ವಿಶ್ವವನ್ನು ಬೆರೆಗುಗೊಳಿಸಿರುವ ಡೇಟಾ ಕ್ರಾಂತಿ

Share Button

ನೀರು, ಆಹಾರದ ತೀವ್ರ ಕೊರತೆ, ಅನರಕ್ಷತೆ, ಬಡತನ, ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಮಾನವ ಕಳ್ಳಸಾಗಾಣಿಕೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವೆ ಹಲವಾರು ಆಫ್ರಿಕಾ ಖಂಡದ ದೇಶಗಳು. ಮುಂದುವರೆದ ದೇಶಗಳಲ್ಲಿ ಮಹಿಳೆಯರಿಗೆ ದೊರೆಯುವ ಉನ್ನತ ಶಿಕ್ಷಣದ ಅವಕಾಶಗಳು, ಇಂತಹ ಆಫ್ರಿಕಾ ದೇಶಗಳಲ್ಲಿ ಬಹಳ ಕಡಿಮೆ.

ಹಲವಾರು ಮನೆಗಳಲ್ಲಿ ಕಂಪ್ಯೂಟರ್, ಇಂಟರ್‍ನೆಟ್‍, ಮೊಬೈಲ್‍ ಫೋನ್ ಸಂಪರ್ಕವಿದ್ದರೂ, ಅವುಗಳನ್ನು ಬಳಸಲು ಮಹಿಳೆಯರಿಗೆ ಸಿಗುವ ಅವಕಾಶ ಬಹಳ ಕಡಿಮೆ ಎಂದು ಹಲವಾರು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಸಮೀಕ್ಷೆಗಳು ಹೇಳುತ್ತವೆ.

ಇಂತಹ ಪರಿಸ್ಥಿತಿಯಲ್ಲಿ, ವಿಶ್ವವನ್ನು ಬೆರೆಗುಗೊಳಿಸುವಂತೆ, ಡೇಟಾ ಕ್ರಾಂತಿಯನ್ನು ಆಫ್ರಿಕಾ ದೇಶಗಳಾದ ಕೀನ್ಯಾ, ಜಾಂಬಿಯಾ ಮತ್ತು ನೈಜೀರಿಯಾದಲ್ಲಿ ಮಹಿಳೆಯರು ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವ ರೆಟ್ರೋ ರ್ಯಾಬಿಟ್‍ ಹೆಸರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಹಿರಿಯ ತಂತ್ರಾಂಶ ಅಭಿವೃದ್ಧಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಜೇಡ್‍ ಅಬೋಟ್‍ ಮತ್ತು ಇನ್ಸ್‍ಟಾಡೀಪ್‍ ಹೆಸರಿನ ನವೋದ್ಯಮ ತಂತ್ರಜ್ಞಾನ ಸಂಸ್ಥೆಯಲ್ಲಿ ಟೀಮ್‍ ಲೀಡರ್‍ ಆಗಿ ಕೆಲಸ ಮಾಡುತ್ತಿರುವ ಮುತೋನಿ ವ್ಯಾನ್‍ಯೋಕ್‍, ಎನ್ನುವ ಇಬ್ಬರು ಮಹಿಳೆಯರು ಈ ಐತಿಹಾಸಿಕ ಡೇಟಾ ಕ್ರಾಂತಿಯ ರೂವಾರಿಗಳಾಗಿದ್ದಾರೆ.

ಆಫ್ರಿಕಾದ ಹಲವಾರು ದೇಶಗಳಲ್ಲಿ, ಮಹಿಳೆಯರಿಗಾಗಿ ಡೇಟಾ ವಿಜ್ಞಾನ, ಆರ್ಟಿಫಿಶಿಯಲ್‍ ಇಂಟೆಲಿಜೆನ್ಸ್‍, ಮೇಷೀನ್‍ ಲರ್ನಿಂಗ್‍ ಕುರಿತು ತರಬೇತಿ ಶಿಬಿರಗಳು, ಸಮಾವೇಶಗಳನ್ನು ಆಯೋಜಿಸುತ್ತಿದ್ದಾರೆ ಈ ಮಹಿಳೆಯರು.

ಜೇಡ್‍ ಅಬೋಟ್‍

ಮುತೋನಿ ವ್ಯಾನ್‍ಯೋಕ್‍

2000ಕ್ಕೂ ಹೆಚ್ಚು ಮಹಿಳೆಯರಿಗೆ ಅಧುನಿಕ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡಿರುವುದಲ್ಲದೆ, ಅವರು ಈ ತಂತ್ರಜ್ಞಾನಗಳನ್ನು ಬಳಸಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಉತ್ತೇಜಿಸಲಾಗುತ್ತಿದೆ. ಉದಾಹರಣೆಗೆ, ನವಜಾತ ಶಿಶುವಿನ ಆರೋಗ್ಯ, ಲಾಲನೆ, ಪಾಲನೆ ಕುರಿತು ಗರ್ಭಿಣಿಯರಿಗೆ ಮತ್ತು ತಾಯಂದಿರಿಗೆ, ವಿವಿಧ ಆಫ್ರಿಯನ್‍ ಭಾಷೆಗಳಲ್ಲಿ ಮಾಹಿತಿ ನೀಡುವ Momconnect ಹೆಸರಿನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದಾಗಿ ಹಳ್ಳಿಯಲ್ಲಿರುವ ಮಹಿಳೆಗೆ ಕೂಡಾ, ನಗರದಲ್ಲಿರುವ ಖ್ಯಾತ ವೈದ್ಯರ ಜೊತೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಪರಿಹಾರ ಪಡೆಯಲು ಸಾಧ್ಯವಾಗುತ್ತಿದೆ. ಆಫ್ರಿಕಾ ದೇಶದಲ್ಲಿ ಫಲವತ್ತಾದ ಭೂಮಿ ಮತ್ತು ನೈಸರ್ಗಿಕ ಸಂಪನ್ನ್ಮೂಲಗಳನ್ನು ಅಗರ್ಭ ಶ್ರೀಮಂತರು, ರಾಜಕಾರಣಿಗಳು ಮತ್ತು ಕಂಪನಿಗಳು ಹೇಗೆ ಲೂಟಿ ಮಾಡುತ್ತಿದ್ದಾರೆ ಮತ್ತು ಬಡರೈತರಿಗೆ ಇದರಿಂದ ಎಷ್ಟು ಅನ್ಯಾಯವಾಗುತ್ತಿದೆ ಎನ್ನುವುದನ್ನು ತಿಳಿಸಿಕೊಡುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತೀವ್ರ ಕುಡಿಯುವ ನೀರಿನ ಅಭಾವ ಎದುರಿಸಿದ ದಕ್ಷಿಣ ಆಫ್ರಿಕಾದ ಕೇಪ್‍ ಟೌನ್‍ನಲ್ಲಿ, ನೀರಿನ ಸಂರಕ್ಷಣೆ ಮತ್ತು ಸದ್ಭಳಕೆಗಾಗಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ಆರೋಗ್ಯ, ಆಹಾರ, ಶಿಕ್ಷಣ, ಪರಿಸರ, ನವೋದ್ಯಮ, ಕಲೆ ಮತ್ತು ಸಂಸ್ಕೃತಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಉಪಯೋಗವಾಗುತ್ತಿರುವ ಮೇಷೀನ್‍ ಲರ್ನಿಂಗ್‍ ಮತ್ತು ಆರ್ಟಿಫಿಶಿಯಲ್‍ ಇಂಟೆಲಿಜೆನ್ಸ್ ತಂತ್ರಾಂಶಗಳನ್ನು ಆಫ್ರಿಕಾದ ಮಹಿಳೆಯರು ಅಭಿವೃದ್ಧಿಪಡಿಸುತ್ತಿದ್ದಾರೆ. ಹಲವಾರು ಆಫ್ರಿಕಾ ಭಾಷೆಗಳಿಂದ ಇಂಗ್ಲೀಷ್‍ ಭಾಷೆಗೆ ಅನುವಾದ ಮಾಡಲು ಸಹಾಯಕವಾಗುವ ಮೇಷೀನ್‍ ಲರ್ನಿಂಗ್ ತಂತ್ರಾಂಶವನ್ನು ಈ ಮಹಿಳೆಯರು ಅಭಿವೃದ್ಧಿಪಡಿಸಿದ್ದು, ಮುಂಬರುವ ದಿನಗಳಲ್ಲಿ ಆಫ್ರಿಕಾ ಭಾಷೆಯ ಸಾಹಿತ್ಯ, ಇಂಗ್ಲೀಷ್‍ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ. ಆಫ್ರಿಕಾದಲ್ಲಿ ನೆಡೆದಿರುವ ಈ ಐತಿಹಾಸಿಕ ಡೇಟಾ ಕ್ರಾಂತಿಯನ್ನು ವಿಶ್ವದ ಪ್ರಮುಖ ಸಂಸ್ಥೆಗಳು ಮತ್ತು ತಜ್ಞರು ಮುಕ್ತ ಕಂಠದಿಂದ ಹೊಗಳಿದ್ದಾರೆ.  ಇಂತಹ ಕೆಲಸವನ್ನು ನಮ್ಮ ದೇಶದಲ್ಲಿ ಕೂಡಾ ಮಾಡಬೇಕು ಎಂದು ಹಲವಾರು ದೇಶಗಳ ಮಹಿಳೆಯರು ಈ ಆಫ್ರಿಕಾ ದೇಶದ ಮಹಿಳೆಯರನ್ನು ಸಂಪರ್ಕಿಸುತ್ತಿದ್ದಾರೆ.

ಮಹಿಳೆಯರಿಗೆ ಉನ್ನತ ಶಿಕ್ಷಣ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವುದು ಅಗತ್ಯವಿಲ್ಲ. ಅವರೇನಿದ್ದರೂ, ಮನೆ,ಮಕ್ಕಳು ಮತ್ತು ಸಂಸಾರ ನೋಡಿಕೊಳ್ಳುವುದಕ್ಕೆ ಲಾಯಕ್ಕು ಎನ್ನುವ ಮನಸ್ಥಿತಿಗಳು ಆಫ್ರಿಕಾ ಮಾತ್ರವಲ್ಲ, ವಿಶ್ವದ ಅನೇಕ ದೇಶಗಳಲ್ಲಿವೆ. ಇಂತಹ ಕೊಳಕು ಮನಸ್ಸುಗಳನ್ನು ಸೆದೆಬಡಿದು, ಮಹಿಳೆಯರು ಅಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದ ಸಾಧನೆಯನ್ನು ಮಾಡಲು ಸಾಧ್ಯ ಎಂದು ಆಫ್ರಿಕಾದ ಮಹಿಳೆಯರು ನಿರೂಪಿಸಿದ್ದಾರೆ.

ತಾವಾಯಿತು, ತಮ್ಮ ಕೆಲಸವಾಯಿತು ಎಂದು ತೃಪ್ತರಾಗದೆ, ತಮ್ಮ ಹಣ ಮತ್ತು ಸಮಯ ವಿನಿಯೋಗಿಸಿ, ಹಲವು ಆಫ್ರಿಕಾ ದೇಶಗಳ ಮಹಿಳೆಯರನ್ನು ಭೇಟಿಯಾಗಿ, ಮನವೊಲಿಸಿ, ಅವರಿಗೆ ತರಬೇತಿ ನೀಡಿ, ಅವರಿಂದ ವಿಶ್ವದ ಗಮನ ಸೆಳೆಯುವ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಿರುವ, ಸಹೋದರಿಯರಾದ ಜೇಡ್‍ ಅಬೋಟ್‍ ಮತ್ತು ಮುತೋನಿ ವ್ಯಾನ್‍ಯೋಕ್‍ರವರಿಗೆ ಅಭಿವಂದನೆಗಳು.

– ಉದಯಶಂಕರ ಪುರಾಣಿಕ

2 Responses

  1. Hema says:

    ಆಫ್ರಿಕಾ ದೇಶವೆಂದರೆ ‘ಕತ್ತಲಿನ ಭೂಖಂಡ’ ಎಂದೇ ಶಾಲಾದಿನಗಳಲ್ಲಿ ಓದಿದ್ದೆ..ಆಫ್ರಿಕಾಕ್ಕೆ ಹೋದವರು ಹಾಗೂ ಅಲ್ಲಿನ ವಿಚಾರಗಳನ್ನು ತಿಳಿದುಕೊಂಡವರು ಬಲು ಕಡಿಮೆ. ಅಪರೂಪದ ವಿಷಯದ ಬಗ್ಗೆ ಬೆಳೆಕು ಚೆಲ್ಲಿದ್ದಕ್ಕೆ ಧನ್ಯವಾದಗಳು.

  2. Shankari Sharma says:

    ಉತ್ತಮ ಮಾಹಿತಿಯುಕ್ತ ಬರಹ ..ಅಭಿನಂದನೆಗಳು.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: