ಬೊಗಸೆಬಿಂಬ

ನೋಡಮ್ಮ ಈ ಫೊಟೋ-(ನುಡಿಮುತ್ತು-5)

Share Button


‘ಅಮ್ಮಾ.., ನೋಡು ಪೇಪರಲ್ಲಿ ಬಂದಿರೋ ಈ ನಟಿಯ ಫೊಟೋ’.ಬೆಳಗ್ಗಿನ ತಿಂಡಿ-ಕಾಫಿ ಗಡಿಬಿಡಿಯಲ್ಲಿದ್ದ ವಸುಮತಿಯ ಮುಖದ ಮುಂದೆ ಹನ್ನೆರಡು ವರ್ಷದ ಮಗಳು ವಸುಧಾ ಅಂದಿನ ಪೇಪರು ತಂದು ಒಡ್ಡಿದಾಗಏನೇ ನಿನ್ನ ಧಾವಂತ?’ ಎಂದರು.
‘ಅಲ್ಲಮ್ಮಾ.., ನನ್ನ ಸ್ಕರ್ಟ ಮೊಣಕಾಲಿನ ವರೆಗೆ ಬಂದರೇ ನನ್ನನ್ನ ಕಣ್ಣರಳಿಸಿ ನೋಡ್ತಿಯಾ..,ಹಾಗಿದ್ದರೆ ಇದನ್ನ ಏನ್ಹೇಳ್ತಿಯಾ!?’. ಅದನ್ನ ಅವಲೋಕಿಸಿದ ಆಕೆ  ‘ಅದು ಸಿನೀಮಾ ಲೋಕದವರ ವೇಷ ಮಗೂ.. ನಮ್ಮಂತಹ ಸಂಪ್ರದಾಯಸ್ಥರ ಹೊರತಾಗಿರುವ ಲೋಕವದು. ನಾವೆಲ್ಲ ಅದನ್ನ ಅನುಕರಣೆ ಮಾಡಬಾರದಮ್ಮ’.

“ನೀನು ನನಗೊಬ್ಬಳಿಗೆ ಹೇಳಿ ಬಾಯಿಮುಚ್ಚಿಸ್ಬಹುದು. ಆದರೆ… ಅದೆಷ್ಟು ಮಂದಿ ನನ್ನಂತವರು ನೋಡೋದಿಲ್ಲ ಹೇಳು!. ನನ್ನ ತರಗತಿಯವರಲ್ಲದೆ ನನ್ನ ಫ್ರೆಂಡ್ಸ್ ಕೂಡಾ ಇಂತದ್ದೆಲ್ಲ ನೋಡುತ್ತಿರುತ್ತಾರೆ ಅದು ಚಂದ, ಇದು ಚಂದ ಎಂಬ ವಿಮರ್ಶೆಯನ್ನೂ ಮಾಡ್ತಿರುತ್ತಾರೆ!!!.”

ಮಗಳ ಈ ಮಾತಿಂದ ವಸುಮತಿ ತುಸು ಯೋಚಿಸುವಂತಾಯಿತು. ಛೇ..ಏನು ನಟಿಯರೋ, ಆಕೆಯ ಉಡುಪು ಇರುವುದೇ ತೊಡೆಯ ಮೇಲ್ಭಾಗದ ತನಕದ ಪೆಟ್ಟಿಕ್ಕೋಟು!. ಅದರಲ್ಲೂ ಒಂದು ಕಾಲ ಮೇಲೆ ಮತ್ತೊಂದು ಕಾಲನೊದೆದಿಟ್ಟು.., ಮುಚ್ಚಿಕೊಳ್ಳಬೇಕಾದ ಪ್ರಥಮಭಾಗವನ್ನೇ ತೋರಿಸುತ್ತಿದ್ದಾಳೆ!. ಹಾಗೆಯೇ ಎದೆಯ ಭಾಗ ಅರ್ಧತೆರೆದಿದೆ! ಕೈಗಳಿಗೆ ಮೊಣಗಂಟಿನ ಮುಂದಕ್ಕೂ ಉಡುಪಿದೆ. ಯಾವುದನ್ನು ಮುಚ್ಚಿಕೊಳ್ಳಬೇಕು, ಯಾವುದು ಕಂಡರೂ ಅಡ್ಡಿಯಿಲ್ಲ ಎಂಬುದನ್ನು ಮರೆತಿದ್ದಾಳೆ!!. ಕೇಕರಿಸಿ ಉಗಿಯಬೇಕೆಂಬ ಹೇವರಿಕೆಯಾಗುತ್ತಿದೆ ಗರತಿ ವಸುಮತಿಗೆ!!. ಕ್ಯಾಬರೆ ನರ್ತಕಿ ಇವಳಿಂದ ಮೇಲು!!!. ಹಾಗೆ ನೋಡಿದರೆ, ಹದಿಹರೆಯದ ಕನ್ನಿಕೆಯರು ನೋಡುವುದರಿಂದ ಮಿಗಿಲಾಗಿ ಹಲ್ಲುಕಿಸಿಯುವ ಯುವಕ ಬಳಗವೇ ನೋಡುವುದು ಹೆಚ್ಚು ಎನ್ನಬಹುದು. ಅಶ್ಲೀಲ ಫೊಟೋಗಳಿಗೆ ಸುದ್ದಿವಾಹಿನಿಗಳಲ್ಲಿ ನಿರ್ಬಂಧ ಹೇರಬಾರದೇ!!. ಏನೇ ಆದರೂ ತಮ್ಮ ತಮ್ಮ ಮಕ್ಕಳು, ಇಂತಹ ವೇಷ-ಭೂಷಣಕ್ಕೆ ಮಾರುಹೋಗದಂತೆ ತಾಯಂದಿರು ತಡೆಯಬೇಕೆಂಬುದು ವಸುಮತಿಯ ಮನೋಭೂಮಿಕೆ. ಕನ್ನಿಕೆಯರನ್ನು ಒಂದು ಹಂತಕ್ಕೆ ಕಿವಿಮಾತು ಹೇಳಿ ಪಳಗಿಸಿದರೆ; ದಿನಸರಿದಂತೆ ಮತ್ತೆ ಅವರು ಆ ವಿಷಯದಲ್ಲಿ ಮನದಟ್ಟು ಮಾಡಿಕೊಳ್ಳುತ್ತಾರೆ.ಆದರೆ ಎಲ್ಲಾ ತಾಯಂದಿರೂ ಈ ಬಗ್ಗೆ ಜಾಗೃತರಾಗಬೇಕೆಂಬುದು ವಸುಮತಿಯ ಧೋರಣೆ.

ಈಗಿನ ಬಾಲಿಕೆಯರು 8-10 ವರ್ಷಕ್ಕೇ ಋತುಮತಿಯರಾಗುತ್ತಾರೆ. ಹೆಣ್ಣು ಹುಡುಗಿಯರಲ್ಲಿ ಅವರು ಋತುಮತಿಯರಾದ ಮೇಲೆ ಹೆಚ್ಚು ನಿಗಾವಹಿಸಬೇಕೆಂಬುದು ಹಿಂದಿನಕಾಲದ ಮಾತು. ಆದರೆ ಈ ಶತಮಾನದಲ್ಲಿ ಹೆಣ್ಣುಮಗು ಭೂಮಿಗೆ ಬಿದ್ದಂದಿನಿಂದಲೇ ಕಾಮುಕರ ದೃಷ್ಠಿಯಿಂದ ಕಾಪಾಡುವ ಪರಿಸ್ಥಿತಿ ರಕ್ಷಕರಿಗಿದೆ!!. ಇನ್ನೊಂದು ಕಿವಿಮಾತು ಮಗಳಿಗೆ ಇದೇ ಸಂದರ್ಭದಲ್ಲಿ ಹೇಳಿದರೆ ಸೂಕ್ತ ಅನಿಸಿತು.

ನೋಡು ಮಗಳೇ, ಫೊಟೋ, ಸಂಗತಿಗಿಂತ ಇನ್ನೊಂದು ಮುಖ್ಯವಾದ ವಿಷಯ ನಿನಗೆ ಹೇಳಬೇಕಿದೆ. ನೀನು ಸ್ಕೂಲಿಂದ ಹೊರಗೆ ಅಡ್ಡಾಡುವಾಗ ಅಥವಾ ಮನೆಗೆ ಹಿಂತಿರುಗುವಾಗ ಹಾದಿಯಲ್ಲಿ ಒಂಟಿಯಾಗಿ ನಡೆಯಬೇಡ. ಅಪರಿಚತ ಗಂಡಸರು ಯಾರೇ ಆದರೂ ಮಾತಾಡೋಕೆ ಹೋಗೋದಾಗಲೀ ಅವರು ಏನೇ ಕೊಟ್ಟರೂ ಸ್ವೀಕರಿಸುವುದಾಗಲೀ ಮಾಡಬೇಡ. ಮೊನ್ನೆ ಮೊನ್ನೆ ಒಂದು ಸುದ್ದಿ ಬಂತು. ಒಬ್ಬ ಅಪರಿಚಿತ ಯುವಕ ನೀಡಿದ ಚೆಂದದ ಗುಲಾಬಿಹೂವಿನ ಆಕರ್ಷಣೆಗೊಳಗಾಗಿ ಹಂತ ಹಂತವಾಗಿ ಅವನಿಗೆ ಮಾರುಹೋಗಿ ಮನೆಯವರಿಗೂ ತಿಳಿಸದೆ ಅವನೊಂದಿಗೆ ಹೋಗಿ; ಕೊನೆಗೆ  ನರಕಕೂಪಕ್ಕೆ ಬಿದ್ದ ಹುಡುಗಿ!

ಇನ್ನೊಂದು ಕೇಸು.., ಸುಳ್ಯದ ಹುಡುಗಿ ತನ್ನ ಕಾಲೇಜು ವಿದ್ಯಾರ್ಥಿಯ ಪ್ರೀತಿ-ಪ್ರೇಮಕ್ಕೆ ನಿರಾಕರಿಸಿದುದರಿಂದ ಆತನಿಂದ ಆ ಬಾಲೆ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಬಹುಷಃ ಆಕೆ ಈ ವಿದ್ಯಾರ್ಥಿಯ ಅನುಚಿತ ವರ್ತನೆಯ ಬಗ್ಗೆ ಪ್ರಾರಂಭದಲ್ಲೇ ಮನೆಯಲ್ಲೋ ಕಾಲೇಜು ಪ್ರಾಧ್ಯಾಪಕರಲ್ಲೋ ಸೂಚನೆ ನೀಡಿದ್ದರೆ ಈ ಅನಾಹುತ ತಪ್ಪಿ ಹೋಗುತ್ತಿತ್ತು ಅಲ್ವೇ?. ಈ ಮಾತುಗಳನ್ನು ನಿನ್ನ ಸ್ನೇಹಿತೆಯರೊಂದಿಗೆ ಹೇಳುವುದಲ್ಲದೆ ಅವರ ಅಮ್ಮಂದಿರಲ್ಲೂ ಹಂಚಿಕೊಳ್ಳಬೇಕೆಂದು ತಿಳಿಸು.’ ಎಂದಾಗ, ಕಿವಿಗೊಟ್ಟು ಕೇಳಿದ ಮಗಳು ‘ಖಂಡಿತ ಮರೆಯದೆ ಹೇಳ್ತೀನಮ್ಮ’ ಎಂದಾಗ; ಬೆನ್ನು ತಟ್ಟಿದಳಾ ತಾಯಿ.

– ವಿಜಯಾಸುಬ್ರಹ್ಮಣ್ಯ,ಕುಂಬಳೆ.

5 Comments on “ನೋಡಮ್ಮ ಈ ಫೊಟೋ-(ನುಡಿಮುತ್ತು-5)

  1. ಸುರಹೊನ್ನೆಯ ಹೇಮಮಾಲಾ ಅವರಿಗೆ. ಹಾಗೂ ಮೆಚ್ಚಿ ಲೈಕ್ ಕೊಟ್ಟವರಿಗೆ ಧನ್ಯವಾದ ಗಳು.

  2. ಹೆಣ್ಣು ಮಕ್ಕಳ ಪ್ರತಿ ಜಾಗ್ರತೆ , ಕಾಳಜಿ ತುಂಬಿದ ಬರಹ. ಆಧುನಿಕತೆ ಜೊತೆಗೆ ಪಾಶ್ಚಾತ್ಯಾ ಸಂಸ್ಕೃತಿಯ ಗಾಳಿ ಬೀಸುವ ಹೊಡೆತಕ್ಕೆ ಅವೆಷ್ಟು ಹೆಣ್ಣು ಮಕ್ಕಳು ತುತ್ತಾಗುತ್ತಾರೋ ಗೊತ್ತೇ ಆಗುವುದಿಲ್ಲ . ನಿಜ ಮನೆಯಲ್ಲಿ ನಾವು ಹೆತ್ತವರೂ ಸ್ವಲ್ಪ ಮಕ್ಕಳ ಪ್ರತಿ ಕಾಳಜಿ ವಹಿಸಿ ಜಾಗರೂಕತೆಯ ಮಾತುಗಳನ್ನು ಹೇಳುತ್ತಾ , ಹೆಣ್ಣು ಮಕ್ಕಳ ಮೇಲೆ ನಿಗಾ ವಹಿಸಿದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುವ ಹೆಚ್ಚಿನ ದುರಂತಗಳನ್ನು ತಪ್ಪಿಸಬಹುದು . ವಿವೇಚನಾಯುಕ್ತ ಬರಹ ಮೇಡಂ

  3. ಬರಹವನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರತಿಕ್ರಯಿಸಿದ ತಂಗಿ ನಯನಾ ಬಜಕ್ಕೂಡೆಲು ಇವರಿಗೆ ಮನಸಾ ಧನ್ಯವಾದಗಳು

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *