ಬದಲಾವಣೆ
“ಅಹಂಕಾರ” ಅನ್ನುವ ಪದ ಕಿವಿಗೆ ಬಿದ್ದಲ್ಲಿ ಅಥವಾ ಎಲ್ಲಿಯಾದರೂ ಏನಾದರೂ ಓದುವಾಗ ಕಣ್ಣಿಗೆ ಕಂಡಲ್ಲಿ ಒಂದು ಘಟನೆ ಯಾವಾಗಲೂ ನೆನಪಾಗುತ್ತದೆ. ಆ ಘಟನೆಯಿಂದಾಗಿ ನನ್ನ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆ ಬಂತು . “ನಾನು” ಅನ್ನುವ ಪದ ಎಷ್ಟು ಅರ್ಥಹೀನ , ಅಹಂಕಾರ ತುಂಬಿರುವಂತದ್ದು ಅನ್ನುವುದು ಮನವರಿಕೆಯಾಯಿತು.
ನಾನಾಗ ಒಂಭತ್ತನೆಯ ತರಗತಿಯಲ್ಲಿದ್ದೆ . ಹುಡುಗಾಟದ ವಯಸ್ಸು. ಸಿಕ್ಕಾಪಟ್ಟೆ ತುಂಟಾಟ. ಎಲ್ಲರನ್ನೂ ಗೋಳು ಹೊಯ್ದುಕೊಳ್ಳುವ ಬುದ್ದಿ . ತರಗತಿಯ ಎಲ್ಲಾ ಮಕ್ಕಳೂ ನನ್ನ ತರಲೆ ಆಟಗಳಿಗೆ ಬಲಿ ಆಗುತಿದ್ದವರೇ. ಅಧ್ಯಾಪಕ ವೃಂದದವರ ಪಾಲಿಗೂ ನಾನೊಂದು ತಲೆನೋವಾಗಿದ್ದೆ . ಕೆಲವು ಅಧ್ಯಾಪಕರಿಗೆ ನನ್ನ ತುಂಟಾಟಗಳು ಇಷ್ಟ ಆಗುತಿದ್ದವು . ಅವರು ನಕ್ಕು ಸುಮ್ಮನೆ ಶಿಕ್ಷಿಸದೆ ಬಿಟ್ಟು ಬಿಡುತ್ತಿದ್ದರು. ಆದರೆ ಕೆಲವರಿಗೆ ಕಿರಿ ಕಿರಿಯಾಗಿ ಸಿಟ್ಟು ಬಂದು ಸರಿಯಾದ ಶಿಕ್ಷೆ ಸಿಗುತಿತ್ತು .
ನಾನಂತೂ ನನ್ನದೇ ಪ್ರಪಂಚದಲ್ಲಿ ತೇಲಾಡುತ್ತಾ , ಯಾರಿಗೂ ಹೆದರದೆ ಓಡಾಡಿಕೊಂಡಿದ್ದೆ . ಒಂದೊಂದು ಸಲ ನನ್ನ ತುಂಟಾಟಗಳು ಎಲ್ಲೇ ಮೀರುತ್ತಿದ್ದವು .9ನೇ ತರಗತಿಯಲ್ಲಿರುವಾಗ ಸಮಾಜ ಪಾಠವನ್ನು ಬೋಧಿಸಲು ಹೇಮಲತಾ ಅನ್ನೋ ಒಬ್ಬರು ಮೇಡಂ ಬರುತಿದ್ದರು . ತುಂಬಾ ಸ್ಟ್ರೀಕ್ಟ್.ಅವರೆಂದರೆ ಎಲ್ಲರಿಗೂ ಒಂದು ತರ ಭಯ . ಕಾರಣ ಬಿಗು ವ್ಯಕ್ತಿತ್ವ. ಒಂದು ದಿನ ಅವರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ನಾನು ನನ್ನ ತುಂಟಾಟದಲ್ಲಿ ತೊಡಗಿದ್ದೆ . ಪಾಠದ ಕಡೆ ಗಮನ ಕೊಡದೆ ಮುಂದೆ ಕುಳಿತವರ ಮೇಲೆ ಕಸ ,ಪೇಪರ್ ರಾಕೆಟ್ ಗಳನ್ನೂ ಮಾಡಿ ಎಸೆಯುತಿದ್ದೆ . ಇದನ್ನು ಮೇಡಂ ನೋಡಿ ಬಿಟ್ರು. ಎದ್ದು ನಿಲ್ಲಿಸಿ ಚೆನ್ನಾಗಿ ಬೈದು ಕ್ಲಾಸ್ಸಿನಿಂದ ಹೊರಗೆ ನಿಲ್ಲಿಸಿದ್ರು. ನಾನೂ ಖುಷಿಯಾಗೆ ಕ್ಲಾಸ್ ನ ಹೊರಗೆ ನಿಂತೆ. ಗ್ರೌಂಡ್ನಲ್ಲಿ ಆಟ ಆಡುತಿದ್ದವರನ್ನು ನೋಡುತ್ತಾ, ಪಕ್ಕದ ಕ್ಲಾಸ್ ನ ಮಕ್ಕಳು ಹಾದು ಹೋಗುವಾಗ ಅವರನ್ನು ಮಾತಾಡಿಸುತ್ತಾ, ನನಗಿಂತ ಚಿಕ್ಕವರನ್ನು ಅಡ್ಡ ಹೆಸರಲ್ಲಿ ಕೂಗಿ ರೇಗಿಸುತ್ತಾ ಟೈಮ್ ಪಾಸ್ ಮಾಡುತಿದ್ದೆ . ಆಗಲೂ ನನಗೆ ವಿಷಯದ ಗಂಭೀರತೆ ಅರ್ಥ ಆಗಿರಲಿಲ್ಲ . ಹೇಮಲತಾ ಮೇಡಂ , ನೀನು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ವರೆಗೆ ನಿನ್ನನ್ನು ಕ್ಲಾಸ್ ನ ಒಳಗೆ ಸೇರಿಸುವುದಿಲ್ಲ ಅಂದು ಬಿಟ್ಟರು . ಇಲ್ಲೇ ಅಹಂಕಾರ ಅನ್ನುವುದು ನನ್ನೊಳಗೆ ಎಷ್ಟಿತ್ತು ಅನ್ನುವುದು ಗೊತ್ತಾಗಿದ್ದು .
ನಾನು ಕೂಡ ಹಠಕ್ಕೆ ಬಿದ್ದು ಏನೇ ಆದರೂ ಕ್ಷಮೆ ಕೇಳಲಾರೆ ಎಂದು ನಿರ್ಧರಿಸಿದ್ದೆ .ಮರುದಿನ ಮೇಡಂ ಕ್ಲಾಸ್ಗೆ ಬರುವಾಗ ನಾನು ಎಂದಿನಂತೆ ನನ್ನ ಜಾಗದಲ್ಲಿ ಕುಳಿತಿದ್ದೆ . ಅವರು ಮರೆಯದೆ ನನ್ನನ್ನು ಎಬ್ಬಿಸಿ ಹೊರಗೆ ಕಳುಹಿಸಿದ್ರು . ಆವಾಗಲೂ ನಗು ನಗುತ್ತಲೇ ಏನೋ ಸಾಧನೆ ಮಾಡಿದ್ದೇನೆ ಅನ್ನೋ ಹಮ್ಮಿನಲ್ಲೇ ಹೊರಗೆ ನಿಂತೆ.ಹೀಗೆ ತರಗತಿಯಿಂದ ಹೊರಗೆ ನಿಲ್ಲುವುದು ಅವಮಾನ ಅಂತ ಆವಾಗ ನನಗೆ ಅನ್ನಿಸಿರಲಿಲ್ಲ.
ಮೂರನೆಯ ದಿನ ಏನೋ ಒಂದು ಬದಲಾವಣೆ ಬಂದಂತೆ ಅನ್ನಿಸಿತು ಮನಸಿಗೆ .ನಾನು ತಪ್ಪು ಮಾಡಿದ್ದೇನೆ ಅನ್ನೋ ಭಾವನೆ ಮೂಡಲು ಶುರುವಾಗಿತ್ತು ಮನಸಲ್ಲಿ . ಆದರೂ ಕ್ಷಮೆ ಕೇಳಲು ಅಹಂಕಾರ ಅಡ್ಡ ಬರುತಿತ್ತು . ನಾಲ್ಕನೆಯ ದಿನ ಎಲ್ಲರೂ ನನ್ನನ್ನು ಗೇಲಿ ಮಾಡುತ್ತಿದ್ದಾರೆ ಅಂತ ಅನ್ನಿಸೋಕೆ ಶುರುವಾಯಿತು . ಈ ರೀತಿ ತರಗತಿಯಿಂದ ಬಹಿಷ್ಕರಿಸಲ್ಪಡುವುದು ಒಂದು ರೀತಿಯ ಅವಮಾನ ಅನ್ನುವುದು ಮನವರಿಕೆ ಆಗ ತೊಡಗಿತ್ತು . ಹಾಗೆಯೇ ಕ್ಷಮೆ ಕೇಳುವುದರಲ್ಲಿ ತಪ್ಪೇನು , ಅದರಿಂದ ನಾನೇನು ಸಣ್ಣವಳನಿಸಿಕೊಳ್ಳುವುದಿಲ್ಲ . ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಲೇ ಬೇಕು ಅನ್ನುವ ಭಾವ ಗಟ್ಟಿಯಾಗ ತೊಡಗಿತ್ತು . ಆತ್ಮ ವಿಮರ್ಶೆಯಲ್ಲಿ ನನಗರಿವಿಲ್ಲದಂತೆಯೇ ತೊಡಗಿಕೊಂಡಿತ್ತು ಮನ . ಐದನೆಯ ದಿನ ಶಾಲೆಗೇ ಹೋದವಳು ಸೀದಾ ಸ್ಟಾಫ್ ರೂಮ್ ಗೆ ಮೇಡಂ ಅನ್ನು ಹುಡುಕಿಕೊಂಡು ಹೋದೆ . ಅವರ ಮುಂದೆ ತಲೆ ತಗ್ಗಿಸಿ ನಿಂತಾಗ ಕಲ್ಲು ಮನಸ್ಸೂ ಕರಗಿ ಒಂದೇ ಸಮನೆ ಅಳ ತೊಡಗಿದೆ. ಕೈ ಮುಗಿದು “ಮೇಡಂ ನನ್ನಿಂದ ತಪ್ಪಾಯಿತು , ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ , ತಪ್ಪು ಮಾಡುವುದಿಲ್ಲ , ಸರಿಯಾದ ದಾರಿಯಲ್ಲೇ ನಡೆಯುತ್ತೇನೆ” ಅಂತ ಕ್ಷಮೆ ಕೇಳುತ್ತಾ ಜೋರಾಗಿ ಅತ್ತು ಬಿಟ್ಟೆ. ಅವರಿಗೂ ನನ್ನ ಪರಿಸ್ಥಿತಿ, ಅಳು ನೋಡಿ ಬೇಜಾರಾಯಿತು . ನಾನು ನಿನ್ನಲ್ಲಿದ್ದ ಅಹಂಕಾರವನ್ನು ಹೋಗಲಾಡಿಸಬೇಕಿತ್ತು , ಅದಕ್ಕಾಗಿ ಅಷ್ಟೊಂದು ಕಠಿಣವಾಗಿ ನಡೆದುಕೊಂಡೇ . ಅಹಂಕಾರ ಯಾವತ್ತೂ ಒಳ್ಳೆಯದಲ್ಲ , ಅದನ್ನು ಬಿಟ್ಟು ಸಾಗು, ನಿನಗೆ ಒಳ್ಳೆಯದಾಗುತ್ತದೆ ಅಂತ ಮೈದಡವಿ ಬುದ್ದಿ ಹೇಳಿದರು .
ಆವತ್ತಿಂದ ಇವತ್ತಿನವರೆಗೂ ನಾನು ಆ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಅಹಂಕಾರವನ್ನು ಬಿಟ್ಟು ಸಾಗುತ್ತಾ ಬಂದಿದ್ದೇನೆ . “ನಾನು” ಎನ್ನುವ ಭಾವದಲ್ಲೇ ಅಹಂಕಾರ ಇದೆ , ಹಾಗಾಗಿ ಆದಷ್ಟು ಅದನ್ನು ದೂರ ಮಾಡಿ ಎಲ್ಲರೊಡನೆ ತಗ್ಗಿ ಬಗ್ಗಿ ಬೆರೆಯುವುದನ್ನು ರೂಡಿಸಿಕೊಂಡೆ . ಏನೇ ಮಾಡಿದರೂ ಜೊತೆಗಿದ್ದವರನ್ನೂ ಸೇರಿಸಿಕೊಂಡು ನಾವು ಮಾಡಿದೆವು ಅನ್ನುವುದನ್ನು ಬೆಳೆಸಿಕೊಂಡೆ. ಈ ಭಾವದಲ್ಲಿ ತುಂಬಾ ಸಂತೋಷ ಇದೆ, ನೆಮ್ಮದಿ ಇದೆ , ಮತ್ತು ಈ ಭಾವನೆ ಸಾಕಷ್ಟು ಆತ್ಮೀಯರನ್ನು ನನಗೆ ನೀಡಿತು .
ಕೆಲವೊಂದು ಸಂದರ್ಭದಲ್ಲಿ ನಮ್ಮ ಮೌನವೂ ಅಹಂಕಾರ ಅಂತ ಬೇರೆಯವರಿಂದ ಅಳೆಯಲ್ಪಡುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಕಾಲ ಹಾಗು ಒಡನಾಟವೇ ಈ ತಪ್ಪು ಕಲ್ಪನೆಯನ್ನು ದೂರ ಮಾಡಬೇಕಷ್ಟೆ . ಇಂದಿಗೂ ನಾನು ನನ್ನಲ್ಲಿ ಬದಲಾವಣೆ ತಂದ ದೇವತೆಯನ್ನು ಹಲವಾರು ಸಂದರ್ಭಗಳಲ್ಲಿ ನೆನೆಯುತ್ತೇನೆ . ಅವರು ಆ ದಿನ ಅಂತಹ ಕಠಿಣ ಮನಸ್ಸು ಮಾಡಿದ್ದರಿಂದ ನಾನಿವತ್ತು ಒಂದು ಒಳ್ಳೆಯ ಬದುಕನ್ನು ಪಡೆದಿದ್ದೇನೆ.
ನಿಜ , ಗುರುಗಳು , ಶಿಕ್ಷಕರು ಎಂದರೆ ಮಕ್ಕಳನ್ನು ಪ್ರತೀ ಹೆಜ್ಜೆಯಲ್ಲೂ ತಿದ್ದಿ , ಬುದ್ದಿ ಹೇಳಿ , ತಪ್ಪುಗಳನ್ನು ತೋರಿಸಿ ಕೊಟ್ಟು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವಂತಹ ಮಹಾನ್ ಚೇತನಗಳು . ಅವರು ನಮ್ಮ ಹಾದಿಯ ದಾರಿದೀಪ . ಅವರನ್ನು ಪ್ರತಿ ಹಂತದಲ್ಲೂ ನೆನಪಿಸುತ್ತಾ , ಮರೆಯದೆ ಸಾಗುವುದು ಅವರ ಶಿಷ್ಯರ ಕರ್ತವ್ಯ . ಇತ್ತೀಚಿಗೆ ಕೆಲವೊಂದು ಕಾನೂನುಗಳ ಮೂಲಕ ನಾವು ಅವರ ತಿದ್ದುವ, ಬುದ್ದಿ ಹೇಳುವ ಹಕ್ಕನ್ನು ಅವರಿಂದ ಕಸಿದು ಕೊಳ್ಳುತ್ತಿದ್ದೇವೆ , ಇದರಿಂದ ಒಳಿತಿಗಿಂತ ಕೆಡುಕೇ ಹೆಚ್ಚು . ಹಾಗಾಗಿ ಅವರ ಹಕ್ಕನ್ನು ನಾವು ಗೌರವಿಸೋಣ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ………
– ನಯನ ಬಜಕೂಡ್ಲು
ಒಳ್ಳೆ ಪಾಠ ಕಣ್ರೀ
ಒಳ್ಳೆಯ ಲೇಖನ…
ನಿಜ.. ತಪ್ಪು ಸಹಜ. ಆದರೆ ಇಂತಹ ಆತ್ಮವಿಮರ್ಶೆ ಎಚ್ಚರಿಕೆಯ ಪಾಠ. ಬದುಕಿನ ಉದ್ದೇಶ ಕೂಡ ಇದೆ. ಪ್ರಾಮಾಣಿಕ ಬರಹ.ಇಷ್ಟ ಆಯಿತು ನಯನ ಮೇಡಂ
‘ಅಹಂ’ ತೆಗೆದರೆ ಆಹಾ…!
ಚಂದದ ನಿರೂಪಣೆ.
Supper. Nijavadamathu navu yavathu ahankara madabar adu navu estu etharakke belithivo aste thaggi nadeya beku ahankara manushyananna thumba kelamattakke tharuthadde
ಆಪ್ತವಾಗಿದೆ..
ಒಳ್ಳೆಯ ಬರಹ
ಅತ್ಯಂತ ಉತ್ತಮ ಬರಹ !
ನಾನು ಮಿಡ್ಲ್ ಸ್ಕೂಲ್ ನಲ್ಲಿ ಆರನೇ ತರಗತಿಯಲ್ಲಿ ಇದ್ದಾಗ ,ನನ್ನಕ್ಕ ಏಳನೇ ತರಗತಿ . ನನ್ನ ತರಗತಿ ಪಕ್ಕದಲ್ಲೇ ಅವರ ತರಗತಿ. ನನ್ನಕ್ಕ ಓದಿನಲ್ಲಿ ಮುಂದು . ಅವರ ತರಗತಿ ಮಾನಿಟರ್ ,ಅವರದೇನೂ ತಪ್ಪಿಲ್ಲದಿದ್ದರೂ ಅವರ ಹೆಸರನ್ನು ಕ್ಲಾಸ್ ಟೀಚರ್ ಗೆ ಕೊಟ್ಟು , ಅವರು ನನ್ನಕ್ಕನನ್ನು ತರಗತಿಯ ಹೊರಗೆ ಕಳಿಸಿದ್ದರು . ನನ್ನಕ್ಕ ತನ್ನದೇನೂ ತಪ್ಪಿಲ್ಲವೆಂದು ಹೇ
ಳಿದರೂ ಕೇಳದೆ ಹೊ
ರಗೆ ಕಳಿಸಿದ್ದರು. ನನ್ನಕ್ಕ ತರಗತಿಯ ಬಾಗಿಲಲ್ಲೇ ನಿಂತು ಎಲ್ಲಾ ಪಾಠಗಳನ್ನೂ ಕೇಳುತ್ತಾ ಇದ್ದಳು. ಮೂರನೇ ದಿನ ಆ ಮೇಡಂ ನನ್ನ ಕ್ಕನನ್ನು ತರಗತಿಯೊಳಗೆ ಕರೆದು ಕೂರಿಸಿದ್ದರು !