ಪ್ರಜ್ಞೆಯೆಡೆಗೆರಡು ನುಡಿ
ಮಕ್ಕಳಾಟದ ಹಾಗೆ ತಿಳಿಯದಿರು ಚೊಕ್ಕದಲಿ
ಸಕ್ಕರೆಯ ತೆರನಾದ ಆಶಯವನಿರಿಸುತಲಿ
ಸಿಕ್ಕ ಸಿಕ್ಕಲ್ಲೆಲ್ಲ ಅಡ್ಡಾಡುವಾಸೆಯನು ಬಿಟ್ಟು
ಇಕ್ಕು ಕರವನು ಕ್ರಿಮಿಯ ಸೋಂಕು ಬಿಡಿಸಿ.
ದಕ್ಕಲಾರದು ಜೀವ ಜೀವನದ ಮಜಲುಗಳು
ಹಕ್ಕು ಇಹುದೆನುತ ಪ್ರಜ್ಞೆಯನು ಮರೆಯುತಲಿ
ಬೆಕ್ಕು ಮನೆಯೊಳಗೆ ತಾನಿರುವ ರೀತಿಯಲಿರಲಿ
ಸಿಕ್ಕುಗೊಳದಿರುವಂತೆ ಜಾಡ್ಯವು ದೇಹವನ್ನು ಕೊಳೆಸಿ
ಅಂತರವ ಕಾಯ್ದುಕೊಂಡಿರು ಸಕಲ ಕಾರ್ಯದಲಿ
ಚಿಂತನೆಯನಿರಿಸುತ್ತ ಲೋಕ ಸೌಖ್ಯಗಳೆಡೆಗೆ
ತಂತಿಯಲಿ ವಿದ್ಯುತ್ತು ಹರಿದಾಡಿ ಮುಟ್ಟಿದೆಡೆ
ಕಂತಿಕೊಳ್ಳಲು ಧಮನಿ ಹರಣವನು ಅಳಿಸಿ
ಜೀವನದ ವಿಧಿಗಳನು ತಿದ್ದಿ ಕೊಳ್ಳಲೆ ಬೇಕು
ಸಾವಿನೆಡೆ ತೆರಳದಿರುವಂಥ ಆಶಯದೊಡನೆ
ಕಾವ ದೇವನ ಸ್ಮರಿಸಿ ಮತ ಮತಿಯ ಬೇಧವನು
ಹಾವು ಹರಿವಂದದಲಿ ಸರಸರನೆ ತ್ಯಜಿಸಿ
– ಡಾ ಸುರೇಶ ನೆಗಳಗುಳಿ, ಮಂಗಳೂರು
Nice sir. ಎಚ್ಚರಿಸುವ ಸಾಲುಗಳು,
ಸೊಗಸಾದ ಕವನ.