ಪುಸ್ತಕ ದಿನ…’ಒಡಲ ಕಿಚ್ಚಿನ ಹಿಲಾಲು ಹಿಡಿದು’

Share Button

ಜೆಸ್ಸಿ ಪಿ ವಿ

ವಿಶ್ವ ಪುಸ್ತಕ ದಿನದ ದಿನ ನನ್ನ ಓದುವ ಹವ್ಯಾಸವನ್ನೊಮ್ಮೆ ನೆನೆದೆ. ಬಾಲ್ಯದಲ್ಲಿ ಓದುವ ಹುಚ್ಚು ಹಿಡಿಸಿದ್ದು ಅಪ್ಪ. ಪ್ರಾಥಮಿಕ ಶಾಲೆಯಲ್ಲಿ (ಆಗ ಅದು ಏಕೋಪಾಧ್ಯಾಯ ಶಾಲೆಯಾಗಿದ್ದರೂ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಮತ್ತೆ ಮತ್ತೆ ನಾನೇ ಶಾಲಾ ಲೈಬ್ರೆರಿಯಿಂದ ಪುಸ್ತಕಗಳನ್ನು ಪಡೆದು ಓದಲು ಶುರು ಮಾಡಿದೆ. ಪುಸ್ತಕಗಳು ಮನುಷ್ಯನ ನಿಜವಾದ ಗೆಳೆಯರು ಎಂಬ ಉಕ್ತಿಯಿದೆ. ನನಗಂತೂ ಈ ಮಾತು ಸತ್ಯ ಅನಿಸಿದೆ.  ನನಗೆ ಖುಷಿ ಕೊಡುವ ಸಂಗತಿಯೆಂದರೆ ನನ್ನ ಎರಡನೇ ಮಗಳಿಗೆ ಉತ್ತಮ ಓದುವ ಹವ್ಯಾಸವಿರುವುದು. “ಅಮ್ಮಾ ಪ್ಲೀಸ್, ಲೈಬ್ರೆರಿಗೆ ಕರೆದುಕೊಂಡು ಹೋಗು” ಎಂದು ದುಂಬಾಲು ಬೀಳುವ ಅವಳು ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಾಳೆ. ನನ್ನ ಶಿಕ್ಷಕ ವೃತ್ತಿಯಲ್ಲೂ ಓದುವ ಹವ್ಯಾಸವಿರುವ ಹಲವು ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ ಎಂದು ದೂರುವ ಬದಲು, ಅವರಲ್ಲಿ ಆ ಆಸಕ್ತಿ/ ಹವ್ಯಾಸ ಮೂಡಿಸಲು ನಾವು ಪ್ರಯತ್ನಿಸಬೇಕು. ಹೊಸ ಹೊಸ ಬರಹಗಾರರು ಹುಟ್ಟುತ್ತಿರುವ ಹಾಗೇ ಹೊಸಹೊಸ ಓದುಗರೂ ಹುಟ್ಟುತ್ತಿರುತ್ತಾರೆ. ಖಂಡಿತಾ, ಪುಸ್ತಕಗಳಿಗೆ ಸಾವಿಲ್ಲ.  ನನ್ನ ಓದುವ ಹವ್ಯಾಸವನ್ನು ತೃಪ್ತಿಪಡಿಸಲು ನಾನು ಓದಿದ ಹಲವು ಪುಸ್ತಕಗಳಲ್ಲಿ ಎರಡನ್ನು ಇಲ್ಲಿ ಪರಿಚಯಿಸಿದ್ದೇನೆ. ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.

ಒಡಲ ಕಿಚ್ಚಿನ ಹಿಲಾಲು ಹಿಡಿದು- ಆಸಕ್ತಿ ಹುಟ್ಟಿಸುವ ಕವನ ಸಂಕಲನ.
ವೃತ್ತಿಯಲ್ಲಿ ಶಿಕ್ಷಕರೂ ಪ್ರವೃತ್ತಿಯಲ್ಲಿ ಕವಿಯೂ, ಸಾಹಿತಿಯೂ, ವಿಮರ್ಶಕರೂ ಆದ ಶ್ರೀ ನಾಗೇಶ್ ಜೆ ನಾಯಕ ಅವರು ತಮ್ಮ  ಕವನ ಸಂಕಲನ “ಒಡಲ ಕಿಚ್ಚಿನ ಹಿಲಾಲು ಹಿಡಿದು”  ನನ್ನ ಕೋರಿಕೆಯ ಮೇರೆಗೆ ಕಳಿಸಿಕೊಟ್ಟಿದ್ದರು. ಓದಿದೆ. ಅಲ್ಲ, ಅದು ನನ್ನನ್ನು ಕುತೂಹಲದಿಂದ ಓದುವಂತೆ ಮಾಡಿತು. ಈ ಸಂಕಲನದ ಹಲವು ಕವನಗಳಲ್ಲಿ ಅವರ “ಒಡಲ ಕಿಚ್ಚು” ಎದ್ದು ಕಾಣುತ್ತದೆ. ಕೆಲವು ಕಡೆ ಅವರು ದಮನಿತರ ಧ್ವನಿಯಾಗಿದ್ದಾರೆ. ಮೊನಚಾದ ಶಬ್ದಗಳ ಮೂಲಕ ಕೆಡುಕನ್ನು ಪ್ರಶ್ನಿಸಿದ್ದಾರೆ, ಪ್ರತಿಭಟಿಸಿದ್ದಾರೆ. ತಮ್ಮ ಕವನಗಳ ಸಾಲುಗಳನ್ನು ನಾಜೂಕಾಗಿ ಹೆಣೆದಿದ್ದಾರೆ. ವಿಶಿಷ್ಟ ಶಬ್ದಭಂಡಾರವನ್ನು ತೆರೆದಿಡುತ್ತಾರೆ. ಕೆಲವು ವಿಶಿಷ್ಟ ಪದಪ್ರಯೋಗಗಳ ಮಾಂತ್ರಿಕತೆಗೆ ಓದುಗ ಮರುಳಾಗುವಂತೆ ಮಾಡಿದ್ದಾರೆ. ಸಂಕಲನದ ಶೀರ್ಷಿಕೆ ಹೊತ್ತ “ಒಡಲ ಕಿಚ್ಚಿನ ಹಿಲಾಲು ಹಿಡಿದು” ಕವನ ಅತ್ಯದ್ಭುತ ಎನಿಸಿದೆ.
“….ಕುಕ್ಕಿ ತಿನ್ನುವ ರಣಹದ್ದುಗಳ 
ರಕ್ತ ಹೀರಬೇಕಿದೆ. 
ಬಚ್ಚಿಟ್ಟ ಒಡಲ ಕಿಚ್ಚಿನ ಹಿಲಾಲು ಹಿಡಿದು
 ಹಲಾಲುಕೋರರ ಮಹಲಿಗೆ 

ಮುತ್ತಿಗೆ ಹಾಕಬೇಕಿದೆ” ಎಂತಹ ಸಾಲುಗಳು ನೋಡಿ!

ಒಂದು ಅಸಹಾಯಕ ಹೆಣ್ಣಿನ ಒಡಲಾಳವನ್ನು ಬಿಚ್ಚಿಡುವ “ಆ ಮೂರನೆಯವಳು” ಕವನ ಹೃದಯಕ್ಕೊಂದು ಗೀರು ಬೀಳಿಸುತ್ತದೆ.

ಮತ್ತೊಂದು ಉಲ್ಲೇಖಿಸಬೇಕಾದ ಕವನ “ಶಾಪಗ್ರಸ್ಥರು”

ಅದರ ಒಂದೆರಡು ಸಾಲುಗಳು.
“ಹಕೀಕತ್ತಿನ ಹಕ್ಕುದಾರರಾದ
ನಮ್ಮ ಬದುಕಿನ ಸಂಪತ್ತು
ನಿಮ್ಮ ಕಣ್ಣು ಕುಕ್ಕಲೇಯಿಲ್ಲ.” ಶಬ್ದಗಳ ಜಾದೂಗಾರ ನಾಗೇಶ್ ನಾಯಕರ ಉಳಿದ ಕವನಗಳೂ ಉತ್ತಮವಾಗಿವೆ.ಕವನಗಳನ್ನೆಲ್ಲ ನಾನು ವಿವರಿಸುತ್ತಾ ಕುಳಿತರೆ ಒಂದು ಪೂರ್ಣ ವಿಮರ್ಶೆಯನ್ನೇ ಬರೆಯಬೇಕಾದೀತು. ನನ್ನ ಬರಹವನ್ನು ಓದುವ ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದಲ್ಲ. ಆದುದರಿಂದ ಸ್ನೇಹಿತರೇ ಅವರ ಕವನ ಸಂಕಲನವನ್ನು ಒಮ್ಮೆ ಓದಿ. ನನ್ನಂತೆ ನೀವೂ ಇಂಪ್ರೆಸ್ ಆಗುವುದರಲ್ಲಿ ಸಂದೇಹವಿಲ್ಲ.

ನಾಗೇಶ್ ಜೆ ನಾಯಕ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದೆಯೂ ಇವರಿಂದ ಹಲವು ಉತ್ತಮ ಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.

.
– ಜೆಸ್ಸಿ ಪಿ ವಿ, ಪುತ್ತೂರು

3 Responses

  1. Anonymous says:

    ಪುಸ್ತಕ ಪರಿಚಯ ಚೆನ್ನಾಗಿದೆ

  2. ವಿಜಯಾಸುಬ್ರಹ್ಮಣ್ಯ says:

    ನಿಮ್ಮ ಮಗಳಿಗೆ ಓದುವ ಹವ್ಯಾಸ, ಅದನ್ನು ಉತ್ತೇಜಿಸುವ ನಿಮ್ಮನ್ನು ಮೆಚ್ಚಬೇಕು. ಅವಳಿಗೆ ಶ್ರೇಯಸ್ಸಾಗಲಿ

  3. Shankari Sharma says:

    ಕೃತಿ ಪರಿಚಯ ಚೆನ್ನಾಗಿ ಮೂಡಿಬಂದಿದೆ.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: