ವಿಶ್ವ ಶ್ರವಣ ದಿನ
ಅದ್ಭುತ ಶ್ರವಣ ಶಕ್ತಿಯನ್ನು ಹೊಂದಿರುವ ಕಿವಿಯು ನಮ್ಮ ಪಂಚೇಂದ್ರಿಯಗಳಲ್ಲೊಂದು. ವಾಕ್ ಶಕ್ತಿ ಮತ್ತು ಶ್ರವಣ ಶಕ್ತಿಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ಕಿವಿ ಕೇಳದವರಿಗೆ ಮಾತು ಬಾರದಿರುವುದು ಸರ್ವೇ ಸಾಮಾನ್ಯ. ಜಗತ್ತಿನಲ್ಲಿ ಎಲ್ಲಾ ರೀತಿಯ ರೋಗರುಜಿನಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ ಇಸವಿಯಲ್ಲಿ ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು ಮತ್ತು ಕಿವಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಆಯೋಜಿಸಲಾಗುತ್ತಿತ್ತು. ಈ ದಿನ ಮುಖ್ಯವಾಗಿ ಅಂಧತ್ವ ಮತ್ತು ಕಿವುಡುತನಗಳ ಹತೋಟಿ, ನಿವಾರಣೆ ಹಾಗೂ ನಿರ್ಮೂಲನಕ್ಕಾಗಿ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ಶ್ರವಣ ಸಾಮರ್ಥ್ಯವನ್ನು ಸರಿಪಡಿಸುವ ಬಗ್ಗೆಯೂ ವಿವಿಧ ಸಂಶೋಧನೆಗಳಿಗೆ ಉತ್ತೇಜನ ನೀಡಲಾಗುತ್ತದೆ.
ಹೇಗೇ ಆದರೂ, ವಿಶ್ವ ಶ್ರವಣ ದಿನ ಇರಲಿ ಇಲ್ಲದಿರಲಿ, ಕಿವಿ ಬಗ್ಗೆ ಎಲ್ಲರಿಗೂ ಅತ್ಯಂತ ಕಾಳಜಿ ಇದೆ ಎಂಬುದಂತೂ ಸತ್ಯ. ಆದರೆ ನಿಜವಾಗಿಯೂ ಆಗುತ್ತಿರುವುದೇನು? ಈ ವೈಜ್ಞಾನಿಕ ಯುಗದಲ್ಲಿ ಎಲ್ಲವೂ ಅತಿ ವೇಗ.. ಯಾವುದಕ್ಕೂ ವ್ಯವಧಾನವೆಂಬುದಿಲ್ಲ. ಇದರ ಭರಾಟೆಯಲ್ಲಿ ಎಲ್ಲರೂ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸಂಪಾದನೆಯನ್ನೇ ಗುರುಯಾಗಿರಿಸಿರುವುದು ಖೇದಕರ. ದೈನಂದಿನ ನಿಗದಿತ ಕಾರ್ಯಗಳಲ್ಲಿನ ಏರುಪೇರು, ಮನುಷ್ಯನ ಆರೋಗ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರುತ್ತಿದೆ. ಜಗತ್ತಿನೆಲ್ಲೆಡೆ ಮಾನವನು ವಿವಿಧ ರೋಗಗಳಿಂದ ಬಾಧಿತನಾಗುತ್ತಿರುವುದು ಈ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಇವುಗಳಲ್ಲಿ ಕಿವಿಯ ಬಗೆಗಿನ ರೋಗಗಳೂ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಇದಕ್ಕೆ ಮುಖ್ಯ ಕಾರಣ, ಹೆಚ್ಚುತ್ತಿರುವ ಶಬ್ದ ಮಾಲಿನ್ಯ.
ವಾಯು ಮಾಲಿನ್ಯದ ತಮ್ಮನಂತಿರುವ ಶಬ್ದ ಮಾಲಿನ್ಯ ಕೊಡುವ ಕಿರುಕುಳ ಅಷ್ಟಿಷ್ಟಲ್ಲ. ನಮ್ಮ ಕಿವಿ ತಮ್ಮಟೆಗೆ, ಶಬ್ದವನ್ನು ಗ್ರಹಿಸಲು ಅದರದ್ದೇ ಆದ ಮಿತಿ ಇರುತ್ತದೆ. ನಾವು ಮನೆಯಿಂದ ಹೊರ ಹೊರಟರೆ ಸಾಕು ಸುತ್ತಲೂ ವಾಹನಗಳ ಶಬ್ದ, ಹಾರ್ನ್ನ ಬೊಬ್ಬೆ. ಆಮೇಲೆ, ಹಬ್ಬಗಳ ದಿನಗಳಲ್ಲಿಯಂತೂ ಮೈಕಾಸುರಗಳು ತಾ ಮೇಲು..ತಾ ಮೇಲು ಎಂದು ಕಿರುಚಾಟ. ಮನೆಯ ಒಳಗಡೆ ಟಿ.ವಿ., ರೆಕಾರ್ಡ್ ಗಳಿಂದ ಬರುವ ಗಟ್ಟಿಯಾದ ಮಾತು ಸಂಗೀತಗಳು.. ಇವೆಲ್ಲವುಗಳೂ ಅತಿ ಸೂಕ್ಷ್ಮವಾದ ಕಿವಿ ತಮ್ಮಟೆಯನ್ನು ಬಲಹೀನಗೊಳಿಸುತ್ತವೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ನಮ್ಮ ಪುಟ್ಟ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ಮನೆ ಮಾಡಿ, ಮನೆ ಸುತ್ತಲೂ ಅದನ್ನು ಆವರಿಸಿ ನಿಲ್ಲುವಷ್ಟು ಗಿಡ ಮರಗಳನ್ನು ನೆಟ್ಟು ಬೆಳೆಸಿ, ಸದ್ದು ಗದ್ದಲವಿಲ್ಲದ ಪ್ರಶಾಂತ ವಾತಾವರಣದಲ್ಲಿ ನೆಮ್ಮದಿಯಿಂದ ಇದ್ದೆವು. ಮನೆ ಹಿಂದಿನ ಬೇರೆಯವರ ಜಾಗದಲ್ಲಿ ದಟ್ಟವಾದ ಕಾಡು. ಇಡೀ ದಿನ ಪಕ್ಷಿಗಳ ಕಲರವ ನಮ್ಮ ಕಿವಿಗಳನ್ನು ತಂಪಾಗಿಸುತ್ತಿತ್ತು. ಆದರೆ ಒಮ್ಮಿಂದೊಮ್ಮೆಲೇ ಕಾಡಿನಲ್ಲಿದ್ದ ಮರಗಳು ಮಾರಾಟವಾದುವು… ಆ ಜಾಗವು ಬೇರೆಯವರಿಗೆ ಮಾರಲ್ಪಟ್ಟಿತ್ತು. ಸ್ವಲ್ಪ ದಿನಗಳಲ್ಲೇ ಬೃಹದಾಕಾರ ಯಂತ್ರಗಳು ಗುಡ್ಡವನ್ನು ಅಗೆಯುವುದರೊಂದಿಗೆ ಮನೆಗಳ ನಿರ್ಮಾಣ ಪ್ರಾರಂಭವಾಗಿ ಬಿಟ್ಟಿತು. ಈಗ ನಾವು ರಸ್ತೆ ಮಧ್ಯದಲ್ಲಿ ನಿಂತಂತೆನಿಸುತ್ತಿದೆ. ‘ಬದಲಾವಣೆಯೇ ಜಗದ ನಿಯಮ’, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ?’ ಎಂಬಿತ್ಯಾದಿ ಹಿರಿಯರ ನಲ್ನುಡಿಗಳನ್ನು ಮನನ ಮಾಡಿಕೊಳ್ಳಬೇಕಾದ ಪರಿಸ್ಥಿತಿ!
ನಾನು ದೂರವಾಣಿ ಇಲಾಖೆಯಲ್ಲಿ ವೃತ್ತಿ ನಿರತಳಾಗಿದ್ದಾಗ ನಡೆದ ಘಟನೆ. ನನಗೆ ವಿಪರೀತ ಶೀತದಿಂದಾಗಿ ಗಂಟಲು ಕಟ್ಟಿ, ಸ್ವರವೇ ಹೊರಡುತ್ತಿರಲಿಲ್ಲ. ನಮ್ಮ ವಿಭಾಗದ ಕೆಲಸದ ನಿಮಿತ್ತ ಆಫೀಸಿನ ಕಾರಿಡಾರಿನಲ್ಲಿ ಹೋಗುತ್ತಿದ್ದಾಗ ಅಪರಿಚಿತರೊಬ್ಬರು ಅಲ್ಲಿಯೇ ಕೆಲಸ ಮಾಡುತ್ತಿದ್ದವರ ಬಗ್ಗೆ ನನ್ನಲ್ಲಿ ವಿಚಾರಿಸಿದರು. ನನಗೆ ಗೊತ್ತಿದ್ದರೂ, ಗಂಟಲಿನಿಂದ ಸ್ವರವೇ ಹೊರಡದೆ ಮೂಕಳಾಗಿ ಬಿಟ್ಟು, ತಬ್ಬಿಬ್ಬಾಗಿ ನಿಂತೆ. ಅವರು ನನ್ನನ್ನೊಮ್ಮೆ ವಿಚಿತ್ರವಾಗಿ ದಿಟ್ಟಿಸಿ ಸಿಟ್ಟಿನಿಂದ ಹೊರಟು ಹೋದರು. ನನಗೋ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಇನ್ನೊಬ್ಬ ವ್ಯಕ್ತಿಯ ಎದುರು ಕಿವುಡಳೂ, ಮೂಕಳೂ ಆಗಿ ನಿಂತು ಅಸಹಾಯಕಳಾದ ವಿಚಿತ್ರ ಅನುಭವ! ಮರುದಿನ ನನ್ನ ಸ್ನೇಹಿತೆ ಹೇಳಿದ ವಿಷಯ ನನ್ನನ್ನು ಮತ್ತೂ ಮುಜುಗರಗೊಳಿಸಿದ್ದು ಮಾತ್ರ ಸುಳ್ಳಲ್ಲ. ಆ ವ್ಯಕ್ತಿಗೆ ನಾನು ಏನೂ ಉತ್ತರಿಸದೆ ಅಹಂಕಾರಿಯಾಗಿ ಬಿಟ್ಟಿದ್ದೆ! “ಅಯ್ಯೋ.. ನನ್ನ ಗ್ರಹಚಾರವೇ!” ಎಂದು ಅನಿಸಿಬಿಟ್ಟಿತ್ತು.
ಈಗಂತೂ ಯುವಕ ಯುವತಿಯರ ಕಿವಿಗಳಲ್ಲಿ ಚರವಾಣಿಗೆ ತಗಲಿಸಿಕೊಂಡ ಕಿವಿ ಫೋನುಗಳು.. ಅವರಿಗಂತೂ ಯಾರು ಕರೆದರೂ, ಮಾತನಾಡಿಸಿದರೂ ಕೇಳಿಸುವುದೇ ಇಲ್ಲ ಅನ್ನಿ.. ಆದರೆ ವಾಹನ ಚಾಲನೆಯಲ್ಲಿರುವಾಗ ಇದರ ಉಪಯೋಗ ದುರ್ಘಟನೆಗೆ ದಾರಿ ಮಾಡಿಕೊಡುತ್ತಿರುವುದೂ ನಿಜ. ಕೆಲವೊಮ್ಮೆ ಜನರು ತಮಗೆ ಅಗತ್ಯವಿಲ್ಲದ ಅಥವಾ ಇಷ್ಟವಿಲ್ಲದ ಮಾತುಗಳಿಗೆ ಜಾಣ ಕಿವುಡರಾಗಿರುವುದೂ ಇದೆ. ಪಕ್ಕದ ಮನೆಯವರಿಗೆ ಅಗತ್ಯ ವಿಷಯವನ್ನು ತಿಳಿಸಬೇಕೆಂದು ಕರೆದರೆ ಅವರಿಗೆ ಕೇಳದಿರುವುದು ಸ್ವಾಭಾವಿಕ.. ಯಾಕೆಂದರೆ ಅವರ ಮನೆಯ ಟಿ.ವಿ. ಅತ್ಯಂತ ದೊಡ್ಡದಾಗಿ ಕಿರುಚುತ್ತಿರುತ್ತದೆ! ಆ ಮೇಲೆ ಫೋನು ಮಾಡಿ ಕರೆಯಬೇಕಾದ ಪರಿಸ್ಥಿತಿ ನೆನೆದರೆ ನಗು ಬರುತ್ತದೆ.
ಗಾಂಧೀಜಿಯವರ ಮೂರು ಮಂಗಗಳಲ್ಲಿ ಒಂದು ಕೆಟ್ಟದ್ದನ್ನು ಕೇಳಬಾರದೆಂದು ತಿಳಿಸಿದರೆ, ಇನ್ನೊಂದು ಕೆಟ್ಟದ್ದನ್ನು ಮಾತಾಡಬಾರದೆಂದು ತಿಳಿಹೇಳುತ್ತದೆ. ಹಾಗೆಯೇ ದೇವರಿತ್ತ ಅಮೂಲ್ಯ ಕೊಡುಗೆಯಾದ ಶ್ರವಣೇಂದ್ರಿಯವನ್ನು ಎಲ್ಲರೂ ಜಾಣತನದಿಂದ ಬಳಸಿದರೆ ಈ ಜಗತ್ತಿನಲ್ಲಿ ಸಂತೋಷದಿಂದಿರಬಹುದು… ವಿಶ್ವ ಶ್ರವಣ ದಿನದ ಆಚರಣೆ ಅರ್ಥಪೂರ್ಣವೂ ಆಗಬಹುದು… ಏನಂತೀರಿ?
-ಶಂಕರಿ ಶರ್ಮ, ಪುತ್ತೂರು.
Super madam. ಇಂದಿನ ವಾಸ್ತವ ಸಂಗತಿಗಳನ್ನು ಬಹಳ ಚೆನ್ನಾಗಿ ಬಿಚ್ಚಿಟ್ಟಿದ್ದೀರಿ.
ಧನ್ಯವಾದಗಳು ನಯನ ಮೇಡಂ.
ಅಪರೂಪದ ವಿಷಯ..ಚೆಂದದ ನಿರೂಪಣೆ
ಧನ್ಯವಾದಗಳು ಹೇಮಾ.
ಉತ್ತಮ ನಿರೂಪಣೆ. ಶಬ್ದ ಮಾಲಿನ್ಯಕ್ಕೆ ಕೆಲವು ಸಿಟಿ ಬಸ್ ಗಳು ಉಚ್ಚ ಸ್ವರದಲ್ಲಿ ರೆಕಾರ್ಡ್ ಹಾಕಿ ತಮ್ಮ ಕೊಡುಗೆಯನ್ನು ಕೊಡುತ್ತವೆ.
ಈ ಬಗ್ಗೆ ಬಸ್ ನಲ್ಲಿ ಪ್ರತಿರೋಧ ತೋರಿಸಿದಾಗ ನಾನು ಏಕಾಂಗಿಯಾದೆ