ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 26

Share Button


ಹುತಾತ್ಮ ಯೋಧನ ಸ್ಮಾರಕದತ್ತ..

ಪರ್ವತದ ತಪ್ಪಲಿನ ಕಡಿದಾದ ಏರು ರಸ್ತೆಯಲ್ಲಿ ಕಾರುಗಳು ಸಾಗುತ್ತಿದ್ದಂತೆಯೇ ಅದರ ಪರಿಣಾಮ ಒಳಗಿರುವವರ ಮೇಲಾಗಲು ಪ್ರಾರಂಭವಾಗಬೇಕೇ!? ಕೆಲವರಿಗೆ ಹೊಟ್ಟೆಯೊಳಗೆ ಸಂಕಟ, ಸುಸ್ತು, ವಾಂತಿ..ಇತ್ಯಾದಿಗಳು. ಅದರಲ್ಲಿ ನಾನೂ ಒಬ್ಬಳಾದುದು ನನ್ನ ದುರಾದೃಷ್ಟ. ಪಾಪ್ ಕಾರ್ನ್ ತನ್ನ ಪ್ರಭಾವವನ್ನು ಅಷ್ಟೇನೂ ಬೀರಲಿಲ್ಲವೆಂದು ನನ್ನ ಭಾವನೆ. ಕಷ್ಟಪಟ್ಟು, ಮುಂದಿನ  ಪ್ರಯಾಣಕ್ಕೆ ನನ್ನನ್ನು ಅನುವುಗೊಳಿಸುವುದರಲ್ಲಿ ಮಗ್ನಳಾದೆ!

ಆಮೆ ನಡಿಗೆಯಲ್ಲಿ, ಪ್ರವಾಸಿಗರ ಹತ್ತಿಪ್ಪತ್ತು ಬಿಳಿ ಕಾರುಗಳು ಒಂದರ ಹಿಂದೆ ಒಂದು ಕಾರವಾನ್ ನಂತೆ ಸಾಗುವುದು, ಎತ್ತರದ ತಿರುವುಗಳಲ್ಲಿ ಆ ಬೆಟ್ಟಗಳಿಗೆ ಎಳೆದ ಬೆಳ್ಳಿ ರೇಖೆಯಂತೆ ಗೋಚರಿಸುತ್ತಿತ್ತು. ಒಂದು ಕಡೆ, ಸಮತಟ್ಟಾದ ಪ್ರದೇಶದಲ್ಲಿ ಎಲ್ಲರ ಕಾರುಗಳನ್ನು ತಡೆಹಿಡಿಯಲಾಯಿತು. ಅಲ್ಲಿ ನಮ್ಮ ಗುರುತಿನ ಚೀಟಿಯ ಪರಿಶೀಲನೆ ನಡೆಯುವುದಿತ್ತು. ನಮ್ಮೆಲ್ಲರ ಕೈಯಲ್ಲಿ ತಯಾರಾಗಿ ಕುಳಿತಿದ್ದವು.. ಸ್ವಲ್ಪ ಆತಂಕದಿಂದ ಭದ್ರವಾಗಿ ಹಿಡಿದ ಗುರುತಿನ ಚೀಟಿಗಳು.  ದೇವರ ದಯೆಯಿಂದ ಯಾವ ಪರಿಶೀಲನೆಯೂ ಇಲ್ಲದೆ ನಮ್ಮನ್ನು ಮುಂದಕ್ಕೆ ಬಿಟ್ಟಾಗ ನಾವೆಲ್ಲರೂ ನೆಮ್ಮದಿಯ ಉಸಿರು ಬಿಟ್ಟೆವೆನ್ನಿ.

ಮುಂದಿನ ನಮ್ಮ ತಾಣವೇ “ಬಾಬಾ ಹರಿಭಜನ್ ಸಿಂಗ್ ಸ್ಮಾರಕ”.  ಮಂಜು ಮುಸುಕಿದ, ಸಮತಟ್ಟಾದ ವಿಶಾಲ ಪ್ರದೇಶದಲ್ಲಿ ಕೆಲವು ಕಟ್ಟಡಗಳು ಕಂಡು ಬಂದುವು. ಸ್ವಲ್ಪ ಜನ ಯೋಧರು ಕಟ್ಟಡದ ಬಳಿ ಅಡ್ಡಾಡುತ್ತಿದ್ದರು. ಉಳಿದಂತೆ ನಮ್ಮಂತಹ ಪ್ರವಾಸಿಗರು ಚಳಿಗೆ ನಡುಗುತ್ತಾ ಕುತೂಹಲದಿಂದ ವೀಕ್ಷಿಸುತ್ತಿದ್ದರು. ನನಗಂತೂ, ಮಣ ಭಾರದ ಕೋಟು ಮತ್ತು ಶೂ ಹಾಕಿದ್ದರೂ
ತಡೆಯಾರದ ಚಳಿ.. ಹೊಟ್ಟೆಯಲ್ಲಿ ಸಂಕಟ. ಯಾರಲ್ಲೂ ಹೇಳದೆ, ಸ್ಮಾರಕದತ್ತ  ಹೊರಟೆ. ಎಲ್ಲಿದ್ದೇನೆಂಬ ಪೂರ್ಣ ಅರಿವು ಆಗದಿದ್ದರೂ, ಬಲವಂತವಾಗಿ ಮನಸ್ಸನ್ನು ಎಳೆದು ತಂದು ನಿಲ್ಲಿಸುವಲ್ಲಿ ಸಫಲಳಾದೆ! ಅಪರೂಪಕ್ಕೆ ಸಿಕ್ಕಿದ  ಆ ಪುಣ್ಯ ಸ್ಥಳದ ಭೇಟಿ..ವೀಕ್ಷಣೆಯ ಮಹಾ ಭಾಗ್ಯವನ್ನು ಮನಸಾರೆ ಸವಿಯಲಾಗಲಿಲ್ಲವಲ್ಲಾ ಎಂದು ಇಂದಿಗೂ ನೊಂದುಕೊಳ್ಳುವೆ.

ನಾಥೂ ಲಾ ದ ಬೇಸ್ ಕ್ಯಾಂಪಿನ ಬಳಿಯೇ ಇರುವ ಈ ಸ್ಮಾರಕದ ಹಿನ್ನೆಲೆಯ ವಿಚಿತ್ರ ಸತ್ಯ ಘಟನೆಯು ತುಂಬಾ ರೋಚಕವಾಗಿದೆ. ಇದನ್ನು ತಿಳಿದಾಗ ನಮಗೆ ಅನ್ನಿಸುವುದು..ಇಂದಿನ ಈ ವೈಜ್ಞಾನಿಕ ಯುಗದಲ್ಲೂ  ಹೀಗೂ ಉಂಟೇ??

ಪಂಜಾಬಿನ ಪುಟ್ಟ ಹಳ್ಳಿಯಲ್ಲಿ ಜನಿಸಿ(30.8.1946) ಅಲ್ಲಿಯೇ ಹತ್ತನೇ ತರಗತಿ ವರೆಗೆ ವಿದ್ಯಾಭ್ಯಾಸ ಪೂರೈಸಿ, ಪಂಜಾಬ್ ರೆಜಿಮೆಂಟಲ್ಲಿ ಸೈನಿಕನಾಗಿ ಸೇರುತ್ತಾನೆ, ಪುಟ್ಟ ಯುವಕ ಹರಿಭಜನ್ ಸಿಂಗ್. 1965ನೇ ಇಸವಿ, ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಿಡಿ ಹೊತ್ತಿಕೊಂಡಿದ್ದ ಸಮಯ. ಈ ನಾಥೂ ಲಾ ಹಾಗೂ ಸಿಕ್ಕಿಂ ಮತ್ತು ಟಿಬೆಟ್ ಗಡಿಭಾಗದಲ್ಲಿ ಚೀನಾ-ಭಾರತದ ನಡುವೆ ಆಗಾಗ ಯುದ್ಧ ನಡೆಯುತ್ತಿತ್ತು. ಆ ಸಮಯದಲ್ಲಿ ಯುದ್ಧ ನಡೆಯುತ್ತಿರುವ, ದೂರದ ಇಕ್ಕಟ್ಟಾದ ಸ್ಥಳಗಳಲ್ಲಿರುವ ಯೋಧರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಹೇಸರಗತ್ತೆಗಳನ್ನು ಬಳಸುತ್ತಿದ್ದರು. ಹಾಗೆಯೇ ಒಮ್ಮೆ ಹರಿಭಜನ್ ಸಿಂಗ್,  ಅಗತ್ಯ
ವಸ್ತುಗಳನ್ನು ಹೇಸರಗತ್ತೆಗಳ ಮೇಲೇರಿಸಿಕೊಂಡು ಹಿಮಚ್ಛಾದಿತ ಪರ್ವತಗಳ ಮೂಲಕ ಸಾಗುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿ ವೀರ ಮರಣ ಹೊಂದಿ ಹುತಾತ್ಮನಾಗುವನು(4.10.1968). ಆಗ ಅವನು ಬರೇ 22 ವರ್ಷ ಪ್ರಾಯದ ತರುಣ.  ಅವನ ಮೃತದೇಹವು ಮೂರು ದಿನಗಳ ವರೆಗೂ ಸಿಗದಾಗ, ಅಲ್ಲಿಯ ಯೋಧರಿಗೆ, ಮೃತನ ಆತ್ಮದ ಸೂಚನೆಯಂತೆ ಹುಡುಕಿದಾಗ ಮೃತದೇಹ ಮತ್ತು ಅವನ ವಸ್ತುಗಳು ಸಿಕ್ಕಿದುವಂತೆ! ವೀರ ಯೋಧನ ಅಂತ್ಯಕ್ರಿಯೆಯು ಸಕಲ ಮರ್ಯಾದೆಗಳೊಂದಿಗೆ ನಡೆಯಿತು.

ಅಂದಿನಿಂದ ಇವತ್ತಿಗೂ ಅವನಾತ್ಮ ಅಲ್ಲೇ ಸುಳಿದಾಡುತ್ತಾ ನಾಥೂ ಲಾ ಹಾಗೂ ಸುತ್ತಮುತ್ತಲಿನಲ್ಲಿ ಗಡಿಕಾಯುವ ಯೋಧರನ್ನು ಅಪಾಯಗಳಿಂದ ರಕ್ಷಿಸುತ್ತಿದೆ. ಯುದ್ಧದ ಮುನ್ಸೂಚನೆಯನ್ನು ಮೂರು ದಿನಗಳ ಮೊದಲನೇ ಯೋಧರಿಗೆ ನೀಡಿ ದೇಶದ ರಕ್ಷಣೆಯಲ್ಲಿ ಮರಣಾನಂತರವೂ ಪಾಲ್ಗೊಳ್ಳುವುದು ಪವಾಡವೇ ಸರಿ! ಅಲ್ಲಿಯ ಯೋಧರಿಗೆ ಮಾತ್ರವಲ್ಲದೆ, ಅವನ ಹುಟ್ಟೂರಲ್ಲಿ ಮತ್ತು ಭಾರತ-ಚೀನಾ ಗಡಿ ಕಾಯುವ ಯೋಧರಿಗೆ ದಂತಕಥೆಯಾಗಿ, ಜಾನಪದ ಮಹಾವ್ಯಕ್ತಿಯಾಗಿ ರೂಪುಗೊಂಡಿರುವುದು ಒಂದು ಅದ್ಭುತವೇ!

ಇಂದಿಗೂ, ನಾಥೂ ಲಾ ದಲ್ಲಿ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ನಡೆಯುವ ಧ್ವಜ ಸಭೆಯಲ್ಲಿ  ಚೀನಾ ಯೋಧರು ಅವನ ಗೌರವಕ್ಕಾಗಿ ಒಂದು ಆಸನವನ್ನು ಮೀಸಲಿಡುವರು. ಹರಿಭಜನ್, *ಬಾಬಾ(ಸಂತ)* ನಾಗಿ ತನ್ನವರ ನಡುವೆಯೇ ಇದ್ದು ತನ್ನವರನ್ನು ಹಾಗೂ ದೇಶವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾನೆ. ಹಿರಿಯ ಅಧಿಕಾರಿಗಳ  ಉಡುಪು, ಕರ್ತವ್ಯ ಪಾಲನೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೆನ್ನೆಗೆ ಏಟು ಕೊಟ್ಟು ಎಚ್ಚರಿಸುವನಂತೆ! ಮತ್ತೊಂದು ವಿಚಿತ್ರವೆಂದರೆ, ಅವನೇ ಸ್ವತಃ ಸ್ವಚ್ಚಗೊಳಿಸುವುದರಿಂದ ಅಲ್ಲಿರುವ ಅವನ ಉಡುಗೆಗಳು ಯಾವಾಗಲೂ ಸ್ವಚ್ಛವಾಗಿರುವವು..ಅವುಗಳನ್ನು ಬೇರೆಯವರು ಯಾರೂ ಸ್ವಚ್ಛ ಗೊಳಿಸಿರುವುದಿಲ್ಲ!

ಪ್ರತೀ ವರ್ಷ ಸೆಪ್ಟೆಂಬರ್ 11ಕ್ಕೆ, ಸೈನ್ಯದ ಜೀಪೊಂದರಲ್ಲಿ ಮೂವರು ಸೈನಿಕರ ಬೆಂಗಾವಲಿನಲ್ಲಿ ಅವನ ವೈಯಕ್ತಿಕ ವಸ್ತುಗಳನ್ನು ಸಮೀಪದ ರೈಲು ನಿಲ್ದಾಣ(ನ್ಯೂ ಜಲ್ ಪಾಯ್ ಗುರಿ)ದಿಂದ ರೈಲಿನಲ್ಲಿ ಅವನ ಊರಿಗೆ  ಖಾಲಿಯಾದ ವಿಶೇಷ ಆಸನವೊಂದನ್ನು ಕಾದಿರಿಸಿ ಮನೆಗೆ ಕಳುಹಿಸುತ್ತಾರೆ. ಸೈನಿಕರೇ ಸಂಗ್ರಹಿಸಿದ ಸಣ್ಣ ಮೊತ್ತದ ಹಣವನ್ನು ಪ್ರತೀ ತಿಂಗಳು ಅವನ ತಾಯಿಗೆ  ಈಗಲೂ ಕಳುಹಿಸುತ್ತಾರೆ.

ನಾವು ಕಾರು ಇಳಿದು ಚಳಿಯಲ್ಲಿ ನಡುಗುತ್ತಾ ಎದುರಿಗೇ ಇದ್ದ ಪುಟ್ಟ ಸ್ಮಾರಕದತ್ತ ಹೊರಟಾಗ, ಎದುರಿಗೇ ವೀರ ಯೋಧನ ದೊಡ್ಡದಾದ ಚಿತ್ರ.. ಜೊತೆಗೆ ಅದರಲ್ಲಿ ಅವನ ಬಗೆಗಿನ ಎಲ್ಲಾ ವಿವರಗಳು ಕಂಡವು . ಕಟ್ಟಡದ ಒಳಗೆ ಹೋದಾಗ, ಕೆಲವು ಯೋಧರು ತಮ್ಮ ಸಮವಸ್ತ್ರದಲ್ಲಿದ್ದು, ಬೆಚ್ಚಗಿನ ಸ್ವೆಟರ್ ಏನೂ ಹಾಕದೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದರು; ಅವರಿಗೆ ಅದರ ಅಗತ್ಯ
ಇದ್ದಂತೆ ತೋರಲಿಲ್ಲ! ವಿಚಾರಿಸಿದಾಗ, ಹಿರಿಯ ಅಧಿಕಾರಿಗಳು ಅಲ್ಲಿಗೆ ಭೇಟಿಕೊಡುವವರಿದ್ದರು, ಅದಕ್ಕಾಗಿ ಜೋರಾದ  ತಯಾರಿ ನಡೆಸುತ್ತಿರುವುದು ತಿಳಿಯಿತು.

ಸ್ಮಾರಕದ ಗುಡಿಯೊಳಗಡೆ ಅಲಂಕರಿಸಿದ ಸಿಂಹಾಸನದಲ್ಲಿ  ಬಾಬಾ ಹರಿಭಜನ್ ಸಿಂಗ್ ಅಲಂಕರಿಸಿದ ಮೂರ್ತಿ. ಎದುರಿಗೆ ಎತ್ತರವಾದ ದೀಪದಲ್ಲಿ ಪ್ರಜ್ವಲಿಸುತ್ತಿರುವ ಜ್ಯೋತಿ. ಅದರ ಪಕ್ಕದಲ್ಲಿ ಸ್ವಚ್ಛ, ಇಸ್ತ್ರಿ ಮಾಡಿದ ಗರಿಗರಿಯಾದ ಸಮವಸ್ತ್ರ ನೇತಾಡುತ್ತಿದೆ. ನೋಡುತ್ತಿದ್ದಂತೆ ಮನದಲ್ಲಿ ಮಿಶ್ರ ಭಾವ.. ದೇಶಭಕ್ತಿಗೆ ಹೊಸ ಭಾಷ್ಯ ಬರೆದಂತೆ, ದಂತಕಥೆಯಾದ ಯೋಧನ ಆತ್ಮನ ಇರುವಿಕೆಯ ಬಗ್ಗೆ ಯೋಚಿಸಿ ಮೈ ರೋಮಾಂಚನ! ಭಕ್ತಿಯು ತಂತಾನಾಗಿಯೇ ಆವರಿಸಿ ಕೈ ಮುಗಿದುಬಿಡುತ್ತೇವೆ. ಪಕ್ಕದ
ಕೋಣೆಯೊಂದರಲ್ಲಿ ಹಲವಾರು ನೀರಿನ ಬಾಟಲಿಗಳನ್ನಿರಿಸಿದ್ದು ಗಮನಕ್ಕೆ ಬಂದಿತು. ಅದೇನೆಂದು ವಿಚಾರಿಸಲಾಗಿ, ಅದನ್ನು ತೀರ್ಥ ರೂಪದಲ್ಲಿ ಎಲ್ಲರಿಗೂ ವಿತರಿಸುವುದಾಗಿ ತಿಳಿಸಿದರು. ಹೊರಗಿನ ಜಗುಲಿಯಲ್ಲಿ ಬುಟ್ಟಿ ತುಂಬಾ ಇರುವ ಅರಳು, ಬಾದಾಮಿಗಳನ್ನು ಕೈತುಂಬಾ ಪ್ರವಾಸಿಗರಿಗೆ ಹಂಚುತ್ತಿದ್ದರು.  ಅದನ್ನು ಸ್ವಲ್ಪ ಸೇವಿಸಿ, ಗೌರವಾದರ ಪೂರ್ವಕ ನಮಿಸಿ ಹೊರಟೆವು.. ನಮ್ಮ ವಾಹನದತ್ತ ..ನಾಥು ಲಾ ಪಾಸ್ ನೆನೆಯುತ್ತಾ…

(ಮುಂದುವರಿಯುವುದು..)
ಹಿಂದಿನ ಸಂಚಿಕೆ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು :ಪುಟ 25

-ಶಂಕರಿ ಶರ್ಮ, ಪುತ್ತೂರು.

6 Responses

  1. Krishnaprabha says:

    ನಾವರಿಯದ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿ ಆಗುತ್ತಿದೆ ಈ ಲೇಖನಮಾಲೆ… ಧನ್ಯವಾದಗಳು ನಿಮಗೆ

  2. Jayalaxmi says:

    ಚೆನ್ನಾಗಿದೆ.

  3. Anonymous says:

    ಹುತಾತ್ಮ ನಾದ ಯೋಧನ ವಿಚಾರ ಈ ಪ್ರವಾಸ ಕಥನ ದಲ್ಲೊಂದು ತಿರುವು. ವೆರಿ ನೈಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: