ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 22
ಕೇಬಲ್ ಕಾರ್ ಗಮ್ಮತ್ತು
ಮಧ್ಯಾಹ್ನದ ಜಬರ್ದಸ್ತು ಊಟ ಮುಗಿಸಿ ಮಲಗಿ ಎಚ್ಚರವಾದಾಗ ಅದಾಗಲೇ ಎರಡೂವರೆ ಗಂಟೆ. ಮುಂದಿನ ನಮ್ಮ ಕಾರ್ಯಕ್ರಮ ಅತ್ಯಂತ ಕುತೂಹಲಕಾರಿಯಾದ ಕೇಬಲ್ ಕಾರ್ ರೈಡ್. ಪ್ರವಾಸಿಗರ ದಟ್ಟಣೆ ಇರುವ ಸಮಯವಾದ್ದರಿಂದ ಟಿಕೆಟ್ ಸಿಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಕ್ಯೂ ನಿಲ್ಲಲು, ಆದಷ್ಟು ಬೇಗ ಗೇಂಗ್ಟೋಕ್ ಪಟ್ಟಣದಲ್ಲಿರುವ ಡಿಯೊರಲಿ (Deorali) ಎಂಬಲ್ಲಿಗೆ ಹೋಗಬೇಕಿತ್ತು. ಆದ್ದರಿಂದ ಬೇಗನೆ ಎಲ್ಲರೂ ಆ ಜಾಗಕ್ಕೆ ಬಂದಾಗ ಕಾರು ನಿಲ್ಲಿಸಲು ಜಾಗವಿಲ್ಲದೆ ಪರದಾಡುವಂತಾಯಿತು.
ಅಂತೂ ಸ್ವಲ್ಪ ಹೊತ್ತು ಕಾದ ಮೇಲೆ ಕಾರು ನಿಲ್ಲಿಸಿ ಎಲ್ಲರೂ ಒಟ್ಟು ಸೇರಲು ಅರ್ಧ ಗಂಟೆಯೇ ಬೇಕಾಯಿತು. ಮುಖ್ಯ ರಸ್ತೆಯಿಂದ ಸ್ವಲ್ಪ ಮೆಟ್ಟಲನ್ನೇರಿ ಮೇಲೆ ಹೋದಾಗ ಟಿಕೆಟ್ ಕೌಂಟರ್ ಕಾಣಸಿಕ್ಕಿತು. ಮೆಟ್ಟಲಿನ ಇಕ್ಕೆಲಗಳಲ್ಲೂ ಚಂದದ ಹೂ ಗಿಡಗಳು ಮನ ಸೆಳೆಯುವಂತಿತ್ತು. ಅದಾಗಲೇ ಸಾಲು ಹನುಮಂತನ ಬಾಲದಂತಾಗಿತ್ತು! ಕೌಂಟರ್ ಇನ್ನೂ ತೆರೆದಿರಲಿಲ್ಲ. ಟಿಕೆಟ್ ಸಿಗುವ ಖಾತ್ರಿ ಬಗ್ಗೆ ಸಂಶಯವಿದ್ದರೂ ಎಲ್ಲರೂ ಆ ಸಾಲಿನ ಹಿಂದೆ ಸೇರಿದೆವು. ಬಾಲಣ್ಣ ಮತ್ತು ಗಣೇಶಣ್ಣ ಸೇರಿ ಅದರ ವ್ಯವಸ್ಥೆ ಮಾಡುವುದರಲ್ಲಿ ಸಂಶಯವಿರದ ಕಾರಣ ನೆಮ್ಮದಿಯಿಂದ ಇದ್ದೆವು. 4:30ಕ್ಕೆ ಟಿಕೆಟ್ ಕೊಡಲು ಪ್ರಾರಂಭಿಸಬೇಕಿತ್ತು. ಕಾಯುತ್ತಾ ನಿಂತ ನಮ್ಮ ನಡುವೆ ಸ್ವಾರಸ್ಯಕರ ಅನುಭವಗಳ ಚರ್ಚೆ ಉತ್ತುಂಗಕ್ಕೇರಿತ್ತು. ಅಷ್ಟರಲ್ಲೇ ನಮ್ಮ ಮಧ್ಯದಲ್ಲೇನೋ ಗಡಿಬಿಡಿ ಪ್ರಾರಂಭವಾದಂತೆನಿಸಿತು. ನಮ್ಮ ಪ್ರವಾಸಿ ಬಂಧುಗಳೊಬ್ಬರ ಬೆಲೆ ಬಾಳುವ ಮೊಬೈಲ್ ನಾಪತ್ತೆ! ನಿಂತಲ್ಲೇ ಕೆಳಗಡೆ ಎಲ್ಲಾ ಹುಡುಕಿದೆವು.. ಅಕ್ಕಪಕ್ಕ ನಿರುಕಿಸಿದ್ದಾಯ್ತು. ಅನುಮಾನಾಸ್ಪದ ವ್ಯಕ್ತಿಗಳಿರುವರೇ ಎಂದು ಸುತ್ತಲೂ ಗಮನಿಸಿದೆವು..ಊಹೂಂ.. ಏನೂ ಪ್ರಯೋಜನವಾಗಲಿಲ್ಲ. ಯಾರೋ ಒಬ್ಬರು, ಅವರು ಬಂದ ಕಾರಲ್ಲಿ ಬಿದ್ದಿರಬಹುದೇನೋ ಎಂದು ಅನುಮಾನ ವ್ಯಕ್ತಪಡಿಸಿದರು. ಕೊನೆಗೆ ಮೊಬೈಲ್ ಅವರಿದ್ದ ಕಾರ್ ಸೀಟಿನ ಕೆಳಗಡೆ ಸಿಕ್ಕಿದಾಗ ಎಲ್ಲರ ಆತಂಕ ಕಳೆಯಿತು. ಇಷ್ಟೆಲ್ಲಾ ಆದಾಗ, ಟಿಕೆಟ್ ತೆಗೆದುಕೊಂಡು ಬಂದರು ಗಣೇಶಣ್ಣ. ವಿಶಾಲವಾದ ವರಾಂಡಲ್ಲಿದ್ದ ಸೋಫಗಳಲ್ಲಿ ಎಲ್ಲರನ್ನೂ ಕುಳ್ಳಿರಿಸಿದರು. ಅಲ್ಲಿಂದ, ಎರಡು ಲಿಫ್ಟ್ ಗಳಲ್ಲಿ, ಸುಮಾರು ೧೦೦ ಅಡಿ ಎತ್ತರದಲ್ಲಿದ್ದ ಕೇಬಲ್ ಕಾರ್ ರೈಡ್ ಪ್ರಾರಂಭವಾಗುವಲ್ಲಿಗೆ, ಒಂದರಲ್ಲಿ ಆರು ಜನರಂತೆ ಮೇಲಕ್ಕೆ ಕಳುಹಿಸುತ್ತಿದ್ದರು.
ಮೇಲ್ಗಡೆ ಹೋದಾಗ, ಮತ್ತೊಂದು ವಿಶಾಲವಾದ ವರಾಂಡ. ಅಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಇರಲಿಲ್ಲ.. ಸರದಿಗಾಗಿ ಕಾಯಬೇಕು. ಒಮ್ಮೆಗೆ ಕೇಬಲ್ ಕಾರ್ ನಲ್ಲಿ 24 ಮಂದಿ ಪ್ರವಾಸಿಗರನ್ನು ಮಾತ್ರ ರೈಡ್ ಗೆ ಕರೆದೊಯ್ಯುತ್ತಿದ್ದರು. ಅದರೊಳಗೆ ನಿಂತು ನೋಡುವ ವ್ಯವಸ್ಥೆ ಚೆನ್ನಾಗಿತ್ತು. ಎರಡು ಕೇಬಲ್ ಕಾರುಗಳು ಎರಡು ಉಕ್ಕಿನ ಹಗ್ಗಗಳಲ್ಲಿ ವಿರುದ್ಧ ದಿಕ್ಕುಗಳಿಗೆ ಸಂಚರಿಸುತ್ತಿದ್ದವು. ಒಂದು ಕಿ.ಮೀ. ದೂರದ ಈ ಕೇಬಲ್ ಕಾರ್ ಪಯಣದಲ್ಲಿ, ಒಂದು ಕೇಬಲ್ ಕಾರ್ ಈ ಕಡೆಯಿಂದ ಆ ಕಡೆಗೆ ಹೋಗುವುದಾದರೆ, ಇನ್ನೊಂದು ಆ ಕಡೆಯಿಂದ ಈ ಕಡೆಗೆ ಬರುತ್ತಿತ್ತು. ಪ್ರವಾಸಿಗರಿಗೆ ಒಟ್ಟು ಎರಡು ಕಿ.ಮೀ.ನಷ್ಟು ೨೦ ನಿಮಿಷಗಳ ರೈಡ್ ಸಿಗುವುದು ನಿಜಕ್ಕೂ ಆನಂದದಾಯಕ. ನಮ್ಮ ಸರದಿಗಾಗಿ ಉತ್ಸಾಹದಿಂದ ಕಾಯುತ್ತಿದ್ದಾಗ, ನಮ್ಮ ಒಂದು ಗುಂಪಿಗೆ ಅದರೊಳಗೆ ಹೋಗಲು ಅನುಮತಿ ಸಿಕ್ಕಿತು. ಮೊದಲ ಬಾರಿಗೆ ಅದರೊಳಗೆ ಹೊಕ್ಕಾಗ ರೋಮಾಂಚನ! ಚೌಕಾಕಾರದ ಕಾರಿನ ಮುಂಬದಿ ಮತ್ತು ಹಿಂಬದಿಗಳಲ್ಲಿ ಪೂರ್ತಿ ಗ್ಲಾಸ್ ಇದ್ದರೆ, ಅಕ್ಕ ಪಕ್ಕಗಳಲ್ಲಿ ಗ್ಲಾಸ್ ಅರ್ಧಕ್ಕೆ ಮಾತ್ರ. ಸರಿಯಾಗಿ ನೋಡಲು, ಫೊಟೋ ತೆಗೆಯಲು ಅನುಕೂಲವಾಗುವಂತೆ ನಿಲ್ಲಲು ಪೈಪೋಟಿ. ಜನ ಭರ್ತಿಯಾದ ಕೂಡಲೇ ಕಾರು ನಿಧಾನವಾಗಿ ಚಲಿಸತೊಡಗಿದಾಗ ಕೆಳಗೆ ಕಾಣುವ ದೃಶ್ಯ ಅತ್ಯದ್ಭುತ! ಅಷ್ಟು ಎತ್ತರದಲ್ಲಿ ಹೋಗುವಾಗ ಒಳಗೊಳಗೇ ಸ್ವಲ್ಪ ಭಯವೂ ಆಯಿತೆನ್ನಿ.. ಕೆಳಗಡೆ ಗೇಂಗ್ಟೋಕ್ ನಗರದ ರಮಣೀಯ ನೋಟದ ಜೊತೆಗೆ ಅಲ್ಲಲ್ಲಿ ಮಂಜು ಮುಸುಕಿದ, ಹಸಿರು ಸಿರಿ ತುಂಬಿದ ಗಿರಿ ಕಂದರಗಳು, ದೂರದಲ್ಲಿ ಶ್ವೇತ ವಸನಧಾರಿ ಕಾಂಚನಜುಂಗದೊಂದಿಗಿನ ಪ್ರಕೃತಿ ದೇವಿಯ ನಯನ ಮನೋಹರ ದೃಶ್ಯ! ಆಹಾ.. ನೋಡಲು ಎರಡು ಕಣ್ಣುಗಳೂ ಸಾಲದು! ನೋಡು ನೋಡುತ್ತಿದ್ದಂತೆಯೇ ಕೊನೆಯ ನಿಲ್ದಾಣ ತಲಪಿ, ಅಲ್ಲಿಂದ ಪುನ: ಇನ್ನೊಂದು ಕೇಬಲ್ ಕಾರ್ ನಲ್ಲಿ ನಾವು ಹಿಂತಿರುಗಿ ಬಂದಾಗ ಅಲ್ಲಿದ್ದ ಸಹ ಯಾತ್ರಿಗಳ ಸ್ವಾಗತ! ಎರಡನೇ ಗುಂಪಿನ ರೈಡ್ ಹೊರಟಾಗ ನಾವು ಅವರ ನಿರೀಕ್ಷೆಯಲ್ಲಿ ಕೆಳಗಡೆ ಕುಳಿತು ಅನುಭವವನ್ನು ಮೆಲುಕು ಹಾಕುತ್ತಾ..ಸಮಯ ಸರಿದುದೇ ತಿಳಿಯಲಿಲ್ಲ.
ಅದಾಗಲೇ ಗಂಟೆ 5:30. ಮುಂದಿನ ನಮ್ಮ ಗಮನ ಬುದ್ಧ ಸ್ತೂಪದ ವೀಕ್ಷಣೆ ಕಡೆಗೆ. ಅನತಿ ದೂರದಲ್ಲಿರುವ ಈ ಬುದ್ಧ ಸ್ತೂಪವು ಪುಟ್ಟ ಗುಡ್ಡದ ತುದಿಯಲ್ಲಿದೆ. ಬುಡದಿಂದ ಮೇಲಕ್ಕೆ ಹೋಗಲು ಇರುವ ರಸ್ತೆ ಚೆನ್ನಾಗಿದ್ದರೂ ವಿಚಿತ್ರವಾಗಿದೆ. ಮಂಡಿ ನೋವಿನವರನ್ನು ಬೆದರಿಸುವಂತೆ, ೪೫ ಡಿಗ್ರಿ ಕೋನ ಆಯಾಮದಲ್ಲಿ ಎತ್ತರಕ್ಕೆ ಹೋಗುವುದು ನಿಜಕ್ಕೂ ಸೋಜಿಗವೆನಿಸಿತು. ವಾಹನ ಮೇಲಕ್ಕೆ ಕೊಂಡೊಯ್ಯುವಂತಿಲ್ಲದ ಕಾರಣ ಎಲ್ಲರೂ ಹತ್ತಲೇ ಬೇಕಾದ ಅನಿವಾರ್ಯತೆ. ಮುಂದಕ್ಕೆ ಕಾಲಿಟ್ಟರೆ ಮೈ ಹಿಂದಕ್ಕೆ ವಾಲುತ್ತಿತ್ತು! ಹತ್ತು ಹೆಜ್ಜೆಗಳಿಗೇ ಸುಸ್ತಾದಾಗ ಯಾರೋ ಒಬ್ಬರು ಕೊಟ್ಟ ಸಲಹೆ, ‘ಹಿಮ್ಮುಖವಾಗಿ ನಡೆಯುವುದು’ ನಿಜಕ್ಕೂ ಉಪಯೋಗಕ್ಕೆ ಬಂತು. ತುತ್ತ ತುದಿಗೆ ತಲಪಿದಾಗ ಬಣ್ಣ ಬಣ್ಣದ ಸ್ತೂಪ ಗಮನ ಸೆಳೆಯಿತು. ಕೇಸರಿ ಉಡುಗೆ ತೊಟ್ಟ ಬೌದ್ಧ ಬಿಕ್ಷುಗಳು ಅಲ್ಲಲ್ಲಿ ಓಡಾಡುವುದು ಕಂಡಿತು. ಸುತ್ತಲೂ ಅತ್ಯಂತ ಪರಿಶುದ್ಧ, ಶಾಂತ ವಾತಾವರಣ.. ಅಲ್ಲಿದ್ದ ಎರಡು ಸ್ತೂಪಗಳಲ್ಲಿ, ಮುಖ್ಯ ಸ್ತೂಪದ ಸುತ್ತಲೂ ಇದ್ದ 108 ಪ್ರಾರ್ಥನಾ ಚಕ್ರಗಳನ್ನು ಮುಟ್ಟಿ, ತಿರುವಿ, ಮಂದಿರವನ್ನು ಸುತ್ತಿದಾಗ ತಿಳಿಯಿತು, ಆ ಹೊತ್ತಿಗೆ ಬಾಗಿಲು ಮುಚ್ಚಿರುವುದೆಂದು. ಹೊರಗಿನಿಂದಲೇ ಚಂದದ ಸ್ತೂಪಗಳನ್ನು ವೀಕ್ಷಿಸಿ, ಎಲ್ಲರೂ ಜೊತೆಯಾಗಿ ಫೋಟೋ ತೆಗೆದು ಕೆಳಗಿಳಿದಾಗ ಸಂಜೆಗತ್ತಲು. ಮುಂದೆ, ಅಲ್ಲಿಯ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಸುಂದರ ವಾಣಿಜ್ಯ ಸಂಕೀರ್ಣ ನೋಡಲಿಚ್ಛಿಸುವವರು ಜೊತೆಯಾಗಿ ಹೋಗಲು ಬಾಲಣ್ಣನವರು ಸೂಚಿಸಿದರು. ಕೆಲವರು ಹೋಟೇಲ್ ಕಡೆಗೆ ಹೋದರೆ..ನಮ್ಮನ್ನು ಯಂ. ಜಿ. ರೋಡ್ ಕೈ ಬೀಸಿ ಕರೆಯುವಂತೆನಿಸಿ..ನಮ್ಮ ಕಾರು ಆ ಕಡೆಗೆ ಸಾಗಲಾರಂಭಿಸಿತು…
(ಮುಂದುವರೆಯುವುದು..)
ಹಿಂದಿನ ಸಂಚಿಕೆ ಇಲ್ಲಿದೆ : ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 21
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ
ಧನ್ಯವಾದಗಳು.
ಚೆನ್ನಾಗಿದೆ
ಕೃತಜ್ಞತೆಗಳು.
ಶಂಕರಿ ಶರ್ಮ. ಸೂಪರ್ ಪ್ರವಾಸ.
ಧನ್ಯವಾದಗಳು ವಿಜಯಕ್ಕ.
Madam ji, very nice. ಪ್ರವಾಸ ಕಥನ ತುಂಬಾ ಚೆನ್ನಾಗಿ ಮುಂದೆ ಸಾಗುತ್ತಿದೆ. ಸಾಕಷ್ಟು ಮಾಹಿತಿಗಳೂ ಲಭ್ಯ ಇದರಲ್ಲಿ. ಅಷ್ಟೇ ಅಲ್ಲದೆ ನಿಮಗಾದ ಕೆಲವು ಅನುಭವ ಗಳು ಬೇರೆ ಪ್ರವಾಸ ಹೋಗುವವರಿಗೂ ಮಾರ್ಗದರ್ಶನ ನೀಡಬಲ್ಲವೇನೋ.
ಧನ್ಯವಾದಗಳು ನಯನ ಮೇಡಂ.