ಅಲೆಮಾರಿಯ ಮಾತುಗಳು..ಹಸಿರು ಉಳಿದೀತೇ?

Share Button

ಅದೊಂದು ಭಾನುವಾರ, ಬೆಳಗಿನ ಹತ್ತರ ಸಮಯ. ಬಸ್ಸಿನಲ್ಲಿ ವಾಮಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆ. ನೀವು ಎಡಪಂಥೀಯರೇ ಎಂದು ನನ್ನನ್ನು ನೀವು ಕೇಳಬಹುದು. ಹೌದು, ವಾಹನದಲ್ಲಿ ಕುಳಿತುಕೊಳ್ಳುವಾಗ ನಾನು ಎಡಪಂಥದವಳೇ ಆಗಿರುತ್ತೇನೆ, ಕಾರಣ ಪ್ರಕೃತಿಯನ್ನು ಹತ್ತಿರದಿಂದ ವೀಕ್ಷಿಸುವ ಆಸೆ. ಬಾಲ್ಯದ ಆ ಚಟ ನನ್ನಿಂದ ಇನ್ನೂ ದೂರವಾಗಿಲ್ಲ. ಕಿಟಕಿಯ ಪಕ್ಕ ಕುಳಿತು, ಹಿಂದೆ ಸರಿಯುತ್ತಿರುವಂತೆ ಕಾಣುತ್ತ ಭ್ರಮೆಯನ್ನುಂಟುಮಾಡುವ ಗಿಡಮರಗಳನ್ನು ವೀಕ್ಷಿಸುವುದು ನನ್ನ ಆಸಕ್ತಿಯ ವಿಷಯ. ಭೂರಮೆಯ ಆಭರಣಗಳಾದ ಗಿಡ ಮರಗಳ ಮೇಲೆ ಅದೇಕೋ ನನಗೆ ಅತಿಶಯವಾದ ಪ್ರೀತಿ. ಗಿಡಗಳ ಮೇಲೆ ಅರಳಿನಿಂತ ಒಂದೊಂದೇ ಹೂಗಳು, ಒಂದೇ ಗುತ್ತಿಯಲ್ಲಿ ಅರಳಿದ ಅನೇಕ ಹೂಗಳು, ಕೊಂಬೆಯ ಸುತ್ತ ಅಂಟಿದಂತೆ ಮಾತ್ರವಲ್ಲ, ಕೊಂಬೆಯನ್ನೇ ಅಲಂಕರಿಸಿದಂತೆ ಕಾಣುವ ಕೆಂಪು ಹೂಗಳು, ರಸ್ತೆಯ ಬದಿಯಿಂದ ದೂರದಲ್ಲಿ ನಿಂತು ಗಾಳಿಗೆ ತೂಗಾಡುತ್ತ ಮನಸೆಳೆಯುವ ನೀಲಿಹೂಗಳು, ರಸ್ತೆಯ ಬದಿಯಲ್ಲೇ ಎತ್ತರದಲ್ಲಿ ನಿಂತು ಕೈಬೀಸಿ ಕರೆಯುವಂತೆ ಕಾಣುವ ಗುಲ್‌ಮೊಹರ್, ಹೀಗೆ ಬಗೆಬಗೆಯ ನೋಟವನ್ನು ಒದಗಿಸುತ್ತ ಮನಸ್ಸಿಗೆ ಆಹ್ಲಾದವನ್ನು ನೀಡುವ ಸುಂದರ ಕ್ಷಣಗಳನ್ನು ಅನುಭವಿಸುವುದೆಂದರೆ ಅದೊಂದು ಹಿತವಾದ ಅನುಭವ. ಮುಳ್ಳಿನ ಜೊತೆಗಿದ್ದರೂ ಮುಳ್ಳುಗಳನ್ನು ಕಾಣದಂತೆ ಮರೆಮಾಡಿ ಬಳುಕುತ್ತ ತಮ್ಮ ದೇಹದ ವರ್ಣವೈಭವವನ್ನು ಪ್ರದರ್ಶನಕ್ಕಿಟ್ಟಂತೆ ಕಾಣುವ ಹೂವುಗಳದ್ದೇ ಒಂದು ವಿಶೇಷವಾದ ಮತ್ತು ವಿಭಿನ್ನವಾದ ಚೆಲುವಿನ ಲೋಕ.

ಕೆಲವು ಮರಗಳ ಕೊಂಬೆಗಳು ಕಿಟಕಿಯಿಂದ ಹೊರಗೆ ಕೈಚಾಚಿದರೆ ಸ್ಪರ್ಶಿಸಲು ಸಾಧ್ಯವೇನೋ ಎನ್ನುವಷ್ಟರಮಟ್ಟಿಗೆ ಹತ್ತಿರವಿದ್ದಂತೆ ಕಾಣುತ್ತವೆ. ಮತ್ತೆ ಕೆಲವು ಕೊಂಬೆಗಳು ರಸ್ತೆಯ ನಡುಭಾಗದವರೆಗೆ ಚಾಚಿಕೊಂಡಿದ್ದು ತಣ್ಣನೆಯ ವಾತಾವರಣವನ್ನು ಕಲ್ಪಿಸುವುದಲ್ಲದೆ ಕೈಚಾಚಿ ನಮ್ಮನ್ನು ಸ್ವಾಗತಿಸುತ್ತಿವೆಯೇನೋ ಎನ್ನುವ ಭ್ರಮೆಯನ್ನು ಮೂಡಿಸುತ್ತವೆ. ಇವುಗಳ ನಡುವೆ ಸಾಗುವ ರಸ್ತೆಯನ್ನು ಎದುರಿನ ಗಾಜಿನಿಂದ ನೋಡಿದಾಗ ನಮ್ಮ ಕಲ್ಪನೆಗಳೂ ಗರಿಗೆದರಿಕೊಳ್ಳುತ್ತವೆ. ನಮ್ಮ ಮಲೆನಾಡಿನ ರಸ್ತೆಗಳಂತೂ ಬಾಗಿ ಬಳುಕುತ್ತ ಒಮ್ಮೆ ಎಡಕ್ಕೆ ಹೊರಳಿ ಮತ್ತೊಂದು ಕ್ಷಣಕ್ಕೆ ಬಲಕ್ಕೆ ಹೊರಳಿಬಿಡುತ್ತವೆ. ಅಂಕುಡೊಂಕಾಗಿ ಸಾಗುವ ಇಂತಹ ಹಾದಿಗಳಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತವಾದ ಅನುಭವವನ್ನು ಕೊಡುತ್ತದೆ. ಅಲ್ಲೇ ಬದಿಯಲ್ಲಿ ನೀರಿನ ಹೊಂಡವೋ, ಕೆರೆಯೋ, ಕಾಲುವೆಯೋ ಇದ್ದರಂತೂ ಅದರ ಸೊಬಗೇ ಬೇರೆ. ನೀರಿನಲ್ಲಿ ಕಾಣುವ ಮರದ ಕೊಂಬೆಗಳ ಮತ್ತು ಆಕಾಶದಿಂದ ಹಣುಕುವ ಸೂರ್ಯಕಿರಣಗಳ ಪ್ರತಿಬಿಂಬಗಳು ಮನಸ್ಸಿಗೆ ಮೋಡಿ ಮಾಡಿಬಿಡುತ್ತವೆ. ಹೊಳೆಯುವ ಆಕಾಶವನ್ನು ನೋಡಲು ಸಾಧ್ಯವಿಲ್ಲದ ಕಣ್ಣುಗಳಿಗೆ ನೆಲದ ಮೇಲೆ ತೆರೆದುಕೊಳ್ಳುವ ಈ ಮಿಥ್ಯಾದೃಶ್ಯಗಳು ರಸದೌತಣವನ್ನು ನೀಡುತ್ತವೆ. ಅಲ್ಲೇ ಸ್ವಲ್ಪಹೊತ್ತು ವಾಹನ ನಿಲ್ಲಬಾರದೇ ಎನಿಸಿದ್ದೂ ಉಂಟು.

ಮಲೆನಾಡನ್ನು ದಾಟಿ ಬಯಲುಸೀಮೆಯತ್ತ ಚಲಿಸಿದರೆ ಮಟ್ಟಸವಾದ ಭೂಮಿಯ ಮೇಲೆ ಸಾಗುವ ಅನುಭವ ನಮ್ಮದಾಗುತ್ತದೆ. ಸುತ್ತ ಕಾಣುವ ಬಯಲು, ಅಲ್ಲಲ್ಲಿ ಬೆಳೆದು ನಿಂತ ಕುರುಚಲು ಗಿಡಗಳು, ಎತ್ತರದಲ್ಲಿ ನಿಂತು ಆಕಾಶಕ್ಕೆ ಚಾಮರವನ್ನು ಬೀಸುವಂತೆ ಕಾಣುವ ತೆಂಗಿನ ಮರಗಳು-ಹೀಗೆ ದೃಶ್ಯವೇ ಬದಲಾಗಿಬಿಡುತ್ತದೆ. ವಾಹನ ಮುಂದೆ ಸಾಗುತ್ತಿದ್ದಂತೆ ಅಲ್ಲಲ್ಲಿ ಕಾಣುವ ಗುಡಿಸಲುಗಳು ಮತ್ತು ಶಿಥಿಲಾವಸ್ಥೆಯ ಮನೆಗಳು ಅಲ್ಲಿನ ಜನರ ಸಂಕಷ್ಟಗಳನ್ನು ತೆರೆದಿಡುತ್ತವೆ. ಬಸ್‌ನಿಲ್ದಾಣ ಸಮೀಪಿಸುತ್ತಿದ್ದಂತೆ ಅಂಗಡಿಗಳು, ಕಛೇರಿಯ ಕಟ್ಟಡಗಳು, ಹೋಟೆಲ್ ಮತ್ತು ಚಹ ಅಂಗಡಿಗಳು, ಹೀಗೆ ಜನನಿಬಿಡವಾದ ವಾತಾವರಣ ಸ್ವಾಗತಿಸುತ್ತದೆ. ಹೀಗೆ ಪ್ರತಿ ಬಾರಿ ಪ್ರಯಾಣಿಸುವಾಗಲೂ ನಾನು ಕಿಟಕಿಯಿಂದ ದೃಷ್ಟಿ ಹಾಯಿಸಿ ನೋಡುತ್ತಿರುತ್ತೇನೆ ಮತ್ತು ಅನೇಕ ದೃಶ್ಯಗಳು ಅನೇಕ ಭಾವನೆಗಳನ್ನು ಮನದಲ್ಲಿ ಮೂಡಿಸುತ್ತಿರುತ್ತವೆ.

ಇತ್ತೀಚೆಗೆ ಈ ದೃಶ್ಯಗಳಲ್ಲಿ ಅನೇಕ ಬದಲಾವಣೆಗಳಾಗಿವೆ ಮತ್ತು ಸಹಪ್ರಯಾಣಿಕರ ಚಿಂತನೆಗಳೂ ಬದಲಾಗಿವೆ ಎನ್ನಬಹುದು. ಮೊದಲಿನಂತೆ ಈಗ ಯಾವ ಮಕ್ಕಳೂ ಕಿಟಕಿಯ ಪಕ್ಕದ ಸ್ಥಳವೇ ಬೇಕೆಂದು ಕೇಳುವುದಿಲ್ಲ. ಅವರ ಕಣ್ಣುಗಳಲ್ಲಿ ಹಣುಕುತ್ತಿದ್ದ ಕುತೂಹಲದ ದೃಷ್ಟಿ ಮಾಯವಾಗಿ ನಿರಾಸಕ್ತಿ ಆವರಿಸಿರುವುದು ಮಾತ್ರವಲ್ಲ, ಹೇಗೋ ಪ್ರಯಾಣ ಮುಗಿದರೆ ಸಾಕೆನ್ನುವ ಭಾವ ಮೊಗದ ಮೇಲೆ ಎದ್ದು ಕಾಣುತ್ತದೆ. ವಯಸ್ಕರು ಕಿಟಕಿಯ ಪಕ್ಕ ಕುಳಿತರೂ ಹೊರಗಿನ ದೃಶ್ಯಗಳಿಗೂ ತಮಗೂ ಏನೂ ಸಂಬಂಧವೇ ಇಲ್ಲವೆಂಬಂತೆ ತಲೆಯನ್ನು ತಗ್ಗಿಸಿ ಮೊಬೈಲಿನ ತೆರೆಯ ಮೇಲೆ ನೋಟವನ್ನು ಕೀಲಿಸಿರುತ್ತಾರೆ. ನಿಲುಗಡೆಯಿಲ್ಲದ ಸ್ಥಳದಲ್ಲಿ ವಾಹನ ಒಮ್ಮಿಂದೊಮ್ಮೆಲೇ ನಿಂತಾಗ ಮಾತ್ರ ಏನಾಯಿತು ಎಂದು ತಿಳಿಯಲು ತಲೆಯೆತ್ತುತ್ತಾರೆ. ಅಪಘಾತಗಳ ದೃಶ್ಯವನ್ನು ವೀಕ್ಷಿಸಿ ವಿವರಗಳನ್ನು ತಿಳಿಯುವ ಆಸಕ್ತಿ ನಿಸರ್ಗವನ್ನು ನೋಡುವುದರಲ್ಲಿ ಇಲ್ಲವಾಯಿತೇ?


ಇನ್ನು ಹೊರಗಿನ ದೃಶ್ಯಗಳೂ ಅಷ್ಟೇ, ಬುಡಸಹಿತ ನೆಲಕ್ಕೆ ಬಿದ್ದ ಮರಗಳು, ಪಕ್ಕದಲ್ಲೇ ನಿಂತ ಜೆಸಿಬಿ ಯಂತ್ರ, ಅರ್ಧ ಒಡೆದ ಸ್ಥಿತಿಯಲ್ಲಿನ ಕಟ್ಟಡಗಳು, ಟೋಲ್ ಸಂಗ್ರಹದ ಕೊಠಡಿಗಳು, ರಸ್ತೆಯ ಅಗಲೀಕರಣದ ಕೆಲಸದಲ್ಲಿ ತೊಡಗಿದ ಕಾರ್ಮಿಕರು, ಒಂದಲ್ಲ ಒಂದು ಅಪಘಾತ, ವಾಹನಗಳ ಹಾನಿ, ಜೀವಹಾನಿ-ಹೀಗೆ ಅನಪೇಕ್ಷಿತ ಘಟನೆಗಳು ಮತ್ತು ದೃಶ್ಯಗಳು ಆ ಕ್ಷಣಕ್ಕೆ ಮನವನ್ನು ಕಲಕಿಬಿಡುತ್ತವೆ. ನಮ್ಮ ಐಶಾರಾಮೀ ಜೀವನಕ್ಕೆ, ಶುದ್ಧವಾದ ಗಾಳಿಯನ್ನಿತ್ತು ಉಸಿರಾಟಕ್ಕೆ ನೆರವಾಗುವ ಎತ್ತರಕ್ಕೆ ಬೆಳೆದುನಿಂತ ಹಳೆಯ ಮರಗಳು ಬಲಿಯಾಗಬೇಕೇ? ಈಗಾಗಲೇ ನಮ್ಮ ರಾಷ್ಟ್ರರಾಜಧಾನಿಯಾದ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿ ಉಸಿರಾಟಕ್ಕೇ ಸಂಚಕಾರವುಂಟಾಗಿದೆ. ವಾಹನಗಳ ಸಂಚಾರ ಹೆಚ್ಚಾಗಿ ರಸ್ತೆಗಳಲ್ಲಿ ಸ್ಥಳವೇ ಇಲ್ಲದಂತಾಗಿದೆ. ಇದರೊಂದಿಗೆ ಎಲ್ಲ ನಗರಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ. ಉಸಿರಾಡುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ನಮ್ಮಲ್ಲೂ ಪ್ರತಿವರ್ಷ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದೆ. ವಾಹನಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ದ್ವಿಚಕ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ವಯಸ್ಕರು ಹಾಗೂ ಉದ್ಯೋಗಿಗಳು ಕಾರುಗಳಲ್ಲಿ ಸಂಚರಿಸುವ ಅಭ್ಯಾಸವನ್ನಿಟ್ಟುಕೊಂಡಿದ್ದಾರೆ. ಮಾಸಿಕ ಕಂತುಗಳ ಸಾಲದ ಸೌಲಭ್ಯವನ್ನು ಕೊಡುವ ವಾಹನತಯಾರಕರು ಮತ್ತು ಬ್ಯಾಂಕುಗಳು ವಾಹನಗಳನ್ನು ಕೊಳ್ಳುವಂತೆ ಸಾರ್ವಜನಿಕರನ್ನು ಪ್ರೇರೇಪಿಸುತ್ತಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವ ಬದಲು ನಮ್ಮದೇ ವಾಹನವಿದ್ದರೆ ಸಮಯದ ಉಳಿತಾಯವಾಗುತ್ತದೆ ಎನ್ನುವ ಭಾವನೆಯೂ ಇದಕ್ಕೆ ಪೂರಕವಾಗಿದೆ. ಹೀಗಾಗಿ ಇಂದು ಮನೆಗೆರಡು ವಾಹನಗಳಿರುವುದು ಸಾಮಾನ್ಯವೆನ್ನುವಂತಾಗಿದೆ. ಹಸಿರನ್ನು ನಾಶಮಾಡಿ ಕಟ್ಟಡಗಳನ್ನು ನಿರ್ಮಿಸಿ, ರಸ್ತೆಗಳನ್ನು ಹಿಗ್ಗಿಸಿ ವಾಹನಗಳಲ್ಲಿ ತಿರುಗಾಡುತ್ತಿರುವ ನಾವು ನಮ್ಮ ಉಸಿರನ್ನು ಒತ್ತೆಯಿಟ್ಟು ಸುಖೋಪಭೋಗಗಳನ್ನು ಅನುಭವಿಸಲು ಬಯಸುತ್ತಿದ್ದೇವೆ. ಭೂಮಿಯ ಮೇಲಿನ ಎಲ್ಲ ಸ್ಥಳಗಳೂ ಕಾಂಕ್ರೀಟ್‌ಮಯವಾದರೆ ಉಸಿರಾಡಲು ಶುದ್ಧವಾದ ಗಾಳಿ ಸಿಗುವುದಾದರೂ ಹೇಗೆ? ಹಸಿರು ಉಳಿದೀತೇ? ನಿಸರ್ಗದ ವಿಷಯದಲ್ಲಿ ನಮ್ಮ ಹಸ್ತಕ್ಷೇಪ ನಿಲ್ಲುವುದಾದರೂ ಎಂದು?

-ಲಲಿತ ಎಸ್. ಸಕಲೇಶಪುರ

3 Responses

  1. Hema says:

    ಚೆಂದದ ಭಾವಗಳು…ಉತ್ತಮ ಬರಹ

  2. ನಯನ ಬಜಕೂಡ್ಲು says:

    ಲೇಖನ ದ ಆರಂಭದಲ್ಲಿ ಪ್ರಕೃತಿಯನ್ನು ಬಣ್ಣಿಸಿದ ರೀತಿ ಸೊಗಸಾಗಿ ಮನಸಿಗೆ ಮುದ ನೀಡುವಂತಿದೆ. ಬರಹ ಮುಂದುವರಿದಂತೆ ವಾಸ್ತವದ ಚಿತ್ರಣ. ಒಂದೊಂದು ಮಾತು ಸತ್ಯ.

  3. Shankari Sharma says:

    ಪ್ರಸ್ತುತದ ನೈಜ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಮನಸ್ಸು ನಿಜವಾಗಿಯೂ ಖೇದಗೊಳ್ಳುತ್ತಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: