ಬಿಡು ಮುನಿಸು ಕೊಡು ಮನಸು
ರಕ್ತವನಿಡಿದಿಟ್ಟು ಒಮ್ಮೆಲೆ ದೇಹಕೆ
ಹಂಚುವ ಹೃದಯದ ಕಪಾಟುಗಳಂತೆ
ಅನುರಾಗವದು ಮೊಗ್ಗಾಗಿ ಅರಳಿ
ಕಂಪಸೂಸುವ ಸುಮದಂತೆ.. ಗೆಳತಿ
ನದಿಯು ಕೊರಗುವುದೇನು
ರವಿಯು ಮೇಲ್ಮೈ ಸೋಕಿ
ನೀರ ಕದಿಯುವನೆಂದು
ಮುಂಗಾರು ಶುರುವಾಗೆ
ಮೈದುಂಬಿ ಹರಿದು ಮನತಣಿಸಳೇನು..?
ನೋಡು ಬಾ ಗೆಳತಿ ವೃಕ್ಷವದು
ಒಣಗಿ ನಿಂತಿದೆ ಇಲ್ಲಿ
ಚೈತ್ರಮಾಸಕೆ ಕಾದು ಚಿಗುರಿ
ಹಸಿರ ಪಸರಿಸದೇನು?
ಮಾಮರದ ನಂಟು ಕೋಗಿಲಿಗೆ
ಹೇಳಿಕೊಟ್ಟವರಾರು
ಸಂಬಂಧಗಳ ಬಿಗಿಗೊಳಿಸಿ
ಹಾಡುತಿರಲು ಅನುರಾಗವದು
ಫಲಕೊಡದೇನು..?
ಕಾಯಿ ಹಣ್ಣಾಗಿ ಉದುರಿದರೂ
ಜೀವಕಳೆಯದು ಬತ್ತದು ತಿಳಿ ಗೆಳತಿ
ಕಾಯಿ ಉದುರಿದರೂ ಅನುಗಾಲ
ಗೊನೆಬಿಟ್ಟು ಕಲ್ಪವೃಕ್ಷವದು
ನಗುತಿಲ್ಲವೇನು..?
ಸಂಚಾರಿ ನಿಯಮಗಳ
ನಿಷ್ಠೆಯೊಳು ಪಾಲಿಸಿರೆ
ಅಪಘಾತದ ಅಂಜಿಕೆಯೇಕೆ
ಅನುರಾಗವದು ಅಮೃತವು ಸವಿಯುವ
ಬಿಡು ಮುನಿಸು ಕೊಡುಮನಸು ಗೆಳತಿ..
– ಗೋವಿಂದ್ ರಾಜು ಬಿ.ವಿ.ಗೌಡ, ಬೆಂಗಳೂರು
ಪ್ರಕೃತಿಯ ಒಳಗೆ ಅವಿತಿರುವ ಬದುಕಿನ ಪಾಠವನ್ನು ಪರಿಚಯಿಸಿದ ಪರಿ
ನಿಸರ್ಗದಲ್ಲಿನ ಜೀವನ ಪಾಠ, ಕವನ ರೂಪದಲ್ಲಿ ಚೆನ್ನಾಗಿ ಮೂಡಿಬಂದಿದೆ.