ಉತ್ಕ್ರಮಣ
ಎಳ್ಳು ಬೆಲ್ಲ ಎನ್ನುವ ಒಳಿತು
ಆಡುವ ಪ್ರತಿ ಮಾತಿಗೂ :
ಸಂಯಮ ಸಮರಸ ಸಂವಾದ
ಸಂಸ್ಕ್ರತಿ ಉತ್ಕ್ರಮಣ ಉತ್ಕ್ರಾಂತಿ
ಎಂಬುದು ಬರಿಯೇ ಮಾತಲ್ಲ:
ಪ್ರಕೃತಿ ಸೊಗಯಿಸಿ ಸಗ್ಗದ ಸುಗ್ಗಿ
ನೆಲದುಂಬಿ ನಳನಳಿಸಿ ಪೈರು
ಪಚ್ಚೆಯ ಹಚ್ಚೆ ಮಣ್ಣ ಮೈಯಿಗೆ!
ನಾಡಿನೊಂದಿಗೆ ನುಡಿಯೂ ಸಡಗರಿಸಿ
ಸಂಭ್ರಮಿಸುವ ಸನ್ನಿವೇಶ – ಹಬ್ಬ –
ಗಬ್ಬ ಕಟ್ಟಿದ ಗೋ ಧೂಳಿಯ
ಅಭ್ಯಂಜನ, ಸ್ವರದ ಜೊತೆಗೇ ವ್ಯಂಜನ
ಮಾನವೀಯತೆ ಮಾತ್ರ ಕಾಣಿಸುವ ಕಣ್ಣ ಅಂಜನ
ಕೆಡುಕ ಕಡೆದು ಒಳಿತ ಮೆದ್ದು
ನಾಳೆಗಳ ನಾಲಿಗೆಗೆ ಬರಿಯೇ ಬೆಲ್ಲ
ಎಲರ ಕಂಪು ಭರವಸೆಯ ತಂಪು
ತೀಡುವ ಎಳ್ನೆಯ ಎಳಸು ಕಾಳು
ನೀಡಿ ಬಳಸು;
ಬಾಂಧವ್ಯದ ಉತ್ತರಾಯಣ
ಮನುಜ ಮತದ ಕಾರ್ಯ ಕಾರಣ –
ಈ ಸಂಕ್ರಮಣ.
-ಆನಂದ್ ಋಗ್ವೇದಿ , ದಾವಣಗೆರೆ
ಸಂಕ್ರಾಂತಿಯ ಸವಿ, ತುಂಬಿತು ಮನದ ತುಂಬಾ ಸಿಹಿ.
ಎಳ್ಳು ಬೆಲ್ಲದ ಸವಿ ತುಂಬಿದ ಚಂದದ ಕವನ .