ಸಂತೋಷ್ ಕುಮಾರ ಮೆಹಂದಳೆ ಅವರ ಕೃತಿ -“ಅವಳು ಎಂದರೆ”

Share Button


“ಅವಳು ಎಂದರೆ
”  ಪುಸ್ತಕವು  “ಅವ್ವಾ ”  ಪ್ರಶಸ್ತಿ ವಿಜೇತ  ಸಂತೋಷ್ ಕುಮಾರ ಮೆಹಂದಳೆ ಅವರ ಒಂದು ಅದ್ಭುತ ಕೃತಿ . ಇದು ಹೆಣ್ಣು ಮಕ್ಕಳ ಬದುಕಿನ ಕುರಿತಾದ ಚಿತ್ರಣ ಹೊಂದಿರುವ ಮತ್ತು ಹಲವಾರು ಹೆಣ್ಣು ಮಕ್ಕಳು ಅನುಭವಿಸಿರುವಂತಹ  ನೈಜ ಉದಾಹರಣೆಗಳನ್ನು ಹೊಂದಿರುವಂತಹ ಹಲವು ಕಷ್ಟ ಸುಖಗಳ ಮಿಶ್ರಣದಿಂದ  ಕೂಡಿದ ಲೇಖನ ಮಾಲೆ . ನಾನು ಈ ಪುಸ್ತಕವನ್ನು ಓದಿ ಅರ್ಥೈಸಿಕೊಂಡ  ರೀತಿ ಹೀಗಿದೆ –

 “ಹೆಣ್ಣೇ….. ನಿನ್ನದೇ ಮನಸಿನ ಅನಾವರಣ,
“ಅವಳು ಎಂದರೆ…..”  ಅಂಕಣ ,
ಇಲ್ಲಿ ತೆರೆದ ಪುಸ್ತಕದಂತೆ ನಿನ್ನ ಜೀವನ ,
ನಿನ್ನದೇ ಕತೆಯಿಂದಾವೃತ ಬರೋ ಪ್ರತಿಯೊಂದು ಪಾತ್ರದ ಚಿತ್ರಣ “.

“ಕಷ್ಟಗಳಿಗೆ ಹೆದರದೆ ಮುನ್ನುಗ್ಗೋ ಒಬ್ಬಳ ಛಾತಿ ,
ಇನ್ನೊಂದೆಡೆ ಯಾವ ಸೋಲಿಗೂ ಜಗ್ಗದೆ ಮುಂದಡಿ ಇಡೋ ಗೆಳತಿ,
ಗಂಡೂ ತನ್ನ ಮಗುವಿನ ಸಲುವಾಗಿ ಅಮ್ಮನಾಗಿ ಬದುಕೋ ರೀತಿ,
ಮೇಳೈಸಿಹುದು ಅದ್ಭುತ ಅನುಭವಗಳು ಇಲ್ಲಿ ಹಿಡಿದು ಸರತಿ”.

“ಬರುವುದಿಲ್ಲಿ ದೀರ್ಘ ಮೌನದ ಲೋಕ,
ಸಿಗುವರಿಲ್ಲಿ ಮರೆತು ಸಾಗುವವರು ಅಳುಕ,
ಎಷ್ಟೇ ಇದ್ದರೂ ಈ ಲೋಕದ ನಿಂದೆ ಕುಹುಕ,
ಕಥೆಯಾಗಿಹರಿಲ್ಲಿ ಇದರ ನಡುವೆಯೇ ಕಟ್ಟಿ ಕೊಂಡವರು  ಬದುಕ”.

” ಗಂಡೆಂದ ಮೇಲೆ ನಿರಂತರ ದುಡಿತ,
ಸದಾ ನಿಭಾಯಿಸುವಲ್ಲಿ ಜವಾಬ್ಧಾರಿಗಳ ನಿರತ,
ಗಂಡೇ….. ನಿನ್ನ ಹೃದಯಾಂತರಾಳದ ಮಿಡಿತ,
ವೂ ಆಗಿಹುದಿಲ್ಲಿ ಅದ್ಭುತ ಸಾಲುಗಳ ಜೊತೆ ಮಿಳಿತ “.

“ಕಷ್ಟಗಳ ನಡುವೆಯೂ ನೆಮ್ಮದಿ,
ಸಾಗುವವರೂ ಇದರೊಳಗಿಹರು ಅದೆಷ್ಟೋ ಮಂದಿ,
ಬದುಕಾಗಿದ್ದರೂ ಅಗಾಧ ಶರಧಿ,
ಸಿಗುವರಿಲ್ಲಿ  ಈಜುವವರು ಛಲದಿ “.

“ಕಾಣ ಸಿಗುವುದಿಲ್ಲಿ ಹೊಂದಾಣಿಕೆಯ ಸೂತ್ರ,
ಅದರಲ್ಲೂ ಹೆಣ್ಣೇ… ನಿನ್ನದೇ ಪಾತ್ರ ,
ಎಲ್ಲವ ಸಹಿಸುವಿಕೆಯೊಂದು ಮಾತ್ರ ,
ಇಲ್ಲಿ ಬದುಕ ಸರಿ ದೂಗಿಸೋ  ಅಸ್ತ್ರ “.

“ಯಾರದೋ ತನ್ನವರ ಕಳಕೊಂಡ ವೇದನೆ,
ಯೂ ಆವರಿಸುವುದು ಎಲ್ಲರ ಗಾಳಿಯಂತೆ ತಣ್ಣನೆ,
ಅವರ ಸಲುವಾಗಿ ಇನ್ನಾರದೋ ಸ್ಪಂಧನೆ,
ಎಲ್ಲವೂ ಇಲ್ಲಿ ಕನ್ನಡಿಯಂತೆ ನಿಚ್ಛಳ ಇದಲ್ಲ ಬರಿ ಕಲ್ಪನೆ “.

“ಕೂಡು ಕುಟುಂಬವೂ ಆಗುವುದಿಲ್ಲಿ ಛಿದ್ರ,
ಪ್ರೀತಿಯೊಂದೇ ಎಲ್ಲವ ಬೆಸೆದು ಗೊಳಿಸುವುದು ಭದ್ರ,
ಮನಸೋ ಆಳವಾದ ಸಮುದ್ರ,
ಓದುತ್ತಾ ಹೋದಂತೆ ಗೊಳ್ಳುವುದು ಮನ ಆರ್ದ್ರ “.

“ಹತ್ತಿಕ್ಕಿ ಬದುಕಿದವರದೆಷ್ಟೋ ತಮ್ಮ ಆಸೆ ಆಕಾಂಕ್ಷೆ ,
ಬದಲಾಗಿಹುದು ಅವೆಷ್ಟೋ  ಬದುಕುಗಳ ನಕ್ಷೆ,
ಯಾರೂ ಮಾಡಲಾರರಿಲ್ಲಿ ಯಾರದ್ದೂ ಬದುಕಿನ ರಕ್ಷೆ ,
ಪ್ರತಿಯೊಬ್ಬನ ಬದುಕೂ ಇಲ್ಲಿ ವಿಧಿ ನೀಡೋ ಭಿಕ್ಷೆ “.

“ಮೋಸದಾಟಕ್ಕಾಗಿದ್ದರೂ ಬಲಿ ,
ಮತ್ತೆ ಬೆಳಕು ಕಂಡವರದೆಷ್ಟೊ  ಕತ್ತಲಲ್ಲಿ,
ಆರಗೊಡದೆ ಭರವಸೆಯ ಕಂದೀಲ ಮನದಲ್ಲಿ,
ಬದುಕ ಕಟ್ಟಿಕೊಂಡವರ ಕಥೆಯೂ ಕಾಣ ಸಿಗುವುದಿಲ್ಲಿ “.

“ಮಾಡಿಕೊಂಡು ಹೆತ್ತವರನ್ನು ಏಣಿಮೆಟ್ಟಿಲು ,
ಸಿಗುವರಿಲ್ಲಿ ಹತ್ತಿ ಒದಿಯೋ ಮಕ್ಕಳೂ,
ನೆನಪಾಗದಿದ್ದರೂ ಯುವ ಮನಸುಗಳಿಗೆ ದಾಟಿ ಬಂದ ಬಾಲ್ಯದ ಕಷ್ಟದ  ದಿನಗಳು,
ಇಲ್ಲಿವೇ ನಿರೀಕ್ಷೆಯಲ್ಲೇ ಕಳೆಯುತ್ತಾ ಕಾಲ, ಎದುರಿಸುತ್ತಾ ಸವಾಲ ಸಾಗೋ ಅದೆಷ್ಟೋ ಇಳಿ ಜೀವಗಳು “.

“ಎಷ್ಟೇ ಮಾಡಿದ್ದರೂ ದಬ್ಬಾಳಿಕೆ, ದೌರ್ಜನ್ಯ,
ಕಾಣ ಸಿಗುವಳಿಲ್ಲಿ ಅದೆಲ್ಲವ ಮರೆತು ತೋರುವವಳು ಸೌಜನ್ಯ,
ಪಟ್ಟ ಪಾಡೆಲ್ಲಾ ತುಸು ಪ್ರೀತಿಯ ಮುಂದೆ ನಗಣ್ಯ ,
ಮರೆತು ಎಲ್ಲಾ ಅನ್ಯಾಯವ ಮತ್ತೆ ಸಾಗುವಳು ಹಳೆಯ ದಾರಿಯಲ್ಲಿ ಮಾಡುತ್ತಾ ತನ್ನವರ ಸೇವೆ ತುಂಬಿಕೊಂಡು ಚೈತನ್ಯ “.

“ಕಿತ್ತು ತಿನ್ನೋ ಬಡತನ ,
ಎಲ್ಲರಿಂದ ದೂರವಾಗಿ ಇನ್ನಾರನ್ನೋ ಕಾಡೋ ಒಂಟಿತನ ,
ತಿರುವುಗಳ ಪಡೆಯೋ ಹಂತದಲ್ಲಿ ಕೆಲವರದ್ದಾದರೂ ಜೀವನ,
ಹೊಂದಿರಬಹುದೇನೋ ತುಸುವಾದರೂ ನೆಮ್ಮದಿ
ಪಡೆದು ಈ ಅಂಕಣಕಾರನ ಹಿತವಾದ ಸಾಂತ್ವನ”.

“ಮುಳುಗಿ ಹೋಗಿದ್ದರೂ ಕತ್ತಲ ಕೂಪದಲ್ಲಿ ಬಾಳು,
ತರುವವಳಿಹಳಿಲ್ಲಿ ತನ್ನ ಬದುಕಿನ ಜೊತೆ ಇನ್ನೊಬ್ಬರ ಬದುಕಲ್ಲೂ ಬೆಳಕಿನ ಹೊನಲು,
ಬಿದ್ದಿದ್ದರೂ ಹೊಡೆತ ಸಾಲು ಸಾಲು ,
ಎದ್ದೇಳೋ ವೇಳೆ ಸ್ವಂತ ಏಳಿಗೆಯ ಜೊತೆ ಇರುವಳಿಲ್ಲಿ
ಇನ್ನೊಬ್ಬರ ಬಿರು ಬಿಸಿಲ ಹಾದಿಯಲ್ಲಿ ಆದವಳು ತಂಪಾದ ನೆರಳು “.

“ಇಲ್ಲಿಹುದು ಮೌನದೊಳಗವಿತಿರುವ ನೂರಾರು ಮಾತು,
ಜೊತೆಗೊಂದಿಷ್ಟು ಬಾಲ್ಯದ ಸುಂದರ ಜಗತ್ತು,
ನೋವಿನಿಂದಾವೃತವಾಗಿ ಕಾಣುವುದಿಲ್ಲಿ
ವಿಧಿ ಹೊತ್ತು ತರೋ ಕಡು ಕಷ್ಟಗಳೇ  ತುಂಬಿದ ಹೊತ್ತು,
ಎಲ್ಲಾ ಪ್ರಶ್ನೆಗಳೂ ಹೋಗುವವಿಲ್ಲಿ ಮತ್ತೆ ಮೌನದೊಳಗೆ ಬೆರೆತು “.

“ಹೆಜ್ಜೆ ಹೆಜ್ಜೆಗೂ ಮಗಳ ಪ್ರತಿ ಆತಂಕ ಪಟ್ಟರೂ ಕಾಳಜಿ ತೋರೋ ಅಮ್ಮ,
ಪೂಜಿಸೋ ದೇವತೆಗಳಿಗೆ ಸಮ,
ದಿನನಿತ್ಯದ ಜಂಜಾಟ ನೋವಿನಲ್ಲೂ ಸಂಭ್ರಮ,
ಪಡುವವಳೇ…… ”  ಅವಳು ಎಂದರೆ ”  ನಿನ್ನದೇ  ಕಥೆ-ವ್ಯಥೆಗಳ ಸಂಗಮ “.

“ಮಾನವೀಯತೆಯ ಸಲುವಾಗಿ ತನ್ನ ಜೀವನ ,
ಸಿಗುವಳಿಲ್ಲಿ ಇಟ್ಟವಳೂ ಪಣ ,
ಹೊಂದಿದಲ್ಲಿ ಛಲ ಪಡೆಯದೇ ಯಶಸ್ಸನ್ನ ,
ನಿಲ್ಲದವಳ ಈ ನಿರಂತರ ಪಯಣ “.

“ಹೂವಂತಹ ಮನಸ್ಸು ಜೊತೆಗೆ ಮೃದು ಹೃದಯದ ,
ಲೇಖಕರಿಲ್ಲಿ ಎಲ್ಲರ ಗೆಳೆಯ,
ಎಲ್ಲರ ನೋವಿಗೆ ಸ್ಪಂದಿಸಿ ಮೌನದಲ್ಲೇ ಸಾಂತ್ವನಿಸೋ ಸದಾಶಯ ,
ದಲ್ಲೇ ಅಡಗಿಹುದು ಈ ಮಹಾನುಭಾವನ ಪರಿಚಯ “.

“ಹೆಣ್ಣೇ……. ನಿನ್ನ ಕಣ್ಣಿಗಾವರಿಸಿರೋ ಪೊರೆ,
ಕಳಚುವ ವೇಳೆಗೆ ನೀನಾಗಿರುವೆ ಪರಿಸ್ಥಿತಿಯ ಕೈಗೊಂಬೆ, ಸೆರೆ ,
ಆಗಿಹುದು ಇದೆಲ್ಲವ ಓದುತ್ತಾ ಓದುತ್ತಾ ಮನಸೂರೆ ,
ಕಾರಣ ……………..
“ಅವಳು…… ಎಂದರೆ “.

ಇದು ನಾನು ಓದಿದ, ನನಗೆ ಇಷ್ಟವಾದ  ಒಂದು ಸುಂದರವಾದ ಲೇಖನ ಮಾಲೆ .

–  ನಯನ ಬಜಕೂಡ್ಲು

4 Responses

  1. ಹೇಮಾ ಸದಾನಂದ says:

    ಬಹಳ ಚೆಂದ. ಒಂದು ಕೃತಿಯನ್ನು ಅನಾವರಣಗೊಳಿಸಿದ ರೀತಿ ಮೆಚ್ಚುವಂತಹದ್ದು.

  2. ವಿಜಯಾಸುಬ್ರಹ್ಮಣ್ಯ says:

    ಮೆಚ್ಚುಗೆ ಯಾಯ್ತು ಈ ಬರಹ.

  3. Shankari Sharma says:

    ಕೃತಿ ಪರಿಚಯ ಅರ್ಥವತ್ತಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: