ಎಷ್ಟು ತೂಕದ ಪ್ರೀತಿಯಿದು…
.
ಹುಡುಕಾಟಕೆಂಥ ಸುಖವಿತ್ತೆ ಗೆಳತಿ
ಹೊದ್ದ ಕಂಬಳಿ ತುಂಬ ಬಚ್ಚಿಟ್ಟ ಗುಟ್ಟುಗಳು.
ಕಪಾಟಿನಲಿ ಕಾದಂಬರಿ
ಗುರುತಿಗೆ ಗುಲಾಬಿಯದೊಂದು ಒಣಪಕಳೆ
ಗೋಡೆಯೆದೆ ಮೇಲೆ ವಿರಹಗೀತೆ
ಚಾವಣಿಯಲಿ ಲೆಕ್ಕವಿರದಷ್ಟು ಚಹರೆ
.
ಆರಾಮಿದ್ದೆ ಒಟ್ಟಿನಲ್ಲಿ
ಆರಾಮಿದ್ದೆ ಒಟ್ಟಿನಲ್ಲಿ
ಯಾರದೋ ಕಣ್ಣಿನೊಳಗೆ ನನ್ನ ಹುಡುಕುತ್ತಾ
ಕನ್ನಡಿಯಲಿ ಕಾಮನಬಿಲ್ಲು ಕಾಣುತ್ತಾ…
.
ಆರಾಮಿಗೂ ಬೋರಾಯಿತೋ ಏನೊ
ಆರಾಮಿಗೂ ಬೋರಾಯಿತೋ ಏನೊ
ಯಾವುದೋ ಒಂದು ಘಳಿಗೆ.
ಎದೆ ಬಾಗಿಲ ಮೇಲೆ ಮೃದುವಾದ ಸದ್ದು.
ಕದ ತಟ್ಟಿದವ
ತೆಗೆದೊಡನೆ ಅಕ್ಕಿಬೆಲ್ಲದ ಬಟ್ಟಲೊದ್ದು
ಬಲಗಾಲಿಟ್ಟು ಒಳಬಂದು
ಕಾಲು ಮಡಿಚಿ ಕೂತೇಬಿಟ್ಟ.!
ತಾಟು ಹಾಕಿಸಿಕೊಂಡವ ಮುಗಿಸಿ
ಹೊರಡಬಾರದೆ ಆಚೆ..?
.
ಹೊಸತೊಂದು ಹೆಸರಿಟ್ಟು
ಹೊಸತೊಂದು ಹೆಸರಿಟ್ಟು
ಇದ್ದ ಹೆಸರ ಮುದ್ದಾಗಿ ಕತ್ತರಿಸಿ
ಕೂಗಿ ಕರೆವಾಗೆಲ್ಲಾ
ನವುರು ಕಂಪಿಸುವೆ ನಾನು.
.
ಎಷ್ಟು ತೂಕದ ಪ್ರೀತಿಯಿದು ಗೆಳತಿ..!!!
ಎಷ್ಟು ತೂಕದ ಪ್ರೀತಿಯಿದು ಗೆಳತಿ..!!!
ಇದು ಕಾರಣ..ಇದುವೇ ಕಾರಣ.
ಕಾಡಬೇಡ ದಯಮಾಡಿ…ಇತ್ತೀಚೆಗೆ
ಏನು ಬರೆದೆ ಎನ್ನುತ್ತಾ…?
.
ಏನ ಬರೆಯಹೋದರೂ ಮೂರಕ್ಷರವೇ
ಏನ ಬರೆಯಹೋದರೂ ಮೂರಕ್ಷರವೇ
ಹೊಳೆದು,ಗುಂಗಿನಲ್ಲಿ ತಿದ್ದುತ್ತೇನೆ..
ನೆಲದ ಧೂಳೂ,ಗಾಡಿಯ ಗಾಜು,ಖಾಲಿಪೇಜು
ಗೋಡೆ,ಮಾಡು,ಆಕಾಶದ ಆ ಕಾಡು
ಅಂಗೈ,ಹಣೆ…
ಗದರಿಸುವುದಿಲ್ಲ ಗಂಗಳವೂ
ನಕ್ಕು ಒಪ್ಪಿಕೊಳ್ಳುತ್ತದೆ..
ಪಿಸುಗುಟ್ಟು ‘ಹೀಗಾಗುತ್ತದೆ ಕೆಲವೊಮ್ಮೆ’
.
ಒಲವಿನಾಯಾಸದ ನೆರಳಿಗೆ ಬರೀ
ಒಲವಿನಾಯಾಸದ ನೆರಳಿಗೆ ಬರೀ
ಸಮಾನಾರ್ಥಕ ಹೊಳೆಯುತ್ತವೆ ಗೆಳತಿ
ಸಾಲು ಮೋಹಿಸುವವರದ್ದು ಭಾರಿ ಅವಸರ
ಇದು ಕಾರಣ…
ಕಡ ಕೇಳುತ್ತಿರುವೆ ಬೊಗಸೆ ನೋವು
ಅರಳಿಸಬೇಕಿದೆ ಕವಿತೆಯದೊಂದು
ನೀಲಿ ಘಮಲಿನ ಹೂವು.
.
– ನಂದಿನಿ ಹೆದ್ದುರ್ಗ.
.
.
ಚಂದದ ಕವನ,
ನಂದಿನಿ ನಿಮ್ಮ ಈ ಕವಿತೆಗೆ ಚಿತ್ರಕ ಶಕ್ತಿ ಇದೆ.ನವಿರು ಸ್ವಗತ ಇಷ್ಟವಾಯಿತು._ಸ್ಮಿತಾ
ವಾವ್ ಅಳೆದಳೆದ ಆಳದ ತೂಕದ ಪ್ರೀತಿ!
ಪ್ರೀತಿಗೆ ತೂಕವಿಲ್ಲ ಹತ್ತಿಯಂತೆ ಹಗುರ
ಸದಾ ಹಾರಾಡುವ ಭ್ರಮರ!!.
ಎಷ್ಟು ತೂಕದ ಪ್ರೀತಿಯಿದು,
ನೋಡಿದವರಾರು ತೂಗಿ, ಅಳೆದು ?,
ಈ ಭಾವವಿಲ್ಲದಿರೆ ಮನವೆಲ್ಲ ಬರಿದು,
ಪ್ರೀತಿಯೊಂದಿರೆ ಜಗವೆಲ್ಲ ಹೊಸದು .
ಚೆನ್ನಾಗಿದೆ.
ಧನ್ಯವಾದಗಳು ಪ್ರತಿಕ್ರಿಯೆ ಗೆ.
ಚಂದದ ಕವಿತೆ.