ಬೆಳಕು-ಬಳ್ಳಿ

ಶತಶತಮಾನಗಳ ತಲೆಬರಹ

Share Button

ತಪ್ಪುವ ಹಾದಿಗಳ ಗುಂಟ
ಅರಿವಿನ ಸೂಡಿ ಸಿಗಬಹುದೇ
ಎಂದುಕಾಯುತ್ತಲೇ‌ಇದ್ದಾರೆ
ಜನ

ದಂಧುಗಗಳ ಸಾಲೇ ಸಾಲು
ಎದುರಾಗುತ್ತ ಬೇಸತ್ತ ಮನಸ್ಸುಗಳು
ಒಂದನ್ನೊಂದು ಹದತಪ್ಪುತ್ತಲೇ
ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು
ನನಸಾಗದ ಹಾದಿಯ ಮೇಲೆ
ಸೌಧಕಟ್ಟುತ್ತಿದ್ದಾರೆ
ಶತಶತಮಾನಗಳಿಂದ ಜನ

ಹಾವಿನ ಹಾದಿಯನ್ನು
ಹೂವೆಂದುಕೊಂಡು
ನಂಜಿಗೆ ಬಲಿಯಾಗುತ್ತಿದ್ದಾರೆ ಜನ

ಮಧ್ಯದಕಡಲಿಗೆ ಮುಗಿಬಿದ್ದು
ಮದ್ದೆ ಸಿಗದೇ
ಮಾರಿಕೊಂಡ ಮನಸ್ಸಿನ ಕೂಪದೊಳಗಿನ
ನೆನಪುಗಳ ಒಂದೊಂದಾಗಿ
ಗೋರಿಯೊಳಗೆ ಹೂತು ಹಾಕುತ್ತಲೇ
ಮರೆತು‌ ಅದನ್ನೆ‌ ಎದೆಯ
ಹಾಡಾಗಿಸಿಕೊಳ್ಳುತ್ತಿದ್ದಾರೆ
ಶತಶತಮಾನಗಳಿಂದ ಜನ

ಯಾವ‌ಎತ್ತರಕ್ಕೆ‌ಏರಿದರೂ
ಜಾರುವ ಭಯದಲ್ಲಿಯೇ
ಬಸವಳಿಯುತ್ತಾರೆ ಜನ
ಬೆಳಕನ್ನು ಮುತ್ತಿಕ್ಕುವ ಆಸೆಗೆ
ಬಲಿಬಿದ್ದು ಕೈತಪ್ಪಿ
ಬೆಂಕಿಯನ್ನು‌ ಅಪ್ಪಿ
ಸುಟ್ಟಗಾಯದ ನೋವಿಗೆ
ಮುಲಾಮು ಹಚ್ಚುತ್ತ
ಮುಲುಗುಡುತ್ತಿದ್ದಾರೆ ಜನ

ಪರಂಪರೆಯ ಮೊರದಲ್ಲಿ
ಬದಲಾವಣೆಯ ಅಕ್ಕಿ ಆರಿಸುತ್ತಾ
ಕಸವರವನ್ನು ಕಸವೆಂದು
ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ

ನೆಮ್ಮದಿಯ ಹುಡುಕುತ್ತಾ
ದೇಗುಲಗಳ ಘಂಟೆಗಳ ಬಾರಿಸುತ್ತ
ಪರಮಾತ್ಮ‌ ಎನ್ನುತ್ತ
ಪಂಥಗಳ ಕಟ್ಟಿಕೊಳ್ಳುತ್ತಲೇ
ನಡೆದಿದ್ದಾರೆ
ಶತಶತಮಾನಗಳಿಂದ ಜನ

– ನಾಗರೇಖಾ ಗಾಂವಕರ, ದಾಂಡೇಲಿ 

One comment on “ಶತಶತಮಾನಗಳ ತಲೆಬರಹ

  1. ಶತಮಾನಗಳಿಂದ ಜನರ ಬದಲಾವಣೆ ಇಲ್ಲದ ಪಾಡು ಬಗ್ಗೆ ಮೂಡಿ ಬಂದಿದೆ ಚಲೋ ನವ್ಯ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *