ಶ್ರಾವಣದ ಸಂಭ್ರಮಕ್ಕೆ ಮುನ್ನುಡಿಯಾಗುವ ಆಷಾಢ
ಆಷಾಢ ವಾರ ಇರುವಾಗ ಮುದ್ದಿನ ಹೆಂಡತಿಯ ತವರು ಮನೆಯಿಂದ ‘ಅಳಿಯಂದಿರೇ ಮೊದಲ ಆಷಾಢ, ಮಗಳನ್ನು ತಿಂಗಳ ಮಟ್ಟಿಗೆ ಕಳುಹಿಸಿಕೊಡಿ, ಅತ್ತೆ-ಸೊಸೆ ಒಂದೇ ಹೊಸ್ತಿಲಿನೊಳಗೆ ಓಡಾಡಬಾರದು, ನಿಮ್ಮ ಅಪ್ಪ-ಅಮ್ಮನಿಗೆ ಹೇಳಿದ್ದೇವೆ, ಒಪ್ಪಿದ್ದಾರೆ, ಮುಂದಿನವಾರ ಮಗನನ್ನು ಕಳುಹಿಸುತ್ತಿದ್ದೇವೆ, ನೀವೂ ನಮ್ಮ ಜೊತೆ ಬಂದು ನಾಲ್ಕು ದಿನ ಇದ್ದು ಹೋಗುವಿರಂತೆ’ ಎಂದು ಮಾವ ಹೇಳುತ್ತಿದ್ದಂತೆ ಇವನ ಕಿವಿಯಲ್ಲಿ ಕಾದ ಸೀಸ ಹೊಯ್ದಂತಾದರೂ, ಹ್ಹೀ, ಹ್ಹೀ ಎಂದು ಪೆಚ್ಚು ಪೆಚ್ಚಾಗಿ ನಗುತ್ತಾ, ಹುಬ್ಬೇರಿಸಿ ನಗುತ್ತಾ ಕಣ್ಣಲ್ಲೇ ಕೆಣಕುತ್ತಿರುವ ಹೆಂಡತಿಯ ಕಡೆ ಮುನಿಸು ನೋಟ ಬೀರುತ್ತಾ ‘ಅದಕ್ಕೇನು ಧಾರಾಳವಾಗಿ ಕರೆದುಕೊಂಡು ಹೋಗಿ ಮಾವ, ಅವಳೂ ತವರು ಬಿಟ್ಟು ಬಂದು ಬಹಳ ದಿನವಾಯಿತು, ನಿಮ್ಮನ್ನೆಲ್ಲಾ ತುಂಬಾ ಮಿಸ್ ಮಾಡ್ಕೋತಿದ್ದಾಳೆ’ ಎಂದು ಹೇಳಿ ಫೋನು ಆಫ್ ಮಾಡಿ ಸಪ್ಪಗೆ ಜೊತೆಗೆ ಹನುಮಂತರಾಯನ ಹಾಗೆ ಉಪ್ಪಗೆ, ದಪ್ಪಗೆ ಮುಖ ಮಾಡಿ ಕುಳಿತವನನ್ನು ರಮಿಸುವುದಕ್ಕೆ ಹೆಂಡತಿಯ ಬುದ್ಧಿಯೆಲ್ಲಾ ಖರ್ಚು.
ಕಟಕಟ ಎಂದು ಹಲ್ಲು ಕಡಿಸುವ ಕುಳಿರ್ಗಾಳಿ, ಜಿಟಿಜಿಟಿ ಮಳೆ, ಕಾಲ್ಗೆಜ್ಜೆ, ಬಳೆಗಳ ನಿನಾದ ಮಾಡುತ್ತಾ ಸುತ್ತಮುತ್ತ ಸುಳಿದಾಡುತ್ತಲೇ ಸಿಕ್ಕರೂ ಸಿಗದಂತೆ, ಸಿಟ್ಟಾದರೆ ರಮಿಸಿ ಕಾಡುವ ಸಂಗಾತಿಯ ಸಾಮೀಪ್ಯದಿಂದ ಒಂದು ತಿಂಗಳು ದೂರ ಇರಬೇಕೆಂದರೆ ಸುಮ್ನೇನಾ?. ಸಂಕೋಚದಿಂದಲೇ ಅಮ್ಮನ ಬಳಿ ಆಷಾಢಕ್ಕೆ ಇವಳು ಒಂದು ತಿಂಗಳು ಹೋಗಲೇಬೇಕೇನಮ್ಮಾ ಎಂದರೆ ‘ಅದ್ಯಾಕೋ ಹಂಗಾಡ್ತೀಯಾ? ಇಷ್ಟು ದಿನಾ ಅವಳೇ ಇದ್ದಳೇನೂ?’ ಎಂದು ಗದರಿಸಿದಂತೆ ಮಾಡಿ ಅಪ್ಪನ ಕಡೆ ತಿರುಗಿ ಬಾಯಿಗೆ ಸೆರಗಚ್ಚಿ ಮುಸಿಮುಸಿ ನಗುವ ಅಮ್ಮ, ಅಪ್ಪನಿಗೆ ಗೊತ್ತಾದರೂ ಕಣ್ತಪ್ಪಿಸಿ ಹೊರಗೆ ಹೋಗುವಾಗ ಅವನದು ಒಬ್ಬಂಟಿಯ ಅರಣ್ಯರೋಧನ. ‘ಆಷಾಡ ಮಾಸ ಬಂದೀತಮ್ಮಾ, ಅಣ್ಣಾ ಬರಲಿಲ್ಲಾ ಕರೆಯಾಕೆ’ ಎಂಬ ಹಾಡು ಕೇಳಿದರಂತೂ ಎಲ್ಲಿಲ್ಲದ ಕೋಪ ಆಷಾಢದ ಮೇಲೆ.
ಕರೆದುಕೊಂಡು ಹೋಗುವ ದಿನ ಹತ್ತಿರ ಬಂದಂತೆಲ್ಲಾ ಪತ್ನಿಯ ಮೇಲೆ ಹೆಚ್ಚಾಗುವ ಅವಲಂಬನೆ, ದಿನಕ್ಕೆ ಇಪ್ಪತ್ತು ಬಾರಿಯಾದರೂ ಬೇಗ ಬಂದುಬಿಡೇ, ಅಷ್ಟು ದಿನ ನಿನ್ನನ್ನು ಬಿಟ್ಟು ಇರೋಕಾಗೊಲ್ಲ ಎಂಬ ಗೋಗರೆತ. ಆಕೆಗೋ ಎಷ್ಟೋ ತಿಂಗಳುಗಳ ನಂತರ ಅತ್ತ ತವರಿನ ಕಡೆ ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿಯ ಜೊತೆ ಸುಖ-ದುಃಖ ಹಂಚಿಕೊಳ್ಳುವ ಖುಷಿ ಒಂದೆಡೆ, ಇತ್ತ ಪ್ರೀತಿಯ ಗಂಡನ ವಿರಹ ಭರಿಸಲಾರದ ಸಂಕಟ ಮತ್ತೊಂದೆಡೆ, ಒಂದು ರೀತಿಯಲ್ಲಿ ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ಪರಿಸ್ಥಿತಿ.
ಹೆಂಡತಿಯನ್ನು ಕಳುಹಿಸಿದ ಮೇಲೆ ದಿನಗಳು ಆಮೆ, ಬಸವನಹುಳುಗಳ ಹಾಗೆ ತೆವಳುತ್ತಿವೆಯೇನೋ ಎಂಬ ಸಂದೇಹ. ಟಿವಿ, ಸಿನೆಮಾ, ಚಾಟ್, ಗೆಳೆಯರು ಎಲ್ಲದರ ನಡುವೆ ಕಳೆದುಹೋಗಲು ಪ್ರಯತ್ನಿಸಿದರೂ ನಡುವೆ ಆಕೆಯ ಒಂದು ಕರೆಗಾಗಿ ಚಾತಕಪಕ್ಷಿಯ ಹಾಗೆ ಕಾಯುವಿಕೆ. ಅತ್ತ ಆಕೆಗೂ ಮನೆ ತುಂಬಾ ಇರುವ ಜನರ ನಡುವೆ ತಪ್ಪಿಸಿಕೊಂಡು ಅವನಿಗೆ ಕರೆ ಮಾಡಿ ಮಾತನಾಡುವ ಹೊತ್ತಿಗೆ ಸರಿಯಾಗಿ ಮನೆಯ ಯಾರಾದರೊಬ್ಬರು ಹಾಜರ್. ತವರಿನಲ್ಲಿ ಅದೆಷ್ಟೇ ಸಂಭ್ರಮ ಪಡುತ್ತಿದ್ದರೂ ನಡುವೆ ಕಚಗುಳಿಯಿಡುವ ಪತಿರಾಯ ನೆನಪಾಗಿ ಯಾವಾಗ ಅವನನ್ನು ಸೇರುತ್ತೇನೆಯೋ ಎಂಬ ಕಾತರ. ಅಂತೂ ಇಂತೂ ಆಷಾಢ ಮುಗಿದು ಶ್ರಾವಣ ಕಾಲಿಡುವಾಗ ಇವರಿಬ್ಬರ ಮನಗಳಲ್ಲಿ ಹೊಸ ಕನಸುಗಳ ಅನುರಣ.
-ನಳಿನಿ. ಟಿ. ಭೀಮಪ್ಪ, ಧಾರವಾಡ
ಸೊಗಸಾದ ಬರಹ. ಅನುಭವದ ಮನದಾಳದ ನುಡಿಗಳು. ಮತ್ತೆ ಮತ್ತೆ ಓದಬೇಕು ಎನಿಸುತ್ತದೆ.
Dhanyavadagalu
ಚಂದದ ಮುದ ನೀಡುವ , ಜೊತೆಗೆ ಆಷಾಡದ ದ್ವಂದ್ವವನ್ನು ವಿವರಿಸೋ ಲೇಖನ . ನಿಜಕ್ಕೂ ಆಷಾಢ ಎಂದರೆ ತೊಳಲಾಟದ ಪರಿಸ್ಥಿತಿಯನ್ನು ತಂದಿಡೋ ಮಾಸ
Dhanyavadagalu
ಒಳ್ಳೆ ಆಷಾಢ.,,
Dhanyavadagalu
ಸೊಗಸಾದ ಬರಹ
Dhanyavadagalu
Dhanyavadagalu