ಊರಿನ ಮಹಾನುಭಾವರು (ನುಡಿಮುತ್ತು-1)
ಅನುಭವ ಮುತ್ತು-1
ನಾನು ಬಾಲ್ಯದಲ್ಲಿ ಏಳನೇ ತರಗತಿ ತನಕ ನನ್ನಜ್ಜನ ಮನೆ ಎಡನಾಡು ಗ್ರಾಮದ ಕಾರಿಂಜ ಹಳೆಮನೆ ಕೇಶವ ಭಟ್ಟರ ಮನೆಯಿಂದ(ಅವರು ನನ್ನಜ್ಜ) *ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು* ಶಾಲೆಗೆ ಹೋಗಿ ಅಲ್ಲಿ ನನ್ನ ಪ್ರಾಥಮಿಕ ವಿದ್ಯಾಭ್ಯಾಸ..
ನಾನು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಕಾಲ. ನನ್ನ ಕ್ಲಾಸ್ ಟೀಚರು ಶ್ರೀ ನಾರಾಯಣ ಮಾಸ್ಡ್ರು. ಅಲ್ಲೇ ಸಮೀಪದ ಚೂಕ್ರಿ ಯವರು. ಒಂದು ದಿನ ಹೋಮ್ ವರ್ಕ್ ಗೆ ಅವರು “ನಮ್ಮ ಊರಲ್ಲಿ ಮಹಾನುಭಾವರು(ದೊಡ್ಡ ವ್ಯಕ್ತಿ) ಯಾರು?, ಮತ್ತು ಯಾಕೆ? ಎಂಬ ಬಗ್ಗೆ ನಾಲ್ಕು ಸಾಲು ಬರೆದು ತನ್ನಿ.” ಎಂದರು.
ನಾನು ಎಂದಿನಂತೆ ಸಂಜೆ 4 ಗಂಟೆಗೆ ಮನೆಗೆ ಬಂದು ಕಾಫಿ-ತಿಂಡಿಯಾಗಿ ಕೋಪಿ ಬರೆವುದು ಮುಗಿಸಿದೆ. ನೋಟ್ ಬುಕ್ ಹಾಗೂ ಪೆನ್ಸಿಲು ಹಿಡಿದುಕೊಂಡು ಅಲ್ಲಿಯ ಚಾವಡಿ ಬಾಜರ ಹಲಗೆಯಲ್ಲಿ ಕುಳಿತು ಏನು ಬರೆಯಲಿ…! ಎಂದು ಯೋಚಿಸುತ್ತಾ ಇದ್ದೆ. ಅಷ್ಟರಲ್ಲಿ ನನ್ನ ಅಜ್ಜ ನೋಡಿದವರು “ಎಂತಾ ವಿಜಯ.., ಆಗಳೇಕೆಪ್ಪಟೆಲಿ ಪೆನ್ಸಿಲು ಮಡಗೆಂಡು ಆಲೋಚನೆ ಮಾಡ್ತು ಕಾಣುತ್ತು !” ಕೇಳಿದರು.
ನಾನು ಅಳುಕುತ್ತಾ,”ಅಜ್ಜಾ .. ನಾರಾಯಣ ಮಾಸ್ಟ್ರು ನಮ್ಮೂರಿನಲ್ಲಿ ಮಹಾನುಭಾವರು ಯಾರು? ಯಾಕೆ ಹೇಳಿ ನಾಲ್ಕು ಸಾಲು ಬರದು ತಪ್ಪಲೆ ಹೇಳಿದ್ದವು. ಬರೆಯದ್ರೆ ಬಯಿಗವು. ಎಂತಬರೆಕೂಳಿ ಗೊಂತಾವುತ್ತಿಲ್ಲೆ “. ಎಂದೆ. ಅಜ್ಜ ತುಸು ಯೋಚಿಸಿ..
“ಹಾಂಗೋ.. ನಾಳೆ ಉದಿಯಪ್ಪಗ ಆನು ಏಳ್ಸುವಗ ಏಳೆಕ್ಕು. ಎದ್ದರೆ ಹೇಳುವೆ. ಈಗ ಹೇಳ್ತಿಲ್ಲೆ.” ಎಂದರು.
ಏಳದೆ ಇದ್ರೆ ನನ್ನ ಕೆಲಸ ಆಗಬೇಡವೇ ! “ಹೂಂ..ಆತು ಅಜ್ಜಾ.. ನಿಂಗೊ ಏಳ್ಸುವಗ ಏಳುವೆ ” ಎಂದೆ.
ನಿತ್ಯದಂತೆ ರಾತ್ರಿ ಊಟ ಮುಗಿದು ಒಂಭತ್ತು ಗಂಟೆಗೆಲ್ಲ ಎಲ್ಲರೂ ಮಲಗಿಯಾಯ್ತು. ಎಂದಿನಂತೆ.ನನಗೆ ಬೇಗನೆ ನಿದ್ದೆ ಬರಲೊಲ್ಲದು!. ಬೆಳಗ್ಗೆ ಅಜ್ಜ ಕರೆಯುತ್ತಾರೋ ಇಲ್ಲವೋ ನಾನು ಮಾಸ್ಟ ಹತ್ರಂದ ಬೈಗುಳ+ ಪೆಟ್ಟು ತಿನ್ನಬೇಕಾದೀತೋ ಹೇಳಿದಂತೆ ಮಾಡದಿದ್ರೆ …..! ಅವರಿಗೆ ಸಿಟ್ಟು ಜಾಸ್ತಿ.. ನಾನು ಈ ತನಕ ಪೆಟ್ಟು ತಿನ್ನದವಳು. ಪೆಟ್ಟು ಬಿದ್ದರೆ.. ತರಗತಿಯಲ್ಲಿ ಉಳಿದವರು ನೋಡಿ ನಗಬಹುದು…! ಇದೇ ಯೋಚನೆಯಲ್ಲಿ ನಿದ್ದೆ ಬರುವಾಗ ತುಂಬಾ ಹೊತ್ತಾಯಿತು.
ಬೆಳಗ್ಗೆ ಆರು ಗಂಟೆಗೆ ಅಜ್ಜ… ನನ್ನೆಡೆಗೆ ಬಂದು “ವಿಜಯಾ .ಏಳು..ಏಳು.ಬೇಗ ಮೋರೆ ತೊಳಕ್ಕೊಂಡು ನಿನ್ನ ನೋಟು ಬುಕ್, ಪೆನ್ಸಿಲು ತೆಕ್ಕಂಡು ಬಾ..ಎನ್ನೊಟ್ಟಿಂಗೆ ” ಎಂದರು. ಅಜ್ಜ ಹೇಳಿದಂತೆ ಮಾಡಿದೆ.
ಅಜ್ಜ ದನಗಳ ಹಟ್ಟಿಗೆ ಹೋದರು. ನಾನು ಹಿಂಬಾಲಿಸಿದೆ. ಅಲ್ಲಿ ಎಂದಿನಂತೆ ಗದ್ದೆ ಉಳುವ ಐತ್ತಪ್ಪ ಮೂಲ್ಯ ಎತ್ತುಗಳಿಗೆ ಮಡ್ಡಿ ಕೊಟ್ಟು ಅವುಗಳನ್ನು ಹಗ್ಗ ಸಮೇತ ಬಿಡಿಸುತ್ತಾ ಹಟ್ಟಿ ಬಾಗಿಲು ತೆಗೆದು ಅವುಗಳ ಜೊತೆ ಹೊರಗೆ ಹೋದ. ಗದ್ದೆಉಳುವುದಕ್ಕೆ. ಎತ್ತುಗಳನ್ನೊಯ್ಯುವಾಗ ಅಜ್ಜನೂ ಹೋಗಿ ಬರುವುದು ಕೆಲವೊಮ್ಮೆ ಕಂಡಿದ್ದೆ. ಈಗ ಅಜ್ಜ ” ಬಾ…ವಿಜಯ ನೀನುದೆ ” ಎಂದರು.
ನನ್ನ ಮನಸ್ಸಲ್ಲಿ ತಳಮಳವಾಯ್ತಾದರೂ ತೋರಿಸಿಕೊಳ್ಳದೆ ಹೆದರುತ್ತಾ ಹೋದೆ. ಅವರ ಹಿಂದೆ *ಬಾಕಿಮಾರು* ಗದ್ದೆಗೆ.,. ಐತ್ತಪ್ಪ “ಈ ಕುಞ್ಣಕ್ಕೆ ದಾಯೆ ಬೊಳುಪುಗೇ ಕಂಡತ ಬರಿಕ್ ! (ಈ ಸಣ್ಣಕ್ಕ ಯಾಕೆ ಬೆಳಗ್ಗೆಯೇ ಗದ್ದೆಯ ಕಡೆ ಬಂದಿದ್ದು?) ” ಕೇಳಿದ..
“ಈ ನಿನ್ನ ಕೆಲಸ ಮಾಳ್ಪು.ಬುಕ್ಕೊ ಪಣ್ಪೆ (ನೀನು ನಿನ್ನ ಕೆಲಸ ಆರಂಭಿಸು, ಆಮೇಲೆ ಹೇಳುವೆ). ಹೇಳಿದರು ಅಜ್ಜ..
(PC:ಸಾಂದರ್ಭಿಕ ಚಿತ್ರ : ಅಂತರ್ಜಾಲ)
ಅಲ್ಲಿ ಐತ್ತಪ್ಪ ಮೂಲ್ಯ ನೊಗ ನೇಗಿಲಿಗೆ ಎತ್ತುಗಳನ್ನು ಕಟ್ಟಿ ಉಳುವುದಕ್ಕೆ ಪ್ರಾರಂಭಿಸಿದ.
“..ಭತ್ತ ಬೆಳೆಯುವುದಕ್ಕೆ ಗದ್ದೆ ಉಳುವ ಐತ್ತು ಮೂಲ್ಯನೂ ಹೂಡುತ್ತಿರುವ ಎತ್ತುಗಳೂ ಮಹಾನುಭಾವರು. ಯಾಕೆಂದರೆ.. ಭತ್ತದಿಂದ ಅಕ್ಕಿ, ಅಕ್ಕಿಯಿಂದ ಅನ್ನ..ಅನ್ನವೇ ನಮ್ಮ ಜೀವನಾಧಾರ ..ಅದ್ದರಿಂದ ಅವರೇ ಊರಲ್ಲಿ ಮಹಾನುಭಾವರು ….” ಹೇಳಿ ಬರೆ. ಅಷ್ಟು ಸಾಕು. ” ಎಂದರು ಅಜ್ಜ.
ನಾನು ಲಗುಬಗೆಯಿಂದ ಬರೆದು ಮನೆಗೋಡಿ ಪುಸ್ತಕ, ಪೆನ್ಸಿಲು ಚೀಲದಲ್ಲಿ ತುರುಕಿದೆ. ಎಂದಿನಂತೆ ತಿಂಡಿ-ಕಾಫಿ ತೀರ್ಸಿ ಶಾಲೆಗೆ ಹೋದೆ. ( ಅಲ್ಲಿಂದ ಶಾಲೆಗೆ ಐದು ನಿಮಿಷದ ದಾರಿ). ಕ್ಲಾಸಲ್ಲಿ ಮಾಸ್ಟ್ರು ಕೇಳುವಾಗ ನಾನು ಬರೆದುದನ್ನು ತೋರಿಸಿದೆ. ನೋಡಿದ ನಾರಾಯಣ ಮಾಸ್ಟ್ರಿಗೆ ಬಹು ಮೆಚ್ಚುಗೆಯಾಯ್ತು… , ಅವರು ಕರೆದು ನನಗೆ ಒಂದು ಹೊಸ ಪೆನ್ಸಿಲು ಕೊಟ್ಡು ಬೆನ್ನು ತಟ್ಟಿ ಹೊಗಳಿದರು.
ಉಳಿದವರೆಲ್ಲರೂ ಬಹುಮಾನ ದೊರೆತ ನನ್ನ ಹೊಸ ಪೆನ್ಸಿಲು ನೋಡಲು ಮುಂದೆ ಬಂದಾಗ ನನಗೆ ಮನದೊಳಗೆ ಹೆಮ್ಮೆಯಾಯ್ತು. ಮತ್ತೆ ಅಜ್ಜನಿಗೆ , ಬಾವಂದಿರಿಗೆ.., ನನ್ನ ಪಾರಿತೋಷಕ ತೋರಿಸುವ ಆತುರ ಬಲವಾಯ್ತು. ಅಂತೂ ಊರಿನ ಮಹಾನುಭಾವರು ದೊರಕುವುದರೊಂದಿಗೆ ನನಗೆ ಬಹುಮಾನವೂ ದೊರಕಿತು.
( ಈ ಬರಹದಲ್ಲಿ ಲೇಖಕಿಯವರ ಮಾತೃಭಾಷೆಯಾದ ಹವಿಗನ್ನಡ ಹಾಗೂ ಕರಾವಳಿಯ ತುಳು ಭಾಷೆಯ ಕೆಲವು ಸಾಲುಗಳಿವೆ. ಬರಹದ ಸಹಜತೆ ಇರಲಿ ಎಂಬ ಉದ್ದೇಶದಿಂದ, ಆ ಸಾಲುಗಳನ್ನು ಹಾಗೆಯೇ ಪ್ರಕಟಿಸಲಾಗಿದೆ – ಸುರಹೊನ್ನೆ)
-ವಿಜಯಾಸುಬ್ರಹ್ಮಣ್ಯ, ಕುಂಬಳೆ
ಬರಹ ಮನತಟ್ಟಿತು
ಚೆನ್ನಾಗಿದೆ , ಗ್ರಾಮೀಣ ಪ್ರಾಂತ್ಯದ ಸೊಗಡು ತುಂಬಿದೆ ಬರಹದಲ್ಲಿ . ಗದ್ದೆ, ಎತ್ತು , ಬೇಸಾಯ ಹೀಗೆ ಕೃಷಿಗೆ ಸಂಬಂಧ ಪಟ್ಟ ವಿಷಯಗಳು ಮನಸಿಗೆ ಬಹಳ ಸಂತಸವನ್ನುಂಟು ಮಾಡುವ ವಿಚಾರಗಳು .
ಮುಗ್ದ ಮನಸಿನ ನಿರೂಪಣೆ..ಚೆಂದ ಚೆಂದ..
ಅಧ್ಯಾಪಕರದೂ ದೊಡ್ಡ ಮನಸ್ಸು ಅಲ್ವಾ?ಇಲ್ಲದಿದ್ದರೆ ಮುಖಂಡರು ಅಂದರೆ ರಾಜಕಾರಣಿಗಳು ಅಥವಾ ನೇತಾರರು ಎಂದು ಹೇಳುತ್ತಿದ್ದರೋ ಏನೋ?
ಪ್ರಥಮವಾಗಿ ಸುರಹೊನ್ನೆಯ ಹೇಮಮಾಲಾ ಅವರಿಗೆ ಕೃತಜ಼್ಜತೆ ಹೇಳುತ್ತಾ ಶೃತಿಶರ್ಮ, ನಯನಬಜಕ್ಕೂಡ್ಲು ,ವಿಜಯಲಕ್ಷ್ಮಿ ಪಟವರ್ಧನ ಮೊದಲಾದ ಎಲ್ಲ ತಂಗಿಯರಿಗೂ ಧನ್ಯವಾದಗಳು.
ಹಳ್ಳಿ ಸೊಗಡಿನ ಸುಂದರ ಬರಹ.