ಚಿಕ್ಕಮ್ಮನೊಂದಿಗೆ ತುಸು ಹೊತ್ತು….
ಅಂದು ತುಂಬ ಚಿಕ್ಕಮ್ಮನ ನೆನಪು…ಸರಿ..ಮಾತಾಡಿ ಹಗುರವಾಗುವೆನೆಂದು ಫೋನಿಸಿದೆ. ”ಹಲೋ”ಎನ್ನುವಾಗಲೇ ಅವಳ ನಗುಮಿಳಿತ ಮಧುರ ಸ್ವರ. ಹ್ಹ ಹ್ಹಾ…ಏನೋ ನಿಜವಾಗಿ ತಮಾಷೆ ಇದೆ ಎಂದು “ ಚಿಕ್ಕಮ್ಮಾ…, ನನಗೂ ಹೇಳು..,!!”ಅಂದೆ. ಅವಳಿಗೋ ನಗೆ ತಡೆಯಲೇ ಆಗುತ್ತಿಲ್ಲ. “ಇಂದು ಏನಾಯ್ತು ಗೊತ್ತಾ..ಹ್ಹ..ಹ್ಹಾ.ಹ್ಹ….”ಎಂದು ನಗುತ್ತಲೇ ವಿವರಣೆ ಕೊಟ್ಟಾಗ ನನಗೂ ತಡೆಯದೆ ಮನಸಾರೆ ನಕ್ಕುಬಿಟ್ಟೆ.
ನಡೆದ ವಿಷಯವಿದು. ಮನೆಯ ಸ್ನಾನದ ಕೋಣೆಯೊಂದರಲ್ಲಿ ಕೋಲುಜೇನು ಗೂಡು ಕಟ್ಟಿತ್ತು. ಸರಿ , ಇನ್ನು ಅದನ್ನು ಓಡಿಸಬೇಕಲ್ಲ. ಯಾವಾಗಲು ಇಂಥವಕ್ಕೆಲ್ಲ ಅಜ್ಜಿ ಮೊಮ್ಮಗಳು ಜತೆ. ಮತ್ತೆ ಅಪ್ಪ ಅಮ್ಮ ಸದಾ ಆಸ್ಪತ್ರೆ, ರೋಗಿಗಳೆಂದು ಬಿಡುವು ಕಡಿಮೆಯವರು. ತುಂಬ ಚಿಂತನ ಮಂಥನವಾಗುವಲ್ಲಿ ಕೆಲವು ದಿನಗಳೂ ಕಳೆದವು. ಜೇನುನೊಣಗಳ ಜೀವಹಾನಿಯಂತೂ ಮೊಮ್ಮಗಳು ಯೋಚಿಸಲೂ ಬಿಡಳಷ್ಟೆ. ಕೊನೆಗೆ ಯಾವುದೋ ಸಸ್ಯಮೂಲವಾದ ಅಗರ್ಬತ್ತಿಯ ಸಹಾಯದಿಂದ ಜೇನುನೊಣಗಳನ್ನು ಓಡಿಸಿ ಆಯಿತು. ಚಿಕ್ಕಮ್ಮನಿಗೆ ತವರಿನಲ್ಲಿ ಸಹೋದರರೊಂದಿಗೆ ಸೇರಿ ಜೇನುಸಾಕಣೆಯ ಬಗ್ಗೆ ಸಾಕಷ್ಟು ಅನುಭವ ಇದೆ. ಹಾಗಾಗಿ ಪೇಟೆಯಲ್ಲಿದ್ದರು ಮೊಮ್ಮಗಳಿಗೆ ಎಲ್ಲ ತಿಳಿದಿರಬೇಕು ಎಂಬ ಅಜ್ಜಿಗಿರುವ ಸಹಜವಾದ ಆಸೆ.ಕಷ್ಟಪಟ್ಟು ಜೇನುಹುಟ್ಟನ್ನು ಕಿತ್ತು ಅದರಲ್ಲಿದ್ದ ಮೊಟ್ಟೆಗಳು; ಜೇನುಸಂಗ್ರಹಿಸಿಡಲು ಬಿಟ್ಟ ಜಾಗದ ಬಗ್ಗೆ ಎಲ್ಲ ವಿವರಣೆ ಕೊಟ್ಟಾಯಿತು. ಜೇನುಹುಟ್ಟನ್ನು ಅಲ್ಲೇ ಕಟ್ಟೆಯಲ್ಲಿ ಬದಿಯಲ್ಲಿಟ್ಟು ಚಿಕ್ಕಮ್ಮ ತನ್ನ ಹೂ ಗಿಡಗಳ ಒಡನಾಟದಲ್ಲಿ ಇದ್ದಾಗ “ಅಜ್ಜೀ….ಅಜ್ಜೀ…ಆ ಜೇನುಹುಟ್ಟಿನ ಸಾಂಬಾರ್ ಮಾಡುತ್ತೀರೋ ? ಅದರಲ್ಲಿ ಹುಳದ ಮೊಟ್ಟೆ ಇದೇ.. ನನಗೆ ಬೇಡಪ್ಪಾ..” ಅಂದಳಂತೆ.ಅರ್ಥವೇ ಆಗದೆ ಅತ್ತ ತಿರುಗಿ ನೋಡಿದಾಗ ನಗುತ್ತಾ ಕುಳಿತ ಅವಳ ಅಪ್ಪ ಕಂಡುಬಂದ. ಸರಿ…ಪ್ರಶ್ನೆಯ ಮೂಲ ತಿಳಿಯಿತು ಚಿಕ್ಕಮ್ಮನಿಗೆ.
ದೂರದ ಬಿಸಿಲಿನ ಊರಿನವರಿಗೆ ನಮ್ಮ ದ.ಕ. ಜಿಲ್ಲೆಯ ಅದೂ ಕುಂಬಳೆ ಸೀಮೆಯ ಹವ್ಯಕ ಅಡುಗೆಯ ಬಗ್ಗೆ ತಿಳಿದೇ ಇರುವುದಿಲ್ಲ. ಕೇಳಿ ನೋಡಿ ಗೊತ್ತಿಲ್ಲ. ಎಲ್ಲಾ ವಿಷಯಗಳಲ್ಲೂ ತುಂಬ ಜಾಣೆ ಯಾದ ಚಿಕ್ಕಮ್ಮ ಬಾಳೆ ದಿಂಡು ,ಹೂವು ಬಳಸಿ ಪಲ್ಯ ಚಟ್ಣಿಗಳು; ತರಹಾವರಿ ಸೊಪ್ಪುಗಳ ತಂಬುಳಿ ಪತ್ರೊಡೆ ಎಲ್ಲ ಮಾಡಿ ರುಚಿ ಹಿಡಿಸಿದ್ದಳು ಮೊಮ್ಮಗಳಿಗೆ!! ಆ ಅಡುಗೆಗಳು ಆರೋಗ್ಯಕ್ಕೆ ಹೇಗೆ ಒಳ್ಳೆಯದೆಂದೂ ತಿಳಿಸಿ ಹೇಳಿದ್ದಳು ಜೇನುಹುಟ್ಟಲ್ಲೂ ಅಜ್ಜಿ ಅಡುಗೆ ಮಾಡುವರೆಂದು ಅಂದುಕೊಂಡುದೂ ತಪ್ಪಿಲ್ಲವಲ್ಲ. ಹಿಂದಿನ ದಿನವಷ್ಟೇ ಕಲ್ಲಂಗಡಿ ಸಿಪ್ಪೆ ಎಸೆಯಲು ಬಿಡದೆ ರುಚಿಯಾದ ಪಲ್ಯ , ಸಾಂಬಾರ್ ಉಂಡ ನೆನಪು !! ಅಪ್ಪ ಹಾಸ್ಯ ಮಾಡಿದುದು ತಿಳಿಯದೆ ನಂಬಿದ್ದಳು ಮಗಳು.
-ಪಾರ್ವತಿ ಕೃಷ್ಣ ಭಟ್ , ಬೆಂಗಳೂರು
ಚೆನ್ನಾಗಿದೆ ಅತ್ತೆ. ಬರೆತ್ತಾ ಇರಿ.
Tiny story..with nature gifts
ಪ್ರಯತ್ನಿಸುವೆ. ನಿಶಾ. ಧನ್ಯವಾದಗಳು
ಬರಹ ಇಷ್ಟವಾಯಿತು ..
ಪಾರ್ವತಿ ಅತ್ತಿಗೆ; ಬಹಳ ಚೆನ್ನಾಗಿ ಬರೆದಿದ್ದೀರಾ..
ಯಾವ ಚಿಕ್ಕಮ್ಮ..ಕಾರಿಂಜದವರೋ?
ಅಲ್ಲ..ಇನ್ನೊಬ್ಬರು..
ತುಂಬಾ ಚೆನ್ನಾಗಿದೆ. ಇಲ್ಲಿ ಮನಸಿಗೆ ಬಂದ ವಿಚಾರ, ಬೆಳೆಯುವ ಮಕ್ಕಳು ಮನೆಯಲ್ಲಿ ಇರುವಾಗ ಅವರಿಗೆ ಎಲ್ಲ ವಿಚಾರಗಳಲ್ಲೂ ಕುತೂಹಲ ಜಾಸ್ತಿ ಇರುತ್ತದೆ. ಇಂತಹ ಮಕ್ಕಳ ಕುತೂಹಲವನ್ನು ಸರಿಯಾದ ರೀತಿಯಲ್ಲಿ ಪರಿಹರಿಸುವವರು ಅಜ್ಜಿ ತಾತನಂತಹ ಹಿರಿಯರು. ಅದಕ್ಕೆ ಮನೆ ಅಂತ ಇದ್ದ ಮೇಲೆ ಅಲ್ಲಿ ಹಿರಿಯರೂ ಇದ್ದರೆ ಆ ಮನೆ ಮಕ್ಕಳು ಖಂಡಿತ ಸಂಸ್ಕೃತಿ, ಸಂಸ್ಕಾರಗಳನ್ನು ಅರಿತು ಸತ್ಪ್ರಜೆಗಳಾಗುತ್ತಾರೆ
ಚಿಕ್ಕಮ್ಮ ನೊಂದಿಗೆ ತುಸು ಹೊತ್ತು..ನೆನಪುಗಳು ಇಷ್ಟ ವಾಯಿತು
ಧನ್ಯವಾದಗಳು ಹೇಮಮಾಲಾ.
ಚೆನ್ನಾಗಿದೆ ಎಂದು ಪ್ರೋತ್ಸಾಹಿಸಿದ ನಿಮಗೆಲ್ಲರಿಗೆ ಧನ್ಯವಾದಗಳು.
ಪಾರ್ವತಿ ಅಕ್ಕನವರ ವಿಶೇಷ ಲೇಖನ ತುಂಬಾ
ಇಷ್ಟವಾಯಿತು. ಧನ್ಯವಾದಗಳು ಅಕ್ಕ.
ಧನ್ಯವಾದಗಳು