ಮಕ್ಕಳನ್ನೂ ಬಿಡದ ಮೈಕ್ರೋ ಪ್ಲಾಸ್ಟಿಕ್ 

Spread the love
Share Button

0.5 ಮಿಲಿಮೀಟರ್ ಅಥವಾ 0.2 ಇಂಚಿಗಿಂತ ಕಡಿಮೆ ಉದ್ದವಿರುವ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ಕರೆಯಲಾಗುತ್ತದೆ. ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಉಡುಪುಗಳು ( ಉದಾಹರಣೆಗೆ ನೈಲಾನ್) ಮೊದಲಾಗಿ ಶೃಂಗಾರ ಸಾಧನ ( ಉದಾಹರಣೆಗ ಫೇಸ್ ಸ್ಕ್ರಬ್ ಗಳಲ್ಲಿ ಬಳಸುವ ಮೈಕ್ರೋ ಬೀಡ್‍ಗಳು), ಹೀಗೆ ಹಲವಾರು ಕಡೆ ಈ ಮೈಕ್ರೋಪ್ಲಾಸ್ಟಿಕ್ ಗಳು ಕಂಡು ಬರುತ್ತವೆ. ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಉಪ್ಪು, ಗಾಳಿ, ನೀರು, ಜಲಚರ, ಪರಿಸರ ಮತ್ತು ಇತ್ತೀಚಿಗೆ ಧೃವ ಪ್ರದೇಶಗಳಲ್ಲಿರುವ ಬೃಹತ್ ಹಿಮಗಡ್ಡೆಗಳಲ್ಲಿ ಕೂಡಾ ಮೈಕ್ರೋಪ್ಲಾಸ್ಟಿಕ್ ಕಂಡು ಬಂದಿದೆ.
.
ಮೈಕ್ರೋಪ್ಲಾಸ್ಟಿಕ್‍ ಗಳಲ್ಲಿ ಎರಡು ಪ್ರಮುಖ ವಿಧಗಳನ್ನು ಗುರುತಿಸಲಾಗಿದೆ. ಮೈಕ್ರೋ ಪ್ಲಾಸ್ಟಿಕ್ ಗಳು ಇರುವ ಉತ್ಪನ್ನಗಳ ಉತ್ಪಾದನೆ, ಸಾಗಾಣಿಕೆ ಮತ್ತು ಬಳಕೆಯಿಂದ ಪರಿಸರ ಮಾಲಿನ್ಯವುಂಟು ಮಾಡುವುದು ಪ್ರೈಮರಿ ಮೈಕ್ರೋಪ್ಲಾಸ್ಟಿಕ್ ಗಳಾದರೆ, ಬಿಸಿಲು, ಗಾಳಿ, ನೀರಿನಿಂದ ಪ್ಲಾಸ್ಟಿಕ್ ತ್ಯಾಜ್ಯದ ಮೇಲಾಗುವ ರಾಸಾಯನಿಕ ಪ್ರಕ್ರಿಯೆಗಳಿಂದಾಗಿ ಉತ್ಪನ್ನವಾಗುವ ಮೈಕ್ರೋಪ್ಲಾಸ್ಟಿಕ್ ಗಳು ಸೆಕೆಂಡರಿ ಮೈಕ್ರೋಪ್ಲಾಸ್ಟಿಕ್‍ ಗಳಾಗುವುತ್ತವೆ. ಪ್ರೈಮರಿ ಮತ್ತು ಸೆಕೆಂಡರಿ ಮೈಕ್ರೋಪ್ಲಾಸ್ಟಿಕ್‍ಗಳು ಪರಿಸರ ಸ್ನೇಹಿಯಾಗಿಲ್ಲವಾದ ಕಾರಣ ನೂರಾರು ವರ್ಷಗಳವರೆಗೆ ಮಾಲಿನ್ಯವನ್ನುಂಟು ಮಾಡುತ್ತವೆ.
.
3 ರಿಂದ 17 ವರ್ಷಗಳ ವಯಸ್ಸಿನ 2500 ಮಕ್ಕಳ ರಕ್ತ ಮತ್ತು ಮೂತ್ರದ ಪರೀಕ್ಷೆ ಮಾಡಿದ ಜರ್ಮನಿಯ ವಿಜ್ಞಾನಿಗಳು, ಆಘಾತಕಾರಿ ವರದಿಯನ್ನು ನೀಡಿದ್ದಾರೆ. ಶೇಕಡಾ 97ರಷ್ಟು ಮಕ್ಕಳ ರಕ್ತ ಮತ್ತು ಮೂತ್ರದಲ್ಲಿ ಜೀವಕ್ಕೆ ಅಪಾಯಕಾರಿಯಾಗುವ ಪ್ರಮಾಣದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಂಡು ಬಂದಿದೆ. ಮನೆಯಲ್ಲಿ ಬಳಸುವ ಗೃಹೋಪಯೋಗಿ ಉಪಕರಣಗಳು, ಪೀಠೋಪಕರಣಗಳು, ಮಕ್ಕಳು ಆಡುವ ಆಟಿಕೆಗಳು, ಹೀಗೆ ವಿವಿಧ ಕಡೆ ಬಳಕೆಯಾಗುತ್ತಿರುವ 17ರೀತಿಯ ಪ್ಲಾಸ್ಟಿಕ್‍ಗಳಲ್ಲಿ 15 ರೀತಿಯ ಪ್ಲಾಸ್ಟಿಕ್ ಗಳ ಮೈಕ್ರೋಪ್ಲಾಸ್ಟಿಕ್ ಅಂಶಗಳು ಮಕ್ಕಳ ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿರುವುದು ದೃಢಪಟ್ಟಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಾರೆ.
.
ಮನೆ, ಶಾಲೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‍ ಬಳಕೆ ಹೆಚ್ಚಾಗುತ್ತಿದೆ. ಇಂತಹ ಪ್ಲಾಸ್ಟಿಕ್‍ಗಳ ಸಂಪರ್ಕದಿಂದ ಮಕ್ಕಳ ದೇಹದಲ್ಲಿ ಇಷ್ಟು ಪ್ರಮಾಣದ ಮೈಕ್ರೋಪ್ಲಾಸ್ಟಿಕ್ ಸೇರಿರಬಹುದು ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸುತ್ತಾರೆ. ಶ್ರೀಮಂತ ಕುಟುಂಬಗಳ ಮಕ್ಕಳಿಗಿಂತ ಬಡ ಕುಟುಂಬಗಳಿಗೆ ಸೇರಿದ ಮಕ್ಕಳಲ್ಲಿ ಮೈಕ್ರೋಪ್ಲಾಸ್ಟಿಕ್ ಹೆಚ್ಚಾಗಿ ಕಂಡು ಬಂದಿರುವುದು ಮತ್ತೊಂದು ಆತಂಕದ ವಿಷಯವಾಗಿದೆ.

ಸಣ್ಣ ವಯಸ್ಸಿನಿಂದ ಮಕ್ಕಳ ದೇಹವನ್ನು ಮೈಕ್ರೋಪ್ಲಾಸ್ಟಿಕ್‍ ಗಳು ಸೇರಲು ಪ್ರಾರಂಭವಾದರೆ, ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು, ಬೊಜ್ಜು, ಕ್ಯಾನ್ಸರ್ ಮೊದಲಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಮಕ್ಕಳು ವಯಸ್ಕರಾದಾಗ ಸಂತಾನ ಉತ್ಪತ್ತಿಯ ಸಾಮರ್ಥ್ಯವನ್ನು ಕಳೆದುಕೊಳ್ಳುವ ಆತಂಕವೂ ಇರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ.ಮೈಕ್ರೋಪ್ಲಾಸ್ಟಿಕ್‍ಗಳು ಮಕ್ಕಳ ದೇಹವನ್ನು ಹೇಗೆ ಸೇರುತ್ತಿವೆ ಎಂದು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.

PC: phys.org

ಟೀ ಬ್ಯಾಗ್ ಬಳಸಿ ತಯಾರಿಸುವ ಟೀ ಕುಡಿಯುವವರು ನೀವಾದರೆ, ಮತ್ತೊಮ್ಮೆ ಯೋಚಿಸಿ. ಒಂದು ಟೀಬ್ಯಾಗ್ ಬಳಸಿ ಚಹಾ ತಯಾರಿಸುವಾಗ ನೂರಾರು ಕೋಟಿ ಮೈಕ್ರೋಪ್ಲಾಸ್ಟಿಕ್‍ಗಳು ಚಹಾವನ್ನು ಸೇರುತ್ತಿವೆ ಎಂದು ಕೆನಡಾ ದೇಶದ ಮಾಂಟ್ರಿಯಲ್‍ ನಗರದಲ್ಲಿ ವಿಜ್ಞಾನಿಗಳು ನೆಡೆಸಿದ ಪ್ರಯೋಗಗಳಲ್ಲಿ ಕಂಡು ಬಂದಿದೆ. 95 ಡಿಗ್ರಿಯಷ್ಟು ಬಿಸಿಯಾದ ನೀರಿನಲ್ಲಿ ಒಂದು ಟೀ ಬ್ಯಾಗ್ ಇಳಿಸಿದಾಗ, 11160 ಕೋಟಿಗಳಷ್ಟು  ಮೈಕ್ರೋ ಪ್ಲಾಸ್ಟಿಕ್ ಗಳು ಮತ್ತು 310 ಕೋಟಿಗಳಷ್ಟು ನ್ಯಾನೋ ಮೈಕ್ರೋಪ್ಲಾಸ್ಟಿಕ್ ಗಳು ಒಂದು ಕಪ್ ಚಹಾದಲ್ಲಿ ಸೇರಿಕೊಳ್ಳುತ್ತವೆ ಎಂದು ಈ ವಿಜ್ಞಾನಿಗಳು ತಿಳಿಸಿದ್ದಾರೆ.

.

-ಉದಯ ಶಂಕರ ಪುರಾಣಿಕ
.

2 Responses

  1. ನಯನ ಬಜಕೂಡ್ಲು says:

    ಒಳ್ಳೆಯ ಮಾಹಿತಿ ಸರ್ . ಇಲ್ಲಿ ಉಲ್ಲೇಖಿಸಿರುವಂತಹ ಹಲವಾರು ಆರೋಗ್ಯ ಸಮಸ್ಯೆಗಳು ಈಗಾಗ್ಲೇ ನಮ್ಮ ನಡುವೆ ಬಂದಾಗಿದೆ ಸರ್ , ಇನ್ನೂ ಈ ಪ್ಲಾಸ್ಟಿಕ್ ವಿಚಾರವಾಗಿ ಎಚ್ಛೆತ್ತು ಕೊಳ್ಳದಿದ್ದಲ್ಲಿ ಮನುಕುಲದ ಸರ್ವನಾಶ ಖಂಡಿತ . ಉತ್ತಮ ಲೇಖನ

  2. Shankari Sharma says:

    ಪ್ಲಾಸ್ಟಿಕ್ ವಿಷದ ಗಂಭೀರತೆಯ ಬಗ್ಗೆ ತಟ್ಟಿ ಎಚ್ಚರಿಸುವ ಉತ್ತಮ ಲೇಖನ ಸರ್. .‌ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: