ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 27

Share Button

ನಾಥೂಲಾ ಪಾಸ್ ನಲ್ಲಿ ನಡೆದಾಡುತ್ತಾ..

ಬಾಬಾ ಹರಿಭಜನ್ ಸಿಂಗ್ ಸ್ಮಾರಕದ ವೀಕ್ಷಣೆ ಎಲ್ಲರಲ್ಲೂ ಧನ್ಯತಾ ಭಾವನೆ ಉಂಟು ಮಾಡಿತ್ತು. ಮುಂದೆ, ನಮ್ಮ ಪ್ರವಾಸದಲ್ಲಿ ಅತಿ ಮಹತ್ತರ ಸ್ಥಾನ ಪಡೆದ ತಾಣ..ನಾಥೂಲಾ ಪಾಸ್ ನ ಕಡೆಗೆ  ಪಯಣ ಆರಂಭ. ದೇಶದ ಈಶಾನ್ಯ ಭಾಗಲ್ಲಿರುವ ಪ್ರಸಿದ್ಧ ಇಂಡೋ-ಚೀನಾ ಸಂರಕ್ಷಿತ ಗಡಿಯಾಗಿರುವ ಇದು, ಪ್ರಾಚೀನ ಕಾಲದಲ್ಲಿ ವ್ಯಾಪಾರ, ವ್ಯವಹಾರಗಳ ನಿಮಿತ್ತ ಅತೀ ಉಪಯೋಗದಲ್ಲಿರುತ್ತಿದ್ದ ಮಾರ್ಗ, ಓಲ್ಡ್ ಸಿಲ್ಕ್ ರೂಟ್ ನ ಮೂಲಕ ಹಾದುಹೋಗುತ್ತದೆ. ದಟ್ಟ ಮಂಜು ಮುಸುಕಿದ ರಸ್ತೆಯಲ್ಲಿ ಲೈಟ್ ಬೆಳಗಿಸಿಕೊಂಡೇ ನಮ್ಮ ಕಾರುಗಳು ಮುಂದೋಡಿದರೆ, ನಮಗೆ ಹೊರಗಡೆಯ ಪ್ರಕೃತಿ ಸೌಂದರ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗುವುದಿಲ್ಲವಲ್ಲಾ ಎಂಬ ಕೊರಗು.  ‘ಎಲ್ಲರೂ ಇಲ್ಲಿ ಇಳಿಯಿರಿ’ ಎಂದಾಗ ನೋಡಿದೆವು..ಹೊರಗಡೆ ಇಳಿಯಲೇ ಭಯವಾಯ್ತು. ಪಕ್ಕದಲ್ಲಿದ್ದವರೇ ಕಾಣಿಸದಷ್ಟು ಕವಿದಿತ್ತು ಬಿಳಿ ದಟ್ಟ ಮಂಜು. ಆದರೂ ಜೀವನ ಸಾರ್ಥಕ್ಯ ಭಾವದಿಂದ ಮನಸ್ಸು ತುಂಬಿ ಬಂದಿತ್ತು. ಯಾವುದು ನಮಗೆ ದಕ್ಕದೆಂದುಕೊಂಡಿದ್ದೆವೋ ಅದು ಭಾಗ್ಯವಾಗಿ ಒದಗಿ ಬಂದಿತ್ತು.

ನಮ್ಮ ದೇಶದ ಗಡಿ ಕಾಯುವ ವೀರ ಯೋಧರು ನಡೆದಾಡುವ, ಕರ್ತವ್ಯ ನಿರ್ವಹಿಸುತ್ತಿರುವ ಪುಣ್ಯ ತಾಣ ನಾಥುಲಾ ಪಾಸ್ ನಲ್ಲಿ ನಾವು ಕಾಲೂರಿದ್ದೆವು. ಕಾಲಿರಿಸಿದಲ್ಲೆಲ್ಲಾ ದಪ್ಪ ಹಿಮರಾಶಿ. ಆದರೆ ಹಿಮಪಾತದ ಸೂಚನೆ ಇರದುದು ನಮ್ಮ ಪುಣ್ಯ!  ನೋಡಬೇಕಾದ ಗಡಿಭಾಗಕ್ಕೆ, ಸ್ವಲ್ಪ ದೂರ ರಸ್ತೆಯಲ್ಲಿ ನಡೆದು ಮೆಟ್ಟಿಲು ಹತ್ತಿ ಹೋಗಬೇಕಿತ್ತು. ಆ ಕಠಿಣ ಚಳಿಗೆ  ಹೊರಬರಲಾಗದವರು ಕಾರಲ್ಲೇ ಕುಳಿತುಬಿಟ್ಟರು. ಕೆಳಗಿಳಿದವರೆಲ್ಲಾ ಅತ್ಯುತ್ಸಾಹದಿಂದ ರಸ್ತೆಯಲ್ಲಿ ಮೇಲೇರತೊಡಗಿದೆವು. ಹಿಮರಾಶಿಯ ಮೇಲೆ ನಡೆಯುವ ಆಸೆಯಲ್ಲಿ ಹೋದಾಗ ಕಾಲು ಅದರೊಳಗೆ ಕುಸಿದು ಮುಗ್ಗರಿಸಿದ್ದೂ ಆಯಿತು.ರಸ್ತೆ ಮುಗಿದು
ಕಾಲುದಾರಿಯಲ್ಲಿ ನಡೆಯತೊಡಗಿದಾಗ ಅಲ್ಲಿದ್ದ ಯೋಧರು ನಮಗೆ ಮಾರ್ಗದರ್ಶನ ಮಾಡಿದರು. ಚಳಿಗಾಗಿ ಎಲ್ಲರ ಕೈಗಳೂ ಚರ್ಮದ ಗ್ಲೌಸ್ ನಿಂದ ಮುಚ್ಚಿದ್ದರಿಂದ ಫೋಟೋ ಕ್ಲಿಕ್ಕಿಸಲೂ ಆಗದೆ ತೊಂದರೆಯಾದದ್ದಂತೂ ನಿಜ. ಹಿಮವನ್ನು ಸರಿಸಿ ಕಾಲುದಾರಿಯನ್ನು ಸ್ವಚ್ಛವಾಗಿರಿಸಿದ್ದುದರಿಂದ ನಡೆದಾಡಲು, ಮೆಟ್ಟಿಲು ಮೇಲೇರಿ ಹೋಗಲು ಅನುಕೂಲವಾಯ್ತು. ಭಾರವಾದ ಉಡುಪು, ಬೂಟುಗಳಿದ್ದರೂ, ನಮ್ಮೂರಲ್ಲಿ ಬೇಸಿಗೆಯ ಬೆವರಲ್ಲಿ ತೊಯ್ದು ಅಭ್ಯಾಸವಾದ ನಮಗೆ, ಅವುಗಳು ಏನೇನೂ ಸಾಲದೆ, ಮೈಯ ಒಳಗಡೆಯಿಂದಲೇ, ಜ್ವರ ಬಂದವರಂತೆ ಗದಗುಟ್ಟಿ ನಡುಗುತ್ತಿದ್ದೆವು. ಪ್ರಯಾಸದಲ್ಲಿ ಮೆಟ್ಟಲೇರಿದಾಗ, ದಟ್ಟ ಮಂಜಿನಿಂದಾಗಿ ಸುತ್ತಲೂ ಏನಿದೆಯೆಂದೇ ಕಾಣಿಸದಂತಾಗಿತ್ತು.

ಅಂತೂ ಸ್ವಲ್ಪ ಮೇಲೇರಿದಾಗ, ಅಚ್ಚುಕಟ್ಟಾಗಿರಿಸಿದ್ದ, ಹಿಮ ಮುಕ್ತವಾದ ಯುದ್ಧ ಸೈನಿಕರ ಸ್ಮಾರಕವು ಗೋಚರಿಸಿತು. ಕೆಲವರು ಅಲ್ಲಿಗೆ ಹೋಗಿ ಸೆಲ್ಯೂಟ್ ಹೊಡೆದು ಗೌರವಾರ್ಪಣೆ ಮಾಡಿದರು. ಚಳಿಯ ಪರಿವೆಯೇ ಇಲ್ಲದೆ ಅಲ್ಲಲ್ಲಿ ಓಡಾಡುತ್ತಿದ್ದ ಯೋಧರನ್ನು ಕಂಡು ಮನಸ್ಸು ತುಂಬಿ ಬಂತು.. ಅಭಿಮಾನದಿಂದ! ಜೀವದ ಹಂಗು ತೊರದು ದೇಶ ರಕ್ಷಣೆ ಮಾಡುವ ಯೋಧರನ್ನು ಕಣ್ಣಾರೆ ಕಾಣುವ ಭಾಗ್ಯ! ಚಳಿಯಲ್ಲಿ ಕೆಲವು ತಾಸುಗಳನ್ನು ಕಳೆಯಲೇ ಕಷ್ಟವಾಗುವ ನಮಗೆ, ವರ್ಷವಿಡೀ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಬಗ್ಗೆ ಯೋಚಿಸುವಾಗ ಮನಸ್ಸು ಭಾರವಾಗುತ್ತದೆ, ಜೊತೆಗೆ ನಮ್ಮ ಬಗ್ಗೆಯೇ ನಮಗೆ ಕೀಳರಿಮೆ ಕಾಡಲಾರಂಭಿಸುವುದು ಸುಳ್ಳಲ್ಲ. ಅಲ್ಲೇ ಪಕ್ಕದಲ್ಲಿ ಶೀಟಿನಿಂದ ರಚಿಸಿದ ಪುಟ್ಟ ಕಟ್ಟಡದೊಳಗೆ ಕೆಲವು ಯೋಧರು ಕುಳಿತಿದ್ದರು. ಅಲ್ಲೇ ಪಕ್ಕದಲ್ಲಿ ಹತ್ತಿಪ್ಪತ್ತು ಮೆಟ್ಟಲೇರಿದರೆ ಸಿಗುವುದೇ ಸಮುದ್ರ ಮಟ್ಟದಿಂದ 14,200ಅಡಿ ಎತ್ತರದಲ್ಲಿರುವ ಇಂಡೋ-ಚೀನಾ ಸಂರಕ್ಷಿತ ಗಡಿ. ಅತ್ಯಂತ ಶೀತಲ ಗಾಳಿ  ಜೋರಾಗಿ ಬೀಸಿ, ಹೆಜ್ಜೆ ಮುಂದಕ್ಕಿಡಲು ತಡೆಯೊಡ್ಡುತ್ತಿತ್ತು. ಉತ್ಸಾಹೀ ಪ್ರವಾಸಿಗರು ಗಡಿಭಾಗದಲ್ಲಿ ನಿಂತು ಸಾರ್ಥಕತೆಯನ್ನು ಅನುಭವಿಸಿದರು. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಅರ್ಧ ವರೆಗೆ ಮೆಟ್ಟಲೇರಿ ತೃಪ್ತಿಪಟ್ಟೆ. ಅತೀ ತೀವ್ರ ಗತಿಯಲ್ಲಿ ಆಗುತ್ತಿರುವ ಹವಾಮಾನ ವೈಪರೀತ್ಯಗಳ ನಡುವೆಯೂ  ಜೀವದ ಹಂಗು ತೊರೆದು ಜನ್ಮಭೂಮಿಯ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ವೀರ ಯೋಧರಿಗೆ ನಾವು ಎಷ್ಟು ಆಭಾರಿಗಳಾಗಿದ್ದರೂ ಕಡಿಮೆಯೇ.

ಅಲ್ಲಿಂದ ಹಿಂತಿರುಗುವಾಗ, ನಮ್ಮ ಫೋಟೋ ಕೊಟ್ಟರೆ ಅದನ್ನು ಲಗತ್ತಿಸಿ ಅಲ್ಲಿಯ ಕಮಾಂಡರ್ ಸಹಿ ಸಹಿತದ ಸರ್ಟಿಫಿಕೇಟ್ ನ್ನೂ ಕೊಡುವರು. ಅಲ್ಲಿಯ ನೆನಪಿಗಾಗಿ ಇದೊಂದು ಅತ್ಯಮೂಲ್ಯವಾದ ವಸ್ತುವೆನ್ನುವುದರಲ್ಲಿ ಖಂಡಿತಾ ಎರಡು ಮಾತಿಲ್ಲ. ಅದರಲ್ಲಿರುವ ಒಂದು ಸಾಲು ನಮ್ಮ ಒಳಗಣ್ಣು  ತೆರೆಸುವಂತಿದೆ, “When you go home, tell them of us and say, that for your tomorrow, we gave our today ” ..ನಿಜವಾಗಿಯೂ ಹೌದಲ್ಲವೇ?? ಕಮಾಂಡರ್ ಇಂದ್ರಜೀತ್ ಅವರು ನಮ್ಮ ಸರ್ಟಿಫಿಕೇಟ್ ನಲ್ಲಿ ಸಹಿ ಮಾಡಿಕೊಟ್ಟುದನ್ನು ನೋಡುವಾಗ, ಈಗಲೂ ನಾವು ನಾಥುಲಾ ಪಾಸ್ ನಲ್ಲಿಯೇ ಓಡಾಡುತ್ತಿರುವಂತೆ ಭಾಸವಾಗುವುದರ ಜೊತೆಗೆ ಅಲ್ಲಿಯ ನೆನಪು ಸದಾ ಹಸಿರಾಗಿಯೇ ಇರುವಂತೆ ಮಾಡಿದೆ.


ಒಂದು ತಾಸು ನಾವಲ್ಲಿ ಸುತ್ತಾಡಿದಾಗಲೂ ಅಲ್ಲಿಯ ಸುಂದರ ಪ್ರಕೃತಿಯ   ಪೂರ್ಣ ಸ್ವರೂಪದ ಒಂದೇ ಒಂದು ಛಾಯಾಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ..ದಟ್ಟ ಮಂಜಿನಿಂದಾಗಿ. ಆದರೆ, ದೈವ ಚಿತ್ತವನ್ನು ಬಲ್ಲವರು ಯಾರು? ಅಲ್ಲಿಂದ ಹೊರಡಲು ನಮ್ಮ ವಾಹನಗಳ ಬಳಿ ಹಿಮದ ಮೇಲೆ ಓಲಾಡಿಕೊಂಡು ಬರುತ್ತಿದ್ದಂತೆ ಒಮ್ಮಿಂದೊಮ್ಮೆಲೇ ನಿಸರ್ಗದ ಛಾಯೆಯೇ ಬದಲಾಯಿತು. ಅಹಾ..ಅದ್ಭುತ!! ಕಂಡು ಕೇಳರಿಯದ ನಯನಮನೋಹರ ದೃಶ್ಯ ನಮ್ಮ ಕಣ್ಮುಂದೆ ರಾರಾಜಿಸುತ್ತಿತ್ತು. ಮಂಜು ಪೂರ್ತಿ ಕರಗಿ, ಸೂರ್ಯನ ಬೆಳಕಿನಿಂದ  ಸ್ಪಟಿಕ ರೂಪದಲ್ಲಿ ಹಿಮಗಿರಿಯು ಕಂಗೊಳಿಸುವುದು ನೋಡಲು ನೂರು ಕಣ್ಣುಗಳೂ ಸಾಲದೇನೋ! ಅದರ ಭವ್ಯತೆಯನ್ನು ಕಣ್ಮನಗಳಲ್ಲಿ ಮಾತ್ರ ತುಂಬಿಕೊಳ್ಳಬೇಕಾಯ್ತು..ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ತಯಾರಿ ನಡೆಸುವಷ್ಟರೊಳಗೆ ಆ ದೃಶ್ಯ ಕ್ಷಣಾರ್ಧದಲ್ಲಿ ಮಾಯವಾಗಿ, ದಟ್ಟ ಮಂಜಿನ ಪರದೆಯಿಂದ ನಿಸರ್ಗವಿಡೀ ಮತ್ತೊಮ್ಮೆ ಮುಚ್ಚಿಯೇ ಹೋಯಿತು.

ಸಿಕ್ಕಿದ ಭಾಗ್ಯವನ್ನು ಸವಿದು ಮೇಲಿನಿಂದ ಕೆಳಕ್ಕೆ ನಮ್ಮ ವಾಹನಗಳು ಇಳಿಯುತ್ತಿದ್ದಂತೆ, ನೂರಾರು ಬಿಳಿ ಕಾರುಗಳು ಕೆಳಗಿನ ರಸ್ತೆ ತಿರುವುಗಳಲ್ಲಿ ಸೂರ್ಯನ ಕಿರಣಗಳಿಗೆ ಪ್ರತಿಫಲಿಸಿ ಹೊಳೆದು ಪೃಕೃತಿ ದೇವಿಯ ತುರುಬಿನಲ್ಲಿ ಕಂಗೊಳಿಸುವ  ಬಿಳಿ ಮಲ್ಲಿಗೆ ಮಾಲೆಯಂತೆ ಗೋಚರಿಸುತ್ತಿತ್ತು. ಅದಾಗಲೇ ಸಂಜೆ ಆರು ಗಂಟೆ ಆಗುತ್ತಾ ಬಂದುದರಿಂದ ಬೇಗ ಹೊರಡಬೇಕಿತ್ತು. ನಾವು ಬಾಡಿಗೆಗೆ ಪಡೆದಿದ್ದ ಜರ್ಕಿನ್ ಇತ್ಯಾದಿ   ದಿರುಸುಗಳನ್ನು ಹಿಂತಿರುಗಿಸಲು ಹಾಗೂ ಹೊಟ್ಟೆ ಗಟ್ಟಿ ಮಾಡಿಕೊಳ್ಳು ಸಲುವಾಗಿ ಹಿಮಾಲಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವುದು ಅನಿವಾರ್ಯವಾಗಿತ್ತು. ಅಲ್ಲಿ ಎಲ್ಲರೂ ಸ್ವಲ್ಪ ಸಮಯವನ್ನು ಕಳೆದು  ಸುಧಾರಿಸಿಕೊಂಡು,  ಹಸಿದ ಹೊಟ್ಟೆಯನ್ನು ಸಮಾಧಾನಿಸಿ ಹೊರಟಾಗ ಮನಸ್ಸು ಸಂತೃಪ್ತಿಗೊಂಡಿತ್ತು…ಆದರೆ ನಮ್ಮ ಹೋಟೇಲ್ ಸೇರುವ ತವಕದಲ್ಲಿತ್ತು…

(ಮುಂದುವರಿಯುವುದು..)

ಹಿಂದಿನ ಸಂಚಿಕೆ ಇಲ್ಲಿದೆ :ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 26

– ಶಂಕರಿ ಶರ್ಮ, ಪುತ್ತೂರು.
   

4 Responses

  1. Jayalaxmi says:

    ಚೆನ್ನಾಗಿದೆ

  2. ನಯನ ಬಜಕೂಡ್ಲು says:

    ಈ ಎಪಿಸೋಡ್ ಬಹಳ ಇಷ್ಟವಾಯಿತು ಮೇಡಂ. ಹಿಮದಿಂದಾವೃತ ಪ್ರದೇಶದ ಸೊಗಸಾದ ವಿವರಣೆ, ಅಲ್ಲಿನ ಸೈನಿಕರ ಹೃದಯಸ್ಪರ್ಶಿ “ನಿಮ್ಮ ನಾಳೆಗಳಿಗೆ ನಮ್ಮ ಇವತ್ತಿನ ದಿನವನ್ನು ಕೊಡುತ್ತಿದ್ದೇವೆ” ಅನ್ನುವ ಅದ್ಭುತ ಮಾತುಗಳು ಎಲ್ಲವೂ ಸೂಪರ್. ಫೋಟೋ ತೆಗೀಲಿಕ್ಕೆ ಆಗದಿದ್ರೂ ಆ ದೃಶ್ಯಗಳು ನಿಮ್ಮ ಮನಸಿನ ಪುಟಗಳಲ್ಲಿ ಹೇಗೆ ಅಚ್ಚಾಗಿದೆ ಅನ್ನುವುದು ಈ ಬರಹದಿಂದಲೇ ಅರ್ಥವಾಗುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: