ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 6

Share Button


*ಶಾಂತಿ ಸ್ಥೂಪದ ಸನಿಹದಲ್ಲಿ*

ಕೋನಾರ್ಕ್ ದಲ್ಲಿ ಮಧ್ಯಾಹ್ನದ ಹೊತ್ತು..ರವಿತೇಜನ ಪ್ರಖರ ತೇಜಸ್ಸು ನಮ್ಮೆಲ್ಲರ ಮೇಲೆ  ಸ್ವಲ್ಪ ಹೆಚ್ಚಾಗಿಯೇ ತನ್ನ ಪ್ರಭಾವವನ್ನು ಬೀರತೊಡಗಿ ಎಲ್ಲರನ್ನೂ  ನಮ್ಮ ಹೋಟೇಲಿನೆಡೆಗೆ ಬೇಗ ದೌಡಾಯಿಸುವಂತೆ ಮಾಡಿತ್ತು. ಮಧ್ಯಾಹ್ನದ ಸುಖ ಭೋಜನವನ್ನುಂಡು ಮುಂದೆ ಧವಳಗಿರಿಯ ದರ್ಶನಕ್ಕೆ ಕಾದು ಕುಳಿತೆವು. ಅಲ್ಲಿಂದ ಕೇವಲ 8ಕಿ.ಮೀ. ದೂರವಿರುವ ಧವಳಗಿರಿಗೆ, ನಮಗಾಗಿ ಕಾದಿರಿಸಿದ ಬಸ್ಸು ತುರ್ತಾಗಿ ಬೇರೆ ಕಡೆಗೆ  ಹೋಗಿದ್ದರಿಂದ, ಎಲ್ಲರೂ ಪ್ರತ್ಯೇಕ ರಿಕ್ಷಾಗಳಲ್ಲಿ ಹೊರಟೆವು. ದಾರಿಯಲ್ಲಿ ನಮ್ಮೊಂದಿಗಿದ್ದ ಬಾಲಣ್ಣನವರು ಹೇಳಿದ ಮಾತು “ಹಿಂದೆ ಈ ಜಾಗವೆಲ್ಲಾ ಹಚ್ಚ ಹಸಿರಿನಿಂದ ನಳನಳಿಸುತ್ತಿತ್ತು. ಈಗ ನೋಡ್ಳಿಕ್ಕೇ ಆಗುವುದಿಲ್ಲ”. ಹೌದು..ಅವರೆಂದ ಮಾತು ಸತ್ಯ..ಇಕ್ಕೆಲಗಳಲ್ಲೂ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ನಜ್ಜುಗುಜ್ಜಾಗಿ ಕರಟಿಹೋದ ಗಿಡ, ಮರ, ಬಳ್ಳಿಗಳು ನಿಶ್ಶಬ್ದವಾಗಿ ಅಳುತ್ತಿದ್ದವು.. ರಸ್ತೆಯಡ್ಡ ಬಿದ್ದಿದ್ದ ವಿದ್ಯುತ್ ಕಂಬ, ತಂತಿಗಳು ನಮ್ಮನ್ನು ಎತ್ತಿ ನಿಲ್ಲಿಸಲು ಯಾರು ಬರುವರೋ ಎಂದು ಕಾದು, ನಿಟ್ಟುಸಿರು ಬಿಡುತ್ತಿದ್ದುವು. ಸ್ಥೂಪದ ಬಳಿಯ ರಸ್ತೆಯ ಇಕ್ಕೆಲಗಳಲ್ಲಿದ್ದ ಚಿಕ್ಕ ಚಿಕ್ಕ ಅಂಗಡಿಗಳು ನಿರ್ನಾಮವಾಗಿದ್ದುವು. ಶಾಂತಿ ಸ್ಥೂಪದ ಎದುರಿನ ವಿಶಾಲ ಜಾಗದಲ್ಲಿದ್ದ ನೂರಾರು ಪ್ಲಾಸ್ಟಿಕ್ ಕುರ್ಚಿಗಳು ತಮ್ಮ ಅವಯವಗಳನ್ನೆಲ್ಲಾ ಕಳೆದುಕೊಂಡು ರೋದಿಸುತ್ತ ರಾಶಿ ಬಿದ್ದಿದ್ದವು. ಒಂದೆರಡು ಅಂಗಡಿಯವರು ಎದುರಿಗೆ ಗುಪ್ಪೆಯಾಗಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ತೊಡಗಿರುವುದು ಕಂಡು ಬಂತು.  ಬಂದ ಕಷ್ಟವನ್ನು ಮೆಟ್ಟಿ ನಿಂತು, ಜೀವನದ ಮುಂದಿನ ದಾರಿಯನ್ನು ಕಂಡುಕೊಳ್ಳುವ ಸಿದ್ಧತೆ ನಡೆಯುತ್ತಿರುವುದು ಕಂಡು, ನೊಂದ ಮನದಲ್ಲಿಯೂ ಆಶಾ ಭಾವನೆ ಮೂಡುವುದು ಖಂಡಿತ. ಒಬ್ಬನಂತೂ ತನ್ನ ಅಂಗಡಿಯಲ್ಲಿ ತರಹೇವಾರಿ ಒಣ ಹಣ್ಣುಗಳು, ತಾಜಾ ಕಬ್ಬಿನ ಹಾಲು ಮಾರಾಟ ಪ್ರಾರಂಭಿಸಿಯೇ ಬಿಟ್ಟಿದ್ದ. ಎಲ್ಲರಿಗೂ ತಂಪಾದ ಕಬ್ಬಿನಹಾಲು ಕುಡಿಯುವ ಯೋಗವನ್ನು ಬಾಲಣ್ಣನವರು ಒದಗಿಸಿದರು.

ಅದಾಗಲೇ ಸಂಜೆ ನಾಲ್ಕು ಗಂಟೆ… ಎದುರಿಗೇ ಎತ್ತರದಲ್ಲಿ ಕಾಣಿಸಿತು.. ಸುಂದರ, ಗೋಳಾಕಾರದ, ಬಿಳಿ ಶಿಲೆಯ ಬೃಹದಾಕಾರದ ಶಾಂತಿಸ್ಥೂಪ.

ಕ್ರಿಸ್ತಪೂರ್ವ 261ರಲ್ಲಿ ನಡೆದ ಮಹಾನ್ ಸಾಮ್ರಾಟ ಅಶೋಕ ಚಕ್ರವರ್ತಿಯ ಕಳಿಂಗ ಯುದ್ಧವು ಬಹಳ ಪ್ರಸಿದ್ದ.  ಇದೇ ಸ್ಥಳದಲ್ಲಿ ಕಳಿಂಗ ರಾಜನು ಸೋಲೊಪ್ಪದೆ ವೀರಾವೇಶದಿಂದ ಹೋರಾಡಿ ವೀರ ಸ್ವರ್ಗವನ್ನೇರಿದಾಗ ಅಶೋಕ ಚಕ್ರವರ್ತಿ ಗೆಲುವು ಪಡೆದ ಹೆಮ್ಮೆಯಿಂದ ಬೀಗುತ್ತಿದ್ದ. ಆದರೆ ಅಲ್ಲೇ ಹರಿಯುತ್ತಿದ್ದ ದಯಾನದಿಯ ನೀರು; ತಮ್ಮ ರಾಜ್ಯವನ್ನು ಉಳಿಸಲೋಸುಗ ಶತ್ರುಗಳೊಡನೆ ಹೋರಾಡಿ ಸಾವನ್ನಪ್ಪಿದ ವೀರ  ಸೈನಿಕರ ರಕ್ತದಿಂದ ಕಡು ಕೆಂಪಾಗಿ ಹರಿಯುತ್ತಿತ್ತು. ಇದನ್ನು ಕಂಡ ಅಶೋಕ ಚಕ್ರವರ್ತಿಯ ಮನಸ್ಸು, ಆದ ಅನಾಹುತಗಳನ್ನು ನೆನೆದು ತಲ್ಲಣಗೊಂಡಿತು. ನಶ್ವರವಾದ  ಧನ, ಕನಕ, ರಾಜ್ಯಗಳ, ಜಗತ್ತಿನ ಮೋಹಾಪಾಶಗಳನ್ನು ಕಡಿದೊಗೆದು  ಬೌದ್ಧ ಧರ್ಮ ಸ್ವೀಕರಿಸಿ, ಬೌದ್ಧ ಧರ್ಮದ  ಪ್ರಸಾರದಲ್ಲಿಯೇ ತನ್ನ ಜೀವಮಾನವನ್ನು ಕಳೆದನು. ಈಗ ಕಂಡುಬರುವ ಸುಂದರವಾದ ಈ ಶಾಂತಿ ಸ್ಥೂಪವು 1970ರಲ್ಲಿ ಜಪಾನಿನ ಬುದ್ಧ ಸನ್ಯಾಸಿಗಳ ಸಂಘದಿಂದ ಕಟ್ಟಲ್ಪಟ್ಟಿತು.


ಸುಮಾರು ಐವತ್ತು  ಮೆಟ್ಟಲುಗಳನ್ನೇರಿ  ಹೋದಾಗ ದಯಾನದಿಯನ್ನು, ಅದರ ಹರಿವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ನಮ್ಮೆಲ್ಲರ ದೃಷ್ಟಿ, ನದಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅದರ ನೀರು ಇನ್ನೂ ಕೆಂಪಾಗಿಲ್ಲವೆಂದು ಖಾತ್ರಿ ಪಡಿಸುವಂತಿತ್ತು! ನೂರಾರು ವರುಷಗಳ ಹಿಂದೆ ನಡೆದಿರಬಹುದಾದ ಯುದ್ಧವು ಅದೇ ಜಾಗದಲ್ಲಿ ನಡೆದುದನ್ನು ಯೋಚಿಸಿಯೇ ಮನವು ಕಂಪಿಸಿತು. ನಮ್ಮೆಲ್ಲರ ಮನಸ್ಸು ಏನೆಲ್ಲಾ ಚಿಂತಿಸುತ್ತಿದ್ದರೂ, ಆ ಎತ್ತರದ ಜಾಗದಲ್ಲಿ, ಸಂಜೆ ಸೂರ್ಯನ ಹೊಂಗಿರಣಗಳ ಜೊತೆಗೆ ಬೀಸಿ ಬರುವ ತಂಗಾಳಿ ಅಹ್ಲಾದಕರ ವಾತಾವರಣವನ್ನು ಸೃಷ್ಟಿಸಿತ್ತು. ಮೇಲ್ಗಡೆಯಿಂದ ಇಡೀ ಭುವನೇಶ್ವರದ ವಿಹಂಗಮ ನೋಟ ನಮ್ಮೆಲ್ಲರಿಗೂ ಅಲ್ಲೇ ಇದ್ದು ಬಿಡೋಣವೇ ಎನಿಸುವಂತೆ ಮಾಡಿತ್ತು.

ಅಲ್ಲೇ ಪಕ್ಕದಲ್ಲಿ, ಕೆಳಗಡೆಗೆ, ಪುಟ್ಟ ಶಿವ-ಪಾರ್ವತಿ ಮಂದಿರವು ಗಮನ ಸೆಳೆಯುವಂತಿತ್ತು.  ನಾವೆಲ್ಲರೂ ದೇವರ ದರ್ಶನಗೈದು, ದೇವರ ಸ್ತೋತ್ರವನ್ನು ಪಠಿಸಿ ಸ್ವಲ್ಪ ಹೊತ್ತು ಧ್ಯಾನಮಗ್ನರಾಗಿ ಕುಳಿತು ಹಿಂತಿರುಗಿದಾಗ ಗಣೇಶಣ್ಣನವರು ತಮ್ಮ ಮೊಬೈಲ್ ಕ್ಯಾಮೆರಾವನ್ನು ತಯಾರಾಗಿರಿಸಿದ್ದರು, ಗ್ರೂಪ್ ಫೋಟೋಕ್ಕಾಗಿ. ಇಳಿ ಸಂಜೆ ಹೊತ್ತಿನಲ್ಲಿ ನಾವು ರಿಕ್ಷಾ ಹತ್ತಿದಾಗ ನಮ್ಮೆಲ್ಲರ ಮನಸ್ಸು ಮುದಗೊಂಡಿತ್ತೋ..ದಯಾನದಿಯ ನೆನಪಲ್ಲಿ ಖೇದಗೊಂಡಿತ್ತೋ ಹೇಳುವಂತಿರಲಿಲ್ಲ..

ಹಿಂದಿನ ಪುಟ ಇಲ್ಲಿದೆ:  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 5            (ಮುಂದುವರಿಯುವುದು..)

-ಶಂಕರಿ ಶರ್ಮ, ಪುತ್ತೂರು.

8 Responses

  1. Hema says:

    ಶಾಂತಿಸ್ತೂಪದ ಚಿತ್ರಣ ಕಣ್ಣ ಮುಂದೆ ಬಂತು.. ನನಗೂ ಅಲ್ಲಿಗೆ ಹೋಗಿದ್ದಾಗ ಚರಿತ್ರೆಯಲ್ಲಿ ಓದಿದ್ದ ‘ಕಳಿಂಗ ಯುದ್ಧ’ದ ನೆನಪಾಯಿತು. ಪ್ರವಾಸ ಕಥನವು ಚೆನ್ನಾಗಿ ಮೂಡಿ ಬರುತ್ತಿದೆ

  2. ನಯನ ಬಜಕೂಡ್ಲು says:

    Beautiful. ಇತಿಹಾಸದ ಪುಟಗಳನ್ನು ಸೇರಿದ ಘಟನೆಗಳನ್ನು ಮತ್ತೊಮ್ಮೆ ನೆನೆಯುವ , ಮೆಲುಕು ಹಾಕುವ ಅವಕಾಶ ನಿಮ್ಮ ಪ್ರವಾಸ ಕಥನದಿಂದ ಮೇಡಂ

  3. Harshitha says:

    Nice narration Madam..reminded the history..

  4. Shankara Narayana Bhat says:

    ಪ್ರವಾಸ ಕಥನ ಚೆನ್ನಾಗಿದೆ. ಇದರಲ್ಲಿ ಸಾಹಿತ್ಯದ ಸೊಗಡು ಇದೆ. ಪ್ರವಾಸ ಮಾಡಲು ಅನುಕೂಲವಿಲ್ಲದವರಿಗೆ ಓದಿ ಆನಂದಿಸಬಹುದು,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: