ಏಪ್ರಿಲ್ ಫೂಲ್
ಏಪ್ರಿಲ್ ತಿಂಗಳು ಬರುತ್ತದೆ ಎಂದಾದ ಕೂಡಲೇ ಒಂದು ಘಟನೆ ಯಾವತ್ತೂ ಮರೆಯಾಗದಂತೆ ನೆನಪಾಗುತ್ತದೆ. ಅದು ಎಂತಹುದು ಎಂದರೆ ನಗುವಿನ ನಡುವೆಯೂ ಅಳು ತರಿಸುವಂತದ್ದು .
ಅಂದು ನಮ್ಮ ಮನೆಯಲ್ಲಿ ಸಂಭ್ರಮ , ಸಡಗರ . ಗಂಡನ ಮನೆ ಸೇರಿದ್ದ ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ಬೇಸಿಗೆ ರಜೆ ದೊರೆತು ತವರು ಮನೆಗೆ ಬರುವ ಸಂತಸದ ವಾತಾವರಣ . ಎಲ್ಲರೂ ಖುಷಿಯಾಗಿ ಇದ್ದೆವು . ಮನೆ ತುಂಬಾ ಹಬ್ಬದ ವಾತಾವರಣ.
ಆ ದಿನ ಏಪ್ರಿಲ್ ಒಂದನೇ ತಾರೀಖು ಎಂಬುವುದು ಈ ಸಡಗರದಲ್ಲಿ ಮರೆತು ಹೋಗಿತ್ತು . ಹೀಗೆಯೇ ಹರಟೆ , ನಗುವಿನಲ್ಲಿ ಮುಳುಗಿದ್ದಾಗ ಒಂದು ಫೋನ್ ಕರೆ ಬಂತು. ನನ್ನ ದೊಡ್ಡ ಅತ್ತಿಗೆಯ ಮಗಳು ಅದನ್ನು ರಿಸೀವ್ ಮಾಡಿ ಮಾತನಾಡಿ ಇಟ್ಟಳು. ಆ ಮೇಲೆ ತುಂಬಾ ಸಪ್ಪೆ ಮೋರೆ ಮಾಡಿಕೊಂಡು ನನ್ನ ಬಳಿ ಬಂದಳು. ಏನು ವಿಷಯ ಎಂದು ಕೇಳಿದ್ರೆ ಮೊದಲು ಹೇಳಲಿಲ್ಲ . ಬಹಳ ನೋವಿನಲ್ಲಿರುವಂತೆ ಕಂಡಳು. ಏನಾಯಿತು ಹೇಳು ಅಂತ ಗದರಿಸಿ ಕೇಳುವಾಗ ಹೆದರುತ್ತಲೆ ಮಾಮನಿಗೆ (ನನ್ನ ಗಂಡ) ಆಕ್ಸಿಡೆಂಟ್ ಆಗಿದೆ, ತುಂಬಾ ಪೆಟ್ಟಾಗಿದೆ, ಸೀರಿಯಸ್ ಅಂತೆ ಅಂದಳು . ಆ ಕ್ಷಣ ನಾನು ಶಾಕ್ ಗೆ ಒಳಗಾದೆ . ಅತ್ತೆ , ಅತ್ತಿಗೆಯಂದಿರು ಯಾರಿಗೂ ಏನಾಗುತ್ತಿದೆಯೆಂದು ಗೊತ್ತಾಗಲಿಲ್ಲ . ನಾನು ಪೂರ್ತಿಯಾಗಿ ಪ್ರಜ್ಞೆ ಕಳೆದುಕೊಂಡಂತೆ ಆಗಿದ್ದೆ . ಯಾರಲ್ಲಿ ಏನು ವಿಚಾರಿಸುವುದೆಂದು ಯಾರಿಗೂ ತಲೆಗೆ ಹೋಗಲಿಲ್ಲ ಆ ಕ್ಷಣ. ಆದರೂ ನಾನು ಎಚ್ಛೆತ್ತು ನನ್ನ ಗಂಡನ ಸ್ನೇಹಿತರ ಫೋನ್ ನಂಬರ್ ಹುಡುಕಿ ಫೋನ್ ಮಾಡಲು ಹೊರಟೆ.
ಅಷ್ಟು ಹೊತ್ತಿಗೆ ಆ ಹುಡುಗಿ ಪೂರ್ತಿಯಾಗಿ ಹೆದರಿಕೊಂಡು ಬಿಟ್ಟಿದ್ದಳು. ನಮ್ಮ ಸ್ಥಿತಿ ನೋಡಿ ತಪ್ಪು ಮಾಡಿದೆ ಅನ್ನಿಸಿತು ಅವಳಿಗೆ. ಆದರೆ ನಿಜ ಹೇಳಲೂ ಭಯ ಎಲ್ಲರೂ ಸೇರಿ ತನ್ನನ್ನು ಇನ್ನು ಏನು ಮಾಡಿ ಬಿಡುತ್ತಾರೋ ಎಂದು.ಆದರೂ ಅತ್ತಿಗೆ ಜೋರು ಮಾಡಿ ಕೇಳುವಾಗ ಮತ್ತು ನಾನು ಇವರ ಸ್ನೇಹಿತರಿಗೆ ಕರೆ ಮಾಡಲು ಹೊರಟಿದ್ದನ್ನು ಕಂಡು ನಿಜ ಹೇಳದೆ ಅವಳಿಗೆ ಬೇರೆ ದಾರಿ ಇರಲಿಲ್ಲ. ಅವಳು ಹೆದರುತ್ತಲೇ ಇಲ್ಲ ಅತ್ತೆ ಮಾವನಿಗೆ ಏನೂ ಆಗಲಿಲ್ಲ. ಅವರು ಹುಷಾರಾಗಿದ್ದಾರೆ, ನಾವು ನಿಮ್ಮನ್ನೆಲ್ಲ ಫೂಲ್ ಮಾಡಲು ಹೀಗೆಲ್ಲ ಆಟ ಆಡಿದೆವು ಅಂದಳು.
ಆ ಕ್ಷಣ ಅವಳ ಮೇಲೆ ಸಿಟ್ಟು ಮಾಡಿಕೊಳ್ಳಬೇಕೋ , ಅಳಬೇಕೊ ಒಂದೂ ಗೊತ್ತಾಗದೆ ಬೆಪ್ಪಾದೆ .ಅತ್ತಿಗೆ ಅವಳನ್ನು ಹಿಡ್ಕೊಂಡು ಚೆನ್ನಾಗಿ ಚಚ್ಚಿದರು . ಆವಾಗ ಅವಳು ಮಾವ ಕೂಡ ನಮ್ಮ ಜೊತೆ ಇದ್ದಾರೆ ಹೀಗೆ ಮಾಡೋದ್ರಲ್ಲಿ ಅಂದಳು ಅಳುತ್ತಾ. ಫೋನ್ ಮಾಡಿ ನನ್ನ ಗಂಡನನ್ನು ಮನೆಗೆ ಕರಿಸಿ ಇಬ್ಬರು ಅಕ್ಕಂದಿರೂ ಚೆನ್ನಾಗಿ ತದುಕಿದರು ತಮ್ಮನನ್ನು , ಕಿವಿ ಹಿಂಡಿದರು , ನಾನಂತೂ ಸಿಟ್ಟಿನಿಂದ ದೂರ ತಳ್ಳಿ ಬಿಟ್ಟೆ ಅವರನ್ನು . ಆದರೂ ಕೊನೆಗೆ ಅವರು ಓಲೈಸುವ ರೀತಿಗೆ ಕರಗಿ ಅವರ ಎದೆಗೊರಗಿ ನನ್ನ ನೋವನ್ನೆಲ್ಲಾ ಅಳುವಿನ ರೂಪದಲ್ಲಿ ಹೊರ ಹಾಕಿದೆ.ಅವರು ಕ್ಷಮೆ ಕೇಳಿ ತುಂಬಾ ಪ್ರೀತಿಯಿಂದ ನನ್ನ ಸಂತೈಸಿದರು .
ಈ ಒಂದು ಘಟನೆಯನ್ನು ಈಗಲೂ ಸಹ ಎಲ್ಲರೂ ನೆನಪಿಸಿಕೊಂಡು ನಗುತ್ತೇವೆ. ನನ್ನ ಸೊಸೆಯಂತೂ ಏಪ್ರಿಲ್ ಫಸ್ಟ್ ಗೆ ಎಷ್ಟೇ ಬಿಝಿ ಇದ್ದರೂ ಆ ಒಂದು ದಿನ ಫೋನ್ ಮಾಡಿ ಗಂಟೆ ಗಟ್ಟಲೆ ಮಾತನಾಡುತ್ತಾಳೆ . ಆ ಘಟನೆಯನ್ನು ನೆನಪಿಸಿಕೊಂಡು ಇಬ್ಬರೂ ನಗುತ್ತೇವೆ . ಈ ಘಟನೆಯ ನಂತರ ಅವಳು ಯಾವತ್ತೂ ಯಾರನ್ನೂ ಫೂಲ್ ಮಾಡಲೇ ಇಲ್ಲ.
ಒಂದು ರೀತಿಯಲ್ಲಿ ಈ ಘಟನೆ ಕೆಟ್ಟದೆನಿಸಿದರೂ ಎಲ್ಲೋ ಒಂದು ಕಡೆ ನಮ್ಮೆಲ್ಲರನ್ನೂ ಒಂದು ಜೇನು ಗೂಡಂತೆ ಬೆಸೆದಿದೆ . ಈ ಘಟನೆಯಿಂದ ಪರಸ್ಪರರ ಮನಸ್ಸನ್ನು ಅರಿತೆವು . ಪ್ರೀತಿ ಏನೆಂದು ಅರ್ಥವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಮನಸುಗಳ ನಡುವಿನ ಅನುಬಂಧ ಗಟ್ಟಿಗೊಂಡಿತು .
ಮೂರ್ಖರ ದಿನದಂದು ಎಲ್ಲರನ್ನೂ ಮೂರ್ಖರನ್ನಾಗಿಸುವುದು ತಪ್ಪಲ್ಲ. ಆದರೆ ಅದು ಎಲ್ಲೂ ತನ್ನ ಮಿತಿಯನ್ನು ದಾಟದಿರಲಿ. ಬೇರೆ ಅನಾಹುತಗಳಿಗೆ ದಾರಿಯಾಗದಿರಲಿ .
– ನಯನ ಬಜಕೂಡ್ಲು
ಬರಹ ಓದುತ್ತಾ ಕೊನೆಯಲ್ಲಿ ಏನೂ ತೊಂದರೆ ಆಗಲಿಲ್ಲ ಎಂದು ತಿಳಿದು ಸಮಾಧಾನವಾಯಿತು.
ಹೌದು..ಕೆಲವೊಮ್ಮೆ ತಮಾಷೆಯೂ ನಮ್ಮನ್ನು ತಬ್ಬಿಬ್ಬಾಗಿಸುತ್ತದೆ! ಸಕಾಲಿಕ ಬರಹ ಚೆನ್ನಾಗಿದೆ