ಒಂದು ಮಂಚಾವ್ ಸೂಪ್‌ನ ಸುತ್ತ..

Share Button

ಇತ್ತೀಚೆಗೆ ನಡೆದ ಒಂದು ಘಟನೆ. ನಮ್ಮ ಮಗನ ಹುಟ್ಟುಹಬ್ಬದ ಸಲುವಾಗಿ ಅವನ ಆಸೆಯಂತೆ ನಗರದ ಹೆಸರುವಾಸಿಯಾದ ಹೋಟೆಲ್ ಗೆ ರಾತ್ರಿಯ ಊಟಕ್ಕೆಂದು ಹೋಗಿದ್ದೆವು. ಮೊದಲು ಸೂಪ್ ಕುಡಿಯೋಣವೆಂದುಕೊಂಡು ಯಾವ ಸೂಪ್ ಹೇಳುವುದು ಎಂದು ಚರ್ಚಿಸಿ ‘ಮಂಚಾವ್ ಸೂಪ್’ ಆಗಬಹುದೆಂದು ನಿಶ್ಚಯಿಸಿದೆವು.ಆದರೆ ಇದೇ ಮಂಚಾವ್ ಸೂಪ್ ಈ ಲೇಖನವನ್ನು ಬರೆಯಲು ಕಾರಣವಾಗಬಹುದೆಂದು ನಾನು ಅಂದುಕೊಂಡಿರಲಿಲ್ಲ. ನಮ್ಮ ಟೇಬಲ್ ಬಳಿ ಬಂದ ವೈಟರ್‌ಗೆ ಟು ಬೈ ತ್ರೀ ಮಂಚಾವ್ ಸೂಪ್ ಎಂದು ಹೇಳಿದೆವು. ಆತನಿಗೆ ಮೊದಲು ಅರ್ಥವಾಗಲಿಲ್ಲ(ಕೇಳಿಸಲಿಲ್ಲ?). ಪುನ: ‘ಯಾವ ಸೂಪ್’ ಎಂದು ಕೇಳಿದ. ನಾವು ಹೊಸಬನಿರಬಹುದು ಎಂದು ಸರಿಯಾಗಿ ಹೇಳಿದೆವು. ಆಗ ಅರ್ಥವಾದವನಂತೆ ಮ್ಯಾನೇಜರ್ ಬಳಿ ಅದರ ಹೆಸರು ನಮೂದಿಸಿ ಅಡುಗೆ ಕೋಣೆಯ ಒಳಗೆ ಹೋದ. ಸ್ವಲ್ಪ ಹೊತ್ತಿನ ನಂತರ ಮೂರು ಬೌಲ್ ಸೂಪ್ ತಂದಿಟ್ಟ. ನೋಡುವುದೇನು?! ನಾವು ಕಡುಕಂದು ಬಣ್ಣದ ಮಂಚಾವ್ ಸೂಪ್ ನ್ನು ನಿರೀಕ್ಷಿಸುತ್ತಿದ್ದರೆ ಆತ ತಂದಿದ್ದು ಬಿಳಿ ಬಣ್ಣದ ಮಶ್ರೂಮ್ ಸೂಪ್ ಆಗಿತ್ತು. ‘ಅರೆ! ಇದು ಮಶ್ರೂಮ್ ಸೂಪ್, ನಾವು ಹೇಳಿದ್ದು ಇದನ್ನಲ್ಲ’ ಎಂದೆವು. ಆಗ ಆತನ ಮುಖ ಸಪ್ಪಗಾಯಿತು ಮಾತ್ರವಲ್ಲ ಒಂದು ರೀತಿಯ ಆತಂಕವೂ ಕಾಣಿಸಿತು. ಸುಮಾರು 20 ವರ್ಷದ ಆಸುಪಾಸಿನ ಯುವಕ. ಬೇರೆ ಯಾವ ವೆಜ್ ಸೂಪ್ ಆಗಿದ್ದರೂ ಆತನ ಮುಖದ ಭಾವನೆ ನೋಡಿ ಕುಡಿಯುತ್ತಿದ್ದೆವು. ಆದರೇನು ಮಾಡುವುದು, ನಾವು ಮಶ್ರೂಮ್ ತಿನ್ನುವುದಿಲ್ಲವಲ್ಲಾ? ಇಂತಹ ಸಂದರ್ಭಗಳಲ್ಲಿ ಕೆಲವು ವೈಟರ್‌ಗಳು ಒರಟಾಗಿ ಮಾತನಾಡುತ್ತಾರೆ ಅಥವಾ ‘ನೀವೇ ಸರಿಯಾಗಿ ಹೇಳಲಿಲ್ಲ’ವೆಂದು ತಪ್ಪನ್ನು ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಾರೆ. ಆದರೆ ಈತ ‘ಸಾರಿ, ಬೇರೆ ತರುತ್ತೇನೆ’ ಎಂದು ಅವನ್ನು ತೆಗೆದುಕೊಂಡು ನೇರವಾಗಿ ಮ್ಯಾನೇಜರ್ ಬಳಿ ಹೋಗಿ ವಿಷಯ ತಿಳಿಸಿದ. ಅವರು ಮೆಲುದನಿಯಲ್ಲಿ ಆತನ ಬಳಿ ಏನೋ ಹೇಳಿ ಕಣ್ಸನ್ನೆ ಮಾಡಿದರು. ಗ್ರಾಹಕರ ಮುಂದೆ ಏನೂ ತೋರಗೊಡಬಾರದಲ್ಲವೇ? ಆತ ಕೂಡಲೇ ಕಣ್ಣಲ್ಲಿ ನೀರು ತುಂಬಿಕೊಡು ಅಡುಗೆ ಕೋಣೆಯ ಒಳಗೆ ಹೋದ. ಇದನ್ನೆಲ್ಲಾ ದೂರದಿಂದಲೇ ಗಮನಿಸುತ್ತಿದ್ದ ನಮಗೆ ತುಂಬಾ ಕಸಿವಿಸಿಯಾಯಿತು. ಆತ ಬಹಳ ಮೃದು ಸ್ವಭಾವದವನಾಗಿರಬೇಕು. ಅವನ ವರ್ತನೆಯಿಂದಲೇ ನಮಗರ್ಥವಾಯಿತು ಅದರ ಬಿಲ್ಲನ್ನು ಅವನ ಸಂಬಳದಿಂದ ಕಡಿತಗೊಳಿಸಬಹುದು ಎಂದು. ಇಲ್ಲವಾದಲ್ಲಿ ಈ ರೀತಿ ಪುನರಾವರ್ತಿಸಿದರೆ ಕೆಲಸದಿಂದ ವಜಾಗೊಳಿಸುತ್ತೇವೆ ಎಂದೂ ಹೇಳಿರಬಹುದು.

ಸ್ವಲ್ಪ ಹೊತ್ತಿನ ಬಳಿಕ ಆತ ಹೊರಬಂದು ಬೇರೆ ಟೇಬಲ್‌ಗೆ ಸರ್ವ್ ಮಾಡತೊಡಗಿದ. ಆತನ ಕಣ್ಣುಗಳು ಕೆಂಪಾಗಿ ಊದಿಕೊಂದಿದ್ದವು. ಬಹಳ ಅತ್ತಂತೆ ಕಾಣುತ್ತಿತ್ತು.ಆದರೂ ಕಷ್ಟಪಟ್ಟು ಮುಖದಲ್ಲಿ ನಗು ತರಿಸಲು ಪ್ರಯತ್ನಿಸುತ್ತಿದ್ದ. ನಮ್ಮ ಟೇಬಲ್‌ಗೆ ಬೇರೆ ವೈಟರ್‌ನ ಮೂಲಕ ಮಂಚಾವ್ ಸೂಪ್ ಕಳಿಸಿದರು. ಬೇರೆ ಕೆಲವು ಖಾದ್ಯಗಳನ್ನೂ ತರಿಸಿಕೊಂಡೆವು. ಆದರೆ ಆ ಯುವಕನ ಕಣ್ಣೀರು ನೋಡಿ ನಮಗೆ ಏಕೋ ಮಂಚಾವ್ ಸೂಪ್ ರುಚಿಸದೇ ಹೋಯಿತು. ನಮ್ಮ ಟೇಬಲ್ ಗೆ ಬಂದ ಹೊಸ ವೈಟರ್ ಬಳಿ ಅವನ ಬಗ್ಗೆ ವಿಚಾರಿಸಿದೆವು. ನಾವು ಊಹಿಸಿದಂತೆಯೇ ಆತ ಹೊಸಬನಾಗಿದ್ದ, ಅಲ್ಲಿ ಕೆಲಸಕ್ಕೆ ಸೇರಿ ಇನ್ನೂ ಒಂದು ತಿಂಗಳಾಗಿಲ್ಲ ಎಂದು ಹೇಳಿದ. ‘ಆತನ ವೇತನ ಕಡಿತಗೊಳಿಸುತ್ತಾರೆಯೇ?’ ಎಂದು ಕೇಳಿದಾಗ ಸ್ವಲ್ಪ ಹಿಂದೆ ಮುಂದೆ ನೋಡಿ ‘ಹೌದು’ ಎಂದುಬಿಟ್ಟ. ಬಹುಷ: ಮೊದಲ ತಿಂಗಳ ವೇತನ ಸಿಗುವ ಮೊದಲೇ ಕಡಿತಗೊಂಡಿತಲ್ಲ ಎನ್ನುವ ದು:ಖವೋ, ಮೊದಲೂ ಈ ರೀತಿಯ ತಪ್ಪೆಸಗಿದ್ದನೋ ಅಥವಾ ಬೇರೇನಾದರೂ ಹಿನ್ನಲೆಯಿತ್ತೋ ನಮಗೆ ಗೊತ್ತಿರಲಿಲ್ಲ. ಆ ಮೊತ್ತ ಆತನ ಆ ದಿನದ ಸಂಬಳದ ಬಹುಪಾಲು ಆಗಿರಬಹುದು. ಇಂತಹ ಕ್ರಮಗಳು ಹೋಟೆಲ್‌ಗಳಲ್ಲಿ ಬಹಳ ಮಮೂಲಾಗಿರಬಹುದು. ಹೊಸಬರ ತಪ್ಪನ್ನು ತಿದ್ದುವ ಸಲುವಾಗಿ ಅಥವಾ ತಮಗಾದ ನಷ್ಟವನ್ನು ತುಂಬಲು ಅಲ್ಲಿನ ನೌಕರರ ಸಂಬಳದಿಂದ ಕಡಿತಗೊಳಿಸುವುದು. ನಾವೇನೋ ಮಗನ ಹುಟ್ಟುಹಬ್ಬದ ದಿನ ಖುಷಿಯಿಂದ ತಿಂದು ಬರೋಣವೆಂದು ಹೋಗಿದ್ದರೆ ಅಲ್ಲಿ ನಡೆದ ಈ ಘಟನೆಯಿಂದ ಬಹಳ ಬೇಜಾರಾಗಿಬಿಟ್ಟಿತ್ತು.

ಅಂತೂ ಇಂತೂ ಊಟ ಮುಗಿಸಿ ಬಿಲ್ ಕೊಟ್ಟಾಯಿತು. ಈ ವಿಷಯದ ಬಗ್ಗೆ ಹೋಟೆಲ್ ಮ್ಯಾನೇಜರ್‌ರಲ್ಲಿ ವಿಚಾರಿಸೋಣವೆಂದರೆ ಅದು ಅವರ ನಡುವಿನ ಆಂತರಿಕ ವಿಚಾರ, ಅದರಲ್ಲಿ ನಾವು ಮೂಗು ತೂರಿಸುವುದು ಸರಿಯಲ್ಲ ಎಂದೆನಿಸಿತು. ಹಾಗೆಂದುಕೊಂಡು ನಮ್ಮ ಗಮನಕ್ಕೆ ಬಂದಂತಹ ವಿಚಾರವನ್ನು ಅಲ್ಲಿಗೇ ಬಿಟ್ಟುಬಿಡಲು ನಮ್ಮ ಮನಸ್ಸು ಒಪ್ಪಲಿಲ್ಲ. ಹೊರಡುವ ಮೊದಲು ನನ್ನ ಯಜಮಾನರು ಆ ಯುವಕನನ್ನು ಕರೆದು ಎರಡು ಬೌಲ್ ಸೂಪ್ ನ ಮೊತ್ತವನ್ನು ಅವನ ಕೈಯಲ್ಲಿಟ್ಟರು. ಅವನಿಗೆ ಏನೆಂದು ಅರ್ಥವಾಗಲಿಲ್ಲ. ನಾವು ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದ್ದೇವೆ ಎಂದು ಆತ ನಿರೀಕ್ಷಿಸಿರಲಿಲ್ಲ. ತಕ್ಷಣ ಎಚ್ಚೆತ್ತುಕೊಂಡು ಕಣ್ಣಲ್ಲಿ ನೀರುತುಂಬಿಕೊಂಡು ಗದ್ಗದಿತನಾಗಿ ‘ಬೇಡ ಸಾರ್, ಪ್ಲೀಸ್’ ಎಂದು ತೆಗೆದುಕೊಳ್ಳಲಿಲ್ಲ. ನನ್ನ ಮನೆಯವರು ‘ತಪ್ಪು ಯಾರಿಂದಲೂ ಬರಬಹುದು, ಮುಂದೆ ಈ ರೀತಿ ಆಗದಂತೆ ನೋಡಿಕೋ, ಚೆನ್ನಾಗಿ ಕೆಲಸ ಮಾಡು’ ಎಂದು ಅವನ ಬೆನ್ನು ತಟ್ಟಿ ಸಮಾಧಾನಿಸಿದರು. ಆ ಹಣವನ್ನು ಅವನ ಜೇಬಿನಲ್ಲಿಟ್ಟು ಹೊರಬಂದರು. ಮಂಚಾವ್ ಸೂಪ್‌ನಿಂದ ಆರಂಭವಾದ ಈ ಕಥೆಯ ಸುಖಾಂತ್ಯವಾಗಿ ಹಗುರಮನಸ್ಸಿನಿಂದ ನಾವು ಮನೆಯ ಕಡೆ ಹೊರಟೆವು. ಮ್ಯಾನೇಜರ್ ಹಾಗೂ ಉಳಿದ ಸಿಬ್ಬಂದಿಗಳು ಮುಗುಳ್ನಗುತ್ತಾ ನಮ್ಮನ್ನೇ ನೋಡುತ್ತಿದ್ದರು.

– ಡಾ.ಹರ್ಷಿತಾ ಎಂ.ಎಸ್ , ಬಳ್ಳಾರಿ

13 Responses

  1. Shruthi Sharma says:

    ಲೇಖನ ಓದಿ ನನಗೂ ಆ ಹುಡುಗನ ಬಗ್ಗೆ ಆತಂಕವಾಯಿತು.
    ಕೆಲಸದ ಜಾಗದಲ್ಲಿ, ಅದರಲ್ಲೂ ಹೊಸಬರಿಗೆ ಹತ್ತು ಹಲವು ಕಾರಣಗಳಿಗೆ ಮಾನಸಿಕ ಒತ್ತಡಗಳುಂಟಾಗುತ್ತವೆ.

    ಯಾವುದೇ ಉದ್ಯಮ ಇರಲಿ, ಕೆಲಸಗಾರರೊಡನೆ ಧನಾತ್ಮಕ ನಡವಳಿಕೆ ವ್ಯತ್ಯಸ್ಥ ಕಾರಣಗಳಿಂದ ಮುಖ್ಯವಾಗುತ್ತದೆ.
    ನೀವು ಆತನ ಆತಂಕವನ್ನು ಕಡಿಮೆ ಮಾಡಲು ಸಾಧ್ಯವಾದ ರೀತಿಯಲ್ಲಿ ಸಹಕರಿಸಿದ್ದು ಮೆಚ್ಚುಗೆಯಾಯಿತು.

  2. Vishwanathakana says:

    ಮಗನ ಹುಟ್ಟು ಹಬ್ಬ ಅರ್ಥ ಪೂರ್ಣ !. ಲೋಕದಲ್ಲಿ ಇರುವ ಕೆಲವು ಸತ್ಯಗಳ ಪರಿಚಯ , ಮಾನೀಯತೆ , ಸಿಹಿ ಕಹಿ, ….. ಎಲ್ಲಾ ಸೇರಿ ನೆನಪಿನಲ್ಲಿ ಉಳಿಯುವಂತಾಯಿತ.

  3. ASHA nooji says:

    ಹೋಟಲ್ ಹುಟ್ಟು ಹಬ್ಬ ಬೇಡ ಎಂದೆನಿಸಿರಬಹುದು .ಅಲ್ಲವೇ ಹರ್ಷಿತ .ಆದರೆ ಮಗನಿಗೆ ಗೊತ್ತಾಗಿರುತ್ತೆಯಾ ?ಪಾಪ .

  4. ನಯನ ಬಜಕೂಡ್ಲು says:

    ಮನತಟ್ಟುವಂತಹ ಘಟನೆ. ಕೊನೆಯಲ್ಲಿ ಸಮಸ್ಯೆಯನ್ನು ಬಗೆಹರಿಸಿದ ರೀತಿ ಇಷ್ಟವಾಯಿತು. ಪಾಪ ಏನು ಕಷ್ಟವೋ ಏನೋ ಹುಡುಗನಿಗೆ, ಅವನಿಗೆ ತೊಂದರೆಯಾಗದಂತೆ ವ್ಯವಹರಿಸಿದ ರೀತಿ ಇಲ್ಲಿ ಶ್ಲಾಘನೀಯ.

  5. Savithri bhat says:

    ಲೇಖನ ಸುಖಾಂತ್ಯ ಓದಿ ಮನ ಹಗುರವಾಯಿತು.

  6. Shankari Sharma says:

    ಅವನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ನಡೆದ ರೀತಿ ಶ್ಲಾಘನೀಯ.
    ಅರ್ಥವತ್ತಾದ ಬರ್ತ್ ಡೇ ಪಾರ್ಟಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: