ಸಪ್ತಪದಿಯ ಮಹತ್ವ
ಮದುವೆ ಎಂದರೆ ಒಂದು ದಿನದ ಸಂಭ್ರಮ. ಮೊದಲನೆಯ ಸಂಗಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಐದು ಪಂಚಭೂತಗಳ ಸಾಕ್ಷಿ. ಆರು ರುಚಿಯ ಭೋಜನ, ಏಳು ಹೆಜ್ಜೆಗಳನ್ನು ಏಳೇಳು ಜನ್ಮಗಳಿಗೆ ಹಾಕುವುದು ಎಂದು ಅರ್ಥ.
ಮದುವೆಯ ವಿಧಿ ವಿಧಾನಗಳು ವೈದಿಕ ಧರ್ಮದಲ್ಲಿ ಮಾತ್ರ ಕಾಣಿಸುತ್ತವೆ. ಮದುವೆಯ ವಿಧಿ ವಿಧಾನಗಳಲ್ಲಿ ಹೇಳುವ ಮಂತ್ರಗಳು ಮಂಗಳಕರವಾಗಿ, ಅರ್ಥಗರ್ಭಿತವಾಗಿ, ಭಾವಯುಕ್ತವಾಗಿ, ಪ್ರತಿಜ್ಞಾಪೂರ್ವಕವಾಗಿ ಇರುವುದನ್ನು ನಾವು ನೋಡಬಹುದು. ಹೆಂಡತಿ ಎಂದರೆ, ಗಂಡನ ಪ್ರಾಣದಲ್ಲಿ ಸ್ನೇಹದಲ್ಲಿ ಜೀವನದಲ್ಲಿ ಕೊನೆಗೆ ಆತ್ಮದಲ್ಲಿಯೂ ಅರ್ಧಭಾಗವೆಂದು ಶ್ರುತಿಗಳು ಹೇಳುತ್ತವೆ.
ಪ್ರಾಣವಾಯು ಇಲ್ಲದೆ, ಯಾವುದೇ ಪ್ರಾಣಿಯೂ ಬದುಕುವುದಿಲ್ಲ. ಅದೇ ರೀತಿ ಗೃಹಸ್ಥಾಶ್ರಮವು ಇಲ್ಲದೆ ಇನ್ನಿತರ ಆಶ್ರಮಗಳಾದ ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ ಆಶ್ರಮಗಳು ನಿರರ್ಥಕವಾಗುತ್ತವೆ. ಆದ್ದರಿಂದ ಜವಾಬ್ದಾರಿಯುತವಾದ ಜೀವನಕ್ಕೆ ವಿವಾಹವನ್ನು ನಾಂದಿ ಎಂದು ಗುರುತಿಸಬೇಕು.
ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಘಟ್ವವಾಗಿದ್ದು, ಹಿಂದೂ ಧರ್ಮದಲ್ಲಿ ನಡೆಸಲಾಗುವ ವಿವಾಹದಲ್ಲಿ ಸಪ್ತಪದಿಗೆ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ವಿವಾಹವಾಗುವ ಪ್ರತೀ ಜೋಡಿಯೂ ಸಪ್ತಪದಿ ತುಳಿಯಲೇಬೇಕು. ಮದುವೆಯ ಸಂದರ್ಭದಲ್ಲಿ ವಧು ಹಾಗೂ ವರ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿಯುತ್ತಾರೆ. ಆದರೆ, ಇದರ ಅರ್ಥ ಹಾಗೂ ಮಹತ್ವ ಅದಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.
ಅಗ್ನಿ ದೇವರನ್ನು ಸಾಕ್ಷಿಯಾಗಿಸಿಕೊಂಡು ಇಡುವ ಪ್ರತೀಯೊಂದು ಹೆಜ್ಜಿಗೂ ಅದರದ್ದೇ ಆದ ಮಹತ್ವ ಹಾಗೂ ವಿಶೇಷತೆ ಇದೆ. ಸಪ್ತಪದಿಯಲ್ಲಿ ಇಡುವ ಪ್ರತೀ ಹೆಜ್ಜೆಗೂ ಇರುವ ಅರ್ಥ ಹಾಗೂ ವಿಶೇಷತೆಗಳನ್ನು ಪ್ರತೀಯೊಬ್ಬರೂ ತಿಳಿದುಕೊಳ್ಳಲೇಬೇಕು. ಇದರ ಅರ್ಥ ತಿಳಿದು ಜೀವನದಲ್ಲಿ ಅಳವಡಿಸಿಕೊಂಡ ಸತಿ-ಪತಿಗಳು ಸುಖಕರ ಹಾಗೂ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗುತ್ತದೆ.
ವಧುವರರಿಬ್ಬರೂ ಪ್ರದಕ್ಷಿಣೆ ಮಾಡುತ್ತಾ ಏಳು ಹೆಜ್ಜೆಗಳನ್ನಿಡುವುದನ್ನು ಸಪ್ತಪದಿ ಎಂದು ಹೇಳಲಾಗುತ್ತದೆ. ಈ ಏಳು ಹೆಜ್ಜೆಗಳು ಏಳು ಬಯಕೆಗಳಿಗೆ ಸಂಕೇತವಾಗಿರುತ್ತವೆ.
ವಧುವರರಿಬ್ಬರೂ ಒಂದಾಗಿ ಮೊದಲನೆ ಹೆಜ್ಜೆಯನ್ನು ಇಡುವುದರಿಂದ ತಿನ್ನುವುದಕ್ಕೆ ಅನ್ನವನ್ನು, ಎರಡನೆಯ ಹೆಜ್ಜೆಯನ್ನು ಇಡುವುದರಿಂದ ತಿಂದ ಅನ್ನದಿಂದ ಬಲವನ್ನು, ಮೂರನೆಯ ಹೆಜ್ಜೆ ಇಡುವುದರಿಂದ ಬಲದಿಂದ ಒಳ್ಳೆಯ ಕೆಲಸಗಳನ್ನು, ನಾಲ್ಕನೆಯ ಹೆಜ್ಜೆ ಇಡುವುದರಿಂದ ಒಳ್ಳೆಯ ಕೆಲಸಗಳಿಂದ ಸುಖವನ್ನು, ಐದನೇ ಹೆಜ್ಜೆ-ಸುಖದಿಂದ ಸಮೃದ್ಧಿಯನ್ನು, ಆರನೇ ಹೆಜ್ಜೆ-ಋತು ಸಂಪತ್ತನ್ನು, ಏಳನೇ ಹೆಜ್ಜೆ-ಏಳೇಳು ಜನ್ಮಕ್ಕೂ ನಾವಿಬ್ಬರೂ ಗಂಡ ಹೆಂಡತಿಯಾಗಿರಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು.
-ವಿದ್ಯಾ ಶ್ರೀ ಬಿ , ಬಳ್ಳಾರಿ
ಚೆನ್ನಾಗಿದೆ.
ಮದುವೆ ಅನ್ನುವುದು ಎರಡು ಹೃನ್ಮನಗಳ ಜೊತೆಗೆ ಪರಸ್ಪರರ ಕುಟುಂಬಗಳನ್ನೂ ಬೆಸೆಯುವ ಒಂದು ಪವಿತ್ರ ಬಂಧ. ಆದರೆ ಇತ್ತೀಚಿನ ದಿನಗಳಲ್ಲಿ ಆ ಪವಿತ್ರತೆ ಬೆಲೆ ಕಳೆದುಕೊಂಡು ಆಗಿರುವ ಮದುವೆಗಳು ವಿನಾ ಕಾರಣ ಮುರಿದು ಮನಸುಗಳು ಛಿದ್ರ ಗೊಳ್ಳುತ್ತಿವೆ.
ಮದುವೆಯ ಪಾವಿತ್ರ್ಯತೆಯನ್ನು ಮನದಟ್ಟು ಮಾಡುವ ಲೇಖನ ಚೆನ್ನಾಗಿದೆ.