ಭಾಂಡದಲ್ಲಿ ಜನಿಸಿದ ಆಚಾರ್ಯರು….
ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅಂದರೆ…ಪ್ರತಿಯೊಂದು ಶುಭಾಶುಭ ಕಾರ್ಯಕ್ಕೂ ಮುನ್ನ ಪ್ರಥಮತಃ ತಾಯಿ ಮತ್ತೆ ತಂದೆ, ಆ ಮೇಲೆ ಗುರುಗಳಿಗೆ ಕೈಮುಗಿದು ಗೌರವಿಸಿ ಪ್ರಾರ್ಥಿಸುತ್ತೇವೆ. ಇದು ಹಿಂದೂಗಳಲ್ಲಿ ಸನಾತನ ಪರಂಪರೆಯಿಂದ ಬಂದ ಪದ್ದತಿ, ‘ಶಿಕ್ಷಕರು ದೇಶದ ಬೆನ್ನೆಲುಬು, ಶಿಕ್ಷಣ, ಶಿಕ್ಷಕ, ಶಿಕ್ಷಣಾರ್ಥಿಗಳ ನಡುವಿನ ಮಧುರ, ವ್ಯವಸ್ಥಿತ, ಕ್ರಮಬದ್ದ, ಅರ್ಥಗರ್ಭಿತ ಸಂಬಂಧವೇ ದೇಶದ ಪ್ರಗತಿಗೆ ಪೂರಕ’ ಎಂದವರು ಡಾ. ಸರ್ವಪಲ್ಲಿ ರಾಧಾಕೃಷ್ಣ.ಅಂಧಕಾರವನ್ನು ಹೋಗಲಾಡಿಸಲು ಜ್ಞಾನ ಬೆಳೆಸುವವನೇ ಗುರುವೆನ್ನುವ ಉಕ್ತಿ ಇದೆ.ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಯೆ ಶ್ರೀ ಗುರುವೇ ನಮಃ। ಬ್ರಹ್ಮ, ವಿಷ್ಣು ಮಹೇಶ್ವರಾದಿಯಾಗಿ ತ್ರಿಮೂರ್ತಿಗಳ ಸಹಿತ ಭಾರತೀಯ ಸಂಸ್ಕೃತಿಯ ಪರಂಪರೆಯು ಗುರುವಿಗೆ ನೀಡುವ ಸ್ಥಾನಮಾನ ಶ್ರೇಷ್ಠ ಜೀವನದ ಕೈಗನ್ನಡಿ. ಹೀಗೆ ನಮ್ಮ ಪುರಾಣೇತಿಹಾಸ ಪರಂಪರೆಯಲ್ಲಿ ಗುರುವಿಗೆ ಮಹೋನ್ನತ ಸ್ಥಾನ ನೀಡಲಾಗಿದೆ.
ಪ್ರಾಚೀನ ಕಾಲದಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ಕೆಲವು ನೀತಿ ನಿಯಮಗಳೂ ಇದ್ದುವು . ಗುರುವು ವಿದ್ಯೆಯನ್ನು ದುಡ್ಡಿಗಾಗಿ ಮಾರಬಾರದು. ಗುರುವು ಯಾವುದೇ ರೀತಿಯ ವ್ಯಾಪಾರದಲ್ಲಿ ತೊಡಗಿಸಬಾರದು. ವಿದ್ಯೆ ಪೂರ್ತಿಯಾದ ಮೇಲೆ ಕಲಿಸಿದ ಗುರುವು ಏನಾದರೂ ಗುರುದಕ್ಷಿಣೆಯನ್ನು ಸ್ವೀಕರಿಸುವುದಿತ್ತು. ಈ ನಿಟ್ಟಿನಲ್ಲಿ ದ್ರೋಣಾಚಾರ್ಯರು ತನ್ನ ಶಿಷ್ಯ ಏಕಲವ್ಯನಿಂದ ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಸ್ವೀಕರಿಸಿದ್ದನ್ನು ಇಲ್ಲಿ ನೆನಪಿಸಬಹುದು. ಕೌರವರ ಪಕ್ಷದಲ್ಲಿ ನಿಲ್ಲಬಹುದಾದ ಏಕಲವ್ಯನಿಂದ ಮುಂದೆ ಪಾಂಡವರ ಏಳಿಗೆಗೆ ತೊಂದರೆ. ಅರ್ಜುನನ ಶ್ರೇಯಸ್ಸಿಗಾಗಿ ದ್ರೋಣರು ಏಕಲವ್ಯನ ಬಲಗೈಯ ಹೆಬ್ಬರಳನ್ನು ಗುರುದಕ್ಷಿಣೆಯಾಗಿ ಕೊಡೆಂದು ಕೇಳಿದರು. ಆ ಕಾಲದಲ್ಲಿ ವಿದ್ಯೆ ಕಲಿಸಿದ ಗುರುವಿಗಾಗಿ ಶಿಷ್ಯರು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದರು. ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷೆಗಾಗಿ ಅಂದರೆ ಲೋಕಹಿತಕ್ಕಾಗಿ ಏನೇ ಮಾಡಲು ಗುರುವಿಗೆ ಅಧಿಕಾರವಿತ್ತು. ಮಾಡುತ್ತಿದ್ದರು ಕೂಡಾ.
ಮಕ್ಕಳಾಗದ ಮಹಿಳೆಗೆ ಆಕೆಯ ಗರ್ಭಕೋಶದಲ್ಲಿ ಏನಾದರೂ ನ್ಯೂನತೆಗಳಿದ್ದರೆ, ಸರಿಪಡಿಸಲಾಗದ ಸಮಸ್ಯೆಗಳಿದ್ದಲ್ಲಿ ಪ್ರನಾಳದಲ್ಲಿ ಅಂಡಾಣು ಮತ್ತು ವೀರ್ಯಾಣು ಮಿಲನಗೊಳಿಸಿ ಪ್ರನಾಳ ಶಿಶುವೆಂದು ಆಧುನಿಕ ವಿಜ್ಞಾನ ಸೃಷ್ಟಿಸಿದ ಜನಮಾನಸರು ಪರಮಾಶ್ಚರ್ಯಪಟ್ಟರು. ಆದರೆ ಅಂತಹ ಪ್ರಯೋಗ ಇಂದು ನಿನ್ನೆಯದಲ್ಲ. ದ್ವಾಪರಯುಗದ ಮಹಾಭಾರತದ ದ್ರೋಣಾಚಾರ್ಯರ ಜನನವೂ ಹೀಗೆಯೇ ಆಯಿತು. ಪ್ರನಾಳಕ್ಕೆ ಬದಲಾಗಿ ದ್ರೋಣವೆಂಬ ಭಾಂಡದಲ್ಲಿ (ದೊನ್ನೆ) ಆಗಿದೆ. ಎಂದರೆ ಅಷ್ಟೇ ಆಶ್ಚರ್ಯವಾಗುತ್ತದೆಯಲ್ಲವೇ? ಅಕಾಲದಲ್ಲಿ ಹೆರಿಗೆಯಾದರೆ, ಏಮ್ದರೆ ಒಂಭತ್ತು ತಿಂಗಳಿಗೆ ಮೊದಲು ಆರೇಳು ತಿಂಗಳಿನಲ್ಲಿ ಶಿಶುವು ಜನಿಸಿದರೆ, ಅದನ್ನು ಬೆಳೆಸುವ ತಂತ್ರಗಾರಿಕೆಯನ್ನು ಇತ್ತೀಚೆಗೆ ಕಂಡುಹಿಡಿದಿದ್ದಲ್ಲ. ಅದೂ ಪುರಾಣದಲ್ಲಿಯೇ ಇತ್ತು ಎಂಬುದಕ್ಕೆ ಕೌರವರ ಜನನವೇ ಸಾಕ್ಷಿ. ಒಂದೇ ಬಸಿರಲ್ಲಿ ಹೆಚ್ಚೆಂದರೆ ಆರು ಮಕ್ಕಳ ಜನನವನ್ನು ಕೇಳಿದ್ದೇವೆ. ಆದರೆ ಒಂದೇ ತಾಯಿಯ ಒಂದೇ ಬಸಿರಲ್ಲಿ ನೂರು ಮಕ್ಕಳಾದ ದೃಷ್ಟಾಂತವೇ ಕೌರವರು. ಇಂದಿನ ವಿಜ್ಞಾನ ಕಂಡುಹಿಡಿದಿದ್ದೇವೆ ಎನ್ನಲಾದ ಎಲ್ಲವೂ ಮಹಾಭಾರತದಲ್ಲಿ ಇದೆ. ಅದರಲ್ಲಿ ಇಲ್ಲದ್ದು ಹೊರಗೂ ಇಲ್ಲ.
ದ್ರೋಣನ ಜನನ
ಮಹರ್ಷಿ ಭಾರದ್ವಾಜರು ಗಂಗಾನದೀ ದಡದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಕಾಲ. ಯತ್ತಿಜರನ್ನು ಸೇರಿಸಿ ಅಗ್ನಿಷ್ಟೋಮವೆಂಬ ಯಾಗವನ್ನು ಮಾಡಲು ಸಿದ್ಧರಾದರು. ಸ್ನಾನಕ್ಕೆಂದು ನದಿಗೆ ತೆರಳಿದಾಗ ಘೃತಾಚಿ ಎಂಬ ಅಪ್ಪರೆಯನ್ನು ಕಂಡು ಆಕೆಯ ರೂಪಾತಿಶಯಕ್ಕೆ ಒಂದು ಕ್ಷಣ ಸ್ತಂಭೀಭೂತರಾಗಿ ಆಕೆಯನ್ನೇ ನೋಡತೊಡಗಿದರು. ಆಕೆಯೂ ಇವರನ್ನು ನೋಡಿ ಇಷ್ಟಪಟ್ಟಳು.. ಅಷ್ಟರಲ್ಲಿ ಅವರ ದಿವ್ಯ ತೇಜಸ್ಸು ಸ್ವಲನವಾಯಿತು. ಅದನ್ನು ದೊನ್ನೆ (ಒಂದು ಪಾತ್ರೆ)ಯಲ್ಲಿಟ್ಟರು. ಕಾಲಕ್ರಮದಲ್ಲಿ ಅದರಿಂದ ಒಬ್ಬ ತೇಜೋವಂತನಾದ ಗಂಡು ಶಿಶುವು ಹೊರಬಂದನು. ದೊನ್ನೆಯಲ್ಲಿ ಜನಿಸಿದ ಆ ಸುತನಿಗೆ ದ್ರೋಣನೆಂದು ಹೆಸರಿಟ್ಟರು. ಆತನಿಗೆ ಅಂಗಿರಸಾಂವರ, ಆಚಾರ್ಯ, ಭರತಾಚಾರ್ಯ, ಭಾರದ್ವಾಜ, ಭರದ್ವಾಜ ಪುತ್ರ, ಶೋಣಾಶ್ವ, ರುಕ್ಷರಥ, ರಥಯಾದಪ, ದ್ರೋಣಾ ಎಂಬ ಒಂಭತ್ತು ಹೆಸರುಗಳಿವೆ. ಬಿದಿಗೆಯ ಚಂದ್ರನಂತೆ ವೃದ್ಧಿಸುತ್ತಿದ್ದ ಕುಮಾರನಿಗೆ ಭಾರದ್ವಾಜರು ಅಗ್ನಿವೇಶವನೆಂಬ ಋಷಿಯಿಂದ ವಿದ್ಯೆಯನ್ನು ಉಪದೇಶಿಸಿದರು. ದ್ರೋಣರು ಪಿತನ ಆದೇಶದಂತೆ ಕೃಪಾಚಾರ್ಯರ ತಂಗಿ ಕೃಷಿಯನ್ನು ವಿವಾಹವಾದರು. ದ್ರೋಣಾಚಾರ್ಯರಿಗೆ ಅಶ್ವತ್ಥಾಮನೆಂಬ ಒಬ್ಬ ಮಗ ಜನಿಸಿದನು. ದ್ರೋಣಾಚಾರ್ಯರು ಪರಶುರಾಮರಿಂದ ಅಸ್ತ್ರಗಳ ಅಧಿದೇವತೆಗಳನ್ನು ಒಲಿಸಿಕೊಳ್ಳುವ ಮಂತ್ರವನ್ನು ಅಭ್ಯಾಸ ಮಾಡಿದರು.
ಶಸ್ತಾಸ್ತ್ರ ವಿದ್ಯೆಯಲ್ಲಿ ದ್ರೋಣರನ್ನು ಮೀರಿಸುವ ಪಂಡಿತರು ಯಾರು ಇರಲಿಲ್ಲ. ಆದರೆ ದ್ರೋಣರಿಗೆ ಕಡು ಬಡತನವಿತ್ತು. ಇಂತಹ ಸ್ಥಿತಿಯಲ್ಲಿದ್ದಾಗ ಒಮ್ಮೆ, ಹಿಂದೆ ಜೊತೆಯಲ್ಲಿ ಧನುರ್ವಿದ್ಯೆ ಕಲಿತ ದ್ರುಪದನ ನೆನಪಾಯಿತು. ದ್ರೋಣರಿಗೆ ಸಹಾಯ ಯಾಚಿಸುವುದಕ್ಕಾಗಿ ದ್ರುಪದನ ಅರಮನೆಗೆ ಹೋದರು. ನನಗೆ ವಿದ್ಯಾ ಸರಸ್ವತಿ ಒಲಿದದಳೇ ಹೊರತು ಲಕ್ಷ್ಮಿ ಒಲಿಯಲಿಲ್ಲವಾದುದರಿಂದ ಹಿಂದೆ ಸ್ನೇಹಿತನಾಗಿದ್ದ ನಿನ್ನನ್ನು ಕಾಣಲು ಬಂದಿದ್ದೇನೆ ಎಂದರು. ತುಂಬಿದ ಸಭೆಯಲ್ಲಿ ರಾಜ ಈ ದರಿದ್ರ ವಿಪ್ರನ ಸಖ್ಯ ಮುಂದುವರಿಸಲು ಇಷ್ಟಪಡದೆ ‘ರಾಜನಾದ ನನ್ನ ಹಾಗೂ ಕಡು ದರಿದ್ರ ಬ್ರಾಹ್ಮಣನಾದ ನಿನ್ನ ಸ್ನೇಹವೆಂತಹುದು’ ಎಂದು ಹಿಯಾಳಿಸಿ ಮಾತಾಡಿದ. ಇದರಿಂದ ನೊಂದುಕೊಂಡ ಆಚಾರ್ಯರು-‘ರಾಜಾ, ಒಂದಿಲ್ಲೊಂದು ದಿನ ವೀರ ಕ್ಷತ್ರಿಯ ಕುಮಾರನೊಬ್ಬನನ್ನು ಶಿಷ್ಯನನ್ನಾಗಿ ಮಾಡಿಕೊಂಡು ನನ್ನ ಸರ್ವ ವಿದ್ಯೆಯನ್ನೂ ಅವನಿಗೆ ಧಾರೆಯೆರೆದು ನಿನ್ನನ್ನು ಅವನಿಂದ ಹೆಡೆಮುಡಿ ಕಟ್ಟಿಸಿ ನನ್ನ ಕಾಲಬುಡಕ್ಕೆ ಬೀಳಿಸಲಿಲ್ಲವಾದರೆ ನಾನು ಭಾರದ್ವಾಜನೇ ಅಲ್ಲವೆಂದು ಶಪಥ ಮಾಡಿ ಸಭಾಸ್ಥಾನದಿಂದ ನಿರ್ಗಮಿಸಿದರು.
ಒಂದು ದಿನ ಬಯಲಿನಲ್ಲಿ ರಾಜಕುಮಾರರು ಚಿಣ್ಣಿಕೋಲಿನ ಆಟವಾಡುತ್ತಿದ್ದರು. ಆಕಸ್ಮಾತ್ ಚಿಣ್ಣಿಯು ಹತ್ತಿರದ ಒಂದು ಪಾಳು ಬಾವಿಗೆ ಹೋಗಿ ಬಿತ್ತು. ಅದನ್ನು ಬಾವಿಯಿಂದ ತೆಗೆಯುವ ಬಗೆ ಹೇಗೆಂದು ಚಿಂತಿಸುತ್ತಿದ್ದಾಗ ಒಬ್ಬ ಕೃಶಕಾಯನಾದ ದೇಶಾಂತರಿ ಬ್ರಾಹ್ಮಣನೊಬ್ಬ ಬಂದನು. ವಿಷಯವರಿತ ವಿಪ್ರನು ದರ್ಭೆಯನ್ನು ಬಾಣವನ್ನಾಗಿ ಹೊಡಿ ಒಂದರ ಹಿಂದೆ ಇನ್ನೊಂದರಂತೆ ಬಾವಿಯೊಳಗೆ ಎಸೆದು ಚಿಣ್ಣೆಯನ್ನು ಮೇಲೆ ಬರುವಂತೆ ಮಾಡಿದನು. ಇದನ್ನರಿತ ಭೀಷ್ಮನು ವೀರಕುಮಾರರಾದ ಕೌರವ ಪಾಂಡವರಿಗೆ ಬಿಲ್ಲುವಿದ್ಯೆ ಹೇಳಿಕೊಡಲು ದ್ರೋಣರನ್ನು ನೇಮಿಸಿದನು. ಕುರುಕುಲಸುತರು ಎಲ್ಲರೂ ದ್ರೋಣರ ಶಿಷ್ಯರಾದರೂ ಅರ್ಜುನನು ದ್ರೋಣರಿಗೆ ಅತ್ಯಂತ ಪ್ರಿಯ ಶಿಷ್ಯನಾಗಿದ್ದನು. ಅರ್ಜುನನಿಂದಲೇ ದ್ರುಪದನ ಮೇಲೆ ಸೇಡು ತೀರಿಸಿಕೊಂಡರು.
ಪಾಂದವರೂ, ಕೌರವರೂ ದ್ರೋಣರಿಗೆ ಶಿಷ್ಯರಾಗಿದ್ದರೂ ಮಹಾಭಾರತದಯುದ್ಧ ಸಮಯದಲ್ಲಿ ದ್ರೋಣರಿಗೆ ರಾಜ್ಯಾಡಳಿತ ಹಿಡಿದ ಕೌರವರ ಪಕ್ಷ ಸೇರಲೇಬೇಕಾಯಿತು. ದ್ರೋಣಾಚಾರ್ಯರು ಅಸಂಖ್ಯಾತ ಪಾಂಚಾಲ ಸೈನಿಕರನ್ನು ಸಂಹಾರಗೈಯುತ್ತ ವಿಜೃಂಭಿಸುತ್ತಿದ್ದರು. ಆಗ ಶ್ರೀಕೃಷ್ಣನು ಅರ್ಜುನನಿಗೆ ‘ಕುರುಭೂಮಿಯಲ್ಲಿ ಧರ್ಮಕ್ಕೆ ಜಯವಾಗಬೇಕಾದರೆ ನಿನ್ನ ಶಸ್ತ್ರ ಗುರುಗಳಾದ ದ್ರೋಣರು ಸಂಗ್ರಾಮದಿಂದ ವಿರಮಿಸಬೇಕು. ಅದಕ್ಕೆ ಒಂದೇ ಒಂದು ಉಪಾಯವೆಂದರೆ ‘ಅಶ್ವತಾಮಾ ಹತ: ‘ ಎಂದು ಅವರ ಕಿವಿಗೆ ಬೀಳುವಂತೆ ಬೊಬ್ಬಿಡಬೇಕು. ಅಶ್ವತ್ಥಾಮ ಎಂಬ ಒಂಸು ಆನೆಯನ್ನು ಕೊಂದು ಭೀಮನು ಹೇಳಿದನು. ಮುಂದೆ ಧರ್ಮರಾಯನಿಂದ ‘ಅಶ್ವತ್ಥಾಮಾ ಹತಃ ‘ ಎಂದು ಶ್ರೀಕೃಷ್ಣನ ಪ್ರೇರಣೆಯಂತೆ ಹೇಳಲ್ಪಟ್ಟಿತು. ಇದರಿಂದ ಅವರ ಮನಸ್ಸು ಚಿಂತೆಯಿಂದ ಕುದಿಯಿತು. ವೈರಾಗ್ಯ ಮನೆ ಮಾಡಿತು. ದ್ರುಷ್ಟದ್ಯುಮನು ಧಾವಿಸಿ ಬಂದು ದ್ರೋಣರ ಶಿರಸ್ಸನ್ನು ಕತ್ತರಿಸಿದನು. ಅವರ ಆತ್ಮವು ಪರಂಧಾನವನ್ನೇರಿತು. ಮಹಾಭಾರತದ ವಿಪ್ರಶ್ರೇಷ್ಠರ ಜೀವಿತವು ಹೀಗೆ ಕೊನೆಗೊಂಡಿತು.
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಪ್ರಕಟಿಸಿದ ಹೇಮಮಾಲಾ ಹಾಗೂ ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ ಎಲ್ಲರಿಗೂ ಧನ್ಯವಾದಗಳು.
ಈ ಲೇಖನ ದಲ್ಲಿ ನನ್ನ ಗಮನಕ್ಕೆ ಬಂದ ಅಂಶ ಗುರುವಿನ ಮಹತ್ವ. ಒಂದು ಕಾಲದಲ್ಲಿ ಗುರುವೆಂಬ ಸ್ಥಾನಕ್ಕೆ ಬಹಳ ಮಹತ್ವ ಇತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಣ್ಮರೆಯಾಗುತ್ತಿದೆ. ಚೈಲ್ಡ್ ಲೈನ್ ನಂತಹ ಮಕ್ಕಳ ಪರ ಕಾನೂನು ಗುರುವಿನ ನಿಜವಾದ ಅಧಿಕಾರವನ್ನೇ ಕಿತ್ತುಕೊಂಡಿದೆ. ಪರಿಣಾಮ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕಾದ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿರುವುದು
ದ್ರೋಣಾಚಾರ್ಯ…ಕುಂಭಸಂಭವ….ಪ್ರನಾಳಶಿಶು… ಎತ್ತಣೆತ್ತಣ ಸಂಬಂಧವಯ್ಯಾ ಅನ್ನುವಂತೆ ಆಶ್ಚರ್ಯವಾಗುತ್ತದೆ. ನಿಮ್ಮ ಬರಹಗಳ ಮೂಲಕ ಮಹಾಭಾರತವೆಂಬ ಜ್ಞಾನದ ಗಣಿಗೆ ನಾವೂ ಹೋಗುತ್ತಿದ್ದೇವೆ..ಧನ್ಯವಾದಗಳು.
ಅದ್ಭುತ ಪ್ರಸಂಗಗಳ ಗನಿ ನಮ್ಮ ಮಹಾಭಾರತ. ದ್ರೋಣಾಚಾರ್ಯರ ಬಗ್ಗೆ ವಿಶೇಷ ಲೇಖನ ಚೆನ್ನಾಗಿದೆ ವಿಜಯಕ್ಕ.