ಇಲ್ಲದ್ದನ್ನು ಇದೆ ಎಂದು ನಂಬಿಸುವ ಹಟ ಬೇಡ
ಭೂತಗನ್ನಡಿ ಹಿಡಿದು ಬಿಂಬಿಸುವ ಹಟ ಬೇಡ
ಎದೆಯ ಮಾತುಗಳನ್ನು ನೇರ ಹೇಳೋಣಲ್ಲ
ತೋರುಗಾಣಿಕೆಯಲ್ಲಿ ಮೆರೆಯುವ ಹಟ ಬೇಡ
ಸಹಜತೆಯಲ್ಲೇ ಚೆಲುವು ಕುಟಿಲತೆಯಲ್ಲೇನಿದೆ
ನೈಜತೆಯ ಬಚ್ಚಿಟ್ಟು ನಟಿಸುವ ಹಟ ಬೇಡ
ಚಣಕ್ಕೊಂದು ಸಲ ಬಣ್ಣ ಬದಲಿಸುತ್ತದೆ ಲೋಕ
ಭಂಡತನವೇ ಬದುಕೆಂದು ನಡೆಯುವ ಹಟ ಬೇಡ
ಹಸಿದಾಗ ಉಂಡು ನಿದ್ದೆ ಬಂದಾಗ ಮಲಗಬೇಕು
ಪ್ರಕೃತಿ ನಿಯಮಗಳನ್ನು ಮುರಿಯುವ ಹಟ ಬೇಡ
ಸುರಂಗದ ಕೊನೆಯಲ್ಲಿ ಬೆಳಕು ಇದ್ದೇ ಇದೆ
ಕಣ್ಣು ಬಿಗಿದು ಕತ್ತಲನು ಕಾಣುವ ಹಟ ಬೇಡ
ನೀನು ನೀನೇ ಹೌದು, ಮರೆಯದಿರು ‘ಜಂಗಮ’
ಆಟ ಮುಗಿಸಲು ‘ಜೋಕರ್’ ಆಗುವ ಹಟ ಬೇಡ
-ಡಾ.ಗೋವಿಂದ ಹೆಗಡೆ
ಚೆನ್ನಾಗಿದೆ ಸರ್, ಸಹಜತೆಯ ಪಾಠ.
ಚಂದದ ಗಝಲ್.