ಮಹಿಳಾ ಸಾಧಕಿ-ರೇಖಾ
ಧಾರವಾಡದ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರವ ರೇಖಾ ಓರ್ವ ಪ್ರತಿಭಾವಂತ ಶಿಕ್ಷಕಿ,ಅಂಧತ್ವದ ಶಾಪಕ್ಕೆ ಬಲಿಯಾದರೂ ಅವರ ಜೀವನ ಹಲವಾರು ಜನರಿಗೆ ಪ್ರೇರಣೆ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಜನಿಸಿದ ರೇಖಾಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷವಿತ್ತು. ತಂದೆ ಬೇಗನೇ ತೀರಿಹೋದದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಇವರ ತಾಯಿಯ ಮೇಲೇ ಬಿದ್ದಿತ್ತು.ಉಪ್ಪಿನಕಾಯಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ಅವರು ತಮ್ಮ ಮೂರು ಮಕ್ಕಳನ್ನು ಬೆಳೆಸಿದರು,ಅವರಲ್ಲಿ ರೇಖಾ ಒಬ್ಬರು.
ರೇಖಾ.ಊರಿನವರೊಬ್ಬರ ಸಹಾಯದಿಂದ ಬೆಂಗಳೂರು ರಾಮನಗರದಲ್ಲಿರುವ ಬಾಲಗಂಗಾಧರ ಅಂಧರ ಶಾಲೆಯಲ್ಲಿ ಬೈಲ್ ಲಿಪಿ ಕಲಿತು ಹತ್ತನೇ ತರಗತಿ ವರೆಗೆ ಓದಿದರು, ಮೈಸೂರು ಜೆ ಎಸ್ ಎಸ್ ಕಾಲೇಜಿನಲ್ಲಿ ಡಿಪ್ಲೋಮಾ ಪದವಿ ಪಡೆದರು, ಕಲಿಕೆಯುದ್ದಕ್ಕೂ ಒಂದೇ ಕಾಲಿನ ಸ್ನೇಹಿತೆ ಮಂಜುಳಾ, ರೇಖಾಗೆ ಕಣ್ಣಾದಳು, ಮಂಜುಳಾಗೆ ರೇಖಾ ಊರುಗೋಲಾಗಿದ್ದಳು, ಇಬ್ಬರೂ ಸೇರಿ ಇಡೀ ಮೈಸೂರು ಸುತ್ತುತ್ತಿದ್ದೆವು ಎಂದು ರೇಖಾ ನೆನಪಿಸಿಕೊಳ್ಳುತ್ತಾರೆ.
ಅದೇ ಸಮಯದಲ್ಲಿ ಬೆಂಗಳೂರು ಮೂಲದ ಸಮರ್ಥನಂ ಸಂಸ್ಥೆ 2009 ರಲ್ಲಿ ಧಾರವಾಡದಲ್ಲಿ ಸೇವಾಕಾರ್ಯ ಆರಂಭಿಸಿತ್ತು. ಹುಬ್ಬಳ್ಳಿ ಧಾರವಾಡ ಹಾಗು ಸುತ್ತುಮುತ್ತಲಿನ ವಿಕಲಚೇತನ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಬರಹತ್ತಿದರು,ಇವರಲ್ಲಿ ಅಂಧರಿಗೆ ರೇಖಾ ಕಂಪ್ಯೂಟರ್ ತರಬೇತಿದಾರರಾಗಿ ಕೆಲಸಕ್ಕೆ ಸೇರಿದರು.ಆರಂಭದಲ್ಲಿ ಅಂಧರಿಗೆ ಮಾತ್ರ ಕಂಪ್ಯೂಟರ್ ತರಬೇತಿ ನೀಡುತ್ತಿದ್ದರು,ಈಗ ಎಲ್ಲ ವಿದ್ಯಾರ್ಥಿಗಳಿಗೆ ರೇಖಾ ಮಾರ್ಗದರ್ಶಕಿಯಾಗಿದ್ದಾರೆ, ಅವರು ತಮ್ಮ ಕಲಿಸುವ ಶೈಲಿಯಿಂದ ಎಲ್ಲ ವಿದ್ದಾರ್ಥಿಗಳ, ತರಬೇತಿದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಲೇಖಕರು ಸಮರ್ಥನಂ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿದ್ದು ರೇಖಾ ಅವರ ಅಗಾಧ ಪ್ರತಿಭೆಗೆ ಪ್ರತ್ಯಕ್ಷ ಸಾಕ್ಷಿ.
ತಮ್ಮ ಉದ್ಯೋಗದ ನಡುವೆಯೂ ರೇಖಾ ಅವರು ಮುಂದೆ ಬಾಹ್ಯ ವಿದ್ಯಾರ್ಥಿಯಾಗಿ ಓದಿ ಬಿಎ ಪದವಿ ಪಡೆದರು.ಹೀಗೆ ತಮ್ಮ ಅಂಧತ್ವದ ಮಧ್ಯೆಯೂ ಕಷ್ಟಪಟ್ಟು ದುಡಿಯುತ್ತಾ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ, ವೃಧ್ಧಾಪ್ಯದಲ್ಲಿರುವ ತಾಯಿಯವರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
-ಮಾಲತೇಶ ಎಂ ಹುಬ್ಬಳ್ಳಿ
ಅಂಗವಿಕಲತೆಗೆ ಸವಾಲೆಸೆಯುವಂತೆ ಸ್ವಪ್ರಯತ್ನದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿರುವ ರೇಖಾ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.
ಮನದ ಬೆಳಕಿನ ಮುಂದೆ ಕಣ್ಣ ಕತ್ತಲೆಯು ಯಾವ ಲೆಕ್ಕ!…ಧೀಮಂತ ಮಹಿಳೆ ರೇಖಾರವರಿಗೆ ಶುಭಾಶಯಗಳು . ಅರ್ಥಪೂರ್ಣ ಲೇಖನ.
ಧನ್ಯವಾದಗಳು
ಅಂಧತ್ವ ಎನ್ನುವುದು ಇಲ್ಲಿ ಬಾಹ್ಯ ಕಣ್ಣುಗಳಿಗೆ ಮಾತ್ರ. ರೇಖಾ ಅವರ ಒಳಗಣ್ಣು ಬೇರೆಯವರಿಗೆ ವಿದ್ಯೆಯ ಬೆಳಕು ನೀಡಿ ಬದುಕು ಕಲ್ಪಿಸುವಷ್ಟು ತೀಕ್ಷ್ಣವಾಗಿದೆ . ಒಬ್ಬರು ಸಾಧಕಿಯನ್ನು ನಮಗೆಲ್ಲ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್ .