ಮಾಡಿದ್ದುಣ್ಣೋ ಮಾರಾಯ
ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಒಂದು ಶಾಲೆಯು ನಡೆಯುತ್ತಿತ್ತು. ಆ ಶಾಲೆಯಲ್ಲಿ ನೂರಾರು ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಸಾವಿರಾರು ಜನ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಒಂದು ದಿನ ತರಗತಿಯೊಂದರ ಗಣಿತ ಶಿಕ್ಷಕರು ಸಂಕಲನ ಬಗ್ಗೆ ಪಾಠವನ್ನು ಮಕ್ಕಳಿಗೆ ಮಾಡಿದ ಮೇಲೆ, ಗೃಹಪಾಠಕ್ಕೆಂದು ಕೆಲವು ಕೂಡುವ ಲೆಕ್ಕಗಳನ್ನು ನೀಡಿದ್ದರು. ಮರುದಿನ ತರಗತಿಯಲ್ಲಿ ನಿನ್ನೆ ಕೊಟ್ಟಂತಹ ಲೆಕ್ಕಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲನೆ ನಡೆಸಿದರು. ಒಬ್ಬ ವಿದ್ಯಾರ್ಥಿ ಮಾಡಿರುವ ಲೆಕ್ಕಗಳನ್ನು ಸೂಕ್ಷ್ಮವಾಗಿ ಗಮನಿಸಿ, ಆತನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ, ತಾವು ಕೊಟ್ಟ 2 + 2 = ? ಪ್ರಶ್ನೆಗೆ ಆ ವಿದ್ಯಾರ್ಥಿಯು 4 ಎಂಬ ಉತ್ತರದ ಬದಲಾಗಿ 22 ಎಂದು ಬರೆದಿದ್ದನ್ನು ನೋಡಿ, ಆ ವಿದ್ಯಾರ್ಥಿಗೆ ನೀನು ಮಾಡಿರುವುದು ತಪ್ಪು ಎಂದು ಹೇಳಿದರು. ಆದರೆ ಆ ವಿದ್ಯಾರ್ಥಿಯು ತನ್ನ ಪೋಷಕರು ಸಹ ಇದೇ ಸರಿಯಾದ ಉತ್ತರವೆಂದು ಬರೆದಿದ್ದಾರೆಂದು ವಾದಿಸಿಸುತ್ತಾನೆ. ಆಗ ಆ ಶಿಕ್ಷಕರು ಆತನಿಗೆ ತನ್ನ ಪೋಷಕರನ್ನು ನಾಳೆ ಶಾಲೆಗೆ ಕರೆದುಕೊಂಡು ಬರುವಂತೆ ಹೇಳುತ್ತಾರೆ.
ಮರುದಿನ ಶಾಲೆಗೆ ಬಂದಂತಹ ಆ ವಿದ್ಯಾರ್ಥಿಯ ಪೋಷಕರು ಗಣಿತ ಶಿಕ್ಷಕರದೇ ತಪ್ಪು ಎಂಬಂತೆ ಮಾತಾಡಿ, ಶಿಕ್ಷಕರ ಕೆನ್ನೆಗೆ ನಾಲ್ಕು ಬಾರಿಸುತ್ತಾರೆ. ತಮ್ಮ ಮಗನಿಗೆ ನೀವು ಹೇಳಿ ಕೊಡುವುದು ಸರಿಯಿಲ್ಲ. ನಾವು ಹೇಳಿದಂತೆ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ನಿಮ್ಮ ಮೇಲೆ ಆರೋಪ ಮಾಡುವುದಾಗಿ ಜಗಳವಾಡುತ್ತಾರೆ. ಆದರೆ ಆ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ನಾನು ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಇಷ್ಟೇ ಅಲ್ಲದೆ ಆ ಶಿಕ್ಷಕರ ಕುರಿತಾಗಿ ಟಿವಿ ಚಾನೆಲ್ಲುಗಳಲ್ಲಿ ಮೂಲ ಗಣಿತಕ್ಕೂ, ಪಯಾರ್ಯ ಗಣಿತದ ಬಗ್ಗೆ ದೊಡ್ಡ ಚರ್ಚೆಯು ನಡೆಯುತ್ತದೆ. ಆನಂತರ ಈ ವಿಚಾರವು ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಆಡಳಿತ ಮಂಡಳಿಯ ಮುಂದೆ ಹೋಗುತ್ತದೆ. ಅಲ್ಲಿ ಶಿಕ್ಷಕರು ವಿದ್ಯಾರ್ಥಿಯು ಕೂಡುವ ಲೆಕ್ಕ ಮಾಡಿದ್ದು, ತಪ್ಪನ್ನು ತಿದ್ದುವ ಕೆಲಸ ಮಾಡಿದ್ದು ತಪ್ಪೇ? ಪೋಷಕರು ಅನುಚಿತವಾಗಿ ವರ್ತಿಸಿದ ರೀತಿ ಸರಿಯೇ? ಎಂದು ಎಷ್ಟೇ ಹೇಳಿದರೂ ಕೇಳದೆ, ಲಕ್ಷಾಂತರ ಶುಲ್ಕ ಕಟ್ಟಿದ ಪೋಷಕರು ಪರವಾಗಿಯೇ ಆಡಳಿತ ಮಂಡಳಿಯು ಶಿಕ್ಷಕರದೇ ತಪ್ಪೆಂದು, ಅದಕ್ಕೆ ಕ್ಷಮೆ ಕೇಳುವಂತೆ, ಇಲ್ಲವಾದರೆ ಕೆಲಸದಿಂದ ತೆಗೆದು ಹಾಕುವುದಾಗಿ ಹೇಳುತ್ತದೆ . ತಾವು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಶಿಕ್ಷಕರು ನಿರ್ಧರಿಸುತ್ತಾರೆ. ಕೆಲ ದಿನಗಳ ನಂತರ ಶಾಲೆಯ ಮುಖ್ಯಸ್ಥರು ಆ ಶಿಕ್ಷಕರಿಗೆ ಶಾಲೆಯ ಹಿತದೃಷ್ಟಿಯಿಂದ ಕ್ಷಮೆ ಕೇಳಬೇಕೆಂದು, ನಾಳೆಯೇ ಶಾಲೆಗೆ ಬರಬೇಕೆಂದು ಪೋನ್ ಮಾಡಿ ಹೇಳುತ್ತಾರೆ. ಆ ಶಿಕ್ಷಕರು ಶಾಲೆಗೆ ಬಂದಾಗ ಟಿವಿ ಚಾನೆಲ್ ವರದಿಗಾರರ ಮುಂದೆ ಆಡಳಿತ ಮಂಡಳಿ ಮುಖ್ಯಸ್ಥರು ಗಣಿತ ಶಿಕ್ಷಕರು ಕ್ಷಮೆ ಕೇಳುವರೆನ್ನುವರು. ಆಗ ಶಿಕ್ಷಕರು ತಾವು 2 +2 = 4 ಎಂಬ ಗಣಿತದ ಮೂಲ ನಿಯಮಕ್ಕೆ ಬದ್ಧರೆನ್ನುವರು.
ಶಾಲೆಯ ಮುಖ್ಯಸ್ಥರು ನಿಮ್ಮನ್ನು ಕೆಲಸದಿಂದ ವಜಾ ಮಾಡಲಾಗಿದ್ದು. ನಿಮಗೆ ಕಳೆದ ತಿಂಗಳ 2000 ರೂಪಾಯಿ ಹಾಗೂ ಈ ತಿಂಗಳ 2000 ಸಾವಿರ ರೂಪಾಯಿ ಒಟ್ಟು 4000 ಸಾವಿರ ರೂಪಾಯಿಯ ವೇತನವನ್ನು ಕೊಟ್ಟು ಕಳಿಸಲಾಗುವುದೆನ್ನುತ್ತಾರೆ. ಆಗ ಗಣಿತ ಶಿಕ್ಷಕರು ‘ಮುಳ್ಳನ್ನು ಮುಳ್ಳಿನಿಂದಲೇ’ ತೆಗೆಯುವಂತೆ, ‘ವಜ್ರವನ್ನು ವಜ್ರದಿಂದಲೇ ಕತ್ತರಿಸುವ’ ರೀತಿಯಲ್ಲಿ, ‘ಏಟಿಗೆ ಎದಿರೇಟು’ ಕೊಡುವ ರೀತಿಯಲ್ಲಿ, ಆ ವಿದ್ಯಾರ್ಥಿಯೂ, ಟಿವಿಯಲ್ಲಿ ವಿತಂಡವಾದ ಮಾಡಿದ ಗಣಿತ ಮೇಧಾವಿಗಳ ತರಹ ತಮಗೆ 2000 + 2000 = 4000 ವಲ್ಲ, 22000 ಸಾವಿರ ಎಂದು ಹೇಳುತ್ತಾರೆ. ಆಗ ಅಲ್ಲಿದ್ದ ಶಾಲೆಯ ಮುಖ್ಯಸ್ಥರಿಗೆ ಹಾಗೂ ಟಿವಿ ಚಾನೆಲ್ ವರದಿಗಾರರಿಗೂ ತಮ್ಮ ತಮ್ಮ ತಪ್ಪುಗಳ ಅರಿವಾಗುತ್ತದೆ. ಬಿತ್ತಿದಂತೆ ಬೆಳೆಯು, ಮಾಡಿದ್ದುಣ್ಣೋ ಮಾರಾಯ ಎಂಬ ಜೀವನ ನೀತಿಯು ಈ ಕಥೆಯ ಮೂಲಕ ತಿಳಿಯುತ್ತದೆ.
– ಶಿವಮೂರ್ತಿ.ಹೆಚ್. ದಾವಣಗೆರೆ.
ಹೊಸದಾಗಿದೆ ..! ಹೌದು ವಿವೇಚನೆ ರಹಿತವಾಗಿರುವವರ ಬಳಿ ಏನೇ ವಾದಿಸಿದರೂ ವ್ಯರ್ಥವೆಂದೇ ಕೈಚೆಲ್ಲಬೇಕಾಗುತ್ತೆ.. ಬರಹ ಚೆನ್ನಾಗಿದೆ…
ಸರ್, ಸುಪರ್ಬ್, ಇಲ್ಲಿ ಈ ಕಥೆಯಲ್ಲಿ ಹಲವಾರು ಸಂದೇಶ ಇದೆ ಸರ್ . ಒಂದನೆಯದಾಗಿ ಮಕ್ಕಳ ಎದುರಲ್ಲಿ ಹೆತ್ತವರೇ ಹೀಗೆ ಅನುಚಿತವಾಗಿ ವರ್ತಿಸಿದ್ರೆ ಮುಂದೆ ಆ ಮಗು ಯಾವ ದಾರಿಯಲ್ಲಿ ಸಾಗಬಹುದು, ಅದರ ಭವಿಷ್ಯ ಹೇಗಿರಬಹುದು? . ಇನ್ನೊಂದು ಗುರುಗಳಿಗೆ ಅಗೌರವ ತೋರಿಸುವಂತಹ ನಡತೆಯನ್ನು ಹೆತ್ತವರೇ ಕಲಿಸಿಕೊಟ್ಟಂತಾಗಿದೆ ಇಲ್ಲಿ , ಅದು ದೊಡ್ಡ ತಪ್ಪು . ಮಾಧ್ಯಮದವರು ತಪ್ಪನ್ನು ಸಮರ್ಥಿಸಿ ಪ್ರಚಾರ ಮಾಡುವುದರಿಂದ ಇಡೀ ಸಮಾಜವನ್ನೇ ದಾರಿ ತಪ್ಪಿಸಿದಂತಾಗುತ್ತದೆ. ಕೊನೆಯಲ್ಲಿ ಆ ಶಿಕ್ಷಕ ತೋರಿದ ಬುದ್ದಿವಂತಿಕೆ ಇಷ್ಟ ಆಯಿತು .
ಈಗ ಸಾಮಾನ್ಯ ಕೂಲಿಕಾರನೂ ತನಗೆ ಇಷ್ಟ ಇಲ್ಲದ ಸ್ಥಳದಿಂದ ಧೈರ್ಯವಾಗಿ ಕೆಲಸ ಬಿಟ್ಟು ಬೇರೆಡೆ ಹೋಗುತ್ತಾನೆ ! ಕಾರಣ ಕೂಲಿ ಕೆಲಸದವರಿಗೆ ಅಷ್ಟು ಬೇಡಿಕೆ ಇದೆ. ಆದರೆ ದೊಡ್ಡ ಸಂಬಳದ ದೊಡ್ಡ ದೊಡ್ಡ ಉದ್ಯೋಗದಲ್ಲಿ ಇರುವವರು “ಜೀ ಹುಜೂರ್” ಸಂಸಕೃತಿಯೊಂದಿಗೆ ಬಾಳುವಂತೆ ಅದುದು ದೊಡ್ಡ ದುರಂತ . ನಿಮ್ಮ ಕತೆಯ ನಾಯಕನಂತೆ ಜಾಣ್ಮೆಯಿಂದ ಹಾಗೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಎಲ್ಲರಿಗೂ ಬರಲಿ ಅಲ್ಲವೆ ?,
ಹೌದು..ಈಗಿನ ಕಾಲವೇ ಹಾಗೆ..ದುಡ್ಡೇ ದೊಡ್ಡಪ್ಪ!
ಇದೇ ರೀತಿಯಲ್ಲಿ ನಾನು ಗಣಿತ ಕಲಿಸುವ ಸಂದರ್ಭ ದಲ್ಲೂ ಸಣ್ಣ ಮಟ್ಟಿನಲ್ಲಿ ನಡೆದಿತ್ತು. ಆಶ್ರಮದ 10ನೇ ತರಗತಿಯ ಮಕ್ಕಳಿಗೆ ಗಣಿತ ಕಲಿಸುತ್ತಿದ್ದಾಗ ಪಠ್ಯ ಪುಸ್ತಕದಲ್ಲೇ ತಪ್ಪು ಕಂಡಿತು. ಅವರ ನೋಟ್ಸ್ ನೋಡಿದಾಗ ಅಲ್ಲೂ ಅದೇ ತಪ್ಪು! ಅವರ ಟೀಚರ್ ಹಾಗೇ ಕಲಿಸಿದ್ದರಂತೆ. ಆ ಟೀಚರಿನಲ್ಲಿ ಅದನ್ನು ವಿಚಾರಿಸಿ ಬರಲು ವಿದ್ಯಾರ್ಥಿಗಳಿಗೆ ಹೇಳಿದ್ದೆ. ಇನ್ನೂ ಉತ್ತರ ಬಂದಿಲ್ಲ.. ವರ್ಷ ಒಂದಾಯ್ತು.
ಲೇಖನ ಚೆನ್ನಾಗಿ ಮೂಡಿ ಬಂದಿದೆ.