ನ್ಯಾನೋ ಕಥೆಗಳು
ಜೀವನ ಪಾಠ
ಜೀವನದ ಜಂಟಾಟಗಳಿಂದ ಬೇಸತ್ತು ಜೀವನವೇ ಬೇಡವೆಂದು ಹೊರಟವನಿಗೆ, ಬೀದಿಯ ಬದಿಯ ಒಂದು ಮೂಲೆಯಲ್ಲಿ ಸುಡುವ ಬಿಸಿಲನು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ತರಕಾರಿಗಳನ್ನು ಮಾರುತ್ತಿದ್ದ, ಇಳಿ ವಯಸ್ಸಿನ ಹಿರಿಯರನ್ನು ಕಂಡಾಗ ಅಯ್ಯೋ ಪಾಪ ಅನಿಸುವುದರೊಳಗೆ, ಇವರಿಗಿಂತಲೂ ನನ್ನ ಬದುಕೇನು ದುಸ್ತರವಲ್ಲವೆನಿಸಿ, ಏನಾದರೂ ಸಾಧಿಸಬೇಕೆಂದವನೇ ಮನೆಯೆಡೆಗೆ ಹೆಜ್ಜೆ ಹಾಕುತ್ತಾ ಹಿಂದುರುಗಿ ಬಂದು ಬಿಟ್ಟ.
.
ಆ ದಿನಗಳು
ಬಾಲ್ಯದಲ್ಲಿ ನಾವೆಲ್ಲ ಹುಡುಗಾಟದ ಹುಡುಗರು, ಭಾದ್ರಪದ ಮಾಸ ಬಂತೆಂದರೆ ಸಾಕು ಮನೆಮನೆಗಳಲ್ಲಿ, ಹಾದಿ ಬೀದಿಗಳಲ್ಲಿ ಕೂರಿಸಿ ವಿಜೃಂಭಣೆಯಿಂದ ಮಾಡುವ ಗಣೇಶನ ಹಬ್ಬವನ್ನು ನೋಡಿದಾಗಲೆಲ್ಲ, ಯಾಕೆ ನಮ್ಮ ಮನೆಯಲ್ಲಿ ಗಣೇಶನ ಹಬ್ಬ ಮಾಡುವುದಿಲ್ಲ ಎಂದು ಅಪ್ಪ ಅಮ್ಮರ ಕೇಳಿದಾಗ ಹಬ್ಬ ಮಾಡುವ ಸಂಪ್ರದಾಯವಿಲ್ಲವೆಂದರು. ಆದರೆ ಇದಕ್ಕೆ ಕಿವಿಗೊಡದೆ ಯಾರೋ ಹೇಳಿದರು, ಮೊದಲ ಬಾರಿ ಹಬ್ಬ ಮಾಡುವವರು ಗಣೇಶನ ಕದ್ದರೆ ತುಂಬ ಒಳ್ಳೆಯದು ಆಗುತ್ತದೆಂಬುದನ್ನು ನಂಬಿ ಕದಿಯಲು ಯತ್ನಿಸಿ ವಿಫಲರಾಗಿ, ಕೆಲವರಿಂದ ಬೈಯಿಸಿಕೊಂಡ ಮೇಲೆ ನಾವು ಹೊಲದಿಂದ ಎರೆ ಮಣ್ಣನ್ನು ತಂದು, ಅದರಲ್ಲಿ ಡೊಳ್ಳು ಹೊಟ್ಟೆಯ, ಆನೆ ಮೊಗದ, ಏಕದಂತ, ವಕ್ರ ತುಂಡ, ಚತುರ್ಭುಜ, ಮೂಷಿಕ ವಾಹನ ರೂಪದ ಗಣೇಶನ ಮೂರ್ತಿಯ ಮಾಡಿ ಮನೆಯಲ್ಲಿ ಕೂರಿಸಿದಾಗ ದೊರೆತ ಆನಂದ, ಖುಷಿ ಸಾಗರದಷ್ಟು. ಅಂದಿನಿಂದ ಪ್ರತಿ ವರ್ಷವೂ ಹಂತ ಹಂತವಾಗಿ ಗಣೇಶನ ಹಬ್ಬವನ್ನು ಚಾಚು ತಪ್ಪದೆ ನೇಮ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ.ಅಂದಿನಿಂದ ಗಣೇಶನ ಕೃಪೆಯಿಂದ ನಮಗೆ ಒಳ್ಳೆಯದಾಗುತ್ತಲಿದೆ.
.
ಅನಿರೀಕ್ಷಿತವಾಗಿ ಪರಿಚಿತವಾದ ಇಬ್ಬರಲ್ಲಿ ಕಾಲ ಕಳೆದಂತೆ ಆತ್ಮೀಯತೆಯು ಬೆಳೆಯುತ್ತ, ಅವರಿಬ್ಬರ ನಡುವೆ ಒಡಹುಟ್ಟಿದವರನು ಮೀರಿಸುವ ಸಹೋದರತೆಯ ಬಾಂಧವ್ಯ ಬೆಳೆಯಿತು. ಇವರನ್ನು ಕಂಡವರೆಲ್ಲ, ಇವರ ಬಗ್ಗೆ ಕೇಳಿದವರೆಲ್ಲರಿಗೂ ಇವರಿಬ್ಬರದು ಋಣಾನುಬಂಧದ ಸಂಬಂಧವೇ ಇರಬೇಕೆಂದು, ಈ ರೀತಿಯ ಬಾಂಧವ್ಯ ತಮಗೂ ಸಿಗಲೆಂದು ದೇವರಲ್ಲಿ ನಿತ್ಯವೂ ಪ್ರಾರ್ಥನೆ ಮಾಡುತ್ತಿದ್ದರು.
-ಶಿವಮೂರ್ತಿ.ಹೆಚ್. ದಾವಣಗೆರೆ.
ನ್ಯಾನೋ ಕಥೆಗಳು ಸೊಗಸಾಗಿ ಮೂಡಿ ಬಂದಿವೆ…
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಚಿರ ಋಣಿ ಮೇಡಂ
ಸುಂದರವಾಗಿದೆ ಸರ್ . ಸಣ್ಣ ಸಣ್ಣ ಕಥೆಗಳಲ್ಲಿ ಬದುಕಿನ ವಾಸ್ತವ ಹಾಗು ಪಾಠ ಅಡಗಿದೆ .ವೆರಿ ನೈಸ್
ನಿಮ್ಮ ಸಹೃದಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಂ
ಸೂಪರ್ ಸರ್ ಬದುಕಿನ ಸತ್ಯ ಗಳು
ಕಥೆಗಳು ಚೆನ್ನಾಗಿ ಮೂಡಿ ಬಂದಿವೆ 🙂