ಕೆಂಪು ಚಕ್ರಗಳು-ಸಂತೋಷಕುಮಾರ್ ಮೆಹಂದಳೆ

Share Button

ನಾವು ಮಕ್ಕಳಿದ್ದಾಗ ‘ತರಂಗ’, ‘ಸುಧಾ’ ಪತ್ರಿಕೆಗಳಲ್ಲಿ ಬರುತ್ತಿದ್ದ ‘ಕಪ್ಪು ಸಮುದ್ರ’, ಕಪ್ಪಂಚು ಬಿಳಿ ಸೀರೆ’ ಈ ರೀತಿಯ ಧಾರಾವಾಹಿಗಳನ್ನು ಅವುಗಳಲ್ಲಿನ ರೋಚಕತೆಗೋಸ್ಕರ ಓದುತ್ತಿದ್ದೆವು. ಹೈಸ್ಕೂಲ್ ಹಂತಕ್ಕೆ ಬಂದಾಗ ಟಿ ಕೆ ರಾಮರಾವ್ ಅವರ ಕಾದಂಬರಿಗಳನ್ನು ಒಂದಷ್ಟು ಓದಿಕೊಂಡೆವು. ಪಿ ಯು ಸಿ ಗೆ ಬಂದಾಗ ಯಂಡಮೂರಿ ವೀರೇಂದ್ರ ನಾಥ್ ಅವರ ‘ತುಳಸೀ ದಳ’ ಓದಿದ್ದೇ ಅವರ ಕಥನ ಶೈಲಿಗೆ ಮುಗಿಬಿದ್ದೆವು. ಅಷ್ಟಿಷ್ಟು ಇಂಗ್ಲಿಷ್ ಕಲಿತ ಮೇಲೆ ಸಿಡ್ನಿ ಶೆಲ್ಡನ್, ಅಗಾಥ ಕ್ರಿಸ್ಟಿ, ಷೆರ್ಲಾಕ್ಸ್ ಹೋಮ್ಸ್ ಎಂದೂ ಒಂದಷ್ಟು ಓದಿಕೊಂಡೆವೆನ್ನಿ.

ಪತ್ತೇದಾರಿ ಸಾಹಿತ್ಯವೇ ಹಾಗೆ. ಅದರಲ್ಲೊಂದು ಸಸ್ಪೆನ್ಸ್, ಥ್ರಿಲ್, ಓದಿಸಿಕೊಂಡು ಹೋಗುವ ವೇಗ, ಏನೋ ಸಾಧಿಸುವ ಛಲ, ಸಣ್ಣ ಮಟ್ಟಿಗಿನ ಫ಼್ಯಾಂಟಸಿ, ಅನೂಹ್ಯ ತಿರುವುಗಳು, ಘಟನೆಗಳು.. ಹೀಗೆ ಅದೊಂದು ಸ್ಪೀಡ್ ಡ್ರೈವ್ ಇದ್ದಂತೆ. ಪುಟ್ಟ ಮಕ್ಕಳ ಕತೆಗಳ ಮಾಂತ್ರಿಕತೆ, ದೊಡ್ಡವರ ಜಗತ್ತಿನ ರೊಮ್ಯಾನ್ಸ್, ಕ್ರೈಂ ಫ಼ಿಕ್ಷನ್ ನ ನಿಬ್ಬೆರಗಾಗಿಸುವ ವಿವರಗಳು.. ಹೀಗೆ ಅದೊಂದು ಓದುಗರನ್ನು ಮಂತ್ರ ಮುಗ್ಧರಾಗಿಸುವ ಬರವಣಿಗೆ ಕೂಡ. ಖುಶ್ ವಂತ್ ಸಿಂಗ್ ರವರು ಒಂದೆಡೆ ಹೇಳುವಂತೆ ಮನುಷ್ಯ ತನ್ನ ಮುಗ್ಧತೆಯನ್ನು ಉಳಿಸಿಕೊಳ್ಳಬೇಕು. ಆದರೆ ಅದು ನಮಗೆ ವಯಸ್ಸಾದಂತೆ ಸಾಧ್ಯವಾಗುವುದಿಲ್ಲ. ಮುಗ್ಧತೆಯನ್ನು ಉಳಿಸಿಕೊಳ್ಳುವ ಇನ್ನೊಂದು ದಾರಿ ನಮಗಿಂತ ಹೆಚ್ಚು ಅನುಭವ ಇರುವವರೊಂದಿಗೆ ಒಡನಾಡುವುದು” ಎಂದು. ನಮ್ಮ ದೈನಂದಿನ ಏಕತಾನತೆಯನ್ನು ಮೀರಲು, ನಾವು ಬಹಳ ಮೇಲ್ನೋಟಕ್ಕೆ ಮಾತ್ರ ಪರಿಭಾವಿಸುವ ಇನ್ನೊಂದು ಜಗತ್ತಿನ ಸಾಧ್ಯತೆಗಳನ್ನು ಅದರ ರೋಮಾಂಚಕತೆಯೊಂದಿಗೆ ಅನುಭವಿಸಲು ಅನುವು ಮಾಡಿ ಕೊಡುವುದು ಪತ್ತೇದಾರಿ ಸಾಹಿತ್ಯದ ವೈಶಿಷ್ಟ್ಯ. ಪಾತ್ರಗಳ ಮನೋ ವೈಜ್ನಾನಿಕ ವಿಶ್ಲೇಷಣೆ, ಚಾರಿತ್ರಿಕ ಹಿನ್ನೆಲೆ, ಸೋಶಿಯಲ್ ರಿಯಲಿಸಂ, ಇವನ್ನೆಲ್ಲ ಹೆಚ್ಚು ಬಳಸಿಕೊಳ್ಳಲೂ ಪತ್ತೇದಾರಿ ಸಾಹಿತ್ಯದಲ್ಲಿ ಸ್ಥಾನವಿದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಓದಿದ ಕೃತಿ ಸಂತೋಷಕುಮಾರ್ ಮೆಹಂದಳೆ ಅವರ ‘ಕೆಂಪು ಚಕ್ರಗಳು’. ಮೆಹಂದಳೆ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ, ಪರಿಶ್ರಮ ಉಳ್ಳವರು. ಜನಪ್ರಿಯ ಸಾಹಿತ್ಯ, ಗಂಭೀರ ಸಾಹಿತ್ಯ ಎರಡರಲ್ಲೂ ಅವರಿಗೆ ಪ್ರಭುತ್ವ ಇದೆ. ಅವರ ಅಂಕಣ ಬರಹಗಳು, ಪ್ರವಾಸ ಕಥನಗಳು, ವೈಜ್ಞಾನಿಕ ಲೇಖನಗಳಲ್ಲಿ ಸಂಕೀರ್ಣವಾದ ಒಳ ನೋಟಗಳಿವೆ, ಸುಸಂಸ್ಕೃತ ಕಥನ ಶೈಲಿ ಇದೆ. ಅದೇ ಸಮಯ ಎಲ್ಲ ರೀತಿಯ ಓದುಗರನ್ನು ತನ್ನ ಅಕ್ಷರಗಳಿಂದ ಹಿಡಿದಿಡುವ ಶಕ್ತಿಯೂ. ಅದೂ ಅಲ್ಲದೆ ಜನಪ್ರಿಯ ಸಾಹಿತ್ಯ ಹಾಗೂ ಸಾರ್ವಕಾಲಿಕ ಸಾಹಿತ್ಯ ಎಂದೆಲ್ಲ ರೇಖೆಗಳು ತೆಳುವಾಗುತ್ತಿರುವ ಈ ಜಾಗತಿಕ ಸಂದರ್ಭದಲ್ಲಿ, ಸಾಹಿತ್ಯ ಪ್ರಕಾರಗಳಲ್ಲಿಯೂ ಬೇರೆ ಬೇರೆ ರೀತಿಯ ಪ್ರಯೋಗಗಳು ಭಾಷೆಯ ಉಳಿವಿಗೆ ಅನಿವಾರ್ಯವಾಗಿರುವುದರಿಂದ, ಈ ಕೃತಿಯನ್ನು ಕುತೂಹಲದಿಂದ ಓದಿದೆ. ಮೊದಲೇ ಹೇಳಿದಂತೆ ‘ಕೆಂಪು ಚಕ್ರಗಳು’ ದಶಕದ ಹಿಂದೆ ನಡೆದ ಒಂದು ಬ್ಲೂ ಫಿಲ್ಮ್ ರಾಕೆಟ್ ಹೇಗೆ ಮಂತ್ರಿಮಂಡಲವನ್ನೇ ನಡುಗಿಸಿತ್ತು ಎಂಬ ಎಳೆಯಿಂದ ಶುರುವಾಗುವ ಈ ಕತೆ, ದೇಶದ ರಹಸ್ಯಗಳು ಸೋರಿ ಹೋಗದಂತೆ ಹೀರೋ ಮತ್ತು ಹೀರೋಯಿನ್ ಯಶಸ್ವಿಯಾಗುವುದರೊಂದಿಗೆ ಸುಖಾಂತ್ಯವಾಗುತ್ತದೆ. ಕೆನಡಿ(ನಿಜ ಹೆಸರಲ್ಲ) ಹಾಗೂ ವರುಣಿ ಎಂಬ ಇಬ್ಬರು ಯುವಕ ಯುವತಿಯರ ಇಂಟೆಲಿಜೆನ್ಸ್, ಸೌಂದರ್ಯ, ಚತುರತೆ ಇವೆಲ್ಲ ಈ ಕಾದಂಬರಿಯ ಮುಖ್ಯಾಂಶಗಳು.

ಇನ್ನು ಜನಪ್ರಿಯ ಸಾಹಿತ್ಯದ ಅಂಶಗಳಾದ ಕುಶಾಗ್ರಮತಿ, ಸೌಂದರ್ಯದ ಗಣಿಯಂತಿರುವ ನಾಯಕಿ, ಆರಡಿ ಎತ್ತರದ ಹೀರೋ.. ಹೀಗೆ ಜನರು ಬಯಸುವ ಹೀರೋಯಿಸಂ ಕ್ವಾಲಿಟಿಗಳು ಇಲ್ಲಿವೆ. ಎಲ್ಲಕ್ಕಿಂತ ಮಿಗಿಲಾಗಿ ಒಂದು ಫಿಲ್ಮ್ ನೋಡಿದ ಅನುಭವ ಈ ಕಾದಂಬರಿ ಕೊಡುತ್ತದೆ. ಮೊದಲೇ ಹೇಳಿದಂತೆ ಒಂದು ರೀತಿಯ Positive vibe ನ್ನು ಸೃಷ್ಟಿಸುವುದು, ಎನರ್ಜಿಯನ್ನು ಕಾಪಿಟ್ಟುಕೊಳ್ಳುವುದು ಈ ರೀತಿಯ ಕಾದಂಬರಿಗಳ ವೈಶಿಷ್ಟ್ಯ. ಈ ಕತೆಯ ಕೆನಡಿ ಹಾಗೂ ವರುಣಿ , ಬಡತನ ಮೊದಲುಗೊಂಡು ಅನ್ಯಾಯ, ವಂಚನೆ, ದಗಾ ಇವುಗಳನ್ನು ತಮ್ಮ ಬುದ್ಧಿಮತ್ತೆಯಿಂದಲೂ, ಚಾಕಚಕ್ಯತೆಯಿಂದಲೂ ಅಭಿಗಮಿಸುವುದು ಒಂದು ರೀತಿಯಿಯ ನಿಂದ ಈ ಕಾದಂಬರಿಯಲ್ಲಿ ನಿರೂಪಿತವಾಗಿದೆ. ಇನ್ನು ಕ್ರೈಂ, ರಾಜಕೀಯದ ದೊಂಬರಾಟಗಳು, ಭ್ರಷ್ಟಾಚಾರ, ಪೋಲೀಸ್ ವ್ಯವಸ್ಥೆ, ರೊಮಾನ್ಸ್.. ಹೀಗೆ ಪತ್ತೇದಾರಿ ಕಾದಂಬರಿಯ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕರಾವಳಿ, ಸಮುದ್ರ ತೀರ, ಸರಣಿ ಕೊಲೆಗಳು, ಸ್ಮಗ್ಲಿಂಗ್, ಹೀಗೆ ಕ್ರೈಂ ಫಿಕ್ಷನ್ ಅಂಶಗಳು ಹಲವು ಇವೆ. ಇವೆಲ್ಲಕ್ಕಿಂತ ಮಿಗಿಲಾಗಿ, ಸಾಹಿತ್ಯದ ವಿದ್ಯಾರ್ಥಿಯಾಗಿ ನನಗಿಲ್ಲಿ ಮೆಹಂದಳೆಯವರು ಭಾಷೆಯನ್ನು ಬಳಸಿದ ರೀತಿ ಖುಶಿ ಕೊಟ್ಟಿತು. ಅವರ ವಾಕ್ಯ ರಚನೆ, Punctuation mark ( inverted comma, question mark, ellipsis.. ) ಎಲ್ಲಕ್ಕಿಂತ ಮಿಗಿಲಾಗಿ ಸಂಭಾಷಣೆಗಳನ್ನು ಹೀಗೆ ಸುಂದರವಾಗಿ ಬಳಸಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಪ್ರತಿ ಪೇಜಿನಲ್ಲಿಯೂ ಇರುವ ಈ ಸಂಭಾಷಣೆಗಳೇ ಕಾದಂಬರಿಯ ಓಟಕ್ಕೆ ಒಂದು ರೀತಿಯ crispness ಕೊಡುತ್ತವೆ. ಇನ್ನು ಇದರಲ್ಲಿ ಚಿತ್ರಿತವಾದ ಭಾರತ ಇಪ್ಪತ್ತೊಂದನೆಯ ಶತಮಾನದ ಸಕಲ ಪ್ರಭಾವಗಳನ್ನು ಎಲ್ಲಾ ಶೇಡ್ ಗಳೊಂದಿಗೆ ಹೀರಿಕೊಂಡ ಭಾರತ.

ಶೆರ್ಲಾಕ್ಸ್ ಹೋಮ್ಸ್, ಜೇಮ್ಸ್ ಬಾಂಡ್ ಮೊದಲುಗೊಂಡು ಹಿಂದಿಯ ಸಿ ಐ ಡಿ, ಕನ್ನಡದ ‘ಸೂರ್ಯ ಶಿಕಾರಿ’ ಹೀಗೆ ಪತ್ತೇದಾರಿ ಸಾಹಿತ್ಯಕ್ಕೆ ಅದರದೇ ವೀಕ್ಷಕ, ಓದುವ ವರ್ಗವಿದೆ. ಇನ್ನು ‘ಕೆಂಪು ಚಕ್ರಗಳು’ ಶೀರ್ಷಿಕೆಯೇ ಈ ಕತೆಯಲ್ಲಿನ ರಕ್ತಪಾತ, ಕಾಲಚಕ್ರ, ನ್ಯಾಯ, ಅನ್ಯಾಯಗಳ ಚಕ್ರಗಳನ್ನು ಸಂಕೇತಾತ್ಮಕವಾಗಿ ಧ್ವನಿಸುತ್ತದೆ. ಈ ಕಾದಂಬರಿಯ ಇನ್ನೊಂದು ವಿಶಿಷ್ಟತೆ ಇದರ ಸಮಕಾಲೀನತೆ. (ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್, ಟೆಕ್ನಾಲಜಿ ಎಂದೆಲ್ಲ) . ಇನ್ನು ಕೆನಡಿ, ಆನಂದ ತೀರ್ಥರ ಮಾತುಗಳಲ್ಲಿ ಲೇಖಕರ ಅಭಿಪ್ರಾಯದ ಛಾಯೆ ಇದೆ. ಉದಾಹರಣೆಗೆ ಆನಂದ ತೀರ್ಥ ( ಕತೆಯಲ್ಲಿನ ಸಾಹಿತಿ) ಹೇಳುವ ಮಾತುಗಳು:  ” ಅಕಸ್ಮಾತ್ ಯಾವುದಾದರೂ ಲೇಖಕ ನಾನು ಬದುಕಿದಂತೆಯೆ ಬರೆಯುತ್ತೇನೆ, ಬರೆದಂತೆಯೇ ಬದುಕಿದ್ದೇನೆ.. ಎಂದು ಎದೆ ತಟ್ಟಿ ಹೇಳುತ್ತಾ ಅದರಂತೆಯೇ ನಡೆಯುತ್ತಾರೆಂದಾದಲ್ಲಿ ಒಂದೋ ಆತ ತುಂಬಾ ದೊಡ್ಡ ಮನುಷ್ಯನಾಗಿರುತ್ತಾನೆ ಅಥವಾ ಮಹಾತ್ಮನಾಗಿರುತ್ತಾನೆ. ಆದರೆ ಜನಪ್ರಿಯ ಬರಹಗಾರನಾಗಲಿ ಲೇಖಕನಾಗಲಿ ಆಗಿರಲಾರ. ಯಾಕೆಂದರೆ ಆಷ್ಟು ಮಾತ್ರದ ಮೆಚ್ಯುರಿಟಿಗೆ ಬಂದಿರುವ ವ್ಯಕ್ತಿಗೆ ಇಂತಹ ಐಹಿಕವಾದ ಕ್ಷೇತ್ರದ ಒಲವಿರುವುದಿಲ್ಲ” .

ಒಟ್ಟಿನ ಮೇಲೆ ಮೆಹಂದಳೆ ಅವರ ಕಾದಂಬರಿ ಪತ್ತೇದಾರಿ ಅಂಶಗಳನ್ನೊಳೊಂಡ ಥ್ರಿಲ್ಲಿಂಗ್ ಕಾದಂಬರಿ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಪರೋಕ್ಷವಾಗಿ ಬೆಳಕು ಚೆಲ್ಲುತ್ತದೆ ಎನ್ನಬಹುದು. ಕತೆಯಲ್ಲಿ ಹಲವಾರು ಸಿನಿಮೀಯ ಅಂಶಗಳಿವೆ. ಅಷ್ಟು ವರ್ಷ ಸಾಕಿದ ವರುಣಿಯನ್ನು ಚಿಕ್ಕಪ್ಪ 25  ಲಕ್ಶಕ್ಕೋಸ್ಕರ ಕೊಲ್ಲಲು ಸಡನ್ ಆಗಿ ಹೇಗೆ ಬದಲಾದರು ಎಂದು ಯೋಚನೆಯಾಯಿತು. ಅದೇ ರೀತಿ ಮಾರ್ಕ್ಸ್ ಕಾರ್ಡ್ ಏನೂ ಇರದೆ ವರುಣಿ ( ಕೊಲೆಗಾರನನ್ನು ನ್ಯೂಸ್ ಪೇಪರ್ ನಲ್ಲಿ ನೋಡಿದ ಆಕೆ ಅಪಾಯದಿಂದ ತಪ್ಪಿಸ್ಕೊಳ್ಳಲೋಸ್ಕರ ತನ್ನ ಮನೆಗೆ ಮರಳಿ ಬರುವುದೇ ಇಲ್ಲ) ಡಿಗ್ರಿ ಎಲ್ಲ ಹೇಗೆ ಓದಿದಳು ಎಂದೂ ಯೋಚಿಸಿದೆ.

ಇನ್ನು ಕಥನ ಶೈಲಿಯಲ್ಲಿ ಫ಼್ಲಾಶ್ ಬ್ಯಾಕ್ ತಂತ್ರ ಇದ್ದರೂ ಬಹುತೇಕ ನೇರ, ಸರಳ ಶೈಲಿಯ ನಿರೂಪಣೆ ಇದ್ದು ಓದಿಗೆ ಸುಗಮವಾಗಿದೆ. ಹೆಜ್ಜೆ ಹೆಜ್ಜೆಗೂ ಸಾಹಸ, ಅಪಾಯ, ಚೆಲುವೆಯಾದ ಹೀರೋಯಿನ್, ಜೈಲು, ಪೋಲೀಸ್, ಮರ್ಡರ್ ಎಂದೆಲ್ಲ ಕ್ರೈಂ ಹಾಗೂ ಪತ್ತೇದಾರಿ ವಿವರಗಳು ಇಲ್ಲಿವೆ. ಆಕ್ಸಿಡೆಂಟ್ ನಂತೆ ಕಾಣುವ ಮರ್ಡರ್ ಗಳು, ಭೂಗತ ದೊರೆಗಳ ಜೀವನ ಶೈಲಿ, ಅಪಾಯದ ನೆರಳಿನಲ್ಲಿಯೂ ಅವರ ಲಕ್ಸುರಿ, ಹೆಣ್ಣುಬಾಕತನ, ಅದೇ ಸಮಯ ಅವರು ಹೊಂದಿರುವ ಒಂದು ರೀತಿಯ ಆಂತರಿಕ ನಿಯತ್ತು.. ಹೀಗೆ ಅದೊಂದು ಜನಸಾಮಾನ್ಯರು ಬದುಕದ ಜೀವನ ಶೈಲಿ. ಕಥನ ಶೈಲಿಯಲ್ಲಿ ಫ಼್ಲಾಶ್ ಬ್ಯಾಕ್ ತಂತ್ರ ಇದ್ದರೂ ಬಹುತೇಕ ನೇರ, ಸರಳ ಶೈಲಿಯ ನಿರೂಪಣೆ ಇದ್ದು ಓದಿಗೆ ಸುಗಮವಾಗಿದೆ. ಹೆಜ್ಜೆ ಹೆಜ್ಜೆಗೂ ಸಾಹಸ, ಅಪಾಯ, ಚೆಲುವೆಯಾದ ಹೀರೋಯಿನ್, ಜೈಲು, ಪೋಲೀಸ್, ಮರ್ಡರ್ ಎಂದೆಲ್ಲ ಕ್ರೈಂ ಹಾಗೂ ಪತ್ತೇದಾರಿ ವಿವರಗಳು ಇಲ್ಲಿವೆ. ಆಕ್ಸಿಡೆಂಟ್ ನಂತೆ ಕಾಣುವ ಮರ್ಡರ್ ಗಳು, ಭೂಗತ ದೊರೆಗಳ ಜೀವನ ಶೈಲಿ, ಅಪಾಯದ ನೆರಳಿನಲ್ಲಿಯೂ ಅವರ ಲಕ್ಸುರಿ, ಹೆಣ್ಣು ಬಾಕತನ, ಅದೇ ಸಮಯ ಅವರು ಹೊಂದಿರುವ ಒಂದು ರೀತಿಯ ಆಂತರಿಕ ನಿಯತ್ತು… ಹೀಗೆ ಅದೊಂದು ಜನಸಾಮಾನ್ಯರು ಬದುಕದ ಜೀವನ ಶೈಲಿ. ಉದ್ದುದ್ದದ ಪೇಜುಗಟ್ಟಲೆ ಡೈಲಾಗುಗಳಿರದ, ತಮ್ಮದೇ ಆದ ಆಂತರಿಕ ನೈತಿಕತೆ ಇರುವ ಕೇಂದ್ರ ಪಾತ್ರಗಳು. ದೇಶ ಭಕ್ತಿಯ ಅಂಶಗಳಿರುವುದು ಈ ಕೃತಿಯ ಇನ್ನೊಂದು ಪ್ಲಸ್ ಪಾಯಿಂಟ್.

-ಜಯಶ್ರೀ. ಬಿ, ಕದ್ರಿ

3 Responses

  1. Sujatha Ravish says:

    ಚಂದದ ಬರಹ. ಪುಸ್ತಕ ಓದುವ ಬಯಕೆ ಮೂಡಿಸುತ್ತದೆ.

  2. Nayana Bajakudlu says:

    ಕೆಂಪು ಚಕ್ರಗಳು ಪುಸ್ತಕದ ಕುರಿತು ನಿಮ್ಮ ಬರಹ ಚೆನ್ನಾಗಿದೆ.
    ಸಂತೋಷ ಕುಮಾರ ಮೆಹೆಂದಳೆಯವರ ಪ್ರತಿಯೊಂದು ಲೇಖನಗಳೂ, ಬರಹಗಳು ಬಹಳ ಚೆನ್ನಾಗಿರ್ತವೆ . ಅದೂ ಅಲ್ಲದೆ ನಮ್ಮ ಬದುಕಿನೊಳಗೆ ಹಾಸು ಹೊಕ್ಕ ಹಾಗೆ ಇರ್ತವೆ , ನಮ್ಮದೇ ಬದುಕಿನ ಕಥೆಯೇನೋ ಅನ್ನುವಷ್ಟು ಆಪ್ತವಾಗಿರ್ತವೆ . ಹೆಚ್ಚಿನ ಅವರ ಬರಹಗಳು ಸ್ವತಃ ಅವರಿಗಾದ ಅನುಭವಗಳೇ ಅನ್ನೋದನ್ನ ಕೇಳಲ್ಪಟ್ಟಿದ್ದೇನೆ . ಯಸ್, ನಾನು ಕೂಡ ಕೆಂಪು ಚಕ್ರಗಳು ಪುಸ್ತಕವನ್ನು ಓದಬೇಕಾಗಿದೆ .

  3. Shankari Sharma says:

    ಪ್ರಬುದ್ಧ ವಿಮರ್ಶೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: