ಆಹಾರದಿಂದ ಆರೋಗ್ಯ
ಪುಟ್ಟ ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಏನೋ ಆಹಾರವನ್ನು ಹಿಡಿದು ಹಾರುತ್ತಿತ್ತು..ತನ್ನ ಗೂಡಿನೆಡೆಗೆ, ಮರಿಗಳಿಗೆ ಉಣಿಸಲು. ಪಕ್ಕದ ಬೀದಿಯಲ್ಲಿರುವ ಕಸದ ತೊಟ್ಟಿಯ ಸುತ್ತಲೂ ನಾಯಿಗಳ ಬೊಬ್ಬೆ.. ಆಹಾರಕ್ಕಾಗಿ ಕಾದಾಟ. ಹಿಂದಿನ ಬೀದಿಯಲ್ಲಿ ನಿನ್ನೆ ಕಳೆದ ಅದ್ಧೂರಿ ಮದುವೆಯಲ್ಲಿ ತಿಂದುಂಡು ಬಿಸಾಡಿದ ಆಹಾರಕ್ಕಾಗಿ ಆಸೆ ಕಣ್ಣುಗಳಿಂದ ನಿರುಕಿಸುತ್ತಿರುವ ಬಡ ಬಿಕ್ಷುಕರು ತಮ್ಮ ಮಕ್ಕಳೊಂದಿಗೆ. ಎಲ್ಲಿ ನೋಡಿದರಲ್ಲಿ ಕಾಣಸಿಗುತ್ತವೆ.. ತಿಂದುಂಡು ಮಾಡಲು ನೂರಾರು ಹೋಟೇಲುಗಳು..
ಹೌದು.. ಪ್ರಾಣಿ, ಪಕ್ಷಿ, ಮಾನವ ಮಾತ್ರವಲ್ಲ, ಮರ, ಗಿಡ ಬಳ್ಳಿಗಳಿಗೂ ಜೀವಿಸಲು ಮೂಲಭೂತವಾಗಿ ಅಗತ್ಯವಿರುವ, ಪ್ರಾಣವಾಯು, ಜೀವಜಲಗಳ ಬಳಿಕ ಅಂಗ-ಆಕಾರಗಳ ಬೆಳವಣಿಗೆಗೆ ಪೌಷ್ಟಿಕ ಆಹಾರದ ಅವಶ್ಯಕತೆ ಬಹಳವಿದೆ. ಎಲ್ಲಾ ಜೀವಿಗಳು ಆಹಾರಕ್ಕಾಗಿ ತಮ್ಮದೇ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿದರೆ, ಮಾನವರಾದ ನಾವು ಮಾತ್ರ ಆ ದಾರಿಯಿಂದ ದೂರ ಸರಿಯುತ್ತಿದ್ದೇವೆ. ಮಾನವರಿಗೆ, ತಮ್ಮ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಮತೂಕದ, ಆರೋಗ್ಯಕರವಾದ ಆಹಾರವು ಬಹಳ ಅಗತ್ಯ. ನಮ್ಮ ಹಿರಿಯರು, ತಮ್ಮ ಆರೋಗ್ಯಕರವಾದ ಜೀವನ ಶೈಲಿಯೊಂದಿಗೇ ಆರೋಗ್ಯಕರ ಆಹಾರ ಸೇವನೆಗೂ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದುದರಿಂದ, ಶಾರೀರಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದುದು ತೀರಾ ಅಪರೂಪವಾಗಿತ್ತು. ಪ್ರಕೃತಿಯೊಂದಿಗೆ ಬೆರೆತು ಬಾಳುವ ಕಲೆ ಅವರಿಗೆ ಸಿದ್ಧಿಸಿತ್ತು.
ಆದರೆ ಈಗ ಪ್ರಪಂಚದಾದ್ಯಂತ ಏನಾಗುತ್ತಿದೆ? ನಾವೇನು ಮಾಡುತ್ತಿದ್ದೇವೆ? ಪ್ರಕೃತಿಯಿಂದ ದೂರ ಓಡುತ್ತಿದ್ದೇವೆ. ಹಿರಿಯರು ಅನುಸರಿಸುತ್ತಿದ್ದ ಪಾರಂಪರಿಕ ಆಹಾರ ಪದ್ಧತಿಯು ವೇಗವಾಗಿ ನಶಿಸಿ ಹೋಗುತ್ತಿದೆ. ಆಯಾಯ ಕಾಲಕ್ಕನುಗುಣವಾಗಿ ದೊರಕುವ ಆಹಾರಗಳ ಬದಲು, ಸಂಸ್ಕರಿಸಲ್ಪಟ್ಟ ಆಹಾರಗಳ ಸೇವನೆಯಲ್ಲಿಯೇ ಒಲವು ತೋರಿಸುತ್ತಿರುವುದು ಜನರ ಆರೋಗ್ಯದ ಹಿನ್ನಡೆಗೆ ಕಾರಣವಾಗಿದೆ. ಕೃಷಿ ಪದ್ಧತಿಯಲ್ಲಿಯೂ ಆಗುತ್ತಿರುವ ಸಾಕಷ್ಟು ಬದಲಾವಣೆಗಳು, ಬೆಳೆಯುವ ಆಹಾರ ಪದಾರ್ಥಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತಿರುವುದು ನಿಜಕ್ಕೂ ಖೇದಕರ. ಅತೀ ಕಡಿಮೆ ಸಮಯದಲ್ಲಿ, ಅತೀ ಹೆಚ್ಚು ಇಳುವರಿ ಪಡೆಯುವ ದುರಾಸೆಯಿಂದ; ನೂರಾರು ಕಂಪೆನಿಗಳು ಪೈಪೋಟಿಯಿಂದ ವಿತರಿಸುತ್ತಿರುವ ರಾಸಾಯನಿಕಗಳ ಉಪಯೋಗ ನಿರಂತರ ನಡೆಯುತ್ತಿದೆ. ಅದರಿಂದ ಬೆಳೆದ ಆಹಾರ ಪದಾರ್ಥಗಳ ಸೇವನೆಯು ನಮ್ಮೆಲ್ಲರನ್ನೂ ವಿಷ ಮಾನವರನ್ನಾಗಿಸಿ, ಮಾನವ ದೇಹವು ಅಸಂಖ್ಯ ರೋಗಗಳ ಗೂಡಾಗುತ್ತಿರುವುದು ದುರಂತವೇ ಸರಿ. ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯಗಳು ತಹಬಂದಿಗೆ ತರಲಾರದಷ್ಟು ದಟ್ಟವಾಗಿ ಹಬ್ಬತೊಡಗಿದೆಯಲ್ಲಾ! ಇದರ ದುಷ್ಪರಿಣಾಮವು, ಪ್ರಕೃತಿಯ ಮೇಲೆ ನೇರವಾದ ಹೊಡೆತವಾಗಿದ್ದು, ಮರ-ಗಿಡಗಳು, ಪ್ರಾಣಿ-ಪಕ್ಷಿಗಳು ಸಹಿತ ನವೆಯುತ್ತಿರುವುದನ್ನು ಕಣ್ಣಾರೆ ಕಾಣುವ ದುಸ್ಥಿತಿ ನಮ್ಮದು.
.
ಹೌದು..ಅಕ್ಟೋಬರ ಹದಿನಾರರಂದು ಆಚರಿಸುತ್ತಿರುವ ವಿಶ್ವ ಆಹಾರ ದಿನದ ಆಚರಣೆಯು, ಇಂದು ನಿಜಕ್ಕೂ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಜನಾಂಗದವರ ಭವಿಷ್ಯ ಆನಂದದಾಯಕವಾಗಿರಲಾರದೆಂಬುದು ನಿಶ್ಚಿತ.
ಈ ದಿನಗಳಲ್ಲಿ ಆರೋಗ್ಯಕರ ಶುದ್ಧ ಆಹಾರವನ್ನು ಅವಶ್ಯಕತೆಗೆ ತಕ್ಕಂತೆ ಲಭ್ಯತೆಯ ಜೊತೆಗೆ ಅದರ ಪೂರೈಕೆಗೂ ಹೆಚ್ಚು ಒತ್ತು ಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಇತ್ತೀಚೆಗೆ, ಸಾವಯವ ಕೃಷಿ ಪದ್ಧತಿ ಅಳವಡಿಸಿ, ಆಹಾರ ಬೆಳೆಗಳನ್ನು ಬೆಳೆಸುತ್ತಿರುವುದು ಅಲ್ಲಲ್ಲಿ ಕಂಡುಬರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಆಶಾದಾಯಕ ವಿಚಾರ. ಆದರೂ ನಮ್ಮ ಅನ್ನದಾತ ರೈತನು ಕಷ್ಟಪಟ್ಟು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ಆತ್ಮಹತ್ಯೆಯಂತಹ ದಾರುಣ ಕ್ರಿಯೆಗೆ ಮೈಯೊಡ್ಡುವಂತಹ ಘಟನೆಗಳು ನಮ್ಮ ಕಣ್ಮುಂದೆಯೇ ಘಟಿಸುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಹೆಚ್ಚುವರಿ ಉತ್ತಮ ಬೆಳೆಗಳನ್ನು, ಪ್ರಾಕೃತಿಕ ವಿಕೋಪಗಳಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು, ಕೆಡದಂತೆ ಜೋಪಾನ ಮಾಡುವ ಬಗ್ಗೆ ಸರಕಾರಗಳು ಹೆಚ್ಚು ಗಮನ ಹರಿಸುವುದು ಮುಖ್ಯವೆನಿಸುತ್ತದೆ. ಬಡಜನರ ಹೊಟ್ಟೆ ತುಂಬಿಸಲು ಅಸಮರ್ಥವಾದ ಆಹಾರವು; ಶ್ರೀಮಂತರ ಆಡಂಬರದ ಔತಣ ಕೂಟಗಳಲ್ಲಿ ಪೋಲಾಗುವುದು ಇಂದು ಸರ್ವೇಸಾಮಾನ್ಯ ಸಂಗತಿಯಗಿದೆ. ಸುಮಾರು ಮೂವತ್ತು ಶೇಕಡದಷ್ಟು ಆಹಾರ ಪದಾರ್ಥಗಳು ಪೋಲಾಗುತ್ತಿರುವುದು ಗಾಬರಿಪಡಬೇಕಾದ ವಿಷಯವಾಗಿದೆ. ನಾವುಣ್ಣುವ ಪ್ರತಿ ಅನ್ನದಗುಳು ಕೂಡಾ ಆನ್ನದಾತ ರೈತನ ಕಷ್ಟದ ಬೆವರ ಹನಿಯಾಗಿರುವುದರಿಂದ ಅನ್ನ ಪೋಲು ಮಾಡುವ ಹಕ್ಕು ತಿನ್ನುವವನಿಗೆ ಖಂಡಿತವಾಗಿಯೂ ಇಲ್ಲ. ಇನ್ನು, ಉಣ್ಣಲೆಂದು ಜೀವಿಸಬೇಕೋ ಅಥವಾ ಜೀವಿಸಲೆಂದು ಉಣ್ಣಬೇಕೋ ಎಂದು ನಾವೇ ನಿರ್ಧರಿಸಬೇಕಲ್ಲವೇ?
-ಶಂಕರಿ ಶರ್ಮ, ಪುತ್ತೂರು.
ರೈತರ ಕಷ್ಟದ ಮೇಲೆಯೂ ಬೆಳಕು ಚೆಲ್ಲಿದ ಬರಹ ಹೃದಯಸ್ಪರ್ಶಿಯಾಗಿದೆ ಮೇಡಂ. ಬೇರೆ ಬೇರೆ ಕಾಲಕ್ಕೆ ಯಾವ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕು ಅನ್ನುವುದು ಹಳ್ಳಿಯ ಜೀವನ ಶೈಲಿಯನ್ನು ನೆನಪಿಸಿ ಮನಸಿಗೆ ಮುದ ನೀಡುವಂತಿದೆ
ಬಹಳ ಚೆನ್ನಾಗಿದೆ ಲೇಖನ ಮೇಡಮ್..
ಓದಿದ, ಮೆಚ್ಚಿ ಪ್ರತಿಕ್ರಯಿಸಿದ ಸುರಹೊನ್ನೆ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.