುಸ್ತಕವೆಂದರೆ ನೆನಪಿಗೆ ನೂರಾರು ಬರುತ್ತವೆ. ಅನೇಕ ದಿನಗಳವರೆಗೂ ಮನ ಕಲಕಿ ಕೆಸರಾಗಿಸಿದ್ದು, ಗುಂಗು ಹಿಡಿಸಿದ್ದು, ಕಣ್ಣೀರು ಒರೆಸಿಕೊಳ್ಳುವ ಪ್ರಜ್ಞೆಯೂ ಇಲ್ಲದೆ ಓದಿ ಬಿಕ್ಕಿದ್ದು, ಕಾಲದ ಪರಿವೆಯೂ ಇಲ್ಲದೆ ಹಗಲು ರಾತ್ರಿ ಓದಿ ಮುಗಿಸಿದ್ದು, ಆಳವಾಗಿ ಕೆಣಕಿ ಹಿಂಸಿಸಿದ್ದು, ನಕ್ಕು ನಲಿಸಿದ್ದು ಹೀಗೇ ಅನೇಕ.
ಹೀಗೇ ಒಮ್ಮೆ ಬದುಕು ಬದಲಿಸಬಲ್ಲ ಪುಸ್ತಕ ಒಂದು ದಿನ ಸಿಕ್ಕಿತು. ಅದೇ ಶ್ರೀ ರಾಮಕೃಷ್ಣ ಮಿಷನ್ನಿನ ಸನ್ಯಾಸಿಗಳಾದ ಪರಮ ಪೂಜ್ಯ ಸ್ವಾಮಿ ಜಗದಾತ್ಮಾನಂದರು ತಮ್ಮ ಅಪಾರ ಅನುಭವ,ವಿದ್ವತ್ತು, ವ್ಯಾಪಕ ಅಧ್ಯಯನ ಎಲ್ಲವನ್ನೂ ಧಾರೆಯೆರೆದು ಅತ್ಯಂತ ಸರಳವಾಗಿ ಎಂಥವರಿಗೂ ಸುಲಭವಾಗಿ ಗ್ರಾಹ್ಯವಾಗುವಂತೆ ಭಟ್ಟಿ ಇಳಿಸಿದ ಕೃತಿ “ಬದುಕಲು ಕಲಿಯಿರಿ ” .
ಇದರಲ್ಲಿ ಮೊದಲ ಅಧ್ಯಾಯವೇ “ಪ್ರಯತ್ನದಿಂದ ಪರಮಾರ್ಥ”. ಈ ಪುಸ್ತಕದುದ್ದಕ್ಕೂ ಚಿಕ್ಕ ಚಿಕ್ಕ ಉದಾಹರಣೆಗಳ ಮೂಲಕ ಅತ್ಯಧ್ಭುತ ವಿಚಾರಗಳನ್ನು ತಿಳಿಸಿದ್ದಾರೆ, ಬದುಕಿಗೆ ಹತ್ತಿರವಾದ ಅತ್ಯಾಪ್ತವಾದ ಅನೇಕ ವಿಷಯಗಳ ಪ್ರಸ್ತಾಪವಿದೆ. ಮನುಷ್ಯ “ಪ್ರಯತ್ನದಿಂದ ಯಾವ ಎತ್ತರಕ್ಕಾದರೂ ಏರಬಲ್ಲ ” ಎಂಬ ಸತ್ಯವನ್ನು ಅನೇಕ ಮಹಾಪುರುಷರ ಜೀವನದ ಘಟನೆಗಳ ಆಧಾರದ ಮೂಲಕ ವಿವರಿಸಿದ್ದಾರೆ.
ಈ ಪುಸ್ತಕದಲ್ಲಿ ಸಾಧಾರಣ ಜೀವನಕ್ಕೆ ಉಪಯುಕ್ತವಾದ ವಿಚಾರವಿದೆ, ವಿವೇಕವಿದೆ. ಆಧ್ಯಾತ್ಮವಿದೆ, ಬದುಕುವ ಕಲೆಯ ರಹಸ್ಯವಿದೆ, ಸಾಧಕರನೇಕರ ಸಾಧನೆಯ ಶಿಖರವೇರಿದ ಮೆಟ್ಟಿಲಿನ ಬಗ್ಗೆ ವಿವರವಿದೆ, ಬದುಕಿನ ಈಚೆ ಬದುಕಿನ ಆಚೆಯ ಕಿರುನೋಟವಿದೆ , ಜನ್ಮಾಂತರದ ವಿಷಯಗಳಿವೆ. ಸಣ್ಣ ಸಣ್ಣ ಅಧ್ಯಾಯಗಳೊಂದಿಗೆ ಎಲ್ಲೂ ಬೇಸರವಾಗದೆ ಮತ್ತೆ ಮತ್ತೆ ಓದುವಂತಿರುವ ಈ ಪುಸ್ತಕವನ್ನು ಒಬ್ಬ ತಾಯಾಗಿ , ಗುರುವಾಗಿ, ಮಾರ್ಗದರ್ಶಕರಾಗಿ, ಮನಶ್ಶಾಸ್ತ್ರೀಯ ವಿಶ್ಲೇಷಕರಾಗಿ ಪೂಜ್ಯರು ನಮಗೆ ಅನುಗ್ರಹಿಸಿದ್ದಾರೆ.
– ಲತಾ ಗೋಪಾಲಕೃಷ್ಣ
ಪುಸ್ತಕ ಪ್ರೇಮ ಹೇಗೆ ಬೆಳೆಯಿತು ಎಂದು ಬಹಳ ಚೆನ್ನಾಗಿ ಬರೆದಿರಿ ಲೇಖನ ಇಷ್ಟವಾಯಿತು
ಧನ್ಯವಾದಗಳು ಸಾವಿತ್ರಿ ಭಟ್ ರವರೇ
ಧನಾತ್ಮಕ ಚಿಂತನೆಯನ್ನು ಬೋಧಿಸುವ ಪುಸ್ತಕ ಪರಿಚಯ ಸೊಗಸಾಗಿದೆ.
ಧನ್ಯವಾದಗಳು ಹೇಮರವರೇ
ನಿಮ್ಮ ಓದಿನ ಪ್ರೀತಿಯ ಕುರಿತಾದ ಮಾಹಿತಿ ಬಹಳ ಇಷ್ಟವಾಯಿತು. ಓದಿನ ಹವ್ಯಾಸ ನಿಜಕ್ಕೂ ಒಂದು ಅದ್ಭುತ ಪ್ರಪಂಚವನ್ನೇ ಸೃಷ್ಟಿಸುತ್ತದೆ ನಮ್ಮೊಳಗೇ. ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಪುಸ್ತಕ “ಬದುಕಲು ಕಲಿಯಿರಿ”.
ಧನ್ಯವಾದಗಳು ನಯನರವರೇ
ಈ ಪುಸ್ತಕ ನಾನೂ ಓದಿರುವೆ. ಬಹಳ ಚೆನ್ನಾಗಿ ಈ ಪುಸ್ತಕದ ಬಗ್ಗೆ ತಿಳಿಸಿರುವಿರಿ
ಧನ್ಯವಾದಗಳು ಕೃಷ್ಣ ಪ್ರಭಾರವರೇ
ಇದು ನನ್ನ ಅತ್ಯಂತ ಪ್ರೀತಿಯ ಪುಸ್ತಕಗಳಲ್ಲೊಂದು. ಭಾವನಾತ್ಮಕವಾಗಿ ಕುಗ್ಗಿ ಹೋಗಿರುವ ಮನಗಳನ್ನು ಹಿಡಿದೆತ್ತಿ ನಿಲ್ಲಿಸುವ ಪುಣ್ಯದ ಕೆಲಸವನ್ನು ಮಾಡುತ್ತಿದೆ, ಈ ಹೊತ್ತಗೆ. ಸರಳ, ಸುಂದರ ಸೊಗಸಾದ ಬರಹ. ಧನ್ಯವಾದಗಳು.
ಧನ್ಯವಾದಗಳು
ಧನ್ಯವಾದಗಳು
ಎಲ್ಲಾ ಮಿತ್ರರಿಗೂ ನಾನು ಹೇಳುವ ಮೊದಲನೇ ಮಾತು ಎಂದರೆ
ಬದುಕಲು ಕಲಿ ಪಾಠವನ್ನು ಓಂದು ಬಾರಿಯಾದರೂ ಓದಿ