ಸೋರೆಕಾಯಿಯ ಸೊಬಗು
ಅಡಿಗೆ ಮನೆಯ ಅಲ್ಪ ತರಕಾರಿ ಸಂಗ್ರಹದಲ್ಲಿ ನಮ್ಮ ಪಕ್ಕದ ಮನೆಯವರು ಕೊಟ್ಟಿದ್ದ ದೊಡ್ಡದಾದ ಸೋರೆಕಾಯಿಯೊಂದು ನನ್ನನ್ನೇ ನೋಡುತ್ತಾ ಕುಳಿತಿತ್ತು. ಈ ಬಿರು ಬೇಸಿಗೆಯ ಸಹಿಸಲಾರದ ಸೆಕೆಯಲ್ಲಿ ಸಹಜವಾಗಿ ಕಾವೇರುವ ಶರೀರವನ್ನು ತಂಪುಗೊಳಿಸಬಲ್ಲ ಇದು ನಮ್ಮ ಪ್ರೀತಿಯ ತರಕಾರಿಯೂ ಹೌದು. ಆರೋಗ್ಯ ದೃಷ್ಟಿಯಿಂದ; ಮುಖ್ಯವಾಗಿ ಕಾಮಾಲೆ ರೋಗದಲ್ಲಿ ಪಥ್ಯದೂಟವಾಗಿ ಪಿತ್ತಕೋಶದ ಆರೋಗ್ಯ ಕಾಪಾಡುವ ಇದಕ್ಕೆ; ಮನೆಗೆ ತರುವ ತರಕಾರಿ ಪಟ್ಟಿಯಲ್ಲಿ ಅದರ ಹೆಸರಿಲ್ಲದಿದ್ದರೂ, ಆದರದ ಸ್ವಾಗತ ಇದ್ದೇ ಇದೆ. ಸ್ವಲ್ಪ ಸಿಹಿ ರುಚಿಯ ಇದು ಉರುಟು ಮತ್ತು ಉದ್ದ ಗಾತ್ರದಲ್ಲಿದ್ದು , ವರ್ಷವಿಡೀ ಲಭ್ಯವಿರುತ್ತದೆ.
ಪಾಯಸ:
ಹೂಂ.. ಇಷ್ಟು ದೊಡ್ಡ ಗಾತ್ರದ ಸೋರೆಕಾಯಿಯನ್ನು ಏನು ಮಾಡಲೆಂದು ಯೋಚಿಸುತ್ತಿರುವಾಗ ನಮ್ಮವರ ಧ್ವನಿ ಕೇಳಿಸಿತು,”ಅದರ ಪಾಯಸ ಸೂಪರ್ ಅಲ್ವಾ, ಅದನ್ನೆ ಮಾಡುವ ಇವತ್ತು ಊಟಕ್ಕೆ.” ಸರಿ, ಅದರ ಸಿಪ್ಪೆ ತೆಗೆದು, ತೆಳುವಾಗಿ ಕತ್ತರಿಸಿ, ಚಿಟಿಕೆ ಉಪ್ಪುಹಾಕಿ ಬೇಯಿಸಿಯಾಯಿತು. ಬೆಂದ ಹೋಳನ್ನು ಸಾಕಷ್ಟು ಬೆಲ್ಲ ಹಾಕಿ ಕುದಿಸಿ, ಸ್ವಲ್ಪ ಅಕ್ಕಿ ಪುಡಿಯನ್ನು ನೀರಿನಲ್ಲಿ ಕದಡಿಸಿ, ಅದಕ್ಕೆ ಸೇರಿಸಿ, ಇನ್ನೊಮ್ಮೆ ಚೆನ್ನಾಗಿ ಕುದಿಸಿದ ನಂತರ, ತೆಂಗಿನಕಾಯಿ ಹಾಲು,ಏಲಕ್ಕಿಸೇರಿಸಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಹಾಕಿದೆ..ಆರೋಗ್ಯಕರವಾದ, ರುಚಿಯಾದ ಪಾಯಸ ತಯಾರಾಯಿತು ನೋಡಿ!
ಬರ್ಫಿ:
ಇನ್ನು ಸಿಹಿಯಾದ ಬರ್ಫಿ ತಯಾರಿಗೂ ಚೆನ್ನಾಗಿ ಒಗ್ಗಿಕೊಳ್ಳುವ ಇದರ ಬರ್ಫಿಯೂ ಮಾಡಿ ಬಿಡೋಣವೆಂದು ಸಿಪ್ಪೆ ತೆಗೆದ ಸೋರೆಕಾಯಿಯನ್ನು ಸಣ್ಣಕ್ಕೆ ತುರಿದು, ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಿದ ನಂತರ ಸಕ್ಕರೆ ಮತ್ತು ತುಪ್ಪ ಹಾಕಿ ತಳ ಬಿಡುವ ವರೆಗೆ ಸಣ್ಣ ಉರಿಯಲ್ಲಿ ಮಗುಚಿದೆ. ಕೊನೆಗೆ ಏಲಕ್ಕಿ, ಗೋಡಂಬಿ, ಸೇರಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಚಂದಕ್ಕೆ ತುಂಡರಿಸಿ ಇಟ್ಟಾಗ, ಬಿಳಿ ಬಣ್ಣದ ಸೋರೆಕಾಯಿ ಬರ್ಫಿ ನಗುತ್ತಿತ್ತು!
ಮಜ್ಜಿಗೆ ಹುಳಿ:
ಸೋರೆಕಾಯಿಯ ಹೋಳನ್ನು ಉಪ್ಪು ಹಾಕಿ ಬೇಯಿಸಿ, ತೆಂಗಿನ ತುರಿಗೆ ಒಂದು ಹಸಿಮೆಣಸನ್ನು ತುಪ್ಪದಲ್ಲಿ ಹುರಿದು ಹಾಕಿ ಸಣ್ಣಗೆ ರುಬ್ಬಿ ಬೆಂದ ಹೋಳಿನ ಜೊತೆ ಸೇರಿಸಿದ ಬಳಿಕ, ಮೂರು ಸೌಟಿನಷ್ಟು ದಪ್ಪ ಮಜ್ಜಿಗೆ ಸೇರಿಸಿ, ಕುದಿಯುವ ಮೊದಲೇ ಕೆಳಗಿಳಿಸಿದೆ. ನಾಲ್ಕು ಕಾಳು ಮೆಂತೆ ಮತ್ತು ಸಾಸಿವೆ ಜೊತೆಗೆ ಅರ್ಧ ಒಣಮೆಣಸನ್ನು ತುಪ್ಪದಲ್ಲಿ ಹುರಿದು ನಾಲ್ಕು ಕರಿಬೇವಿನ ಸೊಪ್ಪಿನೊಡನೆ ಒಗ್ಗರಣೆ ಕೊಟ್ಟಾಗ, ಪರಿಮಳದ ಮಜ್ಜಿಗೆಹುಳಿ(ಕಾಯಿಹುಳಿ) ತಯಾರಾಯಿತು ನೋಡಿ.
ಜೀರಿಗೆ ಹುಳಿ:
ಇನ್ನು, ನಮ್ಮವರ ಪ್ರೀತಿಯ ಜೀರಿಗೆ ಹುಳಿ ಮಾಡದಿದ್ದರೆ ಹೇಗೆ ಅಲ್ವಾ? ಸರಿ, ಸೋರೆಕಾಯಿಯ ಹೋಳನ್ನು ಉಪ್ಪು, ಬೆಲ್ಲ, ಖಾರಪುಡಿ, ಚಿಟಿಕೆ ಹಳದಿಪುಡಿ ಹಾಕಿ ಬೇಯಿಸಿ ಬದಿಗಿಟ್ಟು, ಅದಕ್ಕೆ ತೆಂಗಿನ ತುರಿಯ ಜೊತೆಗೆ ಸ್ವಲ್ಪ ಜೀರಿಗೆ ಹಾಕಿ ನುಣ್ಣಗೆ ರುಬ್ಬಿ,ಬೆಂದ ಹೋಳಿನೊಡನೆ ಸೇರಿಸಿ, ಕುದಿಸಿ, ಎರಡು ತುಂಡು ಒಣಮೆಣಸಿನ ಜೊತೆಗೆ ಸಾಸಿವೆಯನ್ನು ಸಿಡಿಸಿ ಕರಿಬೇವಿನ ಸೊಪ್ಪು ಒಗ್ಗರಣೆ ಕೊಟ್ಟಲ್ಲಿಗೆ ಸೊಗಸಾದ ಜೀರಿಗೆ ಹುಳಿ ಸಿದ್ಧವಾಯ್ತು.
ಸಾಸಿವೆ:
ಸೋರೆಕಾಯಿ ಸಾಸಿವೆ ಗೊತ್ತಾ? ತುಂಬಾ ರುಚಿ ಮತ್ತು ತಂಪು. ಅದನ್ನೂ ಮಾಡಿ ಬಿಡೋಣವೆಂದು; ಹೋಳನ್ನು ಉಪ್ಪು, ಬೆಲ್ಲ ಹಾಕಿ ಬೇಯಿಸಿ, ಅದು ತಣ್ಣಗಾದ ಮೇಲೆ ತೆಂಗಿನ ತುರಿಗೆ ಸ್ವಲ್ಪ ಸಾಸಿವೆ ಮತ್ತು ಒಣಮೆಣಸು ಹಾಕಿ ಸಣ್ಣಗೆ ರುಬ್ಬಿ, ದಪ್ಪ ಮಜ್ಜಿಗೆಯೊಂದಿಗೆ ಅದಕ್ಕೆ ಸೇರಿಸಿದಾಗ ಸಾಸಿವೆ ರೆಡಿ.
ಸಾಂಬಾರ್:
ಇನ್ನು ಅಡಿಗೆಯ ರಾಜ ಸಾಂಬಾರ್ ಇಲ್ಲದಿದ್ದರೆ ನಡೆದೀತೇ? ಸರಿ, ಸೋರೆಕಾಯಿ ಹೋಳನ್ನು ಸ್ವಲ್ಪ ಉಪ್ಪು,ಬೆಲ್ಲ ಮತ್ತು ಹಳದಿಪುಡಿ ಸೇರಿಸಿ ಬೇಯಿಸಿ; ಕೊತ್ತಂಬರಿ, ಜೀರಿಗೆ, ಮೆಂತೆ, ಉದ್ದಿನಬೇಳೆ, ಇಂಗು, ಒಣಮೆಣಸು,ಕರಿಬೇವಿನ ಎಲೆ ಎಲ್ಲಾ ಜೊತೆಯಾಗಿ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಹುರಿದು; ತೆಂಗಿನ ತುರಿ ಮತ್ತು ಸ್ವಲ್ಪ ಹುಳಿಯೊಂದಿಗೆ ರುಬ್ಬಿ, ಬೆಂದ ಹೋಳಿನೊಡನೆ ಸೇರಿಸಿ, ಕುದಿಸಿ; ಕರಿಬೇವು, ಸಾಸಿವೆ ಒಗ್ಗರಣೆ ಹಾಕುವುದರೊಂದಿಗೆ ಕೆಂಬಣ್ಣದ ಸಾಂಬಾರ್ ಪುಟ್ಟ ಪಾತ್ರೆಯಲ್ಲಿ ಪ್ರತ್ಯಕ್ಷ!
ಬೋಳುಹುಳಿ:
ಇನ್ನು ತೆಂಗು ಉಪಯೋಗಿಸದೆ ಮಾಡುವ ಬೋಳುಹುಳಿ ಇದ್ದರೆ ಒಳ್ಳೆದೇನೋ ಎನ್ನಿಸಿ, ಸೋರೆಕಾಯಿಯ ಹೋಳನ್ನು ಉಪ್ಪು, ಬೆಲ್ಲ,ಹುಳಿ, ಕಾಯಿಮೆಣಸು, ಚಿಟಿಕೆ ಅರಸಿನಪುಡಿ ಹಾಕಿ ಬೇಯಿಸಿ, ಕೊನೆಗೆ ಸ್ವಲ್ಪ ಇಂಗು ಮತ್ತು ಕರಿಬೇವಿನ ಜೊತೆಗೆ ಸಾಸಿವೆ, ಬೆಳ್ಳುಳ್ಳಿ ಒಗ್ಗರಣೆ ಹಾಕಿದ್ದೇ ತಡ ಘಂ ಎನ್ನುವ ಬೋಳುಹುಳಿ ತಯಾರ್ ನೋಡಿ.
ಪಲ್ಯ:
ಇನ್ನು, ಊಟಕ್ಕೆ ಪಲ್ಯವೊಂದು ಇಲ್ಲದಿದ್ದರೆ ಅಪೂರ್ಣ ಅಲ್ಲವೇ? ಸೋರೆಕಾಯಿಯನ್ನು ಸಣ್ಣಕ್ಕೆ ಹಚ್ಚಿ, ಬಾಣಲೆಯಲ್ಲಿ ತೆಂಗಿನೆಣ್ಣೆ ಜೊತೆಗೆ, ಉದ್ದಿನಬೇಳೆ, ಜೀರಿಗೆ ಮತ್ತು ಸಾಸಿವೆ ಸಿಡಿಸಿ ಕರಿಬೇವು ಎಲೆ ಹಾಕಿದ ಮೇಲೆ, ಹಚ್ಚಿಟ್ಟ ಹೋಳನ್ನು ಹಾಕಿ, ಅದಕ್ಕೆ ಸ್ವಲ್ಪ ಖಾರದ ಪುಡಿ, ಉಪ್ಪು, ಬೆಲ್ಲ, ಇಂಗು ಹಾಕಿ ಬೇಯಿಸಿ, ಮೇಲಿನಿಂದ ತೆಂಗಿನ ತುರಿ ಸೇರಿಸಿದಾಗ ಪಲ್ಯವೂ ತಯಾರಾಯ್ತು.
ಸಿಪ್ಪೆ ಚಟ್ನಿ:
ಹಾಂ..! ಇನ್ನು ಕೊನೆಯದಾಗಿ ಅಷ್ಟು ದೊಡ್ಡ ಸೋರೆಕಾಯಿಯ ಸಿಪ್ಪೆ ರಾಶಿ ಬಿದ್ದಿದೆಯಲ್ವಾ? ಅದನ್ನು ಬಿಸಾಡುವುದು ಬೇಡವೆಂದು; ಸಿಪ್ಪೆಯ ಜೊತೆಗೆ ಉಪ್ಪು, ಬೆಲ್ಲ, ಹುಳಿ, ಒಣಮೆಣಸು ಹಾಕಿ ಬೇಯಿಸಿ, ಅದನ್ನುತೆಂಗಿನ ತುರಿ ಜೊತೆಗೆ ಹಸಿ ಕೊತ್ತಂಬರಿ (ಹುರಿದ ಉದ್ದಿನಬೇಳೆಯೂ ಆಗಬಹುದು) ಸೇರಿಸಿ ರುಬ್ಬಿ, ಇಂಗು, ಸಾಸಿವೆ, ಕರಿಬೇವು ಒಗ್ಗರಣೆ ಕೊಟ್ಟೆ ನೋಡಿ.. ಪರಿಮಳದ ಚಟ್ನಿ ಸಿದ್ಧ.
ಕಡುಬು:
ಮರುದಿನ ಬೆಳಿಗ್ಗೆ ತಿಂಡಿಗೆ, ಅದರ ಕಡುಬು ಮಾಡಿದರೆ, ಚಟ್ನಿ ಜೊತೆ ತಿನ್ನಲು ತುಂಬಾ ರುಚಿಯೆಂದು ತೋರಿತು. ಬೆಳ್ತಿಗೆ ಅಕ್ಕಿ ನೆನೆಸಿ, ಅದನ್ನು ಉಪ್ಪು ಹಾಕಿ ನುಣ್ಣಗೆ ರುಬ್ಬಿ, ಸಣ್ಣಗೆ ಹಚ್ಚಿಟ್ಟಿದ್ದ ಸೋರೆಕಾಯಿಯನ್ನುಸೇರಿಸಿ, ತೋಟದ ಬಾಳೆಲೆಯನ್ನು ಬಾಡಿಸಿ, ಅದರಲ್ಲಿ ತಯಾರಿಸಿಟ್ಟ ಸೋರೆಕಾಯಿ ಮತ್ತು ರುಬ್ಬಿದ ಅಕ್ಕಿಹಿಟ್ಟಿನ ಮಿಶ್ರಣವನ್ನು ಹಾಕಿ ಸಣ್ಣ ಸಣ್ಣ ಪೊಟ್ಟಣಗಳನ್ನಾಗಿಸಿ, ಉಗಿಯಲ್ಲಿ ಬೇಯಿಸಿದ್ದೇ ಘಮಘಮಿಸುವ ತಿಂಡಿ ರೆಡಿಯಾಗಿತ್ತು…ಅದರ ಸಿಪ್ಪೆಯ ಚಟ್ನಿ ಜೊತೆ ತಿನ್ನಲು! ತಾವೂ ಬರುವಿರಲ್ಲಾ… ಸೋರೆಕಾಯಿ ಅಡಿಗೆಯ ಸೊಬಗನ್ನು ಸವಿಯಲು?
ಹುರಿದ ಬೀಜ:
ಇನ್ನು, ಸೋರೆಕಾಯಿಯಲ್ಲಿ ಸ್ವಲ್ಪ ಬೆಳೆದಿದ್ದ ಬೀಜಗಳನ್ನು ತೆಗೆದಿರಿಸಿದ್ದೆ. ಅದನ್ನು ಸ್ವಲ್ಪ ತುಪ್ಪ ಮತ್ತು ಚಿಟಿಕೆ ಉಪ್ಪು ಸೇರಿಸಿ ಹುರಿದು, ಸಂಜೆ ತಿನ್ನಲು ಇರಿಸಿದೆ. ಇದಂತು ನನಗೆ ತುಂಬಾ ಇಷ್ಟದ ತಿನಿಸು.
ಅಂತೂ, ನಮ್ಮ ಪ್ರೀತಿಯ, ಆರೋಗ್ಯಕರವಾದ ತರಕಾರಿ, ಸೋರೆಕಾಯಿಯ ವೈವಿಧ್ಯಮಯ ಅಡಿಗೆ ಬಗ್ಗೆ ತಿಳಿಯಿತಲ್ಲವೇ? ಇನ್ನೇಕೆ ತಡ…ನೀವೂ ಸಿದ್ಧರಾಗಿ, ಅಡಿಗೆ ತಯಾರಿಗೆ, ಏನಂತೀರಿ?
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ
ಧನ್ಯವಾದಗಳು
ಬೇಸಿಗೆ ಕಾಲದಲ್ಲಂತೂ ಸೋರೆಕಾಯಿ ಅತ್ಯಂತ ಆರೋಗ್ಯಕರ ತರಕಾರಿ…ಸರಳವಾದ ಉತ್ತಮ ಅಡುಗೆಗಳು
ಧನ್ಯವಾದಗಳು
ಸೋರೆಕಾಯಿಯಿಂದ ಹುಳಿ, ಬೋಳು ಹುಳಿ, ಪಲ್ಯ, ಹಲ್ವಾ ಅಷ್ಟೇ ಮಾಡಲು ಗೊತ್ತಿತ್ತು, ಈಗ ಇನ್ನೂ ಹೆಚ್ಚಿನ ಐಟಮ್ ಗಳ ಬಗ್ಗೆ ಗೊತ್ತಾಯಿತು.
ಧನ್ಯವಾದಗಳು ನಯನ ಮೇಡಂ. ಇದಲ ದೋಸೆಯೂ ತುಂಬಾ ರುಚಿಯಾಗಿರುತ್ತದೆ.
ಸೋರೆಕಾಯಿ ಉಪಯೋಗಿಸಿ ತಯಾರಿಸುವ ವಿವಿಧ ಅಡುಗೆಗಳನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು
ಕೃತಜ್ಞತೆಗಳು ನಿಮಗೆ.
ಸೋರೆ ಕಾಯಿಯಯ ಸೊಬಗಿನ ಅಡುಗೆ ನಿಜಕ್ಕೂ ದಿವ್ಯ ವಾಗಿತ್ತು..ನಿರೂಪಣೆ ಶೈಲಿ ಇಷ್ಟ ವಾಯಿತು..
ಸಾವಿತ್ರಿ ಅಕ್ಕ, ಧನ್ಯವಾದಗಳು.
ಅದೆಷ್ಟು ಅರೋಗ್ಯಪೂರ್ಣ ರೆಸಿಪಿಗಳು! ಸೋರೆಕಾಯಿಯ ಅಡುಗೆ ಬರಹ ಮನಸೂರೆಗೊಂಡಿತು! ಧನ್ಯವಾದಗಳು.
ಕೃತಜ್ಞತೆಗಳು ಹೇಮಾ.
ತುಂಬಾ ಚೆನ್ನಾಗಿದೆ. ಇನ್ನು ದೊಡ್ಡ ಸೊರೆಕಾಯಿ ಸಿಕ್ಕಿರೆ ಚಿಂತೆ ಇಲ್ಲ
ಧನ್ಯವಾದಗಳು .
ಸೊರೆಕಾಯಿ ಸ್ವಲ್ಪ ಎಳೆಯದಿರುವಾಗ ಕೊಯಿದು ಹಸಿಯಾಗಿ ತಿನ್ನಲೂ ರುಚಿ
ಹೌದು. ಕೆಲವು ತರಕಾರಿಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು ಅಲ್ಲವೇ?
ತುಂಬ ಖುಷಿಯಾಯಿತು