ಇದು ಕಲಿಗಾಲವಲ್ಲ ಇಲಿಗಾಲ

Share Button


ತ್ರೇತಾಕಾಲ,ದ್ವಾಪರ,ಆ ಕಾಲ, ಈ ಕಾಲ, ಹೊಸಗಾಲ, ಹಳೆಗಾಲ, ಕಲಿಗಾಲ ಎಲ್ಲಾ ಕೇಳಿದ್ದೇವೆ , ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ ಭಯಬೀಳೋಕೆ ಮುಂಚೆ ನಾನೇ ಇದರ ವಿಷಯ ಹೇಳುತ್ತೇನೆ ಬಿಡಿ.

ಎರಡು ವರ್ಷದ  ಹಿಂದೆ ಯಾವುದೋ ಎಕ್ಸಿಬಿಷನ್‌ಗೆ ಹೋದ ನಮ್ಮ ಮಾವನವರು ಬರುವಾಗ ಒಂದು ಇಲಿ ಕತ್ತರಿಯನ್ನು ತಂದಿದ್ದರು. ಮನೆಗೆ ಎಷ್ಟೊಂದು ಅಗತ್ಯದ ವಸ್ತುಗಳು ಬೇಕಿರುವಾಗ ಯಕಶ್ಚಿತ್ ಒಂದು ಇಲಿಯನ್ನು ಹಿಡಿಯುವ ಸಾಧನವನ್ನು ಕೊಂಡು ತಂದಿರುವರಲ್ಲ ಅಂತ ಇನ್ಯಾರಾದರೂ ಆಗಿದ್ರೆ ಪೆಚ್ಚು ಮೋರೆ ಹಾಕಿ ಬಿಡುತ್ತಿದ್ದರು. ಆದರೆ ನಮಗಂತು ಖುಷಿಯೇ ಆಗಿತ್ತು. ಯಾಕೆಂದರೆ ಮನೆಯಲ್ಲಿ ಉಳಿದಿರುವ ವಸ್ತುಗಳನ್ನು ರಕ್ಷಿಸಿಕೊಳ್ಳಲು ಇಲಿಯಿಂದ ಪಾರಾಗಬೇಕಿತ್ತು. ಈ ಕಾಲದಲ್ಲಿ ಇಂತಹ ಸೋಜಿಗ ಉಂಟಾ?. ಕೇವಲ ಚಿಟ್ಟಾಣಿ ಚಿಕ್ಕಿಲಿಗಳಿಗಾಗಿ ಇಷ್ಟೊಂದು ಪಡಿಪಾಟಲು ಪಡಬೇಕಾ? ಅಂತ ನೀವ್ಯಾರಾದರೂ ಅಂದುಕೊಂಡರೆ, ನಿಮ್ಮ ಮನೆಯಲ್ಲಿ ಇಲಿಗಳ ಕಾಟವಿಲ್ಲ. ನೀವೆಲ್ಲಾ ಪುಣ್ಯವಂತರು ಅಂತ ಅಸೂಯೆಯಾಗುತ್ತದೆ. ಸುಮ್ಮಗೆ ಅತ್ತಿಂದಿತ್ತ ಓಡಾಡುತ್ತಾ ದಾಂಧಲೆ ಎಬ್ಬಿಸುತ್ತಿದ್ದ ಇಲಿಗಳಿಗಾಗಿ ಮೊದಲು ನನ್ನ ಮಾವನವರು ಅದೆಷ್ಟು ಗಾಢ ನಿದ್ರೆಯಲ್ಲಿದ್ದರೂ ಸದ್ದು ಕೇಳಿದೊಡನೆ ಎಚ್ಚೆತ್ತು ಒಂದು ಸಪೂರದ ಕೋಲು ಹಿಡಿದುಕೊಂಡು , ಇಲಿಯನ್ನು ಹಿಡಿದೇ ಸಿದ್ಧ ಅಂತ ಪಣ ತೊಟ್ಟಂತೆ ಬಾಗಿಲು ಬಂದ್ ಮಾಡಿ ಶೋಧನೆ ನಡೆಸುತ್ತಿದ್ದರು. ಆ ಇಲಿಯೋ ಮತ್ತೂ ಚಾಣಕ್ಷ್ಯಮತಿ. ಅತ್ತಿಂದಿತ್ತ ಹಾರಿ, ಮೇಲೆ ಹತ್ತಿ ಕೆಳಗೆ ಇಳಿದು, ಎಡೆಯಲ್ಲಿ ನುಸುಳಿ, ಡಬ್ಬಿ ಸಂಧಿ, ಬೀರುವಿನ ಸಂಧಿ, ಹೋದೆಡೆಯಲ್ಲೆಲ್ಲಾ ತನ್ನ ಹಿಡಿ ದೇಹವನ್ನು ಮತ್ತಷ್ಟು ಹಿಡಿಯಾಗಿಸಿ ಅಡಗಿ ಕುಳಿತುಕೊಂಡರೆ, ನನ್ನ ಮಾವನವರೋ ಛಲ ಬಿಡದ ತ್ರಿವಿಕ್ರಮನಂತೆ ಮತ್ತಷ್ಟು ಹುರುಪಿನಿಂದ ಕೋಲುಧಾರಿಯಾಗಿ ಅತ್ತಿಂದಿತ್ತ ಟಕ ಟಕ ಶಬ್ದ ಮಾಡುತ್ತಾ ಸಾಕಷ್ಟು ಬೆವರಿಳಿಸಿಕೊಂಡರೆ, ಇತ್ತ ಇಲಿಯೋ ಅತ್ತಿಂದಿತ್ತ ಕೆರೆ-ದಡ ಆಡಿ ಸುಸ್ತಾಗಿ , ಯಾವುದೋ ಮಾಯಕದಲ್ಲಿ ಎರಗಿದ ಕೋಲಿನ ಅಡಿಯಲ್ಲಿ ಅಪ್ಪಚ್ಚಿಯಾಗಿ ನೆಲಕ್ಕಂಟಿ ಬಿಡುತ್ತಿತ್ತು. ಎಷ್ಟು ದಿನ ಹೀಗೆ ಒನಕೆ ಓಬವ್ವನಂತೆ ಕಾದು ಕುಳಿತು ಇಲಿಯನ್ನು ಬರೇ ಕೋಲಿನಿಂದ ಸಂಹಾರ ಮಾಡಲು ಸಾಧ್ಯ?. ಹಾಗಂತ ಅದನ್ನು ಸುಮ್ಮಗೆ ಬಿಡುವ ಹಾಗೂ ಇಲ್ಲ. ಅಯ್ಯೋ! ಹೀಗೊಂದು ಇಲಿಗಳ ವಾಸ್ತವ್ಯ ಇರುವ ಇವರ ಮನೆಯೇನು ಗೋದಾಮಾ? ಅಂತ ನೀವ್ಯಾರು ಹುಬ್ಬೇರಿಸುವ ಹಾಗಿಲ್ಲ. ಅದಕ್ಕೆ ಪರೋಕ್ಷವಾಗಿ ನೀವೆಲ್ಲ ಕಾರಣರೂ ಹೌದು. ಯಾಕೆಂದರೆ ಯಾರೂ ಈಗ ಬೇಸಾಯದ ಗೋಜಿಗೆ ಹೋಗುತ್ತಿಲ್ಲ . ನಾವೂ ಕೃಷಿಕರಾದರೂ ಭತ್ತ ಬೆಳೆಯದೆ, ಧವಸ ಧಾನ್ಯ ಕೂಡಿಡದೆ ದಶಕಗಳೇ ಸಂದಿರಬಹುದು. ಬಹುಷ; ಹಾಗೇನಾದ್ರೂ ಇದ್ದಿದ್ದರೆ ಇಲಿ ತನಗೆ ಬೇಕಾದಷ್ಟು ತೆಪ್ಪಗೆ ತಿಂದು ತನ್ನ ಬಿಲ ಸೇರುತ್ತಿತ್ತೋ ಏನೋ. ಈಗಿಲ್ಲಿ ನಾವು ತರುವುದು ಒಂದು ತಿಂಗಳಿಗಾಗುವಷ್ಟು ಸಾಮಾನು. ಅದನ್ನು ಹುಡುಕಿ, ತಡುಕಿ, ಇಲಿ ಅರೆಕಚ್ಚಿ ತಿಂದು ಅರೆ ಬರೆ ನಮಗೆ ಉಳಿಸಿದ ಮೇಲೆ ವಾರಕ್ಕೊಮ್ಮೆ ಸಾಮಾನು ತರುವ ಪರಿಪಾಠ ಬೆಳೆಸಿಕೊಂಡೆವು. ಈಗ ಇಲಿ ಮತ್ತಷ್ಟು ಚುರುಕಾಗತೊಡಗಿತು. ತಂದ ಒಂದು ಕೆ.ಜಿ ಟೋಮೆಟೋ ಹಣ್ಣುಗಳು ಒಂದೊಂದಾಗಿ ಕಾಣೆಯಾಗಲು ತೊಡಗಿದಾಗಲೇ ಗೊತ್ತಾದದ್ದು ಇದು ಇಲಿ ಕಾಟ ಅಂತ. ತಂದ ಅಲಸಂಡೆ ಬೀನ್ಸುಗಳ ಬೀಜ ಹೊರಳಿಸಿ ತಿನ್ನುವುದು, ಬಾಳೆಗೊನೆಯಿಂದಲೇ ಬಾಳೆಹಣ್ಣು ಕಿತ್ತು ಅರ್ಧಕ್ಕೇ ಅದರ ಪುಟಾಣಿ ಹೊಟ್ಟೆ ತುಂಬಿ ಉಳಿದರ್ಧವನ್ನ ಮಹಡಿ ಮೇಲೆ ಹಾಕಿಡುವುದು, ತಿನ್ನಲು ಏನೂ ಸಿಗದೇ ಇದ್ದ ಸಿಟ್ಟಿಗೆ ಒಪ್ಪ ಓರಣವಾಗಿಸಿದ್ದ ಪುಸ್ತಕಗಳನ್ನೆಲ್ಲಾ ಅರೆಬರೆ ತಿಂದದ್ದೂ ಸಾಲದೆ ಅದನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೇಕಾದಷ್ಟು ಪಿಟ್ಟೆಗಳನ್ನು ರಾಶಿ ಹಾಕಿ ಹೋಗಿ ಬಿಡುತ್ತಿತ್ತು. ಮಹಡಿ ಶುಚಿಗೊಳಿಸಲು ಹೋದಾಗಲೇ ಇದರ ಕಿತಾಪತಿಗೆ ಸಿಟ್ಟು ನೆತ್ತಿಗೇರುವುದು. ಏನೇ ಅದು ರಾದ್ಧಾಂತ ಮಾಡಿದರೂ ಮೊದಲ ಹೊಡೆತ ಬೀಳುವುದು ಮನೆಯೊಡತಿಯರಿಗೇ ತಾನೇ?.

ಮೊದ ಮೊದಲು ಇಲಿ ಹಿಡಿಯುವ ಸಲುವಾಗಿ ಮಾಮೂಲಿಯಂತೆ ಇಲಿ ಬೋನನ್ನು ತಂದು ಇಡುತ್ತಿದ್ದೆವು. ಬೋನಿನೊಳಗೆ ಬಿದ್ದ ಇಲಿಯನ್ನು ನೋಡಿ ಬೇರೆ ಇಲಿಗಳು ಬುದ್ದಿ ಕಲಿತ ಮೇಲೆ ಗೊತ್ತಾದದ್ದು, ಮನುಷ್ಯ ಬುದ್ಧಿವಂತ ಪ್ರಾಣಿ ಎಂಬುದು ಶತಸುಳ್ಳು ಅಂತ. ಇದು ಮನುಷ್ಯ ತನ್ನನ್ನು ತಾನು ಮೇಲೇರಿಸಿಕೊಳ್ಳಲು ತಾನೇ ಇಟ್ಟುಕೊಂಡ ಬಿರುದಾಂಕಿತ ಅಷ್ಟೆ. ಒಂದೇ ಒಂದು ಇಲಿಯು ಬೋನಿನೊಳಗೆ ಬೀಳದ ಮೇಲೆ ಗೊತ್ತಾದದ್ದು ನಮ್ಮ ಪೆದ್ದುತನ. ಆದರೆ ಏನು ಮಾಡುವ ಹಾಗಿಲ್ಲ, ಅಕ್ಷರಗಳನ್ನು ತಿಂದು ಜೀರ್ಣಿಸಿ ಕೊಂಡದ್ದಕ್ಕೇ ಇರಬೇಕು ಅದು ಓದೋಕೆ ಪುರುಸೊತ್ತಿಲ್ಲದ ನಮಗಿಂತ ಹೆಚ್ಚು ಬುದ್ದಿವಂತಿಕೆಯನ್ನು ತೋರಿಸುವುದು.

ಈ ಇಲಿ ಪುರಾಣವನ್ನು ಬಂದವರ ಜೊತೆ , ಹೋದವರ ಜೊತೆ ಕತೆಯಂತೆ ಹೇಳುವುದೇ ಆಯಿತು. ಮುಖ್ಯವಾಗಿ ಇದು ಹೇಳುವುದರ ಉದ್ದೇಶ ಒಂದೇ. ಏಕಾ‌ಏಕಿ ನೇರವಾಗಿ ಅವರ ಮನೆಗಳಲ್ಲಿ ಇಲಿ ಉಂಟಾ? ಅಂತ ಕೇಳೋಕೆ ಆಗುತ್ತಾ?. ಅದಕ್ಕೇ ಸುತ್ತು ಬಳಸಿ ನಮ್ಮ ಮನೆಯ ಇಲಿ ಕತೆಯನ್ನು ಹೇಳುವಾಗ ಕೆಲವರು ಹ್ಮೂಂ, ಹೌದಪ್ಪಾ! ನಮ್ಮ ಮನೆಯಲ್ಲೂ ಇದೇ ಕಾಟ ಅಂದಾಗ ಸ್ವಲ್ಪ ಸಮಾಧಾನ. ಇನ್ನು ಕೆಲವರು ನಮ್ಮಲ್ಲಿಯೂ ಇತ್ತು, ಈಗ ಬೆಕ್ಕು ತಂದು ಸಾಕಿದ ಮೇಲೆ ಈಗ ಇಲಿಗಳ ಕಾಟವೇ ಇಲ್ಲ ಅಂತ ನಿರಾಳವಾಗಿ ಹೇಳಿದಾಗಲೇ ಈ ಬೆಕ್ಕಿನ ಕತೆ ನೆನಪಾದದ್ದು. ಅಂದ ಹಾಗೆ ಈ ಬೆಕ್ಕು ತಂದು ಸಾಕಿದ್ದರೆ ಈ ಇಲಿಗಳ ಕಾಟದಿಂದ ಮುಕ್ತಿ ಪಡೆಯ ಬಹುದಾಗಿತ್ತೋ ಏನೋ. ಆದರೆ ಅದರ ಸಾಕಿದರೆ ಮತ್ತೊಂದಷ್ಟು ರಗಳೆಗಳು . ಮೊದ ಮೊದಲು ಚೆಂದ ಚೆಂದದ ಜೂಲು ಬೆಕ್ಕುಗಳು ನಮ್ಮ ಮನೆಯಲ್ಲಿ ಇದ್ದವು. ಸಮಸ್ಯೆ ಏನಂದರೆ, ನಮ್ಮ ಮನೆಯ ಬೆಕ್ಕುಗಳಿಗೂ ನಾಯಿಗಳಿಗೂ ಕೂಡಿ ಬರುತ್ತಲೇ ಇರುತ್ತಿರಲಿಲ್ಲ. ಅದೂ ಅಲ್ಲದೆ ನಮ್ಮ ಮನೆಯ ಹಿಂಬದಿಯಲ್ಲೊಂದು ಅಂಟಿಕೊಂಡಂತೆ ಇರುವ ಸೇದು ಬಾವಿ. ನಮ್ಮ ಬೆಕ್ಕು ಆ ಬಾವಿಕಟ್ಟೆಯ ಮೇಲೆ ಎಳೆ ಬಿಸಿಲಿಗೆ ಮೈಯೊಡ್ಡಿಕೊಂಡು ಮಲಗಿಕೊಂಡು ಚೂಪು ಮೀಸೆ ತುದಿಯಲ್ಲಿ ನಗುತ್ತಾ ಕನಸು ಕಾಣುತ್ತಿರುತ್ತದೆ. ಇದು ಹೀಗೆ ಆರಾಮವಾಗಿ ಮಲಗಿಕೊಂಡಿರುವುದು ನಮ್ಮ ಮನೆಯಲ್ಲಿ ಯಾವಾಗಲೂ ಕಟ್ಟಿ ಹಾಕಿಕೊಂಡಿರುವ ನಾಯಿಗೆ ಸರಿ ಕಾಣುವುದಿಲ್ಲವೇನೋ. ಅದನ್ನು ಬಿಟ್ಟಾಗಲೆಲ್ಲಾ ಮೆಲ್ಲಗೆ ಬಂದು ಒಮ್ಮಿಂದೊಮ್ಮೆಗೆ ಗಕ್ಕನೆ ಬೊಗಳಿ ಹೆದರಿಸಿ ಬಿಡುತ್ತಿತ್ತು. ಯಾವುದೋ ಒಂದು ಅಪೂರ್ವ ಕನಸಿನ ಲೋಕದಲ್ಲಿದ್ದ ಬೆಕ್ಕು ಒಮ್ಮಿಂದೊಮ್ಮೆಗೆ ಹೆದರಿ ಈಚೆ ಬದಿಯ ಕಟ್ಟೆಯಿಂದ ಆಚೆ ಬದಿಗೆ ಗಡಿ ಬಿಡಿಯಲ್ಲಿ ಹಾರಿ ಮೇಲೇರಲು ಪ್ರಯತ್ನಿಸುವಾಗಲೆಲ್ಲಾ ದೊಪ್ಪನೆ ಆಯತಪ್ಪಿ ಬಾವಿಯೊಳಗೆ ಬಿದ್ದು ಬಿಡುತ್ತಿತ್ತು. ನಾವು ನೋಡಿಕೊಂಡಿರುವ ಸಂದರ್ಭದಲ್ಲಾದರೆ ಹೇಗಾದರೂ ಮಾಡಿ ಬುಟ್ಟಿ ಇಳಿಸಿ ಬೆಕ್ಕನ್ನು ಪಾರು ಮಾಡುತ್ತಿದ್ದೆವು. ಕೆಲವೊಮ್ಮೆ ನೋಡದೇ ಅದೆಷ್ಟೋ ಬೆಕ್ಕುಗಳು ಹೀಗೇ ವಿನಾಕಾರಣ ಸಾಯುವುದ ಕಂಡು, ಪರೋಕ್ಷವಾಗಿ ಬೆಕ್ಕು ಕೊಂದ ಪಾಪ ತಟ್ಟುವುದು ಬೇಡವೆಂದು ಯಾಕೋ ಈ ಬೆಕ್ಕಿನ ಸಂತತಿಯ ಮೇಲೆಯೇ ಬೇಸರ ಹುಟ್ಟಿ ಬಿಟ್ಟಿತ್ತು. ಅದೂ ಅಲ್ಲದೇ, ಎಷ್ಟೊತ್ತಿಗೂ ಸೋಂಭೇರಿಯಂತೆ ನಿದ್ರಿಸಿಕೊಂಡೇ ಇರುವ ಬೆಕ್ಕು, ಹಸಿವಾದಾಗ ಮಾತ್ರ ಕಳ್ಳ ಹೆಜ್ಜೆಯಲ್ಲಿ ಬಂದು ಹಾಲು ಪಾತ್ರೆಯ ಮುಚ್ಚಳ ಸರಿಸಿ ಹಾಲು ಕುಡಿಯುವುದು, ಯಾವಾಗಲಾದರು ಒಮ್ಮೆ ನನಗೂ ಬೇಟೆಯಾಡಲು ಗೊತ್ತುಂಟು , ಸೋಂಭೇರಿ ಅಂತ ಜರೆಯಬೇಡಿ ಅಂತ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲೋಸುಗ ಹಲ್ಲಿಯನ್ನು, ಆರಣೆಯನ್ನು ಹಿಡಿದು ತಂದು ಅರೆ ಜೀವ ಮಾಡಿ ಮನೆಯೊಳಗೆ ತಂದು ಹಾಕಿ ಬಿಡುತ್ತಿತ್ತು. ಹಾಗಾಗಿ ಈ ಬೆಕ್ಕಿನ ಸಹವಾಸವೇ ಬೇಡ ಅಂತ ಹೊಸ ಮನೆ ಕಟ್ಟಿದಾಗಲೂ ಬೇರೆ ಬೆಕ್ಕು ಒಳ ಬರದಂತೆ ಸಣ್ಣ ಸರಳುಗಳ ಕಿಟಕಿಯನ್ನು ಉದ್ದೇಶಪೂರ್ವಕವಾಗಿ ಇಟ್ಟಿದ್ದೆವು. ಈ ಹಿಂದೆ ಬೆಕ್ಕು ಇರುವಾಗ ನಿಶ್ಯಬ್ಧವಾಗಿರುತ್ತಿದ್ದ ಮನೆಯಲ್ಲಿ ಈಗ ರಾತ್ರೆ ಹೊತ್ತಾಗುತ್ತಿದ್ದಂತೆ ಸದ್ದುಗಳು ಕೇಳಲಾರಂಬಿಸಿದವು. ನಿದ್ರಾಭಂಗವಾಗ ತೊಡಗಿ ಮತ್ತೊಮ್ಮೆ ಬೆಕ್ಕು ತಂದು ಸಾಕುವ ಸಾಹಸಕ್ಕೆ ಇಳಿದರೆ, ರಾತ್ರೆ ಹೊತ್ತು ಬಾಗಿಲು ಅಗುಳಿ ಹಾಕಿದ ನಂತರ ಸಣ್ಣ ಸರಳಿನ ಕಿಟಕಿಯೆಡೆಯಲ್ಲಿ ಹೋಗಲಾಗದೆ ಕಕ್ಕ ,ಸುಸ್ಸು ಪೂರ ಬೆಡ್‌ಶೀಟಿನ ಮೇಲೆ, ಸೋಫಾ ಕುಷನ್‌ನ ಮೇಲೆ ಮಾಡತೊಡಗಿದ ನಂತರ ಮತ್ತೊಮ್ಮೆ ಅದರ ಸಂಬಂಧಿಕರಿಗೆ ಕೊಟ್ಟು ಬಂದ ಮೇಲೆ ಹಗಲು-ಇರುಳು ನಮಗೆ ಇಲಿಗಳ ಮಟ್ಟ ಹಾಕುವುದೇ ಬಹು ದೊಡ್ಡ ಚಿಂತೆಯಾಗಿ, ಆಹಾರ ಸಾಮಾಗ್ರಿಗಳನ್ನು ಜೋಕೆ ಮಾಡುವುದೇ ಸಮಸ್ಯೆಯಾಯಿತು. ಇನ್ನು ಮತ್ತೂ ಒಂದು ಗಂಭೀರ ಸಮಸ್ಯೆ ಏನಪ್ಪಾ ಅಂದರೆ ಯಾವುದೇ ಕೋಣೆಯ ಬಾಗಿಲನ್ನು ನಾವು ಮುಚ್ಚುವಂತಿಲ್ಲ. ಹೇಗೋ ಕೋಣೆ ಸೇರಿಕೊಂಡ ಇಲಿ ಬಾಗಿಲಿನ ಮೂಲಕ ಮತ್ತೊಂದು ಕೋಣೆಗೆ ಹೋಗಲಾರದ ಸಿಟ್ಟಿನಲ್ಲಿ ಬಾಗಿಲನ್ನೇ ಹೆರೆಯೋಕೆ ಶುರು ಮಾಡುತ್ತಿತ್ತು. ಕಟ್ಟಿದ ಹೊಸ ಮನೆಯ ಎಲ್ಲಾ ಚಿತ್ತಾರದ ಬಾಗಿಲುಗಳ ಕೊರೆದು ಚಿಕ್ಕಿಲಿ ಹೊಸ ಚಿತ್ತಾರ ಬಿಡಿಸುವಲ್ಲಿ ನಿರತವಾಗಿತ್ತು. ಈ ಪುಟುಗೋಸಿ ಇಲಿಗೂ ಹೆದರುವಂತಾಗಿ ಕೋಣೆಯ ಯಾವ ಬಾಗಿಲನ್ನು ಮುಚ್ಚಲಾಗದ ಪರಿಸ್ಥಿತಿ.

ಈಗೀಗ ಬಹು ಚಾಲ್ತಿಯಲ್ಲಿರುವ ಇಲಿ ಜ್ವರ ಬಂದ ಮೇಲಂತೂ ಈ ಇಲಿಯಪ್ಪನಿಗೆ ಎಷ್ಟು ಹೆದರುವಂತಾಯಿತೆಂದರೆ.. ಮನೆಯೊಳಗೂ ಧೈರ್ಯವಾಗಿ ಕಾಲಿಡೋಕು ಭಯ. ಯು. ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯ ಪ್ಲೇಗ್ ಜ್ವರದ ಇಲಿಗಳ ಭೀತಿ ಈಗ ವಾಸ್ತವದಲ್ಲಿ ಎದುರಿಸುವಂತಾಯಿತು. ಎಲ್ಲಿ ಅದು ಮೂತ್ರ ಮಾಡಿರುತ್ತೋ?. ಎಲ್ಲಿ ಅದರ ಮೆಟ್ಟಿ ಬಿಡುತ್ತೇವೋ? ಅಂತ ಪ್ರಾಣಾಂತಿಕ ಜ್ವರದ ಕುರಿತ ಹೀಗೆ ನೂರೆಂಟು ಶಂಕೆಗಳು. ಹಾಗಂತ ಇಲಿಗಳಿಗೂ ನೀತಿ ನಿಯತ್ತು ಇದೆ. ಮನೆಯೊಳಗೆ ಎಷ್ಟು ಪರಡಿ ಹುಡುಕಿದರೂ ಎಷ್ಟು ಇಲಿಗಳ ಹೊಟ್ಟೆ ತುಂಬಿಸಬಹುದು ಅನ್ನೋ ದೂರದೃಷ್ಠಿಯೂ ಇದೆ. ಅದಕ್ಕೇ ಇರಬೇಕು ಅವು ಮನೆಯೊಳಗೆ ಹೊಕ್ಕುವುದು ಒಂದೋ ಅಥವಾ ಅದಕ್ಕೆ ಸಾಥ್ ಮತ್ತೊಂದು ಇಲಿಯಷ್ಟೆ. ಇಲಿ ಅಷ್ಟೊಂದು ತೀಕ್ಷ್ಣಮತಿಯಾಗಿದ್ದಕೇ ಇರಬೇಕು ಅದು ಗಣಪತಿಯ ವಾಹನವಾಗಿರುವುದು. ಶಕ್ತಿಗಿಂತ ಯುಕ್ತಿಯೇ ಅದರ ಬಂಡವಾಳ. ಇಲ್ಲದಿದ್ದರೆ ಡೊಳ್ಳು ಹೊಟ್ಟೆಯ ಗಣಪನ ಭಾರವನ್ನು ಪುಟಾಣಿ ಇಲಿಗೆ ಭರಿಸಲು ಸಾಧ್ಯವೇ?. ಇಷ್ಟಾಗಿಯೂ ಗಣಪತಿಯ ವಾಹನವನ್ನು ಗೌರವದಿಂದ, ಭಯ ಭಕ್ತಿಯಿಂದ ಭಜಿಸದ್ದಕ್ಕೇ ಇರಬೇಕು ಅದಕ್ಕೆ ಇಷ್ಟೊಂದು ರೋಷ.

ಕೆಲವು ಕಡೆ ಈ ಇಲಿಗಾಗಿಯೇ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಾರೆಂದರೆ ನೀವು ನಂಬಲೇ ಬೇಕು. ರಾಜಸ್ಥಾನದ ಬಿಕಾನೀರ್ ಎಂಬ ಊರಿನಲ್ಲಿ ‘ಕರ್ಣಿಮಾತಾ’ ಎಂಬ ದೇವಸ್ಥಾನವಿದೆ. ಅಲ್ಲಿ ಇಲಿಗಳಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಾರಂತೆ. ಅದರ ಕಾರಣ ಬಲು ಸ್ವಾರಸ್ಯಕರವಾಗಿದೆ. ಮೊಗಲರು ರಾಜಸ್ಥಾನದ ಮೇಲೆ ದಂಡೆತ್ತಿ ಬರುವ ಸಮಯದಲ್ಲಿ ಈ ಇಲಿಗಳು ಹಾದಿ ಬೀದಿಯಲ್ಲೆಲ್ಲಾ ಸಣ್ಣ ಸಣ್ಣ ಮಾಟೆ[ಬಿಲ] ಕೊರೆದಿಟ್ಟಿತಂತೆ. ಮೊಘಲರು ದರ್ಪದಿಂದ ಧಾಳಿ ಮಾಡುತ್ತಾ ಕುದುರೆಯ ಬೆನ್ನೇರಿ ಸವಾರಿ ಮಾಡುವಾಗ ಕುದುರೆಯ ಖುರಪುಟ ಈ ಬಿಲದೊಲಗೆ ಸಿಕ್ಕು ಹಾಕಿ ಎಲ್ಲಾ ಯೋಧರು ಕುದುರೆ ಸಮೇತ ದಢದಢನೇ ನೆಲಕ್ಕಪ್ಪಳಿಸಿದ್ದರಂತೆ. ತಾಯಿ ನಾಡಿನ ಮೇಲೆ ಈ ಇಲಿಗೂ ಅದೆಷ್ಟು ಅಭಿಮಾನ, ಗೌರವವಿದೆ ಅನ್ನುವಂತದ್ದನ್ನು ಕಂಡುಕೊಂಡ ಅಲ್ಲಿನ ವಾಸಿಗಳು ಅದಕ್ಕೊಂದು ದೊಡ್ಡ ದೇವಾಲಯವನ್ನೇ ನಿರ್ಮಿಸಿ ಆರಾಧಿಸುತ್ತಿದ್ದಾರೆ. ಇವತ್ತು ಅದು ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರವಾಸಿಗರು ಕುತೂಹಲದಿಂದ ಆ ದೇವಸ್ಥಾನವನ್ನು ನೋಡಲು ಬಹಳಷ್ಟು ಸಂಖ್ಯೆಯಲ್ಲಿಜಮಾಯಿಸುತ್ತಾರೆ. ಆ ದೇವಸ್ಥಾನದ ತುಂಬಾ ಇಲಿಗಳೇ. ಬಂದವರ್‍ಯಾರು ಬರಿಗೈಯಲ್ಲಿ ಬರುವುದಿಲ್ಲ. ಅದಕ್ಕೆ ಹಾಲು, ಕಾಳುಗಳನ್ನೆಲ್ಲಾ ತರುತ್ತಾರೆ. ದೇವಾಲಯದ ಒಳಗಡೆ ಅಲ್ಲಲ್ಲಿ ಬೋಗುಣಿಗಳಿವೆ. ಆ ಬೋಗುಣಿಯ ತುಂಬಾ ಹಾಲು ಹಾಕಿಟ್ಟಿರುತ್ತಾರೆ. ದೇವಾಲಯದ ಒಳಗಡೆ ತುಂಬಾ ಇಲಿಗಳು ನಮ್ಮ ಕಾಲಿಗೆ ತೊಡರಿಕೊಂಡಂತೆ ಓಡಾಡಿಕೊಂಡೇ ಇರುತ್ತವೆ. ಬೇಕೆನ್ನಿಸಿದಾಗ ಹಾಲು ಕುಡಿಯುತ್ತಾ, ಧಾನ್ಯ ತಿನ್ನುತ್ತಾ ಯಾವುದೇ ದಾಂಧಲೆ ಎಬ್ಬಿಸದೆ ತಮ್ಮಷ್ಟಕ್ಕೆ ಇರುತ್ತವೆ. ವಿಶೇಷವೆಂದರೆ ಅವುಗಳು ಆ ದೇವಾಲಯದ ಮೆಟ್ಟಿಲಿನಿಂದಾಚೆ ಒಮ್ಮೆಯೂ ಇಳಿದು ಬರೋದಿಲ್ಲವಂತೆ. ಅದಕ್ಕೆ ತಿನ್ನೋಕೆ ಯಥೇಚ್ಛ ಇದ್ದರೆ ಅದು ಸುಮ್ಮಗೆ ಉಪದ್ರ ಕೊಡೋದಿಲ್ಲ ಅನ್ನುವಂತದ್ದು ಸಾಬೀತಾಯಿತು ನೋಡಿ. ಹಾಗಂತ ನಮ್ಮ ಮನೆಯಲ್ಲಿ ಕಾಟ ಕೊಡುವ ಈ ಇಲಿಯ ವಂಶಸ್ಥರನ್ನು ನೂರೆಂಟು ಸಮರ್ಥನೆಗಳಿಗಾಗಿ ಸುಮ್ಮನೆ ಬಿಟ್ಟು ಬಿಡೋಕಾಗುತ್ತಾ?.

ಒಂದೊಮ್ಮೆ ಎಲ್ಲಿಗೋ ಹೋಗಿದ್ದಾಗ ಚೆಂದದ ಸೋಫಾ ಕುಷನ್ ತಂದಿದ್ದೆವು. ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ಇಂತಹ ಎಷ್ಟೋ ಉದಾಹರಣೆಗಳಿವೆ. ಅದಿರಲಿ, ತಂದ ಕುಶನ್ ಅನ್ನು ಒಪ್ಪ ಮಾಡಿ ಸೋಫಾದ ಮೇಲೆ ಹಾಕಿದ್ದರೆ ಆಗುತ್ತಿತ್ತು. ಮಕ್ಕಳು ಕುಂತು, ನಿಂತು, ಮೆಟ್ಟಿ ಹಾಳು ಮಾಡಿ ಬಿಡುತ್ತಾರೆ,ಹೇಗೂ ಹಳತು ಇದೆಯಲ್ಲ ಸಧ್ಯಕ್ಕೆ ಅದೇ ಇರಲಿ, ಅಪರೂಪದ ಅತಿಥಿಗಳು ಬಂದಾಗ ಆಯಿತು ಅಂತ ಅಂದಾಜಿಸಿ ಅದನ್ನು ಕೋಣೆಯೊಳಗೆ ಇಟ್ಟು ಅದಕ್ಕೆ ದೂಳು ತಾಕದಂತೆ ಅದರ ಮೇಲೆ ದೊಡ್ಡ ಜಮಾಖಾನೆ ಹಾಸಿ ಜೋಪಾನ ಮಾಡಿಟ್ಟಿದ್ದೆವು. ಹಾಗೇ ಜೋಪಾನವಾಗಿಯೇ ಇದೆ ಅಂತಾನೇ ಮೊನ್ನೆಯವರೆಗೂ ನಂಬಿ ಕೊಂಡಿದ್ದೆವು. ನಮಗೆ ಒಮ್ಮೊಮ್ಮೆ ಯಾವುದೋ ಒಂದು ಹುಕಿ ಬಂದು ಬಿಡುತ್ತದೆ. ಆಗ ಸೆರಗು ಸೊಂಟಕ್ಕೆ ಬಿಗಿದು, ಮೂಲೆ ಮೂಲೆ ಪರಡಿ ತಡಕಿ ಕೆಲಸ ಶುರು ಹಚ್ಚಿಕೊಳ್ಳುತ್ತೇವೆ. ಮೊನ್ನೆಯೊಮ್ಮೆ ಹಾಗೇ ಮೂಲೆ ಮುಡುಕು ಸ್ವಚ್ಛ ಮಾಡುವ ಉಮೇದಿಗೆ ಬಿದ್ದಾಗ, ಮುಸುಗು ಹಾಕಿ ಮಲಗಿಸಿದ್ದ ಜಮಾಖಾನೆಯ ತೆಗೆದಾಗಲೇ ಗೊತ್ತಾದದ್ದು. ಕುಷನ್ ಒಳ ಹೊಕ್ಕು ಇಲಿಗಳು ಹತ್ತಿ ಚೂರನ್ನೆಲ್ಲಾ ಹೊರ ಹಾಕಿ ಕಿತಾಪತಿ ಮಾಡಿದ್ದು.

ತಿನ್ನುವ ಆಹಾರ ,ಬಾಗಿಲು, ಮರಮುಟ್ಟು ,ಹಾಸಿಗೆ, ಸೋಫಾ ಕುಷನ್ ಯಾವುದನ್ನೂ ಬಿಡದೇ ಸ್ವಾಹ ಮಾಡಿದ್ದಾಯ್ತಲ್ಲ ಈ ಇಲಿ?. ನಾವು ನಿದ್ದೆ ಮಾಡಿದಾಗ ಇನ್ನೇನು ನಮ್ಮ ಕಿವಿಯ ತೂತನ್ನು ಮತ್ತಷ್ಟು ದೊಡ್ಡಕ್ಕೆ ಕೊರೆದು ಅದರೊಳಗೆ ವಾಸ್ತವ್ಯ ಹೂಡಿ ಬಿಡುತ್ತದೆಯೇನೋ ಅನ್ನೋ ಭಯ ಕಾಡಿದ್ದು ಸುಳ್ಳೇನಲ್ಲ. ಇಂತಹ ಹೊತ್ತಿನಲ್ಲಿಯೇ ನಮ್ಮ ಮಾವನವರು ಇಲಿ ಕತ್ತರಿಯನ್ನು ತಂದದ್ದು. ತದನಂತರ ಅದೆಷ್ಟೋ ಇಲಿಗಳು ಈ ಇಲಿ ಕತ್ತರಿಗೆ ಕೊರಳು ಕೊಟ್ಟದ್ದೂ ಆಯಿತು. ಒಮ್ಮೊಮ್ಮೆ ಹೆಗ್ಗಣವೂ ಬಿದ್ದಿತ್ತೆನ್ನಿ. ಈ ಸಂತೋಷದಲ್ಲಿ ಇಲಿ ಕಾಟದಿಂದ ಮುಕ್ತಿ ಹೊಂದಲೇ ಬೇಕು ಎನ್ನೋ ಆತುರಕ್ಕೆ, ಒಂದು ಇಲಿ ಕತ್ತರಿಯಿಂದ ಏನೂ ಪ್ರಯೋಜನವಿಲ್ಲವೆನ್ನಿಸಿ ಮತ್ತೊಂದು ಇಲಿ ಕತ್ತರಿ ತಂದದ್ದೂ ಆಯಿತು. ಒಂದೆರಡು ದಿನ ಟಪ್ ಟಪ್ ಅಂತ ಸದ್ದು ಮಾಡಿತ್ತಷ್ಟೆ. ಈಗ ನೋಡಿದರೆ ಆ ಕತ್ತರಿಯ ಕುತಂತ್ರ ಇಲಿಗಳಿಗೂ ಗೊತ್ತಾಗಿ ಹೋಗಿ, ಒಂದೇ ಒಂದು ಇಲಿಗಳು ಅದರ ಹತ್ತಿರ ಕೂಡ ಸುಳಿಯದೆ ಒಂದಷ್ಟು ಇಲಿಗಳಿಗೆ ಮುಕ್ತಿ ಕರುಣಿಸಿದ್ದಕ್ಕೆ ಸಾಕ್ಷಿಯೆಂಬಂತೆ ಹಾಗೇ ಒಂದು ಮೂಲೆಯಲ್ಲಿ ತೆಪ್ಪಗೆ ಬಿದ್ದುಕೊಂಡಿದೆ. ನಾನೋ ಮತ್ತೊಂದು ಇಲಿ ಹಿಡಿಯುವ ಸಲಕರಣೆಗಾಗಿ ತಡಕಾಡಬೇಕೋ?,ಇರುವ ಪುಟ್ಟ ಅಂಗಳದಲ್ಲಿ ಧವಸ ಧಾನ್ಯ ಬೆಳೆಯ ಬೇಕೋ?, ಅಥವಾ ಇಲಿಗೊಂದು ಗುಡಿ ಕಟ್ಟಿ ಪೂಜೆ ಸಲ್ಲಿಸಬೇಕೋ? ಎನ್ನುವ ಗೊಂದಲದಲ್ಲಿರುವೆ.

-ಸ್ಮಿತಾ ಅಮೃತರಾಜ್. ಸಂಪಾಜೆ

9 Responses

  1. Hema says:

    ಇಲಿಗೊಂದು ಗುಡಿಯನ್ನೇ ಕಟ್ಟಿಸುವುದು ಉತ್ತಮ ಅಂತ ನನ್ನ ಪುಕ್ಕಟೆ ಸಲಹೆ. 🙂 🙂 ನನ್ನ ಹಾಗೆ ‘ತಿರುಗಾಟ’ದ ಜಾಯಮಾನದವರಿಗೆ ಇನ್ನೊಂದು ಪ್ರವಾಸಿಸ್ಥಳ ಸಿಕ್ಕಂತಾಗುತ್ತದೆ! ಬರಹ ಖುಷಿ ತಂದಿತು..

  2. ಸುಬ್ರಹ್ಮಣ್ಯ ಹೆಚ್.ಎನ್. says:

    ಸುಬ್ರಹ್ಮಣ್ಯ ಹೆಚ್.ಎನ್. ಬರಹ ಬಹಳ ಸೊಗಸಾಗಿದೆ

  3. Sumanachinmaya says:

    ಇಲಿಯಾಯಣ Super

  4. Anonymous says:

    Thanks ನಿಮ್ಮೆಲ್ಲರ ಪ್ರೋತ್ಸಾಹಕ್ಕೆ

  5. Shankari Sharma says:

    ಇಲಿಯ ಆಟ…ಬೆಕ್ಕಿಗೆ ಪ್ರಾಣಸಂಕಟ??! ತಿಳಿ ಹಾಸ್ಯ ಲೇಖನ ಸೂಪರ್.

  6. Nayana Bajakudlu says:

    ಚೆನ್ನಾಗಿದೆ ಮೇಡಂ ಬರಹ. ಸಿಂಪಲ್ ಆದ ಒಂದು ಟಾಪಿಕ್ .ಅದರೊಳಗೆ ಎಷ್ಟೊಂದು ವಿಷಯಗಳು , ನೈಸ್ . ಕೃಷಿಕರಿಗೂ ಒಂದು ಸಣ್ಣ ಎಚ್ಚರಿಕೆ ಇದೆ , ಇಲಿಗಳ ದೇವಸ್ಥಾನದ ಕುರಿತು ಇವತ್ತೇ ಕೇಳಿದ್ದು . ಸಣ್ಣ ಸಣ್ಣ ವಿಷಯಗಳಿಂದ ತುಂಬಿದ ಬರಹ ಚೆನ್ನಾಗಿದೆ.

  7. Raghunath Krishnamachar says:

    ಚಂದದ ಇಲಿಅಯನ

  8. ಸುರೇಖಾ ಭೀಮಗುಳಿ says:

    ಚಂದದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: