ಸಹಜತೆಯೇ ಸೌಂದರ್ಯ
ಗೌರವಾನ್ವಿತ ವಿದ್ವಾಂಸರೂ, ಚಿಂತನಗಾರರೂ ಆದ ಮಹನೀಯರೊಬ್ಬರ ಪ್ರವಚನ ನಡೆಯುತ್ತಿತ್ತು. ಅವರು ಹೇಳಿದ ಮಾತೊಂದು ನಮ್ಮ ಮನಸ್ಸನ್ನು ಚಿಂತನೆಗೆ ಒಡ್ಡುವಂತೆ ಮಾಡುತ್ತದೆ. `ಹತ್ತಾರುವರ್ಷ ಕಷ್ಟಪಟ್ಟು ಕಲಿತು, ತಾಳ, ಲಯಬದ್ಧವಾಗಿ ಹಾಡುವ ಸಂಗೀತ ಅಥವಾ ಮಾಡುವ ನಾಟ್ಯಕ್ಕಿಂತ ಮಿಗಿಲಾದ ಇಂಪು ಸೊಂಪು, ಕೋಗಿಲೆಯ ಕುಹೂ, ಕೋಳಿಯ ಕ್ಕೊಕ್ಕೊ, ನಾಯಿಯ ಬೌಬೌ, ಹಕ್ಕಿಗಳ ಚಿಲಿಪಿಲಿ, ಮಗುವಿನ ಅಳು, ನವಿಲಿನ ನಾಟ್ಯ, ಗಜರಾಜನ ನಡಿಗೆ, ಜಿಂಕೆಗಳ ಓಟ ಇತ್ಯಾದಿಗಳ ಸಹಜ ಸುಂದರತೆ ಹೆಚ್ಚು ಆಪ್ತವೆನಿಸುತ್ತವೆ’. ಹೌದಲ್ವಾ? ಆಳವಾಗಿ ಯೋಚಿಸಿದರೆ ಹಾಗೇ ಅನ್ನಿಸುತ್ತದೆ ನಮಗೂನೂ.
ಈಗಿನ ಆಡಂಬರ ಜೀವನದ ಭರಾಟೆಯಲ್ಲಿ ಸುಂದರತೆ ಅಥವಾ ಸೌಂದರ್ಯವು ತನ್ನ ಅರ್ಥವನ್ನೇ ಕಳಕೊಂಡಿದೆ ಎನ್ನಬಹುದು. ಎಲ್ಲೆಲ್ಲೂ ಬಾಹ್ಯಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿರುವುದು ಕಂಡುಬರುತ್ತಿದೆ. ಯೌವನಾವಸ್ಥೆಯಲ್ಲಿ ಶಾರೀರಿಕ ಸೌಂದರ್ಯವನ್ನು ಕಾಪಿಡುವಲ್ಲಿ ಕಾಣುವ ಈಗಿನ ಯುವಕ ಯುವತಿಯರ ಹೆಣಗಾಟ ನಿಜಕ್ಕೂ ಗಾಬರಿಪಡುವಂತಿದೆ. ಅತೀ ತೆಳ್ಳಗಿನ ದೇಹವೇ ಅತೀ ಸುಂದರ ಎಂಬ (ತಪ್ಪು) ಕಲ್ಪನೆಯಿಂದ ಕನಿಷ್ಟ ಆಹಾರ ಸೇವನೆ ಈಗಿನ ಫ್ಯಾಷನ್ ಆಗಿಬಿಟ್ಟಿದೆ. ಜಿಮ್, ಓಟ, ವ್ಯಾಯಾಮ ಇತ್ಯಾದಿಗಳಿಂದ ದೇಹದ ಮಿತಿಮೀರಿದ ದಂಡನೆಯು ಎಲ್ಲೆಲ್ಲೂ ಕಾಣಬರುತ್ತಿವೆ. ಸಹಜ ವಯಸ್ಸನ್ನು ಮರೆಮಾಚುವ ಹತ್ತಾರು ಸೌಂದರ್ಯವರ್ಧಕಗಳ ಜಾಹೀರಾತುಗಳಿಗೆ ಮರುಳಾಗಿ ಅವುಗಳನ್ನು ಉಪಯೋಗಿಸಲು ಮುಂದಾಗಿ, ಅದು ಬರೇ ಹುಚ್ಚುಕಲ್ಪನೆ ಎಂದು ತಿಳಿಯುವಾಗ ಸಾವಿರಾರು ರೂಪಾಯಿಗಳು ಕೈಬಿಟ್ಟು ಹೋಗಿರುತ್ತವೆ. ಬೆಳ್ಳಿತೆರೆಯ ತಾರೆಗಳ ಸೌಂದರ್ಯ, ಝಗಝಗಿಸುವ ಬೆಳಕಲ್ಲಿ ಮಿನುಗುವ ರೂಪದರ್ಶಿಗಳ ಚೆಲುವು ನಿಜವೆಂದೇ ನಂಬಿ ಮೋಸಹೋದರೂ, ಜನರು ಎಚ್ಚೆತ್ತುಕೊಳ್ಳದಿರುವುದು ದುರಂತ. ಮುಖದ ಬಣ್ಣ ಮರೆಯಾದಂತೆ ಅವರ ನಿಜರೂಪ ದರ್ಶನವಾಗುವುದು. ಅಕಾಲ ವೃದ್ಧಾಪ್ಯದ ಮುಸುಕು ಕೂಡಾ ಅವರನ್ನು ಆವರಿಸುವುದು ಸುಳ್ಳಲ್ಲ.
ಹಳ್ಳಿ ಜನರ ಮುಗ್ಧ ಚೆಲುವನ್ನು ನೋಡಿದರೆ ತಿಳಿಯುವುದು ಸೌಂದರ್ಯವೆಂದರೇನೆಂದು. ಸಹಜ ಸುಂದರ ಪ್ರಕೃತಿಯ ಮಡಿಲಿನಲ್ಲಿ ನಿಸರ್ಗದ ಕೂಸುಗಳಾಗಿ ಬೆಳೆಯುವ ಜನರಿಗೆ ಅದರ ಕಲ್ಪನೆಯೇ ಇರುವುದಿಲ್ಲ. ನಗುಮೊಗವು, ನಗುವಕಣ್ಣುಗಳು ಸೌಂದರ್ಯದ ಮೂಲಸ್ವರೂಪ ಎಂದರೂ ತಪ್ಪಾಗಲಾರದು. ಸಹೃದಯತೆ, ನಿಸ್ವಾರ್ಥಸೇವೆ, ಪರೋಪಕಾರಗಳಂತಹ ಉನ್ನತ ಗುಣಗಳನ್ನು ಹೊಂದಿರುವ ವ್ಯಕ್ತಿಯ ಸನ್ನಡತೆಗಳೇ ಆತನ ಅಂತರಂಗ ಸೌಂದರ್ಯದ ಹೆಗ್ಗುರುತುಗಳು. ಅಂತೆಯೇ ಬಾಹ್ಯಸೌಂದರ್ಯ ಎಷ್ಟೇ ಚೆನ್ನಾಗಿದ್ದರೂ, ಸಹಜ ಸೌಂದರ್ಯವೇ ಎಲ್ಲವನ್ನು ಮೆಟ್ಟಿನಿಲ್ಲುತ್ತದೆ.
-ಶಂಕರಿ ಶರ್ಮ, ಪುತ್ತೂರು.
ನಿಜˌಸರಳತನದಲ್ಲೇ ಸೌಂದರ್ಯ ಅಡಗಿದೆ.
ಸರಳ ಸುಂದರ ಲೇಖನ
ಸಹಜ ಸೌಂದರ್ಯವೇ ನಿಜವಾದ ಸೌಂದರ್ಯ, ಬಾಕಿ ಎಲ್ಲಾ ಕೃತಕ
ಬಹಳ ಸುಂದರವಾಗಿ ಸಹಜತೆಯನ್ನು ವರ್ಣಿಸಿದ್ರಿ ಮೇಡಂ, ಆಧುನಿಕತೆಯ ಭರಾಟೆಯಲ್ಲಿ ನಾವು ಪ್ರಕೃತಿಯನ್ನೇ ಮರೆತಿದ್ದೇವೆ . ಪ್ರಕೃತಿಯ ಮಡಿಲಲ್ಲೇ ಇದ್ದರೂ ಕೂಡ ಅವಳ ಉಪಸ್ಥಿತಿ ನಮಗೆ ನೆನಪಿಲ್ಲ . ಸುಂದರ ಬರಹ
ಉತ್ತಮ,ನಿಜವಾದ ವಿಷಯಗಳು ಲೇಖನದಲ್ಲಿವೆ.
ನಿಮ್ಮ ಮಾತು ನಿಜ ಯಾವಾಗಲು ಸೌಂದರ್ಯ ಅಡಗಿರುವುದು ಸಹಜತೆಯಲ್ಲಿ ಸರಳತೆಯಲ್ಲಿ
ಸುಂದರ ಲೇಖನ ಉತ್ತಮವಾದ ವಿಷಯಗಳು ಲೇಖನದಲ್ಲಿ ಇದೇ
Uttama baraha,naijate,vastava chennagi hora hommide lekhandalli.