ಡಾ.ಚಂದ್ರಶೇಖರ ಕಂಬಾರ- ಕೆಲ ರಸನಿಮಿಷಗಳು
ಮರತೇನಂದ್ರ ಮರೆಯಲಿ ಹ್ಯಾಂಗ,ಹೇಳತೇನ ಕೇಳ ….ಡಾ.ಚಂದ್ರಶೇಖರ ಕಂಬಾರ ಸಾಹಿತ್ಯಿಕ ವಲಯದಲ್ಲಿ ಎಲ್ಲರಿಗೂ ಗೊತ್ತು.ಇದನ್ನು ಹೊರತುಪಡಿಸಿ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗಲನ್ನು ಇಲ್ಲಿ ಪರಿಚಯಿಸಲಾಗಿದೆ.
ನನಗೆ ಚಂದ್ರಶೇಖರ ಕಂಬಾರ ಸಾಹಿತ್ಯದ ಪರಿಚಯವಾದುದು ನನ್ನ ಕಾಲೇಜಿನ ದಿನಗಳಲ್ಲಿ 1970 ರಿಂದ 1974 ರ ಅವಧಿಯಲ್ಲಿ. ಚಿಕ್ಕಂದಿನಿಂದಲೂ ಓದುವ ಬರೆಯುವ ಗೀಳು ಹಚ್ಚಿಕೊಂಡಿದ್ದ ನಾನು ಆಗ ಪತ್ರಿಕೆಗಳಲ್ಲಿ ಬರುತ್ತಿದ್ದ ಅವರ ಕಥೆ,ಕವನಗಳನ್ನು ಬಿಡದೆ ಓದುತ್ತಿದ್ದೆ.ಅದಕ್ಕೆ ಕಾರಣ ಎರಡು. ಮೊದಲನೆಯದು ಅವರು ನನ್ನ ತಾಲೂಕಿನವರೆಂದ, ಎರಡನೆಯದು ಅವರ ಬರವಣಿಗೆಯಲ್ಲಿ ನಮ್ಮ ನೆಲದ ಮಣ್ಣಿನ ವಾಸನೆ ಹೊಡೆಯುತ್ತಿದ್ದುದು. ಆಗಿನಿಂದಲೂ ನನಗೆ ಅವರ ಬಗ್ಗೆ ವಿಶೇಷ ಗೌರವ.ಅವರನ್ನು ಪ್ರಥಮಸಲ ಭೇಟಿ ಮಾಡಿದ್ದು 1976 ರಲ್ಲಿ,ಗೋಕಾಕದಲ್ಲಿ. ನಮ್ಮ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹಿರಿಯ ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಅವರನ್ನು ಆಹ್ವಾನಿಸಲೆಂದು
ಗೋಕಾಕನ ಅವರ ಮನೆಗೆ ಹೋದಾಗ ಅಲ್ಲಿ ಕಂಬಾರರನ್ನು ನೋಡಿದ್ದೆ.ನನ್ನನ್ನು ಕಂಬಾರರಿಗೆ ಪರಿಚಯಿಸಿದ ಪುರಾಣಿಕರು ಇವನೂ ನನ್ನ ಶಿಷ್ಯನೇ ಎಂದಿದ್ದರು.ಪುರಾಣಿಕ ಅವರ ಜತೆಗೆ ನಾನು ಕಂಬಾರ ಅವರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದೆ. ಸಂತೋಷದಿಂದಲೇ ಬರಲು ಒಪ್ಪಿದ್ದರು. ಹುಕ್ಕೇರಿಯಲ್ಲಿ ಆ ವರ್ಷ ನಾವು ಏರ್‍ಪಡಿಸಿದ್ದ ಒಂದು ವಾರ ಕಾಲದ ನಾಟಕೋತ್ಸವವನ್ನು ಕಂಬಾರ ಅವರೇ ಉದ್ಘಾಟಿಸಿದ್ದರು.ಅಂದಿನಿಂದ ನನ್ನ ಹಾಗೂ ಕಂಬಾರ ಅವರ ನಡುವಿನ ಸ್ನೇಹ ಸಂಬಂಧ ಹಾಗೆಯೆ ಬೆಸಗೊಳ್ಳುತ್ತ,ಗಟ್ಟಿಗೊಳ್ಳುತ್ತ ಬಂದಿದೆ.ಕಳೆದ ನಲವತ್ತೆರಡು ವರ್ಷಗಳ ನನ್ನ ಅವರ ಸಂಬಂದ ಕೇವಲ ಸಾಹಿತ್ಯ,ಯಾವೋ ಕರ್ಯಕ್ರಮಗಳಿಗೆ ಸೀಮೀತವಲ್ಲ.ಅದನ್ನೂ ಮೀರಿದ್ದು,ವೈಯುಕ್ತಿಕ ನೆಲೆಗಟ್ಟಿನದು,ಕೌಟುಂಬಿಕತೆಯದು.ಅವರ ಸುಪುತ್ರ ರಾಜಶೇಖರ ಅವರಿಂದಾಗಿ ಅದು ಮತ್ತಷ್ಟು ಹೆಪ್ಪುಗಟ್ಟಿದೆ.
ಕಂಬಾರ ಅವರು ಏನೂ ಇಲ್ಲದಿದ್ದಾಗಿನಿಂದ ಈಗೆಲ್ಲವೂ ಆಗಿರುವವರೆಗೆ ಅವರದು ನನ್ನದು ಒಡನಾಟ.ಅವರೊಬ್ಬರಷ್ಟೇ ಅಲ್ಲ, ಅವರ ಕುಟುಂಬೀಯರೊಂದಿಗೂ ಕೂಡ. ನಮ್ಮಕುಟುಂಬಕ್ಕೂ ಅವರಿಗೂ ಅವಿನಾಭಾವ ಸಂಬಂಧ.ಈ ಭಾಗಕ್ಕೆ ಬಂದರೆ ಹುಕ್ಕೇರಿಗೆ ಬಂದು ನಮ್ಮನೆಯಲ್ಲಿ ಊಟ ಅಥವಾ ಉಪಾಹಾರ ಮಾಡಿ ಮನೆಯವರೊಂದಿಗೆ ಹರಟಿ ವಿಶ್ರಾಂತಿ ಪಡೆದು ಹೊರಡುವದು ಅವರ ಪದ್ಧತಿ. ಬಹಿರಂಗವಾಗಿ ಅವರು ಡಾ.ಚಂದ್ರಶೇಖರ ಕಂಬಾರ.ಆದರೆ ಆಪ್ತರಿಗೆ ಚಂದ್ರಪ್ಪ,ಖಾಸಾ ದೋಸ್ತರಿಗೆ,ಆತ್ಮಿಯರಿಗೆ ಚಂದ್ರು.ನನಗೆ ಗುರು ಸ್ಥಾನದಲ್ಲಿ,ಹಿತೈಷಿ,ಮಾರ್ಗದರ್ಶಿ. ಸೀದಾಸಾದಾ ವ್ಯಕ್ತಿತ್ವ, ಸರಳ ನೇರನಡೆನುಡಿ. ಎಷ್ಟೇ ದೊಡ್ಡವರಾದರೂ ಎನಿತೂ ಅಹಂಭಾವವಿಲ್ಲ.ಬೆಳಗಾವಿಯ ಲಿಂಗರಾಜ ಕಾಲೇಜಿನ ಉಪನ್ಯಾಸಕ ಅಥವಾ ಬೆಂಗಳೂರು ವಿವಿ.ಯ ಪ್ರಾಧ್ಯಾಪಕರಾಗಿದ್ದಾಗಿನ ಸರಳತೆಯೇ ಹಂಪಿ ಕನ್ನಡ ವಿವಿಯ ಕುಲಪತಿಯಾಗಿದ್ದಾಗಲೂ ಇತ್ತು.ಮಾತೂ ಕೂಡ ಸೌಮ್ಯಬಿರುನುಡಿ ಗೊತ್ತೇ ಇಲ್ಲಪ್ಯಾಂಟು ಶರ್ಟು ಧರಿಸಿದರು ಅಷ್ಟೇ,ಧೋತರ ಉಟ್ಟು ನೆಹರು ಶರ್ಟು ಧರಿಸಿದರೂ ಅಷ್ಟೇ ಸರಳತೆಯ ಪ್ರತೀಕ ಅವರು.ತಲೆಯ ಮೇಲೊಂದು ರುಮಾಲು ಸುತ್ತುಕೊಂಡಾಗಲಂತೂ ಅವರೊಬ್ಬ ಥೇಟ ಊರ ಗೌಡರಂತೆ ಕಂಗೊಳಿಸುತ್ತಾರೆ.ಸಣ್ಣವರೊಂದಿಗೆ ಸಣ್ಣವರಾಗಿದೊಡ್ಡವರೊಂದಿಗೆ ದೊಡ್ಡವರಾಗಿ ಎಲ್ಲರೊಂದಿಗೆ ಸಮ್ಮಿಳಿತರಾಗುವ ಕಂಬಾರರು ಈಗಲೂ ವರ್ಷಕ್ಕೊಂದೆರಡು ಸಲ ತಮ್ಮ ಊರು ಘೋಡಗೇರಿಗೆ ಬರುವದನ್ನು ತಪ್ಪಿಸುವದಿಲ್ಲ.ಬೆಳಗಾವಿ ಧಾರವಾಡಕ್ಕೆ ಬಂದರೆ ಆಯಿತು.ಘೋಡಗೇರಿಗೆ ಅವರು ಬಂದುಹೋಗುವದು ನಿಕ್ಕಿ.
ಹುಕ್ಕೇರಿ ತಾಲೂಕಿನ ಘೋಡಗೇರಿ ಹಿಡಕಲ್ ಅಣೆಕಟ್ಟು ಪ್ರದೇಶದ ತಪ್ಪಲಿನಲ್ಲಿರುವ ಘಟಪ್ರಭೆ ಹಾಗೂ ಹಿರಣ್ಯಕೇಶಿ ನದಿಗಳ ಸಂಗಮದ ಮಡಿಲಲ್ಲಿರುವ ಸಮೃದ್ಧ ಹಸಿರು,ಕಬ್ಬಿನ ಗದ್ದೆಗಳ ಮಧ್ಯೆ ಸುಖವಾಗಿ ನಲಿವ ಊರು.ಕಂಬಾರರದು ಇಲ್ಲಿ ಕಮ್ಮಾರಿಕೆಯ ಮನೆತನ.ಅವರ ಸೋದರರ ಮಕ್ಕಳು ಈಗಲೂ ಇಲ್ಲಿ ಕಮ್ಮಾರಿಕೆ ನಡೆಸುತ್ತಾರೆ.ಊರ ನಡುವಿರುವ ಕಮ್ಮಾರ ಸಾಲೆಯೇ ಚಂದ್ರುವಿನ ಮೊದಲ ಜಾನಪದ ಪಾಠಶಾಲೆ.ಚಿಕ್ಕವರಿದ್ದಾಗ ಅಪ್ಪನೊಂದಿಗೆ ಇಲ್ಲೇ ತಿದಿ ಜಗ್ಗುತ್ತ ಒಮ್ಮೊಮ್ಮೆ ಶಾಲೆಯ ಕಡೆಗೆ ಮುಖ ಮಾಡುತ್ತ,ಬೆನ್ನು ತೋರಿಸುತ್ತ ಬೆಳೆದವರು.ಘೋಡಗೇರಿಗೆ ಬಂದರೆ ಮೊಟ್ಟಮೊದಲು ಅವರು ಭೇಟಿ ನೀಡುವದು ಗ್ರಾಮ ದೇವರು ಗಜಲಿಂಗೇಶ್ವರ – ಬೀರಪ್ಪ ದೇವರ ಮಂದಿರಕ್ಕೆ.ಈ ಗುಡಿಗೆ ಹೋಗಬೇಕಾದರೆ ಅವರು ಕಲಿತ ಕನ್ನಡ ಶಾಲೆಯ ಮುಂದಿನಿಂದಲೇ ಹೋಗಬೇಕು.ಆಗ ತಮ್ಮ ಜತೆಗಿದ್ದವರಿಗೆ ಅವರು ನೋಡ್ರಿ,ಇದ ನಾ ಕಲತ ಸಾಲಿಎಂದು ಹೆಮ್ಮೆಯಿಂದ ಹೇಳುತ್ತಾರೆ.ಗುಡಿಯ ಆವರಣದ ಮುಂದೆಯೇ ಮುಸ್ಲಿಮ್ ದರ್ಗಾ ಇದೆ.ಅಲ್ಲೂ ಒಂದು ನಿಮಿಷ ನಿಂತು ನಮಸ್ಕರಿಸಿ ಮತ್ತೆ ಹೇಳುತ್ತಾರೆ. ಹಿಂದೂ ಮುಸ್ಲಿಮ್ ಭಾವೈಕ್ಯತೆ ಅಂದ್ರ ಇದ ನೋಡ್ರಿ.ಮುಂದೆ ದೇವರಿಗೆ ಹೋಗಿ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಪೂಜಾರಿಯ ಕೈಗೆ ಕೆಲ ನೋಟುಗಳ ದಕ್ಷಿಣೆ ಇಟ್ಟು ಹೊರಬಂದು ಊರೊಳಗೆ ಹೋಗುತ್ತಿರುವಾಗ ಅವರ ಖಾಸಾಗೆಳೆಯರು,ಚಡ್ಡಿ ದೋಸ್ತರು ಓಣಿಗಳಲ್ಲಿ ಭೇಟಿಯಾಗುತ್ತಿರುತ್ತಾರೆ.ಅವರೊಂದಿಗೆ ಅವರು ಸಲಿಗೆಯಿಂದ ಮಾತನಾಡುತ್ತ ಏನೋ ಭೂಷಿ,ಏನೋ ಶಿರಸು,ಏನೋ ಸಿದ್ದಪ್ಪ ಹ್ಯಾಂಗಿದ್ದಿಯೋ ಎಂದು ಕೇಳುತ್ತ ಅವರ ಹಾಗೂ ಅವರ ಮನೆಮಂದಿಯ ಯೋಗಕ್ಷೇಮ ವಿಚಾರಿಸುತ್ತ ಮಾತನಾಡುವದನ್ನು ಕೇಳುವದೇ ಒಂದು ಆನಂದ.ತಮ್ಮ ಮನೆಗೆ ಬಾರೋ ಎಂದವರಿಗೆ ಮತ್ತೊಮ್ಮೆ ಬಂದಾಗ ಬರ್‍ತೀನೋ………. ಅವಂಗ ನಾ ಕೇಳಿದಂತ ಹೇಳಎಂದು ಹೇಳಿ ತಮ್ಮ ಮನೆಗೆ ಹೋಗುತ್ತಾರೆ.ಅಲ್ಲಿ ಕುಟುಂಬೀಯರ ಜತೆ ಕೂತು ನಾಲ್ಕು ಮಾತು ಆಡಿ ಎಲ್ಲರ ಯೋಗಕ್ಷೇಮ ಕೇಳಿ ಮನೆ ದೇವರ ಜಗಲಿಗೆ ಹೋಗಿ ನಮಸ್ಕರಿಸಿ ಹೊರಬಂದು ತಮ್ಮ ಕಮ್ಮಾರ ಸಾಲೆ ನೋಡಿ ಅದು ಚನ್ನಾಗಿ ನಡೆದಿರುವದನ್ನು ಕೇಳಿ ಖುಷಿಪಟ್ಟು ಹೊರಡುವದು ಪಕ್ಕದ ಸಾವಳಗಿ ಮಠಕ್ಕೆ.
(ಚಿತ್ರ:ಘೋಡಗೇರಿಯಲ್ಲಿ ತಮ್ಮ ಜಿಗರಿ ದೋಸ್ತ ಶ್ರೀಶೈಲಪ್ಪ ಮಗದುಮ್ ಅವರೊಂದಿಗೆ ಡಾ.ಕಂಬಾರರು).
ಮೇಲ್ನೋಟಕ್ಕೆ ಮಸೀದಿ,ಒಳಗಡೆ ವೀರಶೈವ ಲಿಂಗಾಯತ್ ಸ್ವಾಮಿಗಳ ಗದ್ದುಗೆ – ನಾಡಿನ ಹಿಂದೂ ಮುಸ್ಲಿಮ್ ಸಾಮರಸ್ಯದ ಸೇತುವೆಯಾಗಿರುವ ಸಾವಳಗಿ ಮಠ ಕಂಬಾರರ ಜೀವನದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿದೆ.ಮಠಕ್ಕೆ ಹೋದಕೂಡಲೆ ಮೊದಲು ಈ ಮಠದ ಹಿಂದಿನ ಸ್ವಾಮಿಗಳಾಗಿದ್ದ ಶ್ರೀ ಸಿದ್ದರಾಮ ಸ್ವಾಮಿಗಳವರ ಗದ್ದುಗೆಯ ದರ್ಶನ.ಈ ಸ್ವಾಮಿಗಳವರ ಬಗ್ಗೆ ಅವರಿಗೆ ಅಪಾರ ಭಕ್ತಿ.ಮಠದ ಹಿಂದಿರುವ ಆವರಣದಲ್ಲಿರುವ ಗದ್ದುಗೆಗೆ ಬರಿಗಾಲಲ್ಲಿ ಹೋಗಿ ಭಕ್ತಿಯಿಂದ ಗದ್ದುಗೆಯ ಮುಂದೆ ನಿಂತು ಹದಿನೈದಿಪ್ಪತ್ತು ನಿಮಿಷ ಧ್ಯಾನಿಸಿ ಸಾಷ್ಟಾಂಗ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಗದ್ದುಗೆಯಿಂದ ಪ್ರೇರಣೆ ಪಡೆದು ಹೊರಡುವ ಅವರ ಮುಖದಲ್ಲಿ ಧನ್ಯತೆಯ ಭಾವ ಕಾಣಬಹುದು.ಇದು ಅವರ ಭಕ್ತಿಯ,ಕೃತಜ್ಞತೆಯ ರೀತಿ.
ನಾಡಿನ ಖ್ಯಾತ ಕಾದಂಬರಿಕಾರ.ಕಾದಂಬರಿ ಋಷಿ ಕೃಷ್ಣಮೂರ್ತಿ ಪುರಾಣಿಕ ಅವರ ಬಗ್ಗೆಯೂ ಕಂಬಾರರಿಗೆ ಅತ್ಯಂತ ಪ್ರೀತಿಯ ಗೌರಾವದರಗಳಿವೆ.ಪುರಾಣಿಕರು ಗೋಕಾಕದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದವರು ಕಂಬಾರರಿಗೂ ಆತ್ಮೀಯ ಗುರುಗಳು.ಇವರಲ್ಲಿಯ ಸಾಹಿತ್ಯದ ಪ್ರತಿಭೆ ಗುರುತಿಸಿ ಅದು ಬೆಳೆಯಲು ಕಾರಣರಾಗಿ ಪ್ರೋತ್ಸಾಹಿಸಿದವರೇ ಕೃಷ್ಣಮೂರ್ತಿ ಪುರಾಣಿಕರು.ಬಡತನದಲ್ಲಿದ್ದ ಚಂದ್ರು ಆರ್ಥಿಕ ತೊಂದರೆಯಿಂದ ಹೈಸ್ಕೂಲಿಗೆ ಹೋಗಲಾರದ ಸಂಧರ್ಭದಲ್ಲಿ ಅವನನ್ನು ಶಾಲೆಗೆ ಕರೆಸಿಕೊಂಡು ಫೀಜು ನೀಡಿ ಹಣಕಾಸು ಸಹಾಯ ಮಾಡಿ ಸಾವಳಗಿ ಮಠದ ಸ್ವಾಮಿಗಳಿಗೆ ಅವನನ್ನು ಮಠದಲ್ಲಿಟ್ಟುಕೊಳ್ಳುವಂತೆ ಹೇಳಿ ಶಿಕ್ಷಣ ಮುಂದುವರೆಸಲು ಸಹಕರಿಸಿದವರೇ ಪುರಾಣಿಕರು.ಸಾವಳಗಿ ಸ್ವಾಮಿಗಳು ಹಾಗೂ ಕೃಷ್ಣಮೂರ್ತಿ ಪುರಾಣಿಕರು ಕಂಬಾರರ ಜೀವನದ ದಿಕ್ಕನ್ನೇ ಬದಲಿಸಿದವರು.ಮುಂದೆ ಬೆಳಗಾವಿಗೆ ಲಿಂಗರಾಜ ಕಾಲೇಜಿಗೆ ಬಂದಾಗ ಅಲ್ಲಿ ಕನ್ನಡದ ಉಪನ್ಯಾಸಕರಾಗಿದ್ದ ಎಸ್.ಎಸ್.ಭೂಸನೂರಮಠ ಅವರು ಇವರ ಸಾಹಿತ್ಯಿಕ ಗುರುಗಳು.ಅಂತೆಯೇ ಕಂಬಾರರು ಈ ಮೂವರನ್ನು ಸ್ಮರಿಸದ ದಿನವಿಲ್ಲ.ತಮಗೆ ಸಹಾಯ ಮಾಡಿದವರನ್ನು ಮೇಲಿಂದಮೇಲೆ ನೆನೆಯುತ್ತ,ಅವರ ಉಪಕಾರ ಸ್ಮರಿಸುತ್ತ ಅವರಿಂದಾಗಿ ನಾನು ಈ ಮಟ್ಟಕ್ಕೆ ಬಂದೆ ಎಂದು ನಾಲ್ಕು ಜನರಲ್ಲಿ ಹೇಳಿಕೊಳ್ಳುವದು ಅವರ ದೊಡ್ಡಗುಣಕ್ಕೆ ಸಾಕ್ಷಿ.ಸಭೆ ಸಮಾರಂಭಗಳಲ್ಲೂ ಕೂಡ ಇವರುಗಳನ್ನು ಹೃದಯದುಂಬಿ ಸ್ಮರಿಸುತ್ತಾರೆ.ಕೃತಜ್ಞತೆಯ ಸಾಗರ ಚಂದ್ರಶೇಖರ ಕಂಬಾರರು.
ಘೋಡಗೇರಿಗೆ ಹೋಗುವಾಗಲೆಲ್ಲ ಅವರು ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚುತ್ತ, ಜತೆಯಲ್ಲಿರುವವರಿಗೆ ಅದನ್ನು ಹಂಚುತ್ತ ಲಾವಣಿಪದ ಗುನುಗುತ್ತ ಹೊಸ ಬದಲಾವಣೆಗೆ ತಮ್ಮೂರಿನ ಪರಿಸರ ತರೆದುಕೊಂಡಿರುವದಕ್ಕೆ ಬೆರಗಾಗುತ್ತ ಅದಕ್ಕೆ ಖುಷಿಪಡುವ ಕಂಬಾರ ಅವರನ್ನು ನೋಡುವದು,ಖುಷಿಯ ಆ ಕ್ಷಣಗಳಲ್ಲಿ ಅವರು ಜಾನಪದ ಹಾಡು ಹಾಡುವದನ್ನು ಕೇಳುವದು ನಿಜಕ್ಕೂ ಒಂದು ಅಪೂರ್ವ ಸಂತಸದ ಅನುಭವ.ಅವರೊಂದಿಗಿನ ಆ ಕ್ಷಣಗಳು ಅವರ್ಣನೀಯ.
ಕಂಬಾರರ ಬಾಲ್ಯ,ಮಕ್ಕಳ ಜೀವನ ಅಷ್ಟೇನೂ ಸಂತೋಷವಾಗಿರಲಿಲ್ಲ.ಅವರುಹುಡುಗನಗಿದ್ದಾಗ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿದ್ದ ಬಯಲಾಟ,ದೊಡ್ಡಾಟಗಳು ಅವರ ಬದುಕಿಗೆ ಸಾಹಿತ್ಯದ ಸ್ಪರ್ಷ ನೀಡಿದವು.ಇವರ ತಂದೆ ಬಸವಣ್ಣೆಪ್ಪ ಸ್ವಾತಂತ್ರ್ಯಹೊರಾಟಗಾರರಲ್ಲದಿದ್ದರೂ ಹೋರಾಟಗಾರರ ಸಂಪರ್ಕದಲ್ಲಿದ್ದರು.ಘೋಡಗೇರಿಯ ಗುಡ್ಡಗಳಲ್ಲಿ ಅವಿತಿರುತ್ತಿದ್ದ ಸ್ವಾ.ಹೋರಾಟಗಾರರಿಗೆ ಊಟ ಕೊಡುವದು,ಅವರ ಸಂದೇಶವನ್ನು ಬೇರೆ ಸ್ವಾ.ಹೋರಾಟಗಾರರಿಗೆ ಮುಟ್ಟಿಸುವ ಕೆಲಸವನ್ನು ಅವರು ಮಾಡುತ್ತಿದ್ದರು.ಇವರ ತಂದೆ ಹಿರಿಯ ಸ್ವಾ.ಹೋರಾಟಗಾರ ಅಣ್ಣೂಗುರೂಜಿ ಅವರ ಶಿಶ್ಯ ಅಣ್ಣೂಗುರೂಜಿ ಅವರು ತಾಸುಗಟ್ಟಲೇ ಭಾಷಣ ಮಾಡುತ್ತಿದ್ದುದನ್ನು,ಅವರ ಭಾಷಣಕ್ಕಾಗಿ ಜನರು ತಾಸುಗಟ್ಟಲೇ ಕಾಯ್ದು ಕುಳಿತಿರುತ್ತಿದ್ದುದನ್ನು ಕಂಬಾರರು ಈಗಲೂ ಸ್ಮರಿಸಿಕೊಳ್ಳುತ್ತಾರೆ.ಅವರ ತಾಯಿ ಚನ್ನವ್ವ ಹೇಳುತ್ತಿದ್ದ ಜನಪದ ಕತೆಗಳು,ಹಾಡುಗಳು,ಊರುಕೇರಿಗಳಲ್ಲಿ ಕೇಳುತ್ತಿದ್ದ ಲಾವಣಿ,ಬೀಸುವ ಕಲ್ಲಿನ ಹಾಡುಗಳು,ಸೋಬಾನ,ಗೀಗೀ ಪದಗಳು,ಹಂತಿಯ ಹಾಡುಗಳು, ಸಣ್ಣಾಟಗಳು, ಪಾರಿಜಾತ, ರಾಧಾನಾಟ ಇವೆಲ್ಲ ಎಳೆಯ ಚಂದ್ರುವಿನ ಹೃದಯದಲ್ಲಿ ಜಾನಪದ ಸಾಹಿತ್ಯದ ಬೀಜಾಂಕುರ ಮಾಡಿದವು,ಮೆದುಳಿನಲ್ಲಿ ಸಾಹಿತ್ಯದ ಬೇರು ಮೂಡಿಸಿದವು.ಆಗಿನಿಂದಲು ಅವರ ಮನಸ್ಸಿನಲ್ಲಿ ಜಾನಪದ ಲೋಕ ಅನಾವರಣಗೊಳ್ಳಲಾರಂಭಿಸಿತ್ತು.
ಮುಂದಿದು ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಮೂಡಿಸಿತು.ಕಾವ್ಯ,ಜಾನಪದ, ನಾಟಕ, ಸಿನಿಮಾ, ಕಥೆ, ಕಾದಂಬರಿ, ಹೀಗೆ ಹತ್ತು ಹಲವಾರು ಪ್ರತಿಭೆಗಳ ಸಾಗರ ಕಂಬಾರರು.
2012 ರಲ್ಲಿ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಯಿತು.ಇದರ ಹೊಸದರಲ್ಲೇ ಅವರು ಬೆಳಗಾವಿ,ಹುಕ್ಕೇರಿಗೆ ಬಂದಿದ್ದರು.ನಮ್ಮ ಮನೆಗೆ ಬಂದಾಗ ಆಗಷ್ಟೇ ನಮ್ಮಲ್ಲಿ ಮೊದಲ ಮೊಮ್ಮಗ ಜನಿಸಿದ್ದ.ಅವನಿಗಿನ್ನೂ ಹೆಸರಿಟ್ಟಿರಲಿಲ್ಲ.ಸರ,ನೀವ ಬಂದದ್ದ್ ಛಲೊ ಆತು,ನಮ್ಮ ಮೊಮ್ಮಗ್ಗ ಒಂದ ಛಂದ ಹೆಸರ ಹೇಳ್ರಿ ಎಂದೆ.ಇದಕ್ಕೆ ನನ್ನ ಹೆಂಡತಿ,ಮಗ,ಸೊಸೆ ಎಲ್ಲರೂ ದನಿಗೂಡಿಸಿದರು.ಆತ ಬಿಡ, ಅವಂಗ ಅಮೋಘವರ್ಷ ಅಂತ ಹೆಸರಿಡರಿಎಂದು ಹೇಳಿದರು.ಅಷ್ಟೇ ಅಲ್ಲ ಮೂರು ತಿಂಗಳ ಮೊಮ್ಮಗನ್ನು ತಮ್ಮ ತೊಡೆಯ ಮೇಲಿರಿಸಿಕೊಂಡು ಏನಪಾ ಅಮೋಘವರ್ಷಎಂದು ಕರೆದು ಹೆಸರಿಟ್ಟೇಬಿಟ್ಟರು.ಈ ಹೆಸರೇ ಅವನಿಗೀಗ ಶಾಶ್ವತ.ನಾನು ಯಾವಾಗಲದರೂ ಫೋನಾಯಿಸಿದಾಗ ಇಲ್ಲವೆ ಅವರೇ ಫೋನಿಸಿದಾಗ ಮೊದಲು ಅವರು ಕೇಳುವದು ಅವನನ್ನೇ ಏನಂತಾನ ನಮ್ಮ ಅಮೋಘವರ್ಷ,ಸಾಲಿಗೆ ಹೋಗ್ತಾನೊ ಇಲ್ಲೊಎಂದು ಅಕ್ಕರೆಯಿಂದ ಕೇಳುತ್ತಾರೆ.
(ಚಿತ್ರ:ತಾವು ಹೆಸರಿಟ್ಟ ಅಮೋಘವರ್ಷನೊಂದಿಗೆ ಡಾ.ಕಂಬಾರ.)
2013ರಲ್ಲಿ ನಾನು ನನ್ನ ಪತ್ರಿಕಾ ಜೀವನದ ಕೆಲ ಮಹತ್ವದ ಘಟನೆಗಳ ಪುಸ್ತಕ ಪ್ರತ್ಯಕ್ಷಕ್ಕೆ ನಾನು ಕೇಳಿದಾಗ ತುಂಬ ಸಂತೋಷದಿಂದ ಹೊನ್ನುಡಿ ಬರೆದುಕೊಟ್ಟರು.ಇನ್ನಷ್ಟು ಬರೀರಿ ಎಂದು ಪ್ರೋತ್ಸಾಹಿಸಿ ಮತ್ತೆ ಬರೆಯಲು ಪ್ರೇರಣೆ ನೀಡಿದರು.ತಾವು ಗೌರವಿಸುವ ಹಿರಿಯ ಸ್ವಾತಂತ್ರ್ಯಯೋಧ ಅಣ್ಣೂಗುರೂಜಿ ಅವರ ಬಗೆಗೂ ಬರೀರಿ ಎಂದು ಹೇಳಿದ್ದರು.ಅದೂ ಕೂಡ ಸಾಕಾರವಾಯಿತು.ನಾಡಿನ ಸುವಿಖ್ಯಾತ ಶಿಕ್ಷಣ ಸಂಸ್ಥೆ ಕೆ.ಎಲ್.ಇ.ತನ್ನ ಶತಮಾನೋತ್ಸವದ ಅಂಗವಾಗಿ ಪ್ರಕಟಿಸಿದ ನೂರು ಪುಸ್ತಕಗಳಲ್ಲಿ ಅಣ್ಣುಗುರೂಜಿಯೂ ಒಂದು.ಇದನ್ನು ಬಿಡುಗಡೆ ಮಾಡಿದವರು ಕೂಡ ಆ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರೇ.
ಕಂಬಾರರು ನಮ್ಮ ಜಿಲ್ಲೆಗೆ ಬಂದರೆ ಆಯಿತು.ಅವರು ಇಲ್ಲಿ ಬಂದಾಗಿನಿಂದ ತಿರುಗಿ ಬೆಂಗಳೂರಿಗೆ ಹೋಗುವವರೆಗೂ ನಾನು ಅವರ ಜತೆಯಲ್ಲಿರಬೇಕು.ನಾನಿದ್ದೆನೆಂದರೆ ಆಯಿತು ಅವರ ಮನೆಯವರಿಗೆ ಯಾವ ಕಾಳಜಿಯೂ ಇರುವದಿಲ್ಲ.ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕಂಬಾರರು ಅಲ್ಲಿಯ ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.ಆ ರಾತ್ರಿ ನಾನು ಅನಿವಾರ್ಯವಾಗಿ ಹುಕ್ಕೇರಿಗೆ ಹಿಂದಿರುಗಬೇಕಾಗಿತ್ತು.ಮರುದಿನ ಮುಂಜಾನೆ ಘೋಡಗೇರಿ,ಸಾವಳಗಿ ಮಠಕ್ಕೆ ಹೋಗಬೇಕಿತ್ತು.ನನಗೆ ಊರಿಗೆ ಹೋಗಲು ಅವರು ಹೇಳಿದರು.ಅವರ ಜತೆಗಿರಲು ನಾನು ನನ್ನ ಓರ್ವ ಕಾರ್ಯಕರ್ತ ಅಕ್ರಮ್ ಎಂಬಾತನಿಗೆ ಹೇಳಿದ್ದೆ.ಹೊಟೆಲ್ ಕೋಣೆಯಲ್ಲೇ ಮಲಗಿರಲು ಹೇಳಿ ಕೊನೆಯಲ್ಲಿ ಚಹ ತಯಾರಿಸುವ ವಿಧಾನವನ್ನೂ ಅವನಿಗೆ ಹೇಳಿಕೊಟ್ಟು ಮುಂಜಾನೆ ಬೇಗನೆ ಎದ್ದು ಚಹ ಮಾಡಿಕೊಡುವಂತೆ ತಾಕೀತು ಮಾಡಿ ಬಂದಿದ್ದೆ.ಮರುದಿನ ಮುಂಜಾನೆ ನಾನು ಬೆಳಗಾವಿಗೆ ಹೋಗಿ ಹೊಟೆಲ್‌ದಲ್ಲಿ ಕಂಬಾರ ಅವರನ್ನು ಭೇಟಿ ಮಾಡಿದೆ.ನಾನು ನನ್ನ ಕಾರ್ಯಕರ್ತ ಅಕ್ರಮ್ ನಿಮಗೆ ಚಹ ಮಾಡಿಕೊಟ್ಟನೊ ಹೇಗೆಂದು ವಿಚಾರಿಸುತ್ತಿದ್ದಾಗ ಅಕ್ರಮ್ ಹೇಳಿದ ಇಲ್ಲ, ಸರ ಅವರೇ ಚಹ ತಯಾರಿಸಿ ನನ್ನೆಬ್ಬಿಸಿ ನನಗೂ ಕೊಟ್ಟು ತಾವೂ ಕುಡಿದರು.ಸಾರಿಎಂದ.ಅಷ್ಟರಲ್ಲಿ ಕಂಬಾರರು ಹೇಳಿದರು ಅಂವಾ ಅರಾಮ ಮಲಕೊಂಡಿದ್ದಾ ಸುಳ್ಳ ಯಾಕ ಅಂವಗ ಎಬಿಸಿ ಚಹಾ ಮಾಡಸೋದು ಅಂತ ನಾನ್ ಮಾಡಿ ಅಂವಗ ಕೊಟ್ನಿ ನನ್ನ ಚಹಾ ಛಲೋ ಆಗಿತ್ತಿಲ್ಲೋಎಂದರು.ಇದು ಅವರ ಸಹೃದಯವಂತಿಕೆ.
ನಾನೂ ಸಾಹಿತ್ಯ ಪ್ರೇಮಿ.ಏನೆಲ್ಲ ಓದುತ್ತಿರುತ್ತೇನೆ.ಇತ್ತಿಚೆಗೆ ಕಂಬಾರರು ಬರೆದ “ಮೊಹಮ್ಮದ ಗವಾನ” ನಾಟಕ ಓದಿದ ಮೇಲೆ ದೇಶ,ರಾಜ್ಯದಲ್ಲೇ ಸಾಕಷ್ಟು ಜನ ರಾಜ ಮಹಾರಾಜರು ಆಗಿಹೋಗಿದ್ದು ಅವರಲ್ಲಿ ಯಾವೊಬ್ಬನ ಮೇಲೆ ನಾಟಕ ಬರೆಯೋದು ಬಿಟ್ಟು ವಿದೇಶಿ ರಾಜನ ಮೇಲೆ ಏಕೆ ನಾಟಕ ಬರೆದರು?ಎಂಬ ಪ್ರಶ್ನೆ ನನ್ನ ತಲೆ ತಿನ್ನುತ್ತಿತ್ತು.ಕಳೆದ ಅಕ್ಟೋಬರದಲ್ಲಿ ಸಾವಳಗಿ ಮಠದ ಜಾತ್ರೆಗೆ ಬಂದಿದ್ದಾಗ ನನ್ನ ತಲೆ ತಿನ್ನುತ್ತಿದ್ದ ಪ್ರಶ್ನೆಯನ್ನು ಅವರ ಮುಂದಿಟ್ಟೆ.ಏ,ದೇಶಪಾಂಡೆ,ನಿಮ್ಮ ರಾಜ ಮಹಾರಾಜರೊಳಗ ಯಾರಾದರೂ ಪಂಢರಪುರ ವಿಠ್ಠಲನ್ನ ಮಾತಾಡಿಸಿದಾವ್ರು ಇದ್ದಾರೇನು?ಮಹಮ್ಮದ ಗವಾನ ವಿಠ್ಠಲನ ಭಕ್ತ ಆಗಿದ್ದಾ ಅಂವಗ ದರ್ಶನಾ ಕೊಟ್ಟಿದ್ದಾ,ಅವ್ನ ಜೋಡಿ ಮಾತಾಡಿದ್ದಾ.ಇಂಥಾವಂದು ನಾಟಕಾರಿ ಅದು ಎಂದು ವಿವರಿಸಿದಾಗ ನನಗೇನೋ ಸಮಾಧಾನ.
ಕಂಬಾರರೊಂದಿಗಿನ ಆತ್ಮೀಯ ಒಡನಾಟದ ಬುತ್ತಿಗಂಟು ಬಿಚ್ಚುತ್ತ ಹೋದಂತೆಲ್ಲ ಅದರ ಕೆನೆಕೆನೆ ಮೊಸರಿನ ಸುವಾಸನೆ ಹರಡುತ್ತಲೇ ಹೋಗಿ ಇನ್ನಷ್ಟು ಸವಿಯಬೇಕೆನಿಸುತ್ತದೆ.ಮೊಗೆಯುತ್ತ ಹೋದಂತೆಲ್ಲ ಸಿಹಿಯಾಗಿ ಹತ್ತಿರವಾಗುತ್ತಲೇ ಹೋಗುತ್ತಾರೆ ಕಂಬಾರರು.ಕನ್ನಡದ ಈ ಮೇರು ಸಾಹಿತಿಗೆ ಭಾರತೀಯ ನೋಬೆಲೆಂದೇ ಪರಿಗಣಿತವಾಗಿರುವ ಜ್ಞಾನಪೀಠಪ್ರಶಸ್ತಿ ಬಂದದ್ದು ಕನ್ನಡ ಸಾಹಿತ್ಯದ ಮೇರು ಶಿಖರಕ್ಕೊಂದು ಹೊನ್ನ ಕಲಶವನ್ನಿಟ್ಟಂತೆ ಆಗಿತ್ತು.ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಯೋಗ ಈ ಹಿಂದೆಯೇ ಬರಬೇಕಿತ್ತು ಐದು ವರ್ಷಗಳ ಹಿಂದೆ ಇದಕ್ಕಾಗಿ ಅವರ ಹೆಸರು ಕೂಡ ಪ್ರಸ್ತಾಪವಾಗಿ ಕೈ ಬಿಟ್ಟು ಹೋಗಿತ್ತು.ಇದು ಅವರಿಗೆ ಸ್ವಲ್ಪು ಬೇಜಾರುಂಟು ಮಾಡಿತ್ತು ಸಹ.ಈಗ ಈ ಸುಯೋಗ ಒದಗಿಬಂದಿದೆ. 1993 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದಾಗ ಚಂದ್ರಶೇಖರ ಕಂಬಾರ ಅವರನ್ನೇ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿಸಿ ವಿಜೃಂಭಣೆಯಿಂದ ಮೆರವಣಿಗೆ,ಸಮ್ಮೇಳನ ಮಾಡಿದ್ದೆವು.ಆಗ ನಾನೇ ಕಸಾಪ ತಾಲೂಕು ಅಧ್ಯಕ್ಷನಾಗಿದ್ದೆ.ಈಗ ಧಾರವಾಡದಲ್ಲಿ ಅ.ಭಾ.ಕ.ಸಾ.ಸಮ್ಮೇಳನಕ್ಕೆ ಡಾ.ಚಂದ್ರಶೇಖರ ಕಂಬಾರ ಅವರು ಸರ್ವಾಧ್ಯಕ್ಷರಾಗಿರುವದು ನಾನು ಈಗಲೂ ಕಸಾಪದ ಹುಕ್ಕೇರಿ ತಾಲೂಕು ಅಧ್ಯಕ್ಷನಾಗಿರುವದು ಕಾಕತಾಳೀಯವೇ ಸರಿ.ನನಗಿದೊಂದು ಅಭಿಮಾನ.ತಾಯ ನೆಲದಲ್ಲಿ ಅಂದು ಜ್ಞಾನಪೀಠಪ್ರಶಸ್ತಿ ಸ್ವೀಕರಿಸಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಈಗ ಧಾರವಾಡದ ಸಾಹಿತ್ಯ ಕೃಷಿಯ ಮಾಗಿದ ಮಣ್ಣಿನಲ್ಲಿ ಅ.ಭಾ.ಕ.ಸಾ.ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿರುವದು ನಮ್ಮ ಬೆಳಗಾವಿ ಜಿಲ್ಲೆಗೆ,ನನ್ನ ಹುಕ್ಕೇರಿ ತಾಲೂಕಿಗೆ ಸಂದ ಅಪೂರ್ವ ಗೌರವ.ಅವರ ಸ್ನೇಹತ್ವ,ಮಾರ್ಗದರ್ಶನ ನನಗೆ ಲಭಿಸಿರುವದು ನನ್ನಲ್ಲಿ ಧನ್ಯತಾ ಭಾವ ಮೂಡಿಸಿದೆ.
ಇಂಥ ಕಂಬಾರ ಅವರ ಊರಿಗೆ ಸರ್ಕಾರ ಏನೂ ಮಾಡಿಲ್ಲವೆಂದು ಊರಿನವರು ದೂರುತ್ತಾರೆ.ಇದಕ್ಕೆ ಉತ್ತರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಘೋಡಗೇರಿಯಲ್ಲಿ ಡಾ.ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನವನ್ನು 30 ಲಕ್ಷ.ರೂ.ವೆಚ್ಚದಲ್ಲಿ ನಿರ್ಮಿಸಹೊರಟಿದ್ದುನವ್ಹಂಬರ.ದಿ.19 ಕ್ಕೆ ಇದಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಸಾಪ ಹುಕ್ಕೇರಿ ತಾಲೂಕು ಘಟಕದ ಉಸ್ತುವಾರಿಯಲ್ಲಿ ಇದರ ಕಾಮಗಾರಿಯನ್ನೂ ಈಗ ಪ್ರಾರಂಭಿಸಲಾಗಿದೆ.ನಾಡಿನ ಹಿರಿಯ ಖ್ಯಾತನಾಮ ಸಾಹಿತಿಗಳ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರ ಮಹಾತ್ವಾಕಾಂಕ್ಷೆಯ ಯೋಜನೆಗೆ ರಾಜ್ಯದಲ್ಲಿಯೇ ಮೊದಲು ಹುಕ್ಕೇರಿ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ.ನನ್ನ ಕಸಾಪ ಅಧ್ಯಕ್ಷತೆಯ ಅವಧಿಯಲ್ಲೇ ನನ್ನ ನೇತೃತ್ವದಲ್ಲೇ ಇದು ಜಾರಿಗೊಳ್ಳುತ್ತಿರುವದು ನನಗೆ ಅಭಿಮಾನದ್ದು.
(ಚಿತ್ರ: ಕಸಾಪ ನಿರ್ಮಿಸುತ್ತಿರುವ ಡಾ.ಚಂದ್ರಶೇಖರ ಕಂಬಾರ ಭವನದ ನಿವೇಶನ ವೀಕ್ಷಿಸುತ್ತಿರುವ ಡಾ.ಕಂಬಾರರು.ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ,ಪತ್ರಕರ್ತ ಪ್ರಕಾಶ ದೇಶಪಾಂಡೆ ಮತ್ತಿತರರು)
ಕೈಲಾಸ ಕೈ ಮುಗಿದು ಭೂಲೋಕಕ್ಕಿಳಿಸಿ ಸಾವಿರದ ಶರಣವ್ವ ಕನ್ನಡ ತಾಯಿಯ ಸುಪುತ್ರ ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಶಿಖರ ಸೂರ್ಯನಿಗೆ,ಕನ್ನಡ ಜಾನಪದ ಗಾರುಡಿಗನಿಗಿದೋ ಶತಶತ ನಮನ,ಸಾಸಿರಸಾಸಿರ ಅಭಿನಂದನ.ಇಂಥ ಸಾಹಿತ್ಯ ಕುಲಪುತ್ರನನ್ನು ಪಡೆದ ಬೆಳಗಾವಿ ಜಿಲ್ಲೆ,ಹುಕ್ಕೇರಿ ತಾಲೂಕು ಧನ್ಯ.
– ಟಿ ಪ್ರಕಾಶ ದೇಶಪಾಂಡೆ , ಹುಕ್ಕೇರಿ
ಸಾಕಷ್ಟು ಮಾಹಿತಿಗಳಿಂದ ತುಂಬಿ ತುಳುಕಾಡೊ ಲೇಖನ, ಕಂಬಾರರ ಬಗೆಗಿನ ಅನೇಕ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುವ ಹಾಗಾಯಿತು . ಕಂಬಾರರ ಸೀದಾ ಸಾದಾ ವ್ಯಕ್ತಿತ್ವದ ಪರಿಚಯ ಸೊಗಸಾಗಿದೆ.
ತುಂಬಿದ ಕೊಡ ತುಳುಕಾಡೋದಿಲ್ಲ . ಕಂಬಾರರ ಮೇರು ವ್ಯಕ್ತಿತ್ವದ ಪರಿಚಯವಾಯಿತು .