ಆಹಾರ -ಅನುಬಂಧ
ನಾನೊಮ್ಮೆ ಮುಂಬೈಗೆ ಹೋಗಿದ್ದಾಗ ಒಂದು ಹೃದಯಸ್ಪರ್ಶಿ ದೃಶ್ಯ ನೋಡಿದೆ. ಎಲ್ಲಿಂದಲೋ ವಲಸೆ ಬಂದ ಕಾರ್ಮಿಕ ದಂಪತಿ. ಆ ನಸುಕಿನ ಕತ್ತಲೆಯಲ್ಲಿ ಬೀದಿ ಬದಿಯಲ್ಲಿಯೇ ಆ ಹೆಣ್ಣು ಮಗಳು ಬಾಣಲೆ ಹೊರ ತೆಗೆದು , ಸ್ಟವ್ ಹಚ್ಚಿ, ಸಾಸಿವೆ, ಉದ್ದಿನಬೇಳೆ, ಕರಿಬೇವು ಎಂದೆಲ್ಲ ಕ್ರಮವಾಗಿ ಹುರಿದು, ಬಿಸ್ಲೇರಿ ಬಾಟಲಿಯೊಂದರಲ್ಲಿದ್ದ ನೀರು ಕುದಿಸಿ ಉಪ್ಪಿಟ್ಟು ಮಾಡಿ, ಗೋಣಿ ಚೀಲವೊಂದರಲ್ಲಿದ್ದ ತಾಟು ತೆಗೆದು ಗಂಡನಿಗೂ ಬಡಿಸಿ ತಾನೂ ಸಂತೃಪ್ತಿಯಿಂದ ತಿನುವ ದೃಶ್ಯ. ಹೌದು. ಆಹಾರವೆನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ. ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ’, ‘ಉಪ್ಪು ತಿಂದ ಮನೆಗೆ ಎರಡು ಬಗೆಯಬಾರದು’, ‘ಶ್ರೀಮಂತರ ಮನೆಯ ನೋಟ ಚಂದ ಬಡವರ ಮನೆಯ ಊಟ ಚಂದ‘ ಈ ರೀತಿಯ ಗಾದೆ ಮಾತುಗಳು.. ಹೀಗೆ ಎಲ್ಲವೂ ಹೀಗೆ ಆಹಾರ, ವಿಹಾರ, ಸಂಸ್ಕೃತಿ ಎಲ್ಲವೂ ಪರಸ್ಪರ ಅನುನಯಿಸುತ್ತ , ಸಾಮರಸ್ಯದ ಜೀವನಕ್ಕೆ ಬೆಳಕಾಗಿ ಇರುವ ಅಂಶಗಳು. ಅಜ್ಜಿ ಮಾಡಿಕೊಡುತ್ತಿದ್ದ ರುಚಿಯಾದ ತಂಬುಳಿ, ಅಮ್ಮನ ಸ್ಪೆಶಲ್ ಮಿಡಿ ಉಪ್ಪಿನಕಾಯಿ, ಅಪ್ಪ ತರುತ್ತಿದ್ದ ಪಾರ್ಲೆ ಜಿ ಬಿಸ್ಕೆಟ್, ಅಣ್ಣ ಕೊಡಿಸಿದ ಐಸ್ ಕ್ರೀಮ್.. ಹೀಗೆ ಆಹಾರವೆಂದರೆ ಸ್ಮೃತಿವಲಯದ ಭಾಗವೂ ಹೌದು.
ಚಾರ್ಲ್ಸ್ ಡಿಕನ್ಸ್ ನ ‘ಒಲಿವರ್ ಟ್ವಿಸ್ಟ್’ನಲ್ಲಿ ಒಂದು ಬೌಲ್ ಸೂಪ್ ಕೇಳಿದ್ದಕ್ಕೆ ಒಲಿವರ್ ಅನ್ನು ಅಮಾನವೀಯವಾಗಿ ಶಿಕ್ಷಿಸಲಾಗುತ್ತದೆ. ಅಷ್ಟು ಕಠಿಣವಾಗಿ ಅಲ್ಲದಿದ್ದರೂ ತುತ್ತು ಅನ್ನಕ್ಕೆ ಅವಮಾನಿಸಲ್ಪಟ್ಟ, ಎಳೆ ವಯಸ್ಸಿನಲ್ಲಿ ಕದ್ದು ತಿಂದ ಸೀಬೆ ಕಾಯಿಗೆ ಕೂಡ ಬೈಗುಳ ತಿಂದ ಅನುಭವ ಹೆಚ್ಚಿನವರಿಗೂ ಒಂದಲ್ಲ ಒಂದು ರೂಪದಲ್ಲಿ ಆಗಿರುತ್ತದೆ. ಹಾಗೆ ನೋಡಿದರೆ ಮನುಷ್ಯರು ಉದ್ಯೋಗ ಭದ್ರತೆಗಾಗಿ ನಡೆಸುವ ಹೋರಾಟ ಕೂಡ ಆಹಾರದೊಂದಿಗೆ ಬಲವಾಗಿ ತಳುಕು ಹಾಕಿಕೊಂಡಿದೆ ಎಂದೇ ನನಗನಿಸುತ್ತದೆ. ಕಾಡು ಮಾವಿನ ಗೊಜ್ಜು, ನಾಟಿ ಕೋಳಿ ಸಾರು, ಹೀಗೆಲ್ಲ ಹಳ್ಳಿ ಬಿಟ್ಟು ಸಿಟಿ ಸೇರಿಕೊಂಡವರೆಲ್ಲ ನಾಸ್ಟಾಲ್ಜಿಯಾದಿಂದ ಹಳ ಹಳಿಸುತ್ತಿರುತ್ತಾರೆ. ಪಿಜ್ಜಾ, ಬರ್ಗರ್, ನೂಡಲ್ಸ್ ಎಂದೆಲ್ಲ ತಿಂದು ಬೆಳೆಸಿಕೊಂಡ ಬೊಜ್ಜು ಆ ವೇಳೆಗೆ ಸಂಗಾತಿಯಾಗಿರುವುದೂ ಸತ್ಯ. ಈ ನಿಟ್ಟಿನಲ್ಲಿ ಆಹಾರ, ಆಹಾರದ ಪೊಲಿಟಿಕ್ಸ್, ಮಹಿಳೆ ಮತ್ತು ಅಡಿಗೆ ಮನೆ ಹೀಗೆಲ್ಲ ಒಂದಿಷ್ಟು ವಿಚಾರಗಳು.
ಭಾರತೀಯ ಸಂಸ್ಕೃತಿಯಲ್ಲಿ ಅಡಿಗೆ ಮನೆ ಎಂದರೆ ಹೆಣ್ಣಿನ ಜನ್ಮಸಿದ್ಧ ಹಕ್ಕು, ಕರ್ತವ್ಯ ಎಲ್ಲವೂ ಹೌದು. ಹತ್ತನೆ ಕ್ಲಾಸು ಮುಗಿಯುವ ಮುನ್ನವೇ ಅಡಿಗೆ ಕಲಿಯುವ ಒತ್ತಡ ಶುರು. ಹುಡುಗಿಗೆ ಬೇಳೆ ಸಾರು ಮಾಡಲು ಬಾರದಿದ್ದರೆ ಮಹಾಪರಾಧ.( ಅದೇ ವಯಸ್ಸಿನ ಹುಡುಗರನ್ನು ಐ ಐ ಟಿಗೆ ಏಕಾಗ್ರತೆಯಿಂದ ಓದಲು ಒತ್ತಾಯಿಸುತ್ತಿರುತ್ತಾರೆ). ಓದುವ ಹುಡುಗಿಯರು ಬಾವಿಯಿಂದ ನೀರು ಸೇದಿ, ಸೌದೆ ಒಲೆಯಲ್ಲಿ ಅಡಿಗೆ ಮಾಡಿ, ಕೂಡು ಕುಟುಂಬದಲ್ಲಿ ಎಳೆ ಮಕ್ಕಳನ್ನು ನೋಡಿಕೊಳ್ಳುತ್ತ ಬಡವಾಗುತ್ತ, ಶಾಲೆಯನ್ನೂ ಬಿಟ್ಟು ಮಂಕಾಗುತ್ತ, ಆತ್ಮ ವಿಶ್ವಾಸ ಕಳೆದುಕೊಳ್ಳುವುದು ನಮ್ಮ ಹಳ್ಳಿಗಳಲ್ಲಿ ಕಾಣುವ ದೃಶ್ಯ. ಹಳ್ಳಿಗಳಲ್ಲಿ ಅಂಗಳದಲ್ಲಿನ ಬದನೆ ,ಹರಿವೆ, ಚಪ್ಪರದಲ್ಲಿನ ತೊಂಡೆ, ಬಸಳೆ , ಹಿತ್ತಲಿನಲ್ಲಿನ ಕೆಸು, ದಂಟಿನ ಸೊಪ್ಪು ಎಂದೆಲ್ಲ ದೈನಂದಿನ ಆಹಾರದ ವಿಷಯದಲ್ಲಿ ಸ್ವಾಯತ್ತತೆ ಇದೆ ಎಂದೇ ಹೇಳಬಹುದು.
(ಸಾಂದರ್ಭಿಕ ಚಿತ್ರ ,ಅಂತರ್ಜಾಲದಿಂದ)
ಮನೆಯ ಸೌದೆ ಒಲೆಯಲ್ಲಿ ಅಡಿಗೆ ಮಾಡಿ, ಹಟ್ಟಿಯಲ್ಲಿ ಹಸುಗಳ ಹಾಲು ಕರೆದು, ಗದ್ದೆ ತೋಟ ಎಂದೆಲ್ಲ ಶ್ರಮಜೀವಿಗಳಾಗಿದ್ದ ನಮ್ಮ ಹಳೆ ತಲೆಮಾರಿನವರನ್ನು ಇಲ್ಲಿ ಎಷ್ಟು ನೆನೆದರೂ ಸಾಲದು. ಈ ತಲೆಮಾರಿನಲ್ಲಿಯೂ ಅನ್ನಪೂರ್ಣೆಯರ ಸ್ಥಾನ ಮಹಿಳೆಯರಿಗೇ. ನರ್ಸರಿ ರೈಮ್ಸ್ ಗಳಿಂದ ಹಿಡಿದು ಜಾಹೀರಾತಿನ ಜಿಂಗಲ್ಸ್ ವರೆಗೆ ಅಡಿಗೆ, ಪಾತ್ರೆ ತೊಳೆಯುವುದು, ನೆಲ ಥಳ ಠಳ ಒರಸುವುದು, ಬಟ್ಟೆಯ ಕೊಳೆ ತೊಳೆಯುವುದು ಇವೆಲ್ಲ ಹೆಣ್ಣಿಗೇ ಮೀಸಲು ಹಾಗೂ ಈ ಪದ್ಧತಿಯನ್ನು ಪ್ರಶ್ನಿಸುವುದೇ ತಪ್ಪು ಎನ್ನುವಂತೆ. ದೇಶ ವಿದೇಶಗಳ ಭೇದವಿಲ್ಲದೆ ಎಲ್ಲೆಲ್ಲೂ ವಿವಿಧ ರುಚಿಯ ಆಹಾರಗಳ ಕಾಲ ಇದು. ಇದಕ್ಕೆ ಪ್ರತಿಯಾಗಿ ಸಾವಯವ ಅಡುಗೆ, ‘ಸ್ಲೋ ಫ಼ುಡ್ ‘ ಅಭಿಯಾನಗಳು. ಇನ್ನು ನಮ್ಮ ಅಡಿಗೆ ಪುಸ್ತಕಗಳಂತೂ ಸಂಶೋಧನೆಗೆ ಯೋಗ್ಯವೇ ಆಗಿವೆ. ಆಯಾ ಪ್ರದೇಶದ, ಸಾಂಸ್ಕೃತಿಕ ಚೌಕಟ್ಟಿಗೆ, ಇನ್ನೂ ಪ್ರಮುಖವಾಗಿ ಅಡಿಗೆ ಮಾಡುವವರ ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳುವಂತೆ ಇರುವುದು ಇವುಗಳ ವೈಶಿಷ್ಠ್ಯ. ) ಇನ್ನು ಫ಼ುಡ್ ಫ಼ೆಸ್ಟಿವಲ್ ಗಳು, ಹಬ್ಬ ಹರಿದಿನಗಳು, ಪಾರ್ಟಿಗಳು.. ಹೀಗೆ ಆಹಾರವೆಂದರೆ ಬಾಂಧವ್ಯ ಬೆಸೆಯುವ ತಂತು ಕೂಡ. ಜೊತೆಯಾಗಿ ಕುಡಿಯುವ ಒಂದು ಕಪ್ ಟೀ ಫ಼್ರೆಂಡ್ ಶಿಪ್ ಉಳಿಸಬಹುದು, ತಮ್ಮ ತಮ್ಮ ಫ಼ೇವರಿಟ್ ಅಡಿಗೆಯಿಂದ ಕುಟುಂಬದಲ್ಲಿ ಮತ್ತೆ ಹೂ ನಗೆ ಅರಳಬಹುದು. ಆಹಾರ ಸಂಸ್ಕೃತಿಗೆ ಜಯವಾಗಲಿ!
-ಜಯಶ್ರೀ ಬಿ. ಕದ್ರಿ
ವಾವ್…ಎಂತಾ ಸೊಗಸಾದ ನಿರೂಪಣೆ… ಅದ್ಭುತ…
ನೀವು ಬರೆದಿರುವ ಹಲವು ವಿಷಯಗಳು ನನ್ನ ಜೀವನದಲ್ಲೂ ನಡೆದಿವೆ..ಮೂರನೆಯ ತರಗತಿಯಲ್ಲಿರುವಾಗಲೇ ಅಡುಗೆ ಮಾಡಲು ಕಲಿಸಿದ್ದರು
ಸೊಗಸಾದ ಬರಹ ಮೇಡಂ. ನಿಮ್ಮ ಬರಹದಲ್ಲಿ ಆಹಾರದ ಮಹತ್ವ , ತುತ್ತು ಅನ್ನದ ಮೇಲಿನ ಗೌರವ ಎದ್ದು ಕಾಣಿಸುತ್ತಿದೆ .
ಧನ್ಯವಾದಗಳು
ಆಹಾರದ ಮಹತ್ವವನ್ನು ನಿರೂಪಿಸುವ ಸುಂದರ ಬರಹ.
Very nicely written article Jayakka..