ತೊಲಗಿಬಿಡು ಕಿರೀಟರೂಪಿ
ಕಾಣದೆ ಕಾಡುತ್ತಿರುವೆ ನೀನು
ನೀ ಅಪ್ಪಿದಮೇಲೆ ಸೆಣಸುವರು ನಾವು
ತಪ್ಪು ನಿನ್ನದಲ್ಲ ನಮ್ಮದೇ
ರತ್ನಗಂಬಳಿ ಹಾಸಿ ಆಹ್ವಾನಿಸಿದವರು ನಾವು
ಮದ್ದಿರದೆ ಮೆರೆಯುತ್ತಿರುವೆ ಕಿರೀಟ ರೂಪಿ
ಸಿಕ್ಕ ಸಿಕ್ಕದ್ದು ತಿಂದು ನಿನ್ನ ಕರೆತಂದ
ಪಾಪಿ
ನರಳುತ್ತಿವೆ ಜೀವಗಳು ಯಾವ ಬೇಧವಿಲ್ಲದೆ
ಅಮಾಯಕರು ಬಲಿಯಾಗುತ್ತಿರುವರು
ಪ್ರಮಾದವಿಲ್ಲದೆ
ದಿನಗೂಲಿಗೆ ಹಸಿವಿನ ಸಂಕಟ
ಇದ್ದವರಿಗೆ ಬೀದಿ ಬೀದಿ ತಿರುಗುವ ಹಠ
ಎಷ್ಟು ಜನಕ್ಕೆ ಹಂಚಬಲ್ಲರು ಅನ್ನ
ಬಕಾಸುರನ ಒಡಲಿಗೆ ನೀರು ಮಜ್ಜಿಗೆಯನ್ನ
ಬೆಳೆದ ಬೆಳೆ ಕೊಳೆಯುತ್ತಿದೆ
ತಿನ್ನುವನ ಬಾಯಿಗೂ ಬೀಗ ಬಿದ್ದಿದೆ
ಬೆಳೆದವನ ರಟ್ಟೆ ಸೋಲುತ್ತಿವೆ
ಶ್ರಮದ ಯಜ್ಞ ಭಸ್ಮ ಪ್ರಸಾದ ನೀಡುತ್ತಿದೆ
ಅಂದು ಸ್ವಾತಂತ್ರಕ್ಕಾಗಿ ಬೀದಿಗಿಳಿದರು
ಇಂದು ಬದುಕಿಗಾಗಿ ಗೃಹಬಂಧಿಯಾಗಿಹರು
ಪರಕೀಯರು ಹತ್ತಿಕ್ಕುತ್ತಿದ್ದರು ಹೋರಾಟಗಾರರನ್ನ
ಇಂದು ಅವರೇ ರವಾನಿಸಿದ ಜೀವಿ
ಒತ್ತೆ ಇಟ್ಟಿದೆ ಮನುಕುಲವನ್ನು
ಫಲಿಸುತ್ತಿಲ್ಲ ಹೋಮ ಪ್ರಾರ್ಥನೆಗಳು
ಬತ್ತಿ ಉರಿದು ಆರಿತಷ್ಟೇ ನಿಂತಿಲ್ಲ ಆರ್ಥನಾದಗಳು
ಸಾಮಾಜಿಕ ಅಂತರ,ಸ್ವಚ್ಛತೆಯ ಪಾಠ
ಕಲಿಯುವವರೆಗು ನಿರಂತರ ಕೋರೋನಾ ಆರ್ಭಟ
–ಜ್ಯೋತಿ ಬಸವರಾಜ
ವಾಸ್ತವದ ಚಿತ್ರಣ
ಧನ್ಯವಾದ
ಇಂದಿನ ವಸ್ತುಸ್ಥಿತಿಯನ್ನ ವಿವರಿಸುವ ಕವನದ ಸಾಲುಗಳು
ಧನ್ಯವಾದ
ಕೊರೊನ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ..ಆದಷ್ಟು ಬೇಗ ಈ ರೋಗ ತೊಲಗಿ ಬಿಡಲಿ ಎಂದ ಪ್ರಾರ್ಥನೆ.
ಸಕಾಲಿಕ ಕವನ ಚೆನ್ನಾಗಿದೆ.