ನೋಟಾ ಬೇಡ – ಮತದಾನ ಮಾಡಿ
ದೇಶದ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಮತದಾನಕ್ಕೀಗ ಉಳಿದಿರುವದು ಕೆಲವೇ ದಿನಗಳು ಮಾತ್ರ.ಈ ಹದಿನೈದು ದಿನಗಳಲ್ಲಿ ನಮ್ಮ ಮತದಾನಕ್ಕೆ ಅರ್ಹರು ಯಾರು?ಯಾರಿಗೆ ನಾವು ಮತ ಹಾಕಬೇಕು ಎಂದು ಯೋಚಿಸಿ ನಿರ್ಧಾರ ಕೈಕೊಳ್ಳಲು ಇದು ಸೂಕ್ತ ಸಮಯ.ಆದರೆ ಚುನಾವಣಾ ಆಯೋಗ ಈ ಸಲದ ಚುನಾವಣೆಯಲ್ಲಿ ನಿಮ್ಮ ಮತದಾನಕ್ಕೆ ಯಾರೂ ಪಾತ್ರರಿಲ್ಲದಿದ್ದರೆ ಯಾರಿಗೂ ಮತ ಹಾಕದೆ ನೋಟಾ ಗುಂಡಿ ಒತ್ತಿ ಎಂದು ಸೂಚಿಸಿರುವದು ಪ್ರಜ್ಞಾವಂತ ಮತದಾರರಲ್ಲಿ ಗೊಂದಲ ಮೂಡಿಸಿದೆ.ಇದು ಒಂದು ರೀತಿಯಲ್ಲಿ ಮತದಾರರ ಸಾಕ್ಷಿಪ್ರಜ್ಞೆಯನ್ನು ಕೆಣಕಿದಂತಿದೆ.
ನಾಡಿನ ಅಭಿವೃದ್ಧಿ ಮಾಡುವ,ಹಿತಾಸಕ್ತಿ ರಕ್ಷಿಸುವ,ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ಪ್ರಜ್ಞಾವಂತ ಮತದಾರರ ಅಪೇಕ್ಷೆ.ದೇಶದ ಪ್ರಮುಖ ರಾಜಕೀಯ ಪಕ್ಷಗಳೂ ಈಗಾಗಲೇ ಇಂಥ ಸರ್ಕಾರ ನೀಡುವ ಭರವಸೆಯನ್ನೇನೋ ಮತದಾರರಿಗೆ ನೀಡಿವೆ.ಇದರ ಜತೆಗೆ ಇತರ ಸಣ್ಣಪುಟ್ಟ ಪಕ್ಷಗಳೂ ಕೂಡ ಹಲವಾರು ಗಾಳಿಮಾತಿನ ಆಶ್ವಾಸನೆಗಳನ್ನೂ ನೀಡಿವೆ.ಆದರೆ ಈ ಎಲ್ಲ ಪಕ್ಷಗಳು ನೀಡಿರುವ ಭರವಸೆ ಅದರಲ್ಲೂ ಪ್ರಮುಖ ಪಕ್ಷಗಳು ಈ ಹಿಂದೆ ನಡೆಸಿದ ಆಡಳಿತ ಗಮನಿಸಿದರೆ ಅವುಗಳ ಆಶ್ವಾಸನೆ ಅದೆಷ್ಟರ ಮಟ್ಟಿಗೆ ಈಗಲೂ ಕಾರ್ಯಗತವಾದೀತೆಂಬ ನಿರೀಕ್ಷೆ ಮತದಾರ ಪ್ರಭುಗಳದ್ದು.
ಅಭ್ಯರ್ಥಿಗಳ ಕುರಿತಂತೆ ಮತದಾರರ ನಿರೀಕ್ಷೆ ವಿಪುಲ.ತಾವು ಬಯಸುವ ಅಭ್ಯರ್ಥಿ ಮೊದಲಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವವನಾಗಿರಬೇಕು,ಕೈಬಾಯಿಕಚ್ಚೆ ಸ್ವಚ್ಛವಿಟ್ಟುಕೊಂಡಿರುವವನಾಗಿರಬೇಕು.ತನ್ನ ಕ್ಷೇತ್ರದ ಅಭಿವೃದ್ಧಿಗೆ ಮನಸ್ಸುಗೊಟ್ಟು ಕೆಲಸ ಮಾಡುವವನಿರಬೇಕು,ಸಾರ್ವಜನಿಕರಿಗೆ ನೇರವಾಗಿ ಸಿಗುವವನಿರಬೇಕು,ಕಮಿಶನ್ ರಹಿತವಾಗಿ ಸಾರ್ವಜನಿಕರ ಕೆಲಸ ಮಾಡಿಕೊಡುವವನಾಗಿರಬೇಕುಎಂಬಿತ್ಯಾದಿ ನೂರೆಂಟು ಅಪೇಕ್ಷೆಗಳು ಅಭ್ಯರ್ಥಿಗಳ ಬಗೆಗೆ ಮತದಾರರಿಗಿವೆ.ಅದರಲ್ಲೂ ಪ್ರಜ್ಞಾವಂತ ಮತದಾರರಿಗೆ ಇಂಥ ಆಕಾಂಕ್ಷೆಗಳು ಬಹಳ.ಆದರೆ ಇಂಥ ಎಲ್ಲ ನಿರೀಕ್ಷೆಗಳ ಅಭ್ಯರ್ಥಿಗಳು ಎಲ್ಲೆಡೆ ಸ್ಪರ್ಧಾಕಣದಲ್ಲಿರುವರೆ ಎಂಬ ಸಂದೇಹ ಪ್ರಜ್ಞಾವಂತ ಮತದಾರರನ್ನು ಇದೀಗ ಕಾಡುತ್ತಿದೆ.ರಾಜ್ಯದ ಎಲ್ಲ ಮತಕ್ಷೇತ್ರಗಳಲ್ಲಿರುವ ಪಕ್ಷೇತರರೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಉಮೇದುವಾರರನ್ನು, ಅವರ ಕಾರ್ಯವೈಖರಿ,ಚರಿತ್ರೆ ನೋಡಿದಾಗ ಬೆರಳೆಣಿಕೆಯ ಕೆಲವರನ್ನು ಹೊರತುಪಡಿಸಿದರೆ ಇನ್ನುಳಿದವರು ಮತದಾರರ ಬಯಕೆಯ ನಿರೀಕ್ಷೆಗೆ ನಿಲುಕುತ್ತಿಲ್ಲ ಎಂದೆನಿಸುತ್ತದೆ.ವಸ್ತುಸ್ಥಿತಿ ಹೀಗಿರುವಾಗ ತಮ್ಮ ಅಪೇಕ್ಷೆಗೆ ಸೂಕ್ತವಾದ ಅಭ್ಯರ್ಥಿ ಯಾರೂ ಇಲ್ಲವೆಂದು ಬಹಳಷ್ಟು ಪ್ರಜ್ಞಾವಂತ ಮತದಾರರು ನೋಟಾದ ಮೊರೆ ಹೋದರೆ ಚುನಾವಣೆಯ ಬಹುಮುಖ್ಯ ಉದ್ದೇಶದ ಗತಿ ಏನೆಂದು ಚಿಂತಿಸಬೇಕಾಗುತ್ತದೆ.
ನೋಟಾದ ದುಷ್ಪರಿಣಾಮವೂ ಇದೆ.ಇದು ನೇರವಾಗಿ ಮತದಾರರ ಮೇಲೆಯೇ ಆಗುತ್ತದೆ.ನೋಟಾ ಗುಂಡಿ ಒತ್ತಿದವರು ತಮ್ಮ ದೊಡ್ಡಸ್ತನ ಪ್ರದರ್ಶಿಸಲೋ ಅಥವಾ ತಾವು ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಸೊಪ್ಪು ಹಾಕಿಲ್ಲವೆಂದು ಜಾಹೀರಪಡಿಸಲೋ ಬೇರೆಯವರ ಮುಂದೆ ನಾಲ್ಕು ಜನ ನಿಂತಲ್ಲಿ ಕೂತಲ್ಲಿ ತಾವು ನೋಟಾಕ್ಕೆ ಮತ ಹಾಕಿರುವದಾಗಿ ಹೇಳಿಕೊಳ್ಳುತ್ತಾರೆ.ಇದಕ್ಕೆ ಅವರಿಗೆ ತಕ್ಕ ಮಟ್ಟಿಗೆ ಪ್ರಚಾರವೂ ಸಿಕ್ಕಿರುತ್ತದೆ.ಮುಂದೆ ಚುನಾವಣೆ ಎಲ್ಲ ಮುಗಿದಾದ ಮೇಲೆ ನೋಟಾದವರು ತಮ್ಮ ಸ್ವಂತ ಕೆಲಸಕ್ಕೋ ಅಥವಾ ಸಾರ್ವಜನಿಕ ಕೆಲಸಕ್ಕೋ ವಿಜಯಿಯಾದ ಶಾಸಕರಲ್ಲಿ ಹೋಗಿ ತಮ್ಮ ಕೆಲಸ ಮಾಡಿಕೊಡುವಂತೆ ವಿನಂತಿಸಿದರೆ ಶಾಸಕರ ಅಕ್ಕಪಕ್ಕದಲ್ಲಿರುವವರು ಇವರು ನೋಟಾ ಮತದಾರರು ಎಂದೂ ಶಾಸಕರ ಕಿವಿಯೂದಿಬಿಡುತ್ತಾರೆ. ಹೀಗಾದಲ್ಲಿ ಆ ಐದು ವರ್ಷಗಳೂ ಈ ನೋಟಾ ಮತದಾರರು ಖಾಸಗಿ ಇರಲಿ ಸಾರ್ವಜನಿಕವಾಗಿರಲಿ ಯಾವದೇ ಕಾರ್ಯಕ್ಕೆ ಶಾಸಕರ ಸಹಾಯ ಸಹಕಾರ ಪಡೆಯದಂಥ ಪರಿಸ್ಥಿತಿ ನಿರ್ಮಾಣವಾಗಿಬಿಡುತ್ತದೆ.ಇದು ನೇರವಾಗಿ ಮತದಾರರ ಮೇಲೆಯೇ ದುಷ್ಪರಿಣಾಮ ಬೀರುವಂತಾಗುತ್ತದೆ.ಹೀಗಾಗಿ ನೋಟಾ ಗುಂಡಿ ಒತ್ತಿದವರು ತಾವು ಏಕಾದರೂ ನೋಟಾಕ್ಕೆ ಶರಣಾದೆವೆಯೋ ಎಂದು ಮರುಗುವಂತಾಗುತ್ತದೆ.
ಮತದಾನ ಪವಿತ್ರವಾದ ಕಾರ್ಯ,ಮತದಾನ ನಿಮ್ಮ ಹಕ್ಕು ಅದನ್ನು ಚಲಾಯಿಸಿಎಂದು ಒಂದೆಡೆ ಚುನಾವಣಾ ಆಯೋಗ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತ ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ಕೂಡ ವ್ಯಯಿಸುತ್ತ ಇದರ ಜತೆಗೆಯೇ ನಿಮ್ಮ ಮತದಾನಕ್ಕೆ ಅರ್ಹರಾದವರು ಯಾರೂ ಕಣದಲ್ಲಿ ಇರದಿದ್ದರೆ ನೋಟಾ ಗುಂಡಿ ಒತ್ತಿ ಎಂದೂ ಪ್ರಚಾರ ಮಾಡುತ್ತಿರುವ ಚುನಾವಣಾ ಆಯೋಗದ ಈ ಕ್ರಮ ಒಂದು ವಿಪರ್ಯಾಸವಲ್ಲದೇ ಮತ್ತೇನು?ಮತದಾನ ನಿಮ್ಮ ಹಕ್ಕು ಅದನ್ನು ಚಲಾಯಿಸಿ ಎನ್ನುವ ಚುನಾವಣಾ ಆಯೋಗ ನಿಮಗೆ ಅಪಾತ್ರರೆನಿಸಿದರೆ ಅಂಥ ಅಭ್ಯರ್ಥಿಗಳನ್ನು ತಿರಸ್ಕರಿಸಿ ಎಂದು ಕರೆ ಕೊಡುತ್ತಿರುವದರಲ್ಲಿ ಏನರ್ಥವಿದೆ?ಮತದಾರರಲ್ಲಿ ದ್ವಂದ್ವ ಹುಟ್ಟುಹಾಕುವ ಚುನಾವಣಾ ಆಯೋಗದ ಈ ಕಾರ್ಯ ಮೂರ್ಖತನದ್ದೆಂದೇ ಹೇಳಬೇಕಾಗುತ್ತದೆ.ಒಂದೆಡೆ ಮತದಾನ ಹಕ್ಕೆಂದು ತಿಳಿಹೇಳುತ್ತ ಇನ್ನೊಂದೆಡೆ ಉಮೇದುವಾರರು ಸರಿಯಾಗಿರದಿದ್ದರೆ ಅವರನ್ನು ನಿರಾಕರಿಸಿ ಎಂದು ಮತದಾರರಿಗೆ ಸಂದೇಶ ನೀಡುತ್ತಿರುವ ಚುನಾವಣಾ ಆಯೋಗದ ಇಂಥ ಕ್ರಮದ ಹಿಂದಿನ ಉದ್ದೇಶವೇನು?ಇದು ಮತದಾರರಲ್ಲಿ ಯಾವ ರೀತಿಯ ಜಾಗೃತಿ ಉಂಟು ಮಾಡುತ್ತದೆ?ಮತದಾರರಿಗೆ ಎಂಥ ಸಂದೇಶ ನೀಡುತ್ತದೆ?ಮತದಾರರಲ್ಲಿ ಗೊಂದಲ ಮೂಡಿಸಿರುವ ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗವೇ ಉತ್ತರ ನೀಡಬೇಕು,ಮತದಾರರ ಗೊಂದಲಗಳಿಗೆ ಪರಿಹಾರ ನೀಡಬೇಕು.
ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ನೋಟಾ ಅದೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡೀತು ಎಂಬ ಪ್ರಶ್ನೆ ಮೂಡುತ್ತದೆ.ಅಂತೆಯೇ ನೋಟಾದ ಬದಲು ಸೂಕ್ತ ಅಭ್ಯರ್ಥಿಯ ಆಯ್ಕೆಯೇ ಸರಿ ಎನ್ನಬೇಕಾಗುತ್ತದೆ.ಮತದಾರರ ಎಲ್ಲ ಅಪೇಕ್ಷೆಗಳಿಗೆ ನಿಲುಕುವ ಅಭ್ಯರ್ಥಿಗಳು ಕಣದಲ್ಲಿರದೇ ಇರಬಹುದು.ಆದರೆ ಕೆಲವು ಅಥವಾ ಒಂದೆರಡು ಅಪೇಕ್ಷೆಗೆ ನಿಲುಕುವ ಉಮೇದುವಾರರು ಕಣದಲ್ಲಿ ಸಿಕ್ಕೇ ಸಿಗುತ್ತಾರೆ.ಅಂಥವರಲ್ಲಿಯೇ ತಮಗೆ ಸರಿ ಕಂಡ ಸೂಕ್ತ ಎನಿಸಿದ ಓರ್ವರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮತದಾನ ಮಾಡುವದೇ ಯೋಗ್ಯ ನಿರ್ಣಯವಾಗಬಹುದು.ನೋಟಾಕ್ಕೆ ಮತ ನೀಡಿ ಅದನ್ನು ರದ್ದಾದ ಕಸದ ಬುಟ್ಟಿಗೆ ಸೇರಿಸುವದಕ್ಕಿಂತ ಕುರುಡರಲ್ಲಿ ಮೆಳ್ಳುಗಣ್ಣಿನವ ಶ್ರೇಷ್ಠ ಎಂಬಂತೆ ಇದ್ದುದರಲ್ಲೇ ಯೋಗ್ಯರಾದವರಿಗೆ ಮತದಾನ ಮಾಡುವದೇ ಸೂಕ್ತ.ಅಂತೆಯೇ ನೋಟಾ ಬೇಡ ಯಾರಿಗಾದರು ಸರಿ ಆಯ್ಕೆಯ ಅಭ್ಯರ್ಥಿಗೆ ಮತದಾನ ಮಾಡಿ.ಐದು ವರ್ಷಕ್ಕೊಮ್ಮೆ ದೊರೆಯುವ ಈ ಪವಿತ್ರ ಹಕ್ಕನ್ನು ಕಳೆದುಕೊಳ್ಳದೆ ಮತದಾನ ಮಾಡುವದೇ ಸಮರ್ಪಕ ಕ್ರಮವಾಗುವದರಲ್ಲಿ ಸಂದೇಹವಿಲ್ಲ.ನೋಟಾ ಗುಂಡಿ ಒತ್ತಿ ತಮ್ಮ ಅಮೂಲ್ಯ ಮತವನ್ನು ಯಾವುದಕ್ಕೂ ಪ್ರಯೋಜನವಿಲ್ಲದ ಕಸದ ಬುಟ್ಟಿಗೆ ಸೇರಿಸುವದಕ್ಕಿಂತ ಇದ್ದುದರಲ್ಲೇ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಹಾಕಿ ಮತದಾನದ ಹಕ್ಕು ಕರ್ತವ್ಯ ಪಾಲಿಸುವದೇ ಒಳಿತು.
ಈ ದಿಶೆಯಲ್ಲಿ ಬೆಂಗಳೂರಿನ ಸಮರ್ಥ ಭಾರತ ಟ್ರಸ್ಟ ನೋಟಾ ಆಯ್ಕೆ ಬೇಡ ಕುರಿತು ಮತದಾರರಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.ಇದರ ನಾಲ್ಕು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಹೊಸ ಮತದಾರರೂ ಸೇರಿದಂತೆ ಎಲ್ಲರಲ್ಲೂ ಮತದಾನ ನಿಮ್ಮ ಹಕ್ಕು ಮತ ಚಲಾಯಿಸಿಎಂದು ಮನವಿಸುತ್ತಿದ್ದಾರೆ.ಇದು ರಾಜ್ಯದಲ್ಲೆಡೆ ನಡೆಯುವ ಅಗತ್ಯವಿದೆ.ಮತದಾನದ ಕುರಿತು ಸಕಾರಿ ಅಧಿಕಾರಿಗಳು ನಡೆಸುತ್ತಿರುವ ಮತ ಜಾಗೃತಿ ಕಾರ್ಯಕ್ರಮದಲ್ಲಿ ನೋಟಾ ಬೇಡ ಎಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕೆಲಸವೂ ಆಗಬೇಕು.ರಾಜಕೀಯ ಪಕ್ಷಗಳು ಕೂಡ ತಮಗೆ ಮತ ಕೇಳುವದರ ಜತೆಗೆ ನೋಟಾ ಗುಂಡಿ ಒತ್ತದಂತೆಯೂ ಮತದಾರರಿಗೆ ಸೂಚಿಸಬೇಕು.ನೋಟಾ ಬೇಡ ಒಂದು ಜನಾಂದೋಲನವಾಗಿ,ಒಂದು ರಾಷ್ಟ್ರೀಯ ಸಂದೇಶವಾಗಿ ರೂಪುಗೊಳ್ಳಬೇಕಾಗಿರುವದು ಈಗಿನ ತುರ್ತು ಅವಶ್ಯಕತೆಯೂ ಹೌದು.
– ಪ್ರಕಾಶ ದೇಶಪಾಂಡೆ, ಹುಕ್ಕೇರಿ
ಸಾಂದರ್ಭಿಕ, ಅರ್ಥಪೂರ್ಣ ಬರಹ.
ಸಾಂದರ್ಭಿಕ ವಿವರಣಾತ್ಮಕ ಬರಹ ಚೆನ್ನಾಗಿದೆ
ಸದ್ಯದ ಪರಿಸ್ಥಿತಿಯಲ್ಲಿ ಸಕಾಲಿಕ ಅನಿಸುವಂತಹ ಬರಹ , ನೈಸ್ . ಸಾಕಷ್ಟು ವಿಷಯಗಳನ್ನೊಳಗೊಂಡಿದೆ.