ನೆನೆದವರ ಮನದಲ್ಲಿ
ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಅಕ್ಕನ ಮಗನ ಮನೆಗೆ ಹೋಗಿದ್ದೆ. ಸ್ವಲ್ಪ ಸಮಯ ಕಳೆದು ಮನೆಗೆ ವಾಪಾಸಾಗಲು ಕೆಳಗಿಳಿದು ಎಲ್ಲರೂ ಬಂದೆವು. ಕಾರಿನ ಹತ್ತಿರ ಹೋಗುತ್ತಿದ್ದಾಗ ‘ಅಮ್ಮಾ’….. ಎಂದು ಯಾರೋ ಕರೆದರು. ಹಿಂತಿರುಗಿ ನೋಡಿದಾಗ ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ನಮ್ಮ ಮನೆಗೆ ಬರುತ್ತಿದ್ದ ಎಲೆಕ್ಟ್ರಿಷಿಯನ್ ಹುಡುಗ ಎಂದು ಗುರುತು ಹಿಡಿದೆ.
ಈಗ ಅವನಿಗೆ ನಲವತ್ತೈದು ಮೀರಿದೆ. ನೋಡಿದ ಕೂಡಲೇ ಸಂತೋಷವಾಯಿತು. ನಾನು ಕೈಯನ್ನು ಮುಂದೆ ಚಾಚಿದೆ. ಕೈಯನ್ನು ಹಿಡಿದು ಕಣ್ಣಿಗೆ ಒತ್ತಿಕೊಂಡ ಅವನು. ‘ಇಲ್ಲಿಡಿ’ ಎಂದು ನನ್ನ ಎರಡೂ ಕೈಗಳನ್ನು ತಲೆಯ ಮೇಲೆ ಬಗ್ಗಿಸಿ ಮೇಲಿರಿಸಿಕೊಂಡ. ‘ಚೆನ್ನಾಗಿ ಬಾಳಿ’ ಎಂದು ಆಶೀರ್ವದಿಸಿದೆ. ಪಕ್ಕದಲ್ಲಿದ್ದ ನನ್ನ ಪತಿಯ ಕೈಗಳನ್ನೂ ತೆಗೆದು ತಲೆಯ ಮೇಲಿಟ್ಟುಕೊಂಡ. ಹೆಸರು ಹಿಡಿದು ಮಾತನಾಡಿಸಲು ಅವನ ಹೆಸರನ್ನು ಮರೆತಿದ್ದೆ. ಆದರೆ ಇಸ್ಲಾಂ ಧರ್ಮೀಯ ಎನ್ನುವುದು ಮಾತ್ರ ನೆನಪು. ಅಷ್ಟರಲ್ಲಿ ಅವನು ತನ್ನ ವಿಸಿಟಿಂಗ್ ಕಾರ್ಡ್ ತೆಗೆದ. ನಾನು ಅವನ ಕೆಲಸದ ಬಗ್ಗೆ, ಸಂಸಾರದ ಬಗ್ಗೆ ವಿಚಾರಿಸಿದೆ. ಎಲ್ಲಾ ನಿಮ್ಮ ಆಶೀರ್ವಾದದಿಂದ ಚೆನ್ನಾಗಿದೆ ಎಂದು ವಿವರಿಸಿದ. ನಿಮ್ಮ ಧ್ವನಿ ಕೇಳಿ ನಾನು ಬಂದೆ ಎಂದು ಹೇಳಿದ. ಇಷ್ಟು ವರ್ಷಗಳ ಮೇಲೆ ನನ್ನ ಧ್ವನಿ ಕೇಳಿ ಗುರುತು ಹಿಡಿದಿದ್ದು ಆಶ್ಚರ್ಯವೆನಿಸಿತು. ನನ್ನ ಪಕ್ಕದಲ್ಲಿದ್ದ ಅಕ್ಕನ ಮಗನನ್ನು ಪರಿಚಯಿಸಿದೆ. ಆಗ ಅವನು ನನ್ನ ಅಕ್ಕನ ಮಗನಿಗೆ ತನ್ನ ಹೆಸರು ಹೇಳಿಕೊಂಡು ಪರಿಚಯ ಮಾಡಿಕೊಂಡ. ‘ಅಲ್ತಾಫ್’ ಅವನ ಹೆಸರು. ಎಂತಹ ಪ್ರೀತಿ, ವಿಶ್ವಾಸ. ನಾನು ನಿಜವಾಗಿಯೂ ತಲೆಬಾಗಬೇಕು ಇದಕ್ಕೆ ಎನ್ನಿಸಿತು.
ಪ್ರೀತಿ, ವಿಶ್ವಾಸಗಳಿಗೆ, ಆತ್ಮೀಯತೆ ಎಂದೂ ಯಾವುದೂ ಅಡ್ಡ ಬರಲಾರದು, ಬರಬಾರದು. ನಾನಂತೂ ಹಾಗೆ ಭಾವಿಸಿದ್ದೇನೆ. ಜಾತಿ, ಮತ, ಧರ್ಮ, ಡಿಗ್ರಿಗಳು, ಹಣ, ಅಂತಸ್ತು ಮತ್ತು ಅಧಿಕಾರ ಇವುಗಳ ಹಂಗು ಬೇಕೆ? ಖಂಡಿತ ಇಲ್ಲ. ಕೇವಲ ಒಂದು ವಾರದ ಹಿಂದೆ ಅಲ್ತಾಫ್ ಬಗ್ಗೆ ನಾನು ನಮ್ಮ ತೋಟ ಮಾಡುವ ಹುಡುಗನ ಹತ್ತಿರ ಪ್ರಸ್ತಾಪಿಸಿದ್ದೆ. ಅವನ ಒಳ್ಳೆಯ ಸ್ವಭಾವ ಮತ್ತು ನಡತೆಯ ಬಗ್ಗೆ ಹೇಳಿದ್ದೆ. ಇಂದು ಅವನನ್ನೇ ಮತ್ತೆ ಭೇಟಿಯಾದದ್ದು ಸಂತೋಷ ನೀಡಿತು. ಭಗವಂತನೇ ಈ ಭೇಟಿಯನ್ನು ಆಯೋಜಿಸಿರಬೇಕಲ್ಲ?
-ಡಾ.ಎಸ್.ಸುಧಾ. ಮೈಸೂರು
ಬ್ಯೂಟಿಫುಲ್. ಹೌದು ಪ್ರೀತಿ, ವಿಶ್ವಾಸ, ನಂಬಿಕೆ ಜಾತಿ, ಧರ್ಮ, ಮತಗಳಿಂದ ಹೊರತಾದದ್ದು. ನಿಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ.
ಆತ್ಮೀಯತೆಗೆ ಜಾತಿಯ ಹಂಗಿಲ್ಲ… ಆಪ್ತ ಲೇಖನ
ಜಾತಿ, ಮತ, ಮೇಲು ಕೀಳೆಂಬ ಭಾವನೆಗಳನ್ನು ಮೀರಿದಂತಹ ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗದು..ಸುಂದರ ಲೇಖನ.