ನಂಬಿಕೆಗಳ ಸುತ್ತ…….
ನಂಬಿಕೆಗಳು ಪ್ರತಿಯೊಬ್ಬನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಂಬಿಕೆ- ಪದವೊಂದು, ಆದರೆ ಅರ್ಥ ಹಲವು. ಜಗತ್ತು ನಿಂತಿರುವುದು ನಂಬಿಕೆಯ ಮೇಲೆ. ನಾಳೆ ಬೆಳಿಗ್ಗೆ ಎದ್ದೇಳುತ್ತೇವೆ ಅನ್ನುವ ನಂಬಿಕೆಯಿಂದ ರಾತ್ರೆ ನಿದ್ದೆ ಮಾಡುತ್ತೇವೆ. ಜಾತಸ್ಯ ಮರಣಂ ಧ್ರುವಂ- ಹುಟ್ಟಿದವನಿಗೆ ಸಾವು ನಿಶ್ಚಿತ ಅನ್ನುವುದರ ಅರಿವಿದ್ದರೂ, ಸಾವಿಗೆ ಹೆದರಿಕೊಂಡು ಯಾರೂ ಬದುಕುವುದಿಲ್ಲ. ಅದಕ್ಕೇ ಅಲ್ವೇ ಯಾರಾದರೂ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸುವಾಗ ಆಯುಷ್ಮಾನ್ ಭವ-ಶತಾಯುಷಿಯಾಗಿ ಬಾಳು ಎಂದೇ ಬಾಯಿ ತುಂಬಾ ಹಾರೈಸುವರು. ಓಹ್, ಎಲ್ಲಿಂದೆಲ್ಲಿಗೋ ಬಂದುಬಿಟ್ಟೆ. ನಂಬಿಕೆಯ ಬಗ್ಗೆ ಹೇಳುತ್ತಿದ್ದೆ. ಗುರು ಹಿರಿಯರ ಆಶೀರ್ವಾದದಿಂದ ಒಳ್ಳೆಯದಾಗುತ್ತದೆ ಅನ್ನುವುದು ಒಂದು ಧನಾತ್ಮಕ ನಂಬಿಕೆ. ಇಂತಹ ನಂಬಿಕೆಗಳಿಂದಾಗಿ, ಕಿರಿಯರು ಗುರುಹಿರಿಯರ ಬಗ್ಗೆ ಗೌರವ, ವಿಶ್ವಾಸ ಇಟ್ಟುಕೊಳ್ಳುತ್ತಾರೆ.
ನಂಬಿಕೆ, ಅಪನಂಬಿಕೆ, ಮೂಢನಂಬಿಕೆ-ಹೀಗೆ ಮೂರು ತರದ ನಂಬಿಕೆಗಳು ಸಮಾಜದಲ್ಲಿ ಅಸ್ತಿತ್ವ ಪಡೆದುಕೊಂಡಿವೆ. ಯಾವ ನಂಬಿಕೆಯೂ ಅತಿಯಾಗಬಾರದು. ಸತಿ-ಪತಿಯರ ನಡುವೆ, ಸ್ನೇಹಿತರ ನಡುವೆ, ಗುರುಶಿಷ್ಯರ ನಡುವೆ, ಕುಟುಂಬವರ್ಗದವರ ನಡುವೆ, ನೆರೆಹೊರೆಯವರ ನಡುವೆ ನಂಬಿಕೆ ಇದ್ದರೆ ಬದುಕು ಸುಂದರ. ಅಪನಂಬಿಕೆಯ ಗಾಳಿ ಸೋಕಿದರೆ ಬದುಕು ದುಸ್ತರವಾಗುತ್ತದೆ. ನಂಬಿಕೆ ಎಂದರೆ ಪರಸ್ಪರ ವಿಶ್ವಾಸ. ಮನುಷ್ಯ ಸಂಘಜೀವಿ. ನನ್ನ ಹಾಗೆಯೇ ಇನ್ನೊಬ್ಬ ಅಂತ. ನನ್ನಂತೆಯೇ ಅವನ ಆಲೋಚನೆಗಳೂ ಸಹಾ ಭಾವಿಸಿ ಇತರರೊಡನೆ ವ್ಯವಹರಿಸುವುದು ನಂಬಿಕೆಯ ಮೇಲೆಯೆ. ಅಪನಂಬಿಕೆ ಎಂದರೆ ಅವಿಶ್ವಾಸ. ಹಾಗಾದರೆ ಮೂಢನಂಬಿಕೆಯೆಂದರೆ ಏನು?
ಸಾಮಾನ್ಯರ ನಡುವೆ ಹುಟ್ಟಿ, ಕಿವಿಯಿಂದ ಕಿವಿಗೆ, ಬಾಯಿಂದ ಬಾಯಿಗೆ ಪರಂಪರಾನುಗತವಾಗಿ ಹರಿದುಬಂದಿರುವ ನಂಬಿಕೆಗಳ ಬಗ್ಗೆ ಪೂರ್ವಾಪರ ವಿವೇಚಿಸದೆ, ನನ್ನ ಪೂರ್ವಜರು ಅನುಕರಿಸುತ್ತಿದ್ದರು ಆದ ಕಾರಣ ನಾನೂ ಅದನ್ನು ಅನುಕರಿಸುತ್ತೇನೆ ಎಂದರೆ ಅದು ಮೂಢನಂಬಿಕೆ ಅಥವಾ ಅಂಧಶ್ರದ್ಧೆ ಎನಿಸಿಕೊಳ್ಳುತ್ತದೆ. ಕೆಲವು ನಂಬಿಕೆಗಳು ಉಪಯುಕ್ತವುಳ್ಳದ್ದಾಗಿರುತ್ತವೆಯಾದರೆ ಕೆಲವೊಂದು ನಂಬಿಕೆಗಳಿಗೆ ಅರ್ಥವೇ ಇರುವುದಿಲ್ಲ. ಇಂತಹ ಹಲವು ನಂಬಿಕೆಗಳು ಸಮಾಜದಲ್ಲಿ ಬೇರೂರಿವೆ ಹಾಗೆಯೇ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿವೆ ಎಂದರೆ ತಪ್ಪಾಗಲಾರದು. ನಂಬಿಕೆಗಳ ಉಗಮ ಹೇಗಾಯಿತು, ನಂಬಿಕೆಗಳು ಹೇಗೆ ಬೆಳೆದು ಬಂದವು ಅನ್ನುವುದನ್ನು ವಿಶ್ಲೇಷಿಸಹೊರಟರೆ ನಿರ್ದಿಷ್ಟ ಕಾರಣಗಳು ಸಿಗುವುದಿಲ್ಲ.
ಕೆಲವು ನಂಬಿಕೆಗಳನ್ನು ನಂಬುವುದರಿಂದ ನಮಗೇನೂ ನಷ್ಟವಿಲ್ಲ. ತಲೆ ಬಾಚುತ್ತಿರುವಾಗ ಬಾಚಣಿಗೆ ಕೈಯಿಂದ ಕೆಳಗೆ ಬಿದ್ದರೆ, ಬೆಕ್ಕು ತನ್ನ ಕೈಯಿಂದ ಮುಖಮಾರ್ಜನ ಮಾಡುತ್ತಿದ್ದರೆ, ಮನೆಯ ಆಸುಪಾಸಿನಲ್ಲಿ ಕಾಗೆಯೊಂದು ದೀರ್ಘವಾಗಿ ಕೂಗಿದರೆ, ಸೌದೆ ಒಲೆಯಲ್ಲಿ ಉರಿಯುತ್ತಿರುವ ಬೆಂಕಿ ಸದ್ದು ಮಾಡಿದರೆ ಮನೆಗೆ ನೆಂಟರು ಬರುವುದನ್ನು ಸೂಚಿಸುತ್ತವೆ. ನೆಂಟರನ್ನು, ಸಂಬಂಧಿಕರನ್ನು ನೆನಪಿಸಿಕೊಳ್ಳುವುದು, ಅವರ ಬರವನ್ನು ನಿರೀಕ್ಷಿಸುವುದು ಮನುಷ್ಯ ಸಂಘಜೀವಿ, ಇತರರ ಸಾಮೀಪ್ಯವನ್ನು ಬಯಸುತ್ತಾನೆ ಅನ್ನುವುದನ್ನು ಸೂಚಿಸುತ್ತದೆ. ಈ ಸೂಚನೆಗಳನ್ನು ನಂಬಿ, ಹೆಚ್ಚುವರಿ ಅಡುಗೆ ಮಾಡುವುದು ಮೂರ್ಖತನ. ನಾವೇನಾದರೂ ಗಂಭೀರ ವಿಷಯ ಮಾತನಾಡುತ್ತಿರುವಾಗ ಹಲ್ಲಿ ಲೊಚಗುಟ್ಟಿದರೆ, ಜೋಡಿಸಿಟ್ಟ ಪಾತ್ರೆ ಅದರಷ್ಟಕ್ಕೆ ಕೆಳಗೆ ಬಿದ್ದರೆ, ಗಡಿಯಾರದ ಗಂಟೆ ಹೊಡೆದರೆ “ನೋಡು, ನಾನು ಹೇಳಿದ್ದು ನೂರಕ್ಕೆ ನೂರು ಸತ್ಯ” ಅನ್ನುವವರ ಸಂಖ್ಯೆ ಸಾಕಷ್ಟಿದೆ.
ಕೆಲವು ನಂಬಿಕೆಗಳು ಒಳಿತಾಗಲಿದೆ ಎಂದು ಸಾಂಕೇತಿಸುತ್ತವೆ. ಊಟ ಮಾಡುತ್ತಿರುವಾಗ ಬಂದ ಅತಿಥಿಗಳು ಆತ್ಮೀಯರು ಅಂತ ಲೆಕ್ಕ. ಈಗಂತೂ ಬಿಡಿ, ಫೋನ್ ಮಾಡದೆ ಯಾರೂ ಬರುವುದಿಲ್ಲ. ಆಕಳಿಕೆ ಬಂದರೆ ಅಥವಾ ಊಟ ಮಾಡುತ್ತಿರುವಾಗ ಬಿಕ್ಕಳಿಕೆ ಬಂದರೆ ಯಾರೋ ಆತ್ಮೀಯರು ನಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆ ಅನ್ನುವಂತಹ ನಂಬಿಕೆಗಳಿಂದ ನಾವು ಕಳೆದುಕೊಳ್ಳುವಂತದ್ದೇನೂ ಇಲ್ಲ. ಪ್ರಸಕ್ತ ದಿನಗಳಲ್ಲಿ, ನೆನಪಾದ ತಕ್ಷಣ ಫೋನಾಯಿಸಬಹುದು. ಊಟ ಮಾಡುವಾಗ ಎಲೆ ಅತ್ತಿತ್ತ ಸರಿದರೆ ನಾಳೆ ಪಾಯಸದೂಟ ಅನ್ನುವಲ್ಲಿ ಆಶಾಭಾವ. ನಾವು ಯಾರ ಬಗ್ಗೆಯಾದರೂ ಮಾತನಾಡುತ್ತಿರುವಾಗ ಅಥವಾ ಯೋಚಿಸುತ್ತಿರುವಾಗ, ಅದೇ ವ್ಯಕ್ತಿ ಎದುರು ಬಂದರೆ “ನಿನಗೆ ನೂರು ವರ್ಷ ಆಯುಷ್ಯವಿದೆ” ಅನ್ನುತ್ತೇವೆ. ಕೆಲವರು “ನೂರು ವರ್ಷ ಬೇಡ ಮಾರಾಯರೇ” ಅಂತ ನಗೆ ಚಟಾಕಿ ಹಾರಿಸುತ್ತಾರೆ. ನಮ್ಮ ಬಗ್ಗೆ ಕೂಡಾ ಯೋಚಿಸುವವರು ಇದ್ದಾರೆ ಅಂತಾ ಒಳಗೊಳಗೆ ಖುಷಿಪಡುವವರು ಹಲವರು.
ಆದರೆ ಕೆಲವೊಂದು ನಂಬಿಕೆಗಳ ಆಚರಣೆಯು ತಾರ್ಕಿಕ ಮನಸ್ಸುಗಳಲ್ಲಿ ಜಿಜ್ಞಾಸೆ ಹುಟ್ಟುವಂತೆ ಮಾಡುತ್ತದೆ. ಶುಭ ಕೆಲಸಕ್ಕೆ ಮನೆಯಿಂದ ಹೊರಟಾಗ ಬೆಕ್ಕು ದಾರಿಗೆ ಅಡ್ದ ಬಂತು ಅಥವಾ ಒಂಟಿ ಬ್ರಾಹ್ಮಣ ಎದುರು ಸಿಕ್ಕಿದನು ಅಥವಾ ವಿಧವೆ ಹೆಂಗಸು ಕಾಣಸಿಕ್ಕಿದಳು, ಅಶುಭವಾಯಿತು ಅಂದುಕೊಂಡು ಮನೆಗೆ ಹಿಂತಿರುಗಿದರೆ, ಅದು ಮೂಢನಂಬಿಕೆಯಲ್ಲದೆ ಮತ್ತೇನೂ ಅಲ್ಲ. ಸಹಜ ಕ್ರಿಯೆಗಳಿಗೆ ಅಸಹಜ ಭಾವಗಳನ್ನು ಸಮೀಕರಿಸಲಾಗುತ್ತದೆ. ಕೆಲವು ಘಟನೆಗಳು ಮುಂಬರುವ ಅಪಾಯವನ್ನು ಸಾಂಕೇತಿಸುತ್ತವೆ ಹಾಗೂ ಅಂತಹ ಘಟನೆಗಳು ನಡೆದಾಗ ಮನ ಮುದುಡುತ್ತದೆ. ಅದಕ್ಕೆಂದೇ, ನಮಗರಿವಿದ್ದರೂ, ಅನೂಚಾನವಾಗಿ ಬೇರೂರಿರುವ ಅವ್ಯಕ್ತ ನಂಬಿಕೆಗಳೇ ಕಾರಣವಾಗಿ ಪೊರಕೆ, ಉಪ್ಪು, ಕತ್ತಿ, ಕತ್ತರಿ ಮುಂತಾದ ವಸ್ತುಗಳನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾಯಿಸುವಾಗ ಒಂದು ಕ್ಷಣ ಆಲೋಚಿಸುತ್ತೇವೆ.
ಮನೆಯ ಸದಸ್ಯರು ತೀವ್ರತರದ ಅನಾರೋಗ್ಯಕ್ಕೆ ತುತ್ತಾದಾಗ, ದೇವರಿಗೆ ಹೇಳಿಕೊಳ್ಳುವ ಬರೀ ಹರಕೆಯ ಮೂಲಕ ರೋಗ ವಾಸಿಯಾಗಲು ಸಾಧ್ಯವಿಲ್ಲ. ವೈದ್ಯರ ಸೂಕ್ತ ಚಿಕಿತ್ಸೆಯನ್ನೂ ಕೊಡಿಸಬೇಕಾಗುವುದು. ಹಾಗೆಯೇ ಪರೀಕ್ಷೆ ಎದುರಿಸುವ ವಿದ್ಯಾರ್ಥಿ ಏನೂ ಓದದೆ, ಪ್ರಯತ್ನಪಡದೆ, ಪರೀಕ್ಷೆಯ ದಿನ ದೇವಸ್ಥಾನಕ್ಕೆ ಹೋಗಿ, ದೇವರಿಗೆ ಪ್ರದಕ್ಷಿಣೆ ಬಂದರೆ ಉತ್ತಮ ಫಲಿತಾಂಶ ಬರಲು ಸಾಧ್ಯವೇ? ಮನಸ್ಸಿನಲ್ಲಿ ಮೂಡುವ ಚಡಪಡಿಕೆಯನ್ನು ತಹಬಂದಿಗೆ ತರಲು, ಮನಸ್ಸಿನ ಆತಂಕ ದೂರ ಮಾಡಲು, ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ದೇವರ ಮೇಲಿನ ನಂಬಿಕೆ ಸಹಕಾರಿಯಾಗುತ್ತದೆ. ರಾತ್ರೆ ಹೊತ್ತು ಕಸ ಬಿಸಾಡಬಾರದು, ರಾತ್ರೆ ಹೊತ್ತು ಉಗುರು ಕತ್ತರಿಸಬಾರದು ಮುಂತಾದ ನಂಬಿಕೆಗಳು ಯಾಕಾಗಿ ಹುಟ್ಟಿಕೊಂಡವು ಅನ್ನುವುದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಮರ್ಶಿಸಬಹುದು. ಹಿಂದಿನ ಕಾಲದಲ್ಲಿ ವಿದ್ಯುಚ್ಛಕ್ತಿ ಇರಲಿಲ್ಲ. ಎಣ್ಣೆ ದೀಪದ ಮಂದ ಬೆಳಕಿನಲ್ಲಿ ಸಣ್ಣ ಪುಟ್ಟ ವಸ್ತುಗಳು ಕಸದೊಂದಿಗೆ ಸೇರಿ ಹೋದರೂ ಗೊತ್ತಾಗುವುದಿಲ್ಲ. ಮೊದಲೆಲ್ಲಾ ಚಾಕುವಿನಿಂದಲೇ ಉಗುರು ಕತ್ತರಿಸಿಕೊಳ್ಳಬೇಕಿತ್ತು. ಕೈಗೆ ನೋವಾಗದಿರಲಿ ಎನ್ನುವ ಸದುದ್ದೇಶ.
ಒಟ್ಟಿನಲ್ಲಿ ಹೇಳಬೇಕೆಂದರೆ, ನಂಬಿಕೆಗಳ ನೆಲೆಗಟ್ಟಿನ ಮೇಲೆ ಬದುಕು ನಿಂತಿದೆ. ನಂಬಿಕೆಗಳಿಗೆ ಅನುಸಾರವಾಗಿ ಕೆಲವು ಘಟನೆಗಳು ಸಂಭವಿಸುವುದು ಕಾಕತಾಳೀಯ. ಆದುದರಿಂದ, ಕಣ್ಣು ಮುಚ್ಚಿಕೊಂಡು ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಪ್ರವೃತ್ತಿ ಬಿಟ್ಟು, ವಿವೇಚನೆಯಿಂದ ಮುನ್ನಡೆಯುವ ಜವಾಬ್ದಾರಿ ಪ್ರತಿಯೊಬ್ಬರದು. ಗುರುಹಿರಿಯರನ್ನು ಗೌರವಿಸುವ, ದೇವರನ್ನು ನಂಬುವ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ನಂಬಿಕೆಗಳು ನಮ್ಮೊಂದಿಗಿರಲಿ. ಅಜ್ಞಾನದತ್ತ ತಳ್ಳುವ, ಮನಸ್ಸಿನಲ್ಲಿ ಭಯ ಹುಟ್ಟಿಸುವ, ಆತ್ಮವಿಶ್ವಾಸ ಕಸಿದುಕೊಳ್ಳುವಂತಹ ಮೂಢನಂಬಿಕೆಗಳು ಬೇಡ. ನಂಬಿಕೆ, ಆಚರಣೆಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಂಡು ಆಚರಿಸೋಣ. ಏನಂತೀರಾ?
-ಡಾ.ಕೃಷ್ಣಪ್ರಭಾ, ಮಂಗಳೂರು
ನಿಜ. ಆತ್ಮವಿಶ್ವಾಸ ಹೆಚ್ಚಿಸುವ, ವೈಜ್ಞಾನಿಕ ನಂಬಿಕೆ ಆಚರಣೆಗಳನ್ನು ಪ್ರೋತ್ಸಾಹಿಸಬೇಕು. ಮೌಢ್ಯ ಖಂಡಿತಾ ಬೇಡ. ಬರಹ ವಿಚಾರಪೂರ್ಣವಾಗಿದೆ ..
ಪ್ರತಿಕ್ರಿಯಿಸಿದ ಪ್ರೀತಿಯ ವಸುಂಧರಾ ಮೇಡಂ ಅವರಿಗೆ ಧನ್ಯವಾದಗಳು
ಮೇಡಂ ಜಿ , ಸುಂದರ ಬರಹ . ಮನಸ್ಸನ್ನು ಚಿಂತನೆಗೆ ಹಚ್ಚುವಂತಿದೆ. ನಂಬಿಕೆ – ಮೂಢನಂಬಿಕೆಗಳ ನಡುವಿರುವ ವ್ಯತ್ಯಾಸವನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಹಾಗೆಯೇ ಗುರು ಹಿರಿಯರನ್ನು ಗೌರವದಿಂದ ಕಾಣುವ ಕುರಿತಾಗಿ ಬಂದ ಸಾಲುಗಳೂ ಅಪ್ಯಾಯಮಾನವಾಗಿವೇ. ಇನ್ನೊಮ್ಮೆ ಈ ಕುರಿತಾಗಿಯೇ ಒಂದು ಲೇಖನ ಬರಿಯಿರಿ ಮೇಡಂ.
ಧನ್ಯವಾದಗಳು ನಯನಾ. ಸಲಹೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ
Wow ,whatever you written it’s true, everything is on our beliefs.
Thank for wonderful concept
Thank you very much…
ಅರ್ಥ ಪೂರ್ಣ ಬರಹ
ಧನ್ಯವಾದಗಳು
ನಮ್ಮ ನಿಯಂತ್ರಣಕ್ಕೆ ಸಿಗದೆ ನೀವು ಹೇಳಿದ ಆ ನಂಬಿಕೆಗಳು ಅವೈಜ್ಞಾನಿಕ ಎಂದು ಗೊತ್ತಿದ್ದರೂ ನಮ್ಮಲ್ಲಿ ಮನಸ್ಸಿನಾಳದಲ್ಲಿ ಸೂಕ್ಷ್ಮವಾಗಿ ಅದು ಸತ್ಯವಾಗಿರಬಹುದೆ ಎಂಬ ಸಂಶಯ ಉಂಟುಮಾಡುತ್ತದೆ!!. ದುರ್ಬಲ ಮನಸ್ಥಿತಿಗೆ ಇದು ಶಾಪವೂ ವರವೂ ಆಗಿರಬಹುದು ಅಲ್ಲವೆ !?. ಉದಾಹರಣೆಗೆ ದೇಹಬಿಟ್ಟು ಹೋದ ಆತ್ಮೀಯರು ಕಾಗೆಯ ರೂಪದಲ್ಲಿ ಬಂದು ನಾವು ಮಾಡಿಟ್ಟ ಎಡೆಯನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆಯಲ್ಲ. ನಾವಿಟ್ಟ ಎಡೆ ನಿಸರ್ಗದ ಜಾಡಮಾಲಿಗಾದರೂ ನಮ್ಮ ಆತ್ಮೀಯರಿಗೆ ಅಥವಾ ಹಿರಿಯರಿಗೆ ಕೊಡುತ್ತಿರುವುದು ಎಂಬ ಭಾವನೆ ಮನಸ್ಸಿಗೆ ಆಪ್ತ ಭಾವನೆ ಕೊಡುತ್ತದೆ.
ಆಸುಪಾಸಿನಲ್ಲಿ ಕಾಣಸಿಗದ ಕಾಗೆಗಳು ಎಡೆ ಇಟ್ಟ ಕೂಡಲೇ ಬರುವುದು ನಿಜವಾಗಿಯೂ ಸೋಜಿಗದ ಸಂಗತಿ…ಮೊದಲೆಲ್ಲ ಹೆಚ್ಚು ಮಕ್ಕಳು ಇರುವಾಗ, ಅಚ್ಚುಮೆಚ್ಚಿನ ಮಗ ಯಾ ಮಗಳು ಇಟ್ಟ ಎಡೆಯನ್ನು ಮೊದಲು ಮುಟ್ಟುವುದು ಎಷ್ಟೋ ಬಾರಿ ಸಂಭವಿಸಿದೆ… ಧನ್ಯವಾದಗಳು ವಿಶ್ವನಾಥ್ ಸರ್
ವಿಚಾರಹೀನ ಮೂಢನಂಬಿಕೆಗಳು ಖಂಡಿತಾ ಸಲ್ಲ. ಲೇಖನ ಚೆನ್ನಾಗಿ ಮೂಡಿಬಂದಿದೆ.
ಯಾವಾಗಲೂ ಲೇಖನ ಮೆಚ್ಚಿ ಪ್ರತಿಕ್ರಿಯಿಸುವ ಶಂಕರಿ ಮೇಡಂ ಅವರಿಗೆ ಧನ್ಯವಾದಗಳು
ಚೆನ್ನಾಗಿದೆ..
ಒಂದು ವಾಕ್ಯ ಓದಿ ನಂಗೆ ನೆನಪಾಗಿದ್ದು…
ಶ್ರಾದ್ಧ ಮಾಡುವಾಗ ಅಪ್ಪ ಬೆಕ್ಕನ್ನು ಕಟ್ಟಿ ಹಾಕ್ತಿದ್ರು ಅಂತ ಮಗ ಶ್ರಾದ್ಧ ಮಾಡುವಾಗ ಪಕ್ಕದ ಮನೆಯಿಂದ ಬೆಕ್ಕು ತಂದು ಕಟ್ಟಿ ಹಾಕಿದ್ನಂತೆ
ಮೂಢನಂಬಿಕೆಯ ಪರಮಾವಧಿ ಅನ್ನೋದಾ?
ಧನ್ಯವಾದಗಳು ಶ್ವೇತಾ. ಲೇಖನ ಬರೆಯಲಾರಂಬಿಸಿದಾಗ ಈ ಕಥೆ ನೆನಪಿಗೆ ಬಂತು.
ಸತ್ಯವಾದ ಮಾತು . ತುಂಬಾ ಚೆನ್ನಾಗಿದೆ ಈ ಲೇಖನ.
ಧನ್ಯವಾದಗಳು ಗೀತಾ ಅವರಿಗೆ
Nice madam. I read almost all your articles. All I read were excellent
Thank you Geetha… Need your continued support in future too
ಸುಂದರ, ಅರ್ಥಪೂರ್ಣ ಲೇಖನ .
ನಂಬಿಕೆ, ಅಪನಂಬಿಕೆ, ಮೂಢನಂಬಿಕೆ ಗಳ ವ್ಯತ್ಯಾಸ ವನ್ನು ವಿವರಿಸಿದ ರೀತಿ ತುಂಬಾ ಚೆನ್ನಾಗಿದೆ.
ಅರಿವಿಗೆ ಬರುವ ಮೊದಲೇ ಆಚರಿಸಿದ ಹಲವು ನಂಬಿಕೆ ಗಳು ಮೂಢ ನಂಬಿಕೆ ಗಳು ಅಂತ ತಿಳಿದುಈಗ ಬೇಸರಿಸುವ ಪರಿಸ್ಥಿತಿ ನಮ್ಮ ದು.
ತಮ್ಮಿಂದ ಇನ್ನಷ್ಟು ಲೇಖನಗಳ ನಿರೀಕ್ಷೆ ನನ್ನ ದು.
ನಂಬಿಕೆ ಮುಖ್ಯ,ಮೂಢನಂಬಿಕೆ ಬೇಡ.ಲೇಖನ ಈ ಬಗ್ಗೆ ತುಂಬಾ ಧನಾತ್ಮಕವಾಗಿ ಆಲೋಚಿಸುವಂತೆ ಮಾಡಿದೆ.