ಗಾದೆ ಮಾತು - ಲಹರಿ

ಬೆಂದಷ್ಟು ಆರಲು ಸಮಯವಿಲ್ಲ

Share Button

ನಾನು ಪದೇ ಪದೇ ನೆನಪು ಮಾಡಿಕೊಳ್ಳುವಂತಹ, ಇದು ಅಕ್ಷರಶಃ ಸತ್ಯ ಅನ್ನಿಸುವಂತಹ ಒಂದು ನುಡಿಗಟ್ಟು ಬೆಂದಷ್ಟು ಆರಲು ಸಮಯವಿಲ್ಲ“. ಈ ನುಡಿಗಟ್ಟನ್ನು ನಾನು ಪ್ರಥಮ ಬಾರಿಗೆ ಓದಿದ್ದು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ. ಗತದ ನೆನಪನ್ನು ಮೆಲುಕು ಹಾಕುವಾಗಲೆಲ್ಲಾ ಧುತ್ತನೆಂದು ನೆನಪಾಗುವುದು ಅಂತಿಮ ಬಿಎಸ್ಸಿಯ ಕೊನೆಯ ದಿನಗಳು. ಸಹಪಾಠಿಗಳೆಲ್ಲರ ಕಣ್ಣ ಮುಂದೆ ಮುಂದಿನ ಭವಿಷ್ಯದ ಬಗ್ಗೆ ಯೋಚನೆ. ಜೊತೆಗೆ, ಮೂರು ವರುಷ ಜೊತೆಯಲ್ಲಿ ಕಳೆದ, ನೋವು ನಲಿವುಗಳನ್ನು ಹಂಚಿಕೊಂಡ ಸಹಪಾಠಿಗಳನ್ನು ಅಗಲಿ ಹೋಗಬೇಕಲ್ವಾ ಅನ್ನುವ ಬೇಸರ. ನೆನಪಿನ ಬುತ್ತಿಯಲ್ಲಿರುವ ಸಿಹಿ ಕಹಿ ಘಟನೆಗಳನ್ನು ಮೆಲುಕು ಹಾಕುವುದರ ಒಟ್ಟಿಗೆ, ಮುಂದಿನ ಭವ್ಯ ಭವಿಷ್ಯಕ್ಕೆ ಶುಭ ಹಾರೈಸುವ ನುಡಿಗಳನ್ನು ಪಡಿಮೂಡಿಸಲು ಒಬ್ಬರಿಗೊಬ್ಬರು ಬದಲಾಯಿಸಿಕೊಳ್ಳುತ್ತಿದ್ದದ್ದು ಆಟೋಗ್ರಾಫ್ ಪುಸ್ತಕ. ಸಹಪಾಠಿಗಳೆಲ್ಲರೂ ಆಸ್ಥೆಯಿಂದ, ಬಹಳ ಪ್ರೀತಿಯಿಂದ  ಮನಸ್ಸಿನೊಳಗಿರುವ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು, ಆಟೋಗ್ರಾಫ್ ಪುಸ್ತಕದ ಪುಟಗಳನ್ನು ತುಂಬಿಸುತ್ತಿದ್ದರು. ಆತ್ಮೀಯತೆಯ ಮಟ್ಟವನ್ನು ಅವಲಂಬಿಸಿ ಶುಭ ಹಾರೈಕೆಯ ಬರಹಗಳನ್ನು ಒಂದರಿಂದ ಹತ್ತು ಪುಟದವರೆಗೂ ಬರೆಯುವಂತಹವರೂ ಇದ್ದರು.

ಬಹಳ ಜೋಪಾನವಾಗಿ ಎತ್ತಿಟ್ಟಿದ್ದ ಆಟೋಗ್ರಾಫ್ ಪುಸ್ತಕ ಗೆದ್ದಲುಗಳಿಗೆ ಆಹಾರವಾದಾಗ ಬಹಳ ನೊಂದುಕೊಂಡಿದ್ದೆ. ಆದರೂ ಮನಸ್ಸಿಗೆ ಬಹುವಾಗಿ ತಟ್ಟಿದ ಬರಹಗಳು ನನ್ನ ಮನದ ಭಿತ್ತಿಯಲ್ಲಿ ಆಗಾಗ ಮೂಡಿಬರುವುದುಂಟು. ಅಂತಹ ಆಟೋಗ್ರಾಫ್ ಬರಹಗಳಲ್ಲಿ ನನ್ನ ಸಹಪಾಠಿ ಪ್ರಫುಲ್ಲ ಬರೆದ  ಒಂದು ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ”. ನಾನು ಆಗಾಗ ನೆನಪಿಸಿಕೊಳ್ಳುವಂತಹ ವಾಕ್ಯ. ಅಂದಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ  ಹಣದ ಬಡತನ, ನನ್ನ ಪರಿಸ್ಠಿತಿಯೇನೂ ಭಿನ್ನವಾಗಿರಲಿಲ್ಲ. ಮನೆಯ ಹಿರಿಮಗಳಾದ ನನ್ನ ಮೇಲೆ ಹಲವು ಜವಾಬ್ದಾರಿಗಳಿದ್ದವು. ಚೆನ್ನಾಗಿ ಓದಿ, ಏನನ್ನಾದರೂ ಸಾಧಿಸಬೇಕೆನ್ನುವ ನನ್ನೊಳಗಿನ ತುಡಿತವನ್ನು ಗುರುತಿಸಿದ್ದ ಪ್ರಫುಲ್ಲನ ಹಾರೈಕೆಯ ನುಡಿಗಳು ಪ್ರತಿಧ್ವನಿಸಿದ್ದು ಆ ಮಾತುಗಳನ್ನೇ “ಬೆಂದಷ್ಟು ಆರಲು ಸಮಯವಿಲ್ಲ, ಜೀವನದಲ್ಲಿ ಬೇಕಾದಷ್ಟು ಕಷ್ಟಗಳನ್ನು ಎದುರಿಸಿದ್ದೀಯಾ. ಕಷ್ಟಗಳು ದೂರವಾಗುವ ದಿನಗಳು ಬೇಗನೇ ಬರುತ್ತವೆ. ಅನ್ನ ಬೇಯಲು ಬೇಕಾದಷ್ಟು ಸಮಯ ಆರಲು ಬೇಡ. ಸುಖದ ದಿನಗಳು ಬೇಗನೇ ಬರಲಿವೆ. ನಿಶ್ಚಿಂತೆಯಿಂದ ನಿನ್ನ ಗುರಿಯೆಡೆಗೆ ನಡೆ” ಅನ್ನುವ ಆಶಯದೊಡನೆ ಒಂದು ಪುಟದಷ್ಟು ಬರೆದಿದ್ದಳು ಆಕೆ. ಸ್ನಾತಕೋತ್ತರ ಪದವಿಯ ಬಳಿಕ ಉದ್ಯೋಗಕ್ಕೆ ಸೇರಿ, ಸ್ವಂತ ಕಾಲಿನ ಮೇಲೆ ನಿಂತಾಗ ಪ್ರಫುಲ್ಲನ ಹಾರೈಕೆಯ ಮಾತುಗಳ ನೆನಪಾಗಿತ್ತು.

 

ಶಬ್ದಾರ್ಥ ತೆಗೆದುಕೊಂಡರೆ, ಅನ್ನ ಬೇಯಲು ತೆಗೆದುಕೊಳ್ಳುವಷ್ಟು ಹೊತ್ತು ಆರಲು ತೆಗೆದುಕೊಳ್ಳುವುದಿಲ್ಲ. ಬಿಸಿಯಾದ ಅನ್ನ ಆರಲು ತೆಗೆದುಕೊಳ್ಳುವ ಸಮಯವು ಅಕ್ಕಿ ಬೆಂದು ಅನ್ನವಾಗಲು ಬೇಕಾಗುವ ಸಮಯದಷ್ಟು ಇಲ್ಲವಷ್ಟೇ? ಬೇಯಲು ಜಾಸ್ತಿ ಸಮಯ ಬೇಕಾಗುವುದೆಂದು, ಅಕ್ಕಿಯನ್ನೇ ತಿನ್ನಲು ಸಾಧ್ಯವೇ? ಅಥವಾ ಅರೆಬೆಂದ ಅನ್ನವನ್ನು ಉಣ್ಣಲಾದೀತೇ? ಬೇಯುವ ಪ್ರಕ್ರಿಯೆಯೂ ನಿರಂತರವಲ್ಲ ತಾನೇ? ಅನ್ನ ಸರಿಯಾಗಿ ಬೆಂದ ನಂತರ ರುಚಿಯಾದ ಅನ್ನ ಸವಿಯಲು ಸಿದ್ಧವಾಗುವಂತೆ, ಜೀವನದಲ್ಲಿ ಕಷ್ಟಗಳನ್ನು ಎದುರಿಸಿದರೂ ಬಳಿಕ ಸುಖ ಸಿಗುವುದು. ಕಾಯುವಿಕೆಗೆ ಒಂದು ಅಂತ್ಯ ಇದ್ದೇ ಇರುತ್ತದೆ. ಮಗುವನ್ನು ಯಾವಾಗ ನೋಡುವೆನೆಂದು ಹೆರಿಗೆಯ ದಿನ ಎದುರು ನೋಡುತ್ತಿರುವ ತುಂಬು ಗರ್ಭಿಣಿಯ ಕಾಯುವಿಕೆಯ ಅವಧಿ, ಆಕೆ ಕಳೆದ ನವಮಾಸಗಳಷ್ಟು ದೀರ್ಘವಲ್ಲ ತಾನೇ? ಸೊಂಪಾಗಿ ಬೆಳೆದ ಹಣ್ಣಿನ ಗಿಡಗಳಲ್ಲಿ ಮೊಗ್ಗು ಯಾವಾಗ ಮೂಡುತ್ತದೆ ಎಂಬ ನಿರೀಕ್ಷೆಯ ಕಾಲವು ಮೊಗ್ಗರಳಿ ಹೂವಾಗಿ, ಬಳಿಕ ಹಣ್ಣಾಗಲು ತೆಗೆದುಕೊಳ್ಳುವ ಸಮಯಕ್ಕಿಂತ ಜಾಸ್ತಿಯೇ ತಾನೇ? ಒಟ್ಟಿನಲ್ಲಿ ಹೇಳುವುದಾದರೆ, ಸಮಯ ಒದಗಿ ಬರಬೇಕು. ಜೀವನದಲ್ಲಿ ತಾಳ್ಮೆ ಅತೀ ಅಗತ್ಯ. ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ವಿವೇಚನೆ ಇರಬೇಕು. ಕೋಪದ ಕೈಗೆ ಬುದ್ಧಿ ಕೊಟ್ಟರೆ, ಪ್ರತಿಕೂಲ ಪರಿಣಾಮಗಳೇ ಜಾಸ್ತಿ.

ಬೆಂದಷ್ಟು ಆರಲು ಸಮಯವಿಲ್ಲ” ಅನ್ನುವುದು ಮೇಲ್ನೋಟಕ್ಕೆ “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಅನ್ನುವ ಪ್ರಚಲಿತ ಗಾದೆ ಮಾತನ್ನು ಹೋಲುವಂತಿದೆ, ಆದರೆ ಹೋಲುವುದಿಲ್ಲ. ಒಳಾರ್ಥವನ್ನು ಅರ್ಥೈಸಿಕೊಂಡಾಗ “ಪರಿಸ್ಥಿತಿಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಬದಲಾವಣೆಯ ದಿನಗಳು ಬಂದೇ ಬರುತ್ತವೆ” ಎಂಬ ಸಕಾರಾತ್ಮಕ ಅರ್ಥವನ್ನು ಧ್ವನಿಸುತ್ತದೆ. ಅತ್ತೆಯ ಅನಾದರ ಹಾಗೂ ವಿಪರೀತ ಕಿರುಕುಳದಿಂದ ನೊಂದಿದ್ದ ಸ್ನೇಹಿತೆಯೋರ್ವಳು ನನ್ನ ಬಳಿ ಹೇಳುತ್ತಿದ್ದ ನೆನಪು “ನಾನೂ ಭರವಸೆಯಿಂದ ಕಾಯುತ್ತಿದ್ದೇನೆ ಇಂದಲ್ಲ ನಾಳೆ ನನ್ನ ಅತ್ತೆ ಬದಲಾಗಬಹುದು ಎಂದು. ಹಾಗೂ ಆಗಲಿಲ್ಲ ಅಂತ ಎಣಿಸಿದರೂ ಬೆಂದಷ್ಟು ಹೊತ್ತು ಆರಲು ಸಮಯ ಬೇಡ ಅನ್ನುವ  ಭರವಸೆಯೊಂದಿಗೆ ನನಗೂ ಒಳ್ಳೆಯ ದಿನಗಳು ಬರಬಹುದು ಅಂದುಕೊಂಡು ದಿನಗಳನ್ನು ಕಳೆಯುತ್ತಿದ್ದೇನೆ”. ಅವಳ ನಿರೀಕ್ಷೆ ನಿಜವಾಯ್ತು ಅನ್ನುವುದು ಸಂತಸದ ವಿಚಾರ. ಬೆಳೆದ ಮಕ್ಕಳು ತಂದೆ-ತಾಯಿ ಹೇಳಿದ ಮಾತು ಕೇಳದೆ, ತಂದೆ-ತಾಯಿಯರ ಮನಸ್ಸನ್ನು ನೋಯಿಸುವಾಗ, ತಮ್ಮದೇ ಮೂಗಿನ ನೇರಕ್ಕೆ ಮಾತನಾಡುವಾಗ ಇಂತಹ ಪರಿಸ್ಥಿತಿಯನ್ನು ಎದುರಿಸುವ ದಿನಗಳು ದೂರವಿಲ್ಲ ಅನ್ನುವುದನ್ನು ಮಕ್ಕಳಿಗೆ ಹೇಳಲು ಅರ್ಥಗರ್ಭಿತವಾಗಿ ಹಿರಿಯರು ಉಪಯೋಗಿಸುತ್ತಿದ್ದ ನುಡಿಗಟ್ಟು ಎಂದು ನೆರೆಮನೆಯವರು ಹೇಳುತ್ತಿದ್ದದ್ದು ನೆನಪಿದೆ.

ಹಿಂದೆಲ್ಲಾ ಮದುವೆಯಾಗಲು ಹೊರಟ ಗಂಡುಗಳಿಗೆ, ಹೆಣ್ಣು ಹುಡುಕಹೊರಟಾಗ, ಗಂಡು ಹೆತ್ತವರ ಗತ್ತು ನೋಡಬೇಕಿತ್ತು. ಕೇಳಿದಷ್ಟು ವರದಕ್ಷಿಣೆ, ಚಿನ್ನದಾಭರಣಗಳು ನೀಡಲು ಸಾಧ್ಯವಿಲ್ಲ ಎಂದು ಹೆಣ್ಣಿನ ಕಡೆಯವರು ಹೇಳಿದರೆ, ಗಂಡಿನ ಕಡೆಯವರು, ಆ ಸಂಬಂಧವನ್ನು ನಿರಾಕರಿಸಿಬಿಡುತ್ತಿದ್ದರು. ಆದರೆ ಈಗ ಮದುವೆಯಾಗಲು ಗಂಡುಮಕ್ಕಳಿಗೆ, ಹುಡುಗಿಯರು ಸಿಗುತ್ತಿಲ್ಲ. ವಧುದಕ್ಷಿಣೆ ನೀಡಿ, ಮದುವೆ ನಡೆಯುವ ದಿನಗಳು ದೂರವಿಲ್ಲ. ಹೀಗೆಯೇ ಸುಮಾರು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು ಒಟ್ಟಿನಲ್ಲಿ ಸರ್ವಕಾಲಕ್ಕೂ ಸಲ್ಲುವಂತಹ, ಹಿರಿಯರ ಅನುಭವಾಮೃತದ ನುಡಿಗಳು ಅವರ ಅನುಭವದ ಮೂಸೆಯಿಂದ ಹೊರಬಂದ ಅನರ್ಘ್ಯ ಮುತ್ತುಗಳು. ಸರಳ ವಾಕ್ಯದಂತೆ ಕಂಡರೂ, ಅನೇಕ ಅಂತರಾರ್ಥ ಹೊಂದಿರುವ ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ“.

-ಡಾ.ಕೃಷ್ಣಪ್ರಭಾ, ಮಂಗಳೂರು

24 Comments on “ಬೆಂದಷ್ಟು ಆರಲು ಸಮಯವಿಲ್ಲ

  1. ತಮ್ಮ ಅನುಭವಗಳು ಹಾಗೂ ಗಾದೆಯ ತಾತ್ಪರ್ಯವನ್ನು ಹೆಣೆದ ಸುಂದರ ಬರಹ..ಹೀಗೆಯೇ ಇನ್ನಷ್ಟು ಗಾದೆಗಳ ಬಗ್ಗೆ ಬರೆದರೆ ನಮಗೆ ಓದಲು ಖುಷಿ.

    1. ನುಡಿಗಟ್ಟು ಮೊದಲ ಸಲ ಕೇಳಿದ್ದು ಅಂತ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧನ್ಯವಾದಗಳು ಹೇಮಕ್ಕ

  2. ಚೆನ್ನಾಗಿದೆ. ಯಾವ ಯಾವ ಸಂದರ್ಭಗಳಲ್ಲಿ ಈ ಗಾದೆ ಮಾತು ಹೊಂದಿಕೆ ಆಗುತ್ತದೆ ಅನ್ನುವುದನ್ನು ಮನದಟ್ಟಾಗಿಸುತ್ತದೆ ಬರಹ .

  3. ಲೇಖನ ಚೆನ್ನಾಗಿದೆ. ಒಂದು ಗಾದೆಯ ಅಂತರಾರ್ಥವನ್ನು ಮನದಟ್ಟಾಗುವಂತೆ ವಿವರಿಸಿದರು.

  4. ಹುಡುಗ ತಾ ಪ್ರೀತಿಸಿದ ಹುಡುಗಿ ಯ ಕೈ ಹಿಡಿವ ಕ್ಷಣಕ್ಕಾಗಿ ಕಾಯುವ ದಿನಗಳು : ನವ ವಿವಾಹಿತೆ ನವ ಮಾಸಗಳು ತುಂಬಿ ತನ್ನದೇ ಪ್ರತಿರೂಪಕ್ಕಾಗಿ ಹಂಬಲಿಸುವ ಕ್ಷಣಗಳು : ವಿದ್ಯಾರ್ಥಿ ಯೋರ್ವ ವರ್ಷ ಪೂರ್ತಿ ಓದಿ ಕಳೆವ ಒಂದೊಂದು ನಿಮಿಷ…… ಎಲ್ಲಾ ಸಂದರ್ಭಗಳಲ್ಲೂ ಈ ಗಾದೆ ಯ ಮಾತು ಪ್ರಸ್ತುತ.

    ಲೇಖನ ವನ್ನು ಪೂರ್ತಿ ಓದಿ, ತಿರುಗಿ ನೋಡಿದೆ ಒಮ್ಮೆ, ನನ್ನ ದೇ ಗತ ಜೀವನ ವನ್ನು!
    ಅನುಭವದ ಮಾತುಗಳು.. ಲೇಖನ ವನ್ನ ಅತ್ಯಂತ ಅರ್ಥ ಪೂರ್ಣವಾಗಿರಿಸಿವೆ.
    ಧನ್ಯ ವಾದಗಳು – ಕ್ರಷ್ಣ ಪ್ರಭಾ.

    1. ತುಂಬಾ ಚೆನ್ನಾಗಿ comment ಮಾಡಿದ್ದೀರಿ. ಲೇಖನಕ್ಕೆ ಇನ್ನೆರಡು ವಿಷಯ ಸೇರಿ ಮುಂದುವರಿದ ಭಾಗದಂತೆ ಭಾಸವಾಯಿತು…ಧನ್ಯವಾದಗಳು

  5. ಗಾದೆಗಳು, ನಮ್ಮ ಹಿರಿಯರ ಅನುಭವ ಮೂಸೆಯಿಂದ ಬಂದ ಬಂಗಾರ..ನಮಗೆ ದಾರಿ ದೀಪ. ಬರಹ ಚೆನ್ನಾಗಿದೆ ಮೇಡಂ.

  6. ಬೆಂದಷ್ಟು ಆರಲು ಸಮಯವಿಲ್ಲ.ಈ ಗಾದೆ ನನ್ನ ಲೈಫಲ್ಲಂತೂ ಸರಿಯಾಗಿ ಹೊಂದಿಕೊಂಡಿದೆ.ನಿವೃತ್ತಿಯ ಮೊದಲಿನ ಜೀವನ,ಮತ್ತಿನ ಜೀವನ ವ್ಯತ್ಯಾಸ ಸರೀ ತಿಳಿತದೆ.ಮೊದಲು ಎಷ್ಟು ಕಷ್ಟಪಟ್ಟಿದ್ದೆನೋ,ಅದರ ಹತ್ತರಷ್ಟು ಸುಖ ಈಗಾಂತ ಅನ್ನಬಹುದೇನೋ.

  7. ಈ ಗಾದೆ ನನ್ನ ಮಟ್ಟಿಗೆ ಸರಿಯೇ.ನಿವೃತ್ತಿಯ‌ ಮೊದಲು ಎಷ್ಟು ಕಷ್ಟಪಟ್ಟಿದ್ದೆನೋ,ನಿವೃತ್ತಿಯ ನಂತರ ಅಷ್ಟೂ ಆರಾಮಾಗಿದ್ದೇನೆ.ಗಾದೆಯ ಅರ್ಥ ಚೆನ್ನಾಗಿ ವಿವರಿಸಿದ್ದೀರಿ

    1. ಬೇಯುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕು ಅದು ಸಹಜ, ಬೇಯಿಸಲು ಬೇಕಾದ ಗರಿಷ್ಟ ಉಷ್ಣತೆ ಯು ತಲುಪಲು ಬೇಕಾಗುವ ಕಾಲವೇ ಉಷ್ಣತೆ ಆದರೂ ಬೇಕು, ಆದರೆ ಈ ಗಾದೆ ಮಾತಿನ ಮರ್ಮ ತುಂಬಾ ಕುತೂಹಲಕಾರಿ

  8. Krishna prabha
    Your article is for forever, for past for present for future, l like it
    It is motivations me
    Thank you

  9. ಗಾದೆ ಮಾತು ಸುಳ್ಳಲ್ಲ ಲೇಖನ ಉತ್ತಮವಾಗಿದೆ ನಿಮ್ಮ ಬರವಣಿಗೆಯ ದಾಹ ಹೀಗೆ ಮುಂದುವರಿಯಲಿ ಒಳ್ಳೊಳ್ಳೆ ಲೇಖನಗಳು ನಿಮ್ಮ ಲೇಖನಿಯಿಂದ ಮೂಡಿ ಬರಲಿ

Leave a Reply to Santosh Shetty Cancel reply

 Click this button or press Ctrl+G to toggle between Kannada and English

Your email address will not be published. Required fields are marked *