ಮೌನದ ಮಾತು
ಗೆಳತಿ ಹೇಳಿದಳು
ಕವಿತೆ ಬರೆ ಎಂದು,
ಬರೆಯ ಹೊರಟೆ…
ಮಸ್ತಿಷ್ಕದಾಳದಲಿ ಭಾವನೆಗಳೇನೋ
ತುಂಬಿ ತುಳುಕುತಿದೆ
ಸಿಹಿಯೋ.. ಕಹಿಯೋ..
ತೊಳಲಾಟ, ಚಡಪಡಿಕೆ..
ಅತಿಯಾದ ಸ್ಪಂದನಕೂ
ಇರಬಹುದೇನೋ..
ಒಳಮುಷ್ಟಿಯಂತಿರುವ
ಕವಾಟದೊಳಗೆ ಬಚ್ಚಿಟ್ಟ
ಯಂತ್ರಕೆ ಕೀಲ್ಬೆಣ್ಣೆ
ಹೆಚ್ಚಾಯಿತೇನೋ..
ಒಂದೇ ಸಮನೆ ಸಡಿಲವಾಗಿ
ಶಿವನ ಢಮರುಗವಾಗಿದೆ
ಕವಿತೆ ಕೇಳುವರಾರು..?
ಗೆಳತಿ ಹೇಳಿದಳು,
ವಿಶ್ರಾಂತಿ ಮಾಡು…
ಪಲ್ಲಂಗ, ಹಾಸಿಗೆ, ಚಾಪೆ, ಚಾದರಗಳೇನೋ
ಕೋಣೆಯಲಿ ತುಂಬಿದೆ…
ಒರಗಿದರೆ,
ಇಡೀ ಭೂಮಿಯೇ
ತನ್ನ ಮಡಿಲಲಿ ಕೂರಿಸಿ
ಗಿರಕಿ ಹೊಡೆಸುತಿದೆಯೋ.. ತಿರುಗುವ ರಭಸಕೆ,
ಕಿರುಚಾಡಿದೆ ಮನ..
ಲಾಲಿ ಹಾಡುವರಾರು..?
ಗೆಳತಿ ಹೇಳಿದಳು,
ತಣ್ಣಗಿರು..
ಆಗಲು ಹೊರಟೆ.. ತಂಗಾಳಿಯೇನೋ ಸುತ್ತ ಬೀಸುತಿದೆ..
ಇನ್ನಷ್ಟು ತಂಪಾಗಲು ಹೋಗಿ,
ಹಿಮದಲಿ ಹುದುಗಿದ ಹೂವಾದೆ
ತೆಗೆದು ಮುಡಿಗಿಡುವರಾರು..?
ಕಾಣದ ಕೋಮಲ ಮನ,
ನಿರ್ಲೇಪವಾಗಿ ಮೌನದಲೇ
ಉಲಿದರೆ ಮಿಡಿಯಲು,
ಅಗೋಚರ ಬಲವೊಂದಿದೆಯೇನೋ..
ಸಲಹಲು..??
–ಕಲಾ ಚಿದಾನಂದ, ಮುಂಬೈ
Nice song with lot of emotions. Good luck to you and expect more such Kavana in future.
ಒಳ್ಳೆಯ ಪ್ರಯತ್ನ ಕಲ..ಅಭಿನಂದನೆ
ಉತ್ಕಟ ಭಾವನೆಗಳ ಚೆಂದದ ಕವನ.
Tumba chennagide Kala.
ಅಭಿನಂದನೆ.. ಸುಸ್ವಾಗತ ಕಾವ್ಯ ಲೋಕಕೆ, ಹೀಗೊಂದು ಕವಿತೆ ಜೊತೆ, ಕವಿಗೂ ಸಹ……
ಕವನವನ್ನು ಪ್ರಕಟಿಸಿದ ಸುರಹೊನ್ನೆ ತಂಡದವರಿಗೂ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಕವನವನ್ನು ಪ್ರಕಟಿಸಿದ ಸುರಹೊನ್ನೆ ತಂಡದವರಿಗೂ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಸುಂದರ ಕವನ.
ಕವನ ಬಹಳ ಪ್ರೌಢವಾಗಿದೆ. ಅಭಿನಂದನೆಗಳು ಕಲಾ
ಚೆನ್ನಾಗಿರುವ ಭಾವನಾತ್ಮಕ ಕವನ .
ಧನ್ಯವಾದಗಳು