ಪರಾಗ

ಆತಂಕ

Share Button

ಬೀದಿಯಲಿ ವಾಹನದ ಸದ್ದಾಗಲೆಲ್ಲ  ಬಿಂದೂರಾಯರಿಗೆ ಅತ್ತಲೇ ಗಮನ “ರಾತ್ರಿ ಎಷ್ಟು ಹೊತ್ತಾದ್ರೂ ಸರಿ ವಾಪಸ್ ತಂದುಕೊಡ್ತೀನಿ ಭಾವಾ “ಎಂದಿದ್ದ ಭಾವಮೈದುನ ವರಾಹಮೂರ್ತಿ..ಹತ್ತಾಯ್ತು…. , ಹನ್ನೊಂದಾಯ್ತು…. ಹನ್ನೆರಡೂ ಹೊಡೆದೇಬಿಟ್ಟಿತ್ತಲ್ಲ.!

“ಎಷ್ತೊತ್ತು ಎಚ್ಚರಾಗಿರ್ತೀರಿ?ಊಟಮಾಡಿ ಮಲಗಿ ಅವನು ಬಂದಾಗ ನಾನು ಎಚ್ಚರಿಸ್ತೀನಿ.”ಮಡದಿ ಮಹಾಲಕ್ಷಮ್ಮನವರ ಆಗ್ರಹದಲ್ಲಿ ಕಳಕಳಿಯೇ ಹೆಚ್ಚು ಇದ್ದದ್ದು.

“ಹನ್ನೆರಡಾಯ್ತೆ  ಟೈಮು . ಈಗ  ಅದು ಬೆಳಗಿನ ಲೆಕ್ಕಕ್ಕೆ ಸೇರತ್ತೆ. ಬೆಳಿಗ್ಗೆ ಪೂಜೆ ಆಗಿ ತೀರ್ಥ ತೆಗೆದುಕೊಳ್ಳೋವರ್ಗೆ ಇನ್ನೆಲ್ಲಿ ಊಟ ? ಮಜ್ಜಿಗೆನೇ ಗತಿ.”ರಾಯರು ತುಸು ವ್ಯಗ್ರವಾಗಿಯೇ ನುಡಿದರು.

ನಮ್ಮದಲ್ಲದ ಒಡವೆ ಬೇರೆಯವರಿಗೆ ಕೊಡೋದು ಎಷ್ಟು ಸರಿ? ಪಕ್ಕದ ಮನೆ ಸಾಂಬಮೂರ್ತಿ ಯಾವುದೋ ಸಾವಿನ ಮನೆಗೆ ತುರ್ತಾಗಿ ಹೋಗಬೇಕಿತ್ತು.ಮನೆ ಚಿಲಕ ಭದ್ರವಿಲ್ಲ ,ನಾಳೆ ಬೆಳಗ್ಗೆವರೆಗೆ ದಯವಿಟ್ಟು  ಇಟ್ಟುಕೊಳ್ಳಿ, ರಾಯರೇ ಎಂದಿದ್ದರು.ಏನೋ ವಿಷಗಳಿಗೆ ನೆರೆಯವರಿಗೆ ಸಹಾಯ ಮಾಡಲು ಹೊರಟಿದ್ದು ತಪ್ಪೆಂದು ತೋರಲಿಲ್ಲ.ಸರವನ್ನು  ಮಡದಿ ಹಾಕಿಕೊಂಡರೆ ಇನ್ನೂ ಭದ್ರ ಎಂದು ಹೇಳಿದ್ದು ನಾನೇ ಅಲ್ಲವೆ? ಅದಾದ ಸ್ವಲ್ಪ ಹೊತ್ತಿಗೆ ಭಾವಮೈದುನ ಬಂದು “ಅಕ್ಕಾ ನಿನ್ನಿಂದ ಒಂದು ಸಹಾಯ ಆಗಬೇಕು.ನನ್ನ ಪಕ್ಕದ ಮನೆ ಸ್ನೇಹಿತ ಪಾಪ ಬಡವ ,ಮಗಳಿಗೆ ವರಾನ್ವೇಷಣೆಗೆ ಹೊರಟಿದ್ದಾನೆ ಹುಡುಗಿಯನ್ನು ಬರೀ ಕುತ್ತಿಗೆಯಲ್ಲಿ ಕರೆದುಕೊಂಡು ಹೋಗಲು ಅವನಿಗೆ ಅಳುಕು.ನಿನ್ನ ಕುತ್ತಿಗೇಲಿರೋ ಚಿನ್ನದ ಸರ ಕೊಟ್ಟಿರು. ವರಾನ್ವೇಷಣೆ ಮುಗಿದ ತಕ್ಷಣ ,ರಾತ್ರಿ ಎಷ್ಟೊತ್ತಾದರೂ ಸರಿ ವಾಪಸ್ ತಂದುಕೊಡ್ತೀನಿ .ನನ್ನ ಗ್ಯಾರಂಟಿ.ಭಾವಾ ನೀವೂ ಮನಸ್ಸು ಮಾಡ್ಬೇಕು’ ಎಂದಿದ್ದ. ಮಡದಿ ನನ್ನ ಅನುಮತಿ ಪಡೆದೇ ಕೊಟ್ಟದ್ದು.ರಾಯರ  ಧಾವಂತದ ಆಲೋಚನೆಯ ಕುದುರೆಯ ಓಡುತ್ತಲೇ ಇತ್ತು.

ಅಲ್ಲಾ ನಾನೇ ಇಂಗ್ಲಿಷ್ ಮಾಸ್ತರಾಗಿ ಮೊಪಾಸಾನ ‘ನೆಕ್ಲೇಸ್ ಕತೆಯನ್ನು ಹುಡುಗರಿಗೆ ಪಾಠ ಮಾಡಿದ್ದು ಮರೆತುಹೋಯಿತೆ?ಮಥಿಲ್ಡಾ  ಎರವಲು ತಂದ ನೆಕ್ಲೇಸ್  ಧರಿಸಿ ಅವಳ ಪತಿಯೊಂದಿಗೆ ಪಾರ್ಟಿಗೆ.ಹೋದದ್ದು ,ಅಲ್ಲಿ  ನೆಕ್ಲೇಸ್ ಕಳೆದುಹೋದದ್ದು.ಅದೇ ತರಹ ನೆಕಲೇಸ್ ಮಾಡಿಸಲು ದಂಪತಿ ಜೀವಮಾನದ ಸಂಪಾದನೆ ಮೀಸಲಿರಿಸುವುದು, ದುಡಿಯುವುದು  ಎಲ್ಲ ಚಿತ್ರ ಕಣ್ಣ  ಮುಂದೆ ಸರಿದುಹೋಯಿತು. ನೆಕ್ಲೇಸ್ ಎರವಲು ನೀಡಿದವಳು ಅದೊಂದು  ಕೃತಕ ಆಭರಣ,ಸಾಚಾ ಅಲ್ಲ ಎನ್ನುವ ರೋಚಕ ತಿರುವೂ ಆ  ಕತೆಗಿತ್ತು.ಆದರೆ ಈ ಸರ   ನಿಜವಾದದ್ದು,ಇಲ್ಲದಿದ್ದರೆ ಸಾಂಬಮೂರ್ತಿ  ಜೋಪಾನ ಮಾಡಲು ನಮ್ಮ ಸುಪರ್ದಿಗೆ ಕೊಡುತ್ತಿದ್ದರೆ?ಸಧ್ಯ ವರಾಹಮೂರ್ತಿ ಬಂದು ‘ ಸರ ಕಳೆದುಹೋಯ್ತಂತೆ ಭಾವಾ  ಅನ್ನದಿರಲಿ ಸಾಕು…..ಏನೇನೋ ಯೋಚನೆಗಳು. ನಿದ್ರೆಯಂತೂ ದೂರದ ಕನಸು.

“ಏನಿದು ಮತ್ತೆಮತ್ತೆ ಈ ಬಡಬಡಿಕೆ?ಕೊಟ್ಟಿದ್ದು ತಪ್ಪಾಯ್ತು.ಒಪ್ಪಿಕೊಳ್ಳೋಣ. ಇದೊಂದು ಸಾರಿ ನಂಬೋಣ.ವರಾಹಮೂರ್ತಿ ನನ್ನ ತಮ್ಮ ಅಂತ ವಹಿಸ್ಕೊಂಡು ಮಾತಾಡ್ತಿಲ್ಲ.ಎಷ್ಟು ವರ್ಷದಿಂದ  ಅವನನ್ನು ನೋಡ್ತಿದ್ದೀರಿ? ಅದೂ ಅಲ್ದೆ ಅವನು ಎಷ್ಟು ಬಾರಿ ನಮ್ಮ ಕಷ್ಟಕ್ಕೆ ಆಗಿಲ್ಲ?ನಿಮ್ಮ ಬ್ಯಾಂಕ್ ಸಾಲದ ಖಾತರಿಗೆ ಅವನು ಕಣ್ಣು ಮುಚ್ಚಿ ರುಜು ಹಾಕಿದ್ದು ಮರೆತುಹೋಯಿತೆ?” ಮಹಾಲಕ್ಷಮ್ಮ  ಸಮಾಧಾನಪಡಿಸುವ ರೀತಿಯಲ್ಲಿ ಹೇಳಿದರು.

ಹೀಗೆ ಎಚ್ಚರ ಕನಸು ನಿದ್ದೆಗಳ ಹೊಯ್ದಾಟದಲ್ಲೇ ರಾತ್ರಿಯೆಲ್ಲಾ ಕಳೆಯಿತು.

ಬೆಳಗಿನ ಜಾವ ಐದೂವರೆ ಅಂತ ಕಾಣ್ಸುತ್ತೆ.ಗೇಟ್ ತೆರೆದ ಸದ್ದು “ಸರ ತೊಗೊಳ್ಳಿ ಭಾವಾ”  ಅನುಮಾನವೇ  ಇಲ್ಲ . ವರಾಹಮೂರ್ತಿಯದೇ ದನಿ. ಭಲೆ,ರಾಮಾಯಣದಲ್ಲಿ ಸೀತೆಯನ್ನು ಕಂಡು ಬಂದ ಹನುಮಂತ ರಾಮನಿಗೆ ಹೇಳಿದ್ದು  “ಕಂಡೆ ಸೀತೆಯ ರಾಮಾ” ಬೇರೆ ಯಾವ ರೀತಿಯಲ್ಲಿ ಹೇಳಿದರೂ ರಾಮನ ತವಕ ನಿವಾರಣೆಯಾಗದು ಎಂದು ಅವನು ತಿಳಿದಿದ್ದ.ಅದೇ ರೀತಿಯೇ ಇವನೂ ಮಾಡಿದ್ದು ಸಂತಸ ತಂದಿತು.

ರಾಯರು ಲಗುಬಗೆಯಿಂದ ಬಾಗಿಲು ತೆರೆದರು.””ತೊಗೊಳ್ಳಿ ಭಾವಾ ಸರ,ಸ್ಕೂಟರ್ ರಾತ್ರಿ ಸ್ಟಾರ್ಟ್  ಆಗಲಿಲ್ಲ.,ಅದಕ್ಕೇ ಬರಲಿಲ್ಲ.ಶುಭಸುದ್ಧಿ,ಭಾವಾ,ಹುಡುಗಿ ಮದುವೆ ನಿಶ್ಚಯ ಆಯ್ತು ,ಮನೇಗೆ ಬಂದು ಮದುವೆಗೆ  ಕರೀತಾರಂತೆ.ಬಂದು ಆಶೀರ್ವಾದ ಮಾಡಬೇಕಂತೆ.ಅಕ್ಕಾ ಕಾಫಿ ಕೊಡು ಎಂದು”ಎಂದು ಒಂದೇ ಉಸಿರಿನಲ್ಲಿ ಮಾತಿನ ಮಳೆ ಸುರಿಸಿದ ಭಾವಮೈದುನ.

ರಾಯರೀಗ ಯಥಾಸ್ಥಿತಿಗೆ ಬಂದರು .ಸಮಸ್ಯೆಯ  ಬೆಟ್ಟ ಮಂಜಿನಂತೆ ಕರಗಿತ್ತಲ್ಲ !

-ಮಹಾಬಲ

  

3 Comments on “ಆತಂಕ

  1. Beautiful story sir . ಆರಂಭದಿಂದಲೇ ಕುತೂಹಲ ಹುಟ್ಟಿಸುತ್ತಾ ಸಾಗಿ ಕೊನೆಗೆ ಸುಖಾಂತ್ಯ ನೀಡಿದ ರೀತಿ ಚೆನ್ನಾಗಿದೆ.

  2. ಕುತೂಹಲಕಾರಿ ಕಥಾಲಹರಿ ತುಂಬಾ ಚೆನ್ನಾಗಿ ಅಂತ್ಯಗೊಂಡುದು ನೆಮ್ಮದಿಯೆನಿಸಿತು. ಚಂದದ ಕಿರುಗತೆಗೆ ಧನ್ಯವಾದಗಳು ಸರ್.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *