ಲಹರಿ

ಹರಟೆಯಲ್ಲಿ ಅರಳಿದ ಬಾಲ್ಯ

Share Button
(PC: ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಪ್ರತಿದಿನ ಪಾರ್ಟ್ ಟೈಮ್ ಕೆಲಸದ ಹೊತ್ತಲ್ಲಿ ಒಂಚೂರು ಬಿಡುವು ಸಿಕ್ಕಾಗ ಕೆ.ಎಸ್.ರಾವ್ ರೋಡ್ನಲಿರೊ ಗಿರಿಯಾಸ್ ಅಂಡರ್ ಪಾರ್ಕಿಂಗ್ ಕೊನೆಯಲ್ಲಿ ಇರುವ ಮಾಮು ಕ್ಯಾಂಟೀನ್ ಹೋಗೋದು ಚಾಳಿ ಆಗಿತ್ತು .ಕ್ಯಾಂಟೀನ್ ಅಂದ ಮಾತ್ರಕ್ಕೆ ಅದು ಸಣ್ಣದೇ ಆದ್ರೆ ಅಲ್ಲಿಯ ತಿಂಡಿ ತಿನಿಸುಗಳಿಗೆ ಅಕ್ಕಪಕ್ಕದ ಮಾಲ್ಗಳ ಉದ್ಯೋಗಿಗಳು ಮುಗಿಬೀಳುವ ಅವಸ್ಥೆ ಕಂಡು ನಿತ್ಯವೂ ಕೆಲವರು ನಿರಾಸೆಯಿಂದ ಹೋಗುವುದು ಉಂಟು.ಹಾಗಂತ ನಗುಮುಖದ ಮಾಮುವಿನ ತಿಂಡಿಯ ಕ್ರಯವು ಬಾರೀ ಇಲ್ಲ ಅಬ್ಬಾಬ್ಬ ಎಂದು ನಾಲ್ಕುಜನ ಹೋಗಿ ಹೊಟ್ಟೆತುಂಬಾ ತಿಂದರೆ 50 ರಿಂದ 70 ರೂಪಾಯಿ ಆದರೆ ದೊಡ್ಡದು. ಒಬ್ಬನೇ ಹೋದರೆ ಅಂತೂ 20ರ ಒಳಗೆ 1 ಪ್ಲೇಟ್ ತಿಂಡಿ, ಒಂದು ಚಹಾ ಆಸ್ವಾದಿಸಬಹುದು.ಅದಕ್ಕೆ ತಾನೆ ನಾವು ಅಲ್ಲಿಗೆ ಹೋಗುವುದು. ಮಾಮುವಿನ ಸ್ನೇಹಿತರು,ಅಕ್ಕಪಕ್ಕದ ಗೂಡು ಅಂಗಡಿಯವರು… ಹೀಗೆ ಹಲವಾರು ಮಂದಿ ಬಂದು ಹೋಗುವುದರಿಂದ ನಿತ್ಯ ಪರಿಚಯದ ಜೊತೆಗೆ ಹಲವಾರು ಮಾತುಕತೆಗಳು ಇರುತ್ತಿತ್ತು.

ನಿನ್ನೆ ಸಂಜೆ ವಿರಾಮ ಸಿಕ್ಕ ಕೂಡಲೇ ಮಾಮುನ ಕ್ಯಾಂಟೀನ್ ಮುಖ ದೂರದಿಂದಲೇ ನೋಡಿದೆ. ಒಬ್ಬ ಇಬ್ಬರನ್ನು ಬಿಟ್ಟು ಬೇರೆ ಯಾರು ಇಲ್ಲದಂತೆ ಭಾಸವಾಯಿತು.ಪಕ್ಕಕ್ಕೆ ಹೋದರೆ ಮೂರು ಜನ ಒಳಗೆ ಕುಳಿತಿದ್ದರು. “ಮಾಮು ದಾದ ಉಂಡುಯೇ”?(ಮಾಮು ತಿಂಡಿಗಳು ಏನೇನು ಇದೆ )  ಎಂದು ತಿಂಡಿಗಳನ್ನು ವಿಚಾರಿಸಿದೆ. ಅದಕ್ಕೆ ಮಾಮ ಬಜ್ಜಿ, ಬ್ರೆಡ್ ಬೋಂಡ, ನೀರ್ದೋಸೆ ,ದಪ್ಪದೋಸೆ, ಒಗ್ಗರಣೆ ದೋಸೆ …..ಹೀಗೆ ಪಟ್ಟಿ ಹೇಳಿದರು.”ಎಂಕೊಂಜಿ ನೀರ್ ದೋಸೆ ,ಬೊಕ್ಕ ಚಹಾ ಕೊರ್ಲೆ” (1 ಪ್ಲೇಟ್ ನೀರ್ ದೋಸೆ, 1 ಚಹಾ ಕೊಡಿ)ಎಂದು ಅಲ್ಲಿಯೇ ನಿಂತಿದ್ದೆ.

ಪಕ್ಕದಲ್ಲಿರೋ ಎರಡು-ಮೂರು ಹಿರಿಯರು ತಮ್ಮ ಕಾಲದ ಆಟದ ಗಮ್ಮತ್ತಿಗೂ ಈ ಕಾಲದ ಮೊಬೈಲ್ ಲೋಕದ ಆಟದ ಸಂಕುಚಿತತೆಯ ಹರಟೆ ನಡಿತ್ತಿತ್ತು. ಬಿಸಿ ಬಿಸಿ ನೀರ್ದೋಸೆ ಪ್ಲೇಟಿಗೆ ಹಾಕಿ ಕೊಟ್ಟರು.ಹರಟೆಯ ಕಿವಿಗೆ ಕೇಳಿಸಿದಂತೆ ಬಿಸಿ ಬಿಸಿ ದೋಸೆ ಒಳಗೆ ಹೋದಂತೆ ನನ್ನ ಮನಸ್ಸು ಬಾಲ್ಯದ ಆಟದ ಲೋಕವನ್ನು ಅನಾವರಣ ಗೊಳಿಸತೊಡಗಿತು.

ಬಾಹ್ಯ ಲೋಕದಲ್ಲಿ ಒಂದೊಂದೇ ಆಟದ ಹೆಸರುಗಳು ಬಂದಂತೆ, ಮನೊಲೋಕದಲ್ಲಿ ಅದರ ನೀತಿ-ರೀತಿ, ವೈರಿಗಳು ಕಣ್ಣಮುಂದೆ ಬರುತ್ತಿತ್ತು. ಜೊತೆಗೆ ಬಾಲ್ಯದ ಗೆಳೆಯರಾದ ಪಪ್ಪು ,ಮುಬ್ಬು, ಕುಟ್ಟ, ಲೋಹಿ ,ರಾಕಿ, ಸಿದ್ದು….. ಎಲ್ಲರೂ ಬಂದರು.ಲಗೋರಿ, ಕಳ್ಳ-ಪೊಲೀಸ್, ಗಾಳಿಪಟ, ಹಗ್ಗದ ಬಸ್ಸು ,ಟೈಯರ್ ಹೊಡೆತದ ಓಟ,ಮನೆ ಕಟ್ಟುವ ಆಟ ,ಜುಬಿಲಿ ಒಂದುಕಡೆಯಾದರೆ. ಮಾವು, ಗೇರು, ಹಲಸು ,ಪೇರುಗಳ ಕಾಲದಲ್ಲಿ ಅವುಗಳನ್ನು ಕೊಯ್ದು ಹಂಚಿ ತಿನ್ನುವುದೇ ಆಟವಾಗಿತ್ತು.

ಲಗೋರಿ,ಕಳ್ಳ-ಪೊಲೀಸ್ ಆಟದದಲ್ಲಿ ಇರುತ್ತಿದ್ದ ಮಜಾ ಏನ್  ಗೊತ್ತೇನು.! ಇಬ್ಬರಿಗೆ ನಿನ್ನೆ ಏನು ಜಗಳವಾಗಿ ಕೋಪವಾಗಿದೆ ಅಂತ ಇದ್ರೆ. ಇಂದು ಅವರು ಒಂದೇ ಗುಂಪಿನಲ್ಲಿ ಖಂಡಿತ ಇರೋದಿಲ್ಲ. ಕೋಪ ತಿರಿಸೊಕೆ ಲಗೋರಿಯಲ್ಲಿ ಬಾಲ್ ಆಯುಧ ಆದ್ರೆ,  ಕಳ್ಳ-ಪೊಲೀಸ್ ನಲ್ಲಿ ಲಾಠಿನೇ ಆಯುಧ. ಪರಸ್ಪರ ಕೋಪ ಶಮನ ಆಯ್ತು ಅಂದ್ರೆ ಅವರಿಗಿಂತ ಒಳ್ಳೆಯ ಗೆಳೆಯರು ಸಿಕ್ಕಲ್ಲ.

ಇನ್ನು ಗಾಳಿಪಟದ ಆಟದ ಗಮ್ಮತ್ತು ಬೇರೆ…!  ಅಂದಿನ ಗಾಳಿಪಟಗಳು ಇಂದಿನ ಪ್ಯಾಶನೇಟ್ ಲೋಕದ ಅಥವಾ ಕೈಟ್ ಫೆಸ್ಟಿವಲ್ ಗಾಳಿಪಟಗಳಂತೆ ಅಲ್ಲ. ಯಾರು! ಎಲ್ಲಿಯೂ !  ದೂರದಲ್ಲಿ ಒಂದು ಗಾಳಿಪಟ ಹಾರಿತು ಅಂತ ಇಟ್ಕೊಳ್ಳಿ. ಮರುದಿನದಿಂದ ಪ್ರತಿಯೊಬ್ಬರು ಗಾಳಿಪಟ ಮಾಡೋದ್ರಲ್ಲಿ ಬಿಝಿಯಾಗಿ ಬಿಡ್ತಾರೆ.

ಎಲ್ಲೋ ಮೂಲೆಯಲ್ಲಿ ಅಟ್ಟಿಹಾಕಿದ ದಿನಪತ್ರಿಕೆಯನ್ನು ತಂದು, 4-5 ತೆಂಗಿನ ಗರಿಗಳನ್ನು ತಂದು, ಅಮ್ಮ ಕೊಡದಿದ್ದರು ಅನ್ನವೊ ಅಥವಾ ಮೈದಾದ ಅಂಟು ಜಗಳವಾಡಿ ತಂದು, ನಮ್ಮ ನಮ್ಮ ಆಲೋಚನೆಯಲ್ಲಿ ಗಾಳಿಪಟ ತಯಾರು ಆಗ್ತಾ ಇತ್ತು. ಬಿಸಿಲಿಗೆ ಒಣಗಿಸಲು ಇಡುವ ಸಂದರ್ಭದಲ್ಲಿ ನಮ್ಮ ಗುರುತು ಎಂಬಂತೆ ಹೆಸರು, ಚಿಹ್ನೆಗಳು ಹಾಕ್ತಿದ್ವಿ .ಇನ್ನು ಹಾರಿಸೋಕೆ ಎತ್ತರದ ಜಾಗ ಹುಡುಕೊಂಡು,ಅಲ್ಲಿಂದ ತಗ್ಗಿನ ಕಡೆಗೆ ಓಡ್ತಾ ಗಾಳಿಪಟ ಹಾರಿಸಿಕೊಂಡು ಬಂದಾಗ ಗಾಳಿಪಟ ಹಾರಿತು ಅಂದ್ರೆ ರೈಟ್ ಸಹೋದರರಂತೆ ಖುಷಿ ಪಡ್ತಾ ಇದ್ವಿ. ಗಾಳಿಪಟ ಹಾರಿಸುವಾಗ ಮಾತಿನ ಚಕಮಕಿ ಆಯ್ತು ಅಂದ್ರೆ ಒಬ್ಬರು ಇನ್ನೊಬ್ಬರ ಗಾಳಿಪಟದ ಹಗ್ಗವನ್ನು ಅಥವಾ ನೂಲನ್ನು ತುಂಡುಮಾಡಿ ಬಿಡ್ತಾ ಇದ್ದರು.

(PC: ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಇನ್ನು ಗೇರು ಬಿಟ್ಟಿತ್ತು ಅಂದ್ರೆ, ಇಬ್ಬಿಬ್ಬರು ಮೊದಲು ಹೋಗಿ ನೋಡಿ ಬರೋದು ಎಲ್ಲಿ ಎಲ್ಲಾ ಗೇರು ಇದೆಯಂತ, ಅವರವರ ಒಳಗೆ ರಹಸ್ಯದ ಮಾತುಗಾರಿಕೆಯ ಆಗಿರುತ್ತೆ ಯಾರಿಗೂ ಹೇಳಬಾರದು ಅಂತ. ಆದರೆ ಕೊಯ್ಯು ಸಂದರ್ಭದಲ್ಲಿ ಎಲ್ಲಾ ಜೊತೆ ಹಾಕ್ತಿದ್ವಿ. ಯಾರದು ಹಿತ್ತಿಲು, ಯಾರು ಇಲ್ಲದ ಅಥವಾ ಮಧ್ಯಾಹ್ನ ಎಲ್ಲರೂ ತೂಕಡಿಸುವ ಸಮಯದಲ್ಲಿ ಕಾರ್ಯಾಚರಣೆ ಆರಂಭ ಆಗ್ತಾ ಇತ್ತು. ಒಬ್ಬ ಮರದ ಮೇಲೆ ಕೊಯ್ಯೋಕೆ, ಇನ್ನೊಬ್ಬ ಕೆಳಗಿನಿಂದ ತೋರಿಸೋಕೆ, ಮತ್ತೊಬ್ಬ ಹೆಕ್ಕೋಕೆ, ಅಲ್ಲೊಬ್ಬ ಗಡಿ ಕಾಯೋಕೆ. ಯಾರಾದರೂ ಬಂದ್ರು ಅಂದ್ರೆ ಗಡಿ ಕಾಯುವನು ಸೂಚನೆ ಸಿಕ್ಕ ತಕ್ಷಣ ಅಲ್ಲೇ ಪೊದೆಯಲ್ಲಿ ಅವಿತು ಬಿಡುವುದು. ಇಲ್ಲ ಅಂದ್ರೆ ಕೊಯ್ದ ಗೇರುಗಳನ್ನು ಲಕೋಟೆಗೆ ಹಾಕಿ ನಮಗೆ ಗೊತ್ತಿರೋ ಜಾಗದಲ್ಲಿ ಇಟ್ಟು ಓಡಿ ಬಿಡೋದು. ಮತ್ತೆ ಸಮಯ ನೋಡಿಕೊಂಡು ಹೋಗಿ ತರೋದು. ಕೆಲವೊಮ್ಮೆ ಗೋಲಿ ಆಟದ ತರಹ ಗೇರಿನಲ್ಲಿ ಆಡಿ ಹೆಚ್ಚು ಸಂಗ್ರಹಣೆ ಮಾಡಿದ್ದು ಇದೆ. ಕೊನೆಯಲ್ಲಿ ಪಕ್ಕದ ಮಂಜಣ್ಣ ಅಥವಾ ರಮೇಶಣ್ಣ ಅಂಗಡಿಗೆ ಹೋಗಿ ಮಾರಾಟ ಮಾಡಿ.ಒಬ್ಬನಿಗೂ ಸಿಕ್ಕಿದ 100 ಅಥವಾ 120 ರೂಪಾಯಿಗಳಲ್ಲಿ ಕ್ಯಾಂಡಿ, ತಿಂಡಿಗಳನ್ನು ಕೊಂಡು ಉಳಿದ ಹಣ ಅವರವರ ತಾಯಿ ಕೈ ಸೇರ್ತಾ ಇತ್ತು.

ಇಷ್ಟೊತ್ತಿಗೆ ಪ್ಲೇಟ್ನಲ್ಲಿ ದೋಸೆ ಕಾಲಿಯಾಗಿತ್ತು “ಮಾಮು ನನೊಂಜಿ ದೋಸೆ” (ಮಾಮು ಇನ್ನೊಂದು ದೋಸೆ ಹಾಕಿ) ಎಂದೆ. ದೋಸೆ ಬಂತು.

ಇನ್ನು ಮಳೆ ಬಂತು ಅಂದ್ರೆ ಸ್ಕೂಲ್ ಆರಂಭವಾಗಿರುತ್ತದೆ. ಹೊರಗೆ ಹೋದ್ರೆ ಅಮ್ಮ ಬೈತಾರೆ. ಆಗ ಜಾತ್ರೆಯಲ್ಲಿ ಕೊಂಡುಕೊಂಡ ಲೂಡೊ, ಕ್ಯಾರಂ ,ಚೆಸ್ ಬೋರ್ಡ್ಗಳು ಮತ್ತು ಕಾಯಿನ್ಸ್ ಗಳು ಹೊರಗೆ ಬರುತ್ತೆ. ಆಟದ ನಿಯಮಗಳು ಇಂದಿನಂತೆ, ಆದ್ರೆ ಅಂದಿನ ಆಟದ ಗೌಜಿ ಇಂದಿನ ಮೊಬೈಲ್ ಒಳಗಿನ ಬೋರ್ಡ್ ಮತ್ತು ಕಾಯಿನ್ಸ್ ಗಳಲ್ಲಿ ಇಲ್ಲ ಯಾಕೆ ಗೊತ್ತಾ?  ಅವತ್ತು ಆಟದಲ್ಲಿ ಸೋಲುತ್ತೇನೆ ಅಂತ  ಗೊತ್ತಾಗೋ ಹೊತ್ತಿಗೆ ಬೋರ್ಡ್ ನಲ್ಲಿರೋ ಕಾಯಿನ್ಸ್ ಗಳು ಚೆಲ್ಲಾಪಿಲ್ಲಿ ಆಗುತ್ತಿತ್ತು, ಕ್ಯಾರಂ ಕಾಯಿನ್ಸ್ ಗಳು ಮಿಸ್ಸಾಗುತ್ತಿತ್ತು. ಇಂದು ಆದರೆ ಕಾಯಿನ್ಸ್ ಗಳು ನಮ್ಮ ಕೈಗೆ ಸಿಗುವುದೇ ಇಲ್ಲ ಇನ್ನೂ  ಚೆಲ್ಲಾಪಿಲ್ಲಿ, ಮಿಸ್ ಆಗುವುದು ಹೇಗೆ…??

ಇನ್ನು ಮಳೆ ಸ್ವಲ್ಪ ನಿಂತಿತು ಅಂದ್ರೆ ಪಕ್ಕದ ತೋಡುಗಳಲ್ಲಿ ಮೀನು ಹಿಡಿಯುವ ಮೀನುಗಾರರು ನಾವೇ. ಜೊತೆಜೊತೆಗೆ ಈಜು ಕಲಿಸ್ತ ಇದ್ದ ಸಿಮ್ಮಿಂಗ್ ಪೂಲ್ ಕೂಡ ಅದೇ. ತಣ್ಣನೆಯ ತೋಡಿನಲ್ಲಿ ಇದ್ದ ನನ್ನನ್ನು ಮಾಮು ಬಿಸಿ ಬಿಸಿ ಚಹಾ ಕೊಟ್ಟು ವಾಸ್ತವ ಲೋಕಕ್ಕೆ ಕರೆತಂದರು. ಹರಟೆಯು ಮುಗಿದಿತ್ತು ಕೆಲವರಂತೂ ಹೋಗಿದ್ದರು. ಇನ್ನು ಚಹಾ ಮುಗಿಸಿ “ಮಾಮು ಎತ್ ಆಂಡ್ “(ಮಾಮು ಬಿಲ್ ಎಷ್ಟು ಆಯಿತು)ಎಂದೆ. ಅದಕ್ಕೆ ಮಾಮು “ರೆಡ್ಡ್ ದೋಸೆ ಚಾ ಅತ್ತೆ ಪದ್ನೈನ್ “.(ಎರಡು ದೋಸೆ ಮತ್ತು ಚಹಾ ಅಲ್ವಾ..15 ರೂಪಾಯಿ)ಎಂದರು. ಪರ್ಸಿನಿಂದ 20ರ ನೋಟು ಕೊಟ್ಟೆ ಮಾಮು ಐದರ  ಕಡ್ಲೆ ಕಟ್ಟು ಕೊಟ್ಟರು “ಯಾನ್ ಬರ್ಪೆ ಮಾಮು “(ನಾನು ಬರ್ತೀನಿ ಮಾಮು)ಎಂದೆ.

– ತುಷಾರ್ .ಕೆ. ಕೋಟೆಕಾರ್

3 Comments on “ಹರಟೆಯಲ್ಲಿ ಅರಳಿದ ಬಾಲ್ಯ

  1. ಬಾರಿ ಸೋಕುದ ಲೇಖನ (ತುಂಬಾ ಚಂದದ ಬರಹ ). ಒರ ಎಲ್ಯ ಇಪ್ಪುನಾಗದ ದಿನೊಕುಲು ನೆನಪಾಂಡ್ (ಒಮ್ಮೆ ಬಾಲ್ಯದ ದಿನಗಳು ನೆನಪಾದವು ).

  2. ಬಾಲ್ಯದ ಸುಂದರ ನೆನಪಿನ ಸುರುಳಿ ..ಬರೆತಿನ ಕ್ರಮ ಪೊರ್ಲಾತುಂಡು .

  3. ನಮ್ಮನ್ನು ಬಾಲ್ಯದತ್ತ ಕೊಂಡೊಯ್ಯವ ಸುಂದರ ಲೇಖನ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *