ಇರುವುದೆಲ್ಲವ ಬಿಟ್ಟು…..
“ಪಪ್ಪಾ… ಪಪ್ಪಾ…. ಸ್ಕೂಲ್ ಹಾಲಿಡೇಸ್ ಸ್ಟಾರ್ಟ್ ಆಗಿದೆ ಎಲ್ಲಿಗಾದ್ರೂ ಪಿಕ್ನಿಕ್ ಹೋಗೋಣ್ವಾ.”
“ಬೇಡ, ಚಿನ್ನ ನನ್ನ ಆಫೀಸಲ್ಲಿ ಬಹಳ ಕೆಲಸ ಇದೆ ಮತ್ತೆ ಯಾವಾಗಾದ್ರೂ ಹೋಗೋಣಂತೆ.”
“ಹೋಗಪ್ಪ.. ನೀನು ಯಾವಾಗಲು ಹಿಂಗೆ ಮಾಡ್ತಿಯಾ ತಡಿ ಅಜ್ಜಂಗೆ ಕಂಪ್ಲೆಂಟ್ ಮಾಡ್ತೀನಿ.” ಎಂದೂ ಅಳುತ್ತಾ ಚಿನ್ನು ಅಜ್ಜನ ಬಳಿ ಓಡಿದಳು.
“ಅಜ್ಜ…. ಅಜ್ಜ… ನೋಡಜ್ಜ ಅಪ್ಪ ನನ್ನನ್ನ ಹೋರಗ ಕರ್ಕೊಂಡು ಹೋಗು ಅಂದ್ರೆ. ಬೇಡ ಅಂತಿದಾರೆ”
“ಯಾಕೊ ಚಿನ್ನು ಪುಟ್ಟ..? ಸರಿ ನಾನು ಹೇಳ್ತೀನಿ ನಿಮ್ಮ ಅಪ್ಪಂಗೆ ಬಾ..” ಎಂದು ತಲೆ ಸವರುತ್ತ ರಮೇಶನ ಬಳಿಗೆ ರಾಯರು ಬಂದರು.
“ಯಾಕೋ ರಮೇಶ.? ಚಿನ್ನು ಏನೋ ಹೇಳತಿದಾಳೆ ಪಾಪ ಅವಳ್ನಾ ಒಂದಿನ ಎಲ್ಲಿಗಾದ್ರೂ ಹೊರಗೆ ಕರ್ಕೊಂಡು ಹೋಗಬಾರದ. ಬರಿ ಸ್ಕೂಲು ಹೋಮ್ ವರ್ಕು ಅಂತಿರ್ತಾಳೆ, ಒಂದೆರಡು ದಿನ ರಜಾ ಹಾಕಿ ಹೋಗ್ಬನ್ನಿ.”
“ಸರಿ ಅಪ್ಪ ಆದರೆ ಶೋಭಾಗೆ ಸಡನ್ ಆಗಿ ರಜಾ ಕೊಡ್ಬೇಕಲ್ಲಾ.”
“ಅವಳಿಗೂ ರಜೆ ಹಾಕು ಅಂತ ಹೇಳಪ್ಪಾ. ಏನ್ ಕಾಲಾ ಬಂತೊ ಗಂಡ ಹೆಂಡತಿ ಇಬ್ಬರೂ ದುಡಿಯೊದಂತೆ ಆದರೂ ನೆಮ್ಮದಿ ಇಲ್ಲಾ.”
“ಇರಲಿ ಬಿಡಪ್ಪಾ…. ನಾನು ಶೋಭಾಗೆ ಹೇಳ್ತೀನಿ ಕಾಲ್ ಮಾಡಿ ರಜೆ ಹಾಕು ಅಂತ. ನಿನ್ ಮುದ್ದಿನ ಮೊಮ್ಮಗಳಿಗೆ ಹೇಳು ನಾಳೆ ವಂಡರ್ ಲಾಗೆ ಹೋಗ್ತಿದಿವಿ ಅಂತ.”
ಇದನ್ನು ಕೇಳಿದ ಕೂಡಲೆ ಚಿನ್ನು ಅಜ್ಜನ ಮೂಖ ನೋಡಿ ಕಣ್ಣು ಹೊಡೆದಳು, ಅಜ್ಜ ಅದಕ್ಕೆ ಪ್ರತಿಯಾಗಿ ನಸುನಕ್ಕು ಹೈ-ಫೈ ಮಾಡಿದನು.
ಮನೆಯಲ್ಲಿ ಯಾರಾದರೂ ಒಬ್ಬರಿರಬೆಕೆಂಬ ಕಾರಣ ಹೇಳಿ ರಾಯರನ್ನು ಮನೆಯಲ್ಲಿಯೇ ಬಿಟ್ಟು ದಂಪತಿಗಳು ಚಿನ್ನುವಿನೊಂದಿಗೆ ವಂಡರ್ ಲಾ ಹೊರಡಲು ತಯಾರಾದರು. ಶಾಲೆಯ ಎಲ್ಲಾ ಚಿಂತೆಯನ್ನು ಬದಿಗೊತ್ತಿ ಚಿನ್ನು ತನ್ನ ಅಚ್ಚುಮೆಚ್ಚಿನ ಮಿಕ್ಕಿ ಮೌಸ್ ಬೊಂಬೆಯೊಂದಿಗೆ ಕಾರು ಏರಿದಳು.
ಕಾರಿನಲ್ಲಿ ಇಬ್ಬರು ದಂಪತಿಗಳು ತಮ್ಮ ಮೊಬೈಲ್ ಹಿಡಿದು ಕುಳಿತರು ಫೇಸ್ಬುಕ್ ಅಪ್ಡೇಟ್ ಮಾಡುವುದು ಸ್ನೇಹಿತರ ಫೋಟೊಗಳಿಗೆ ಲೈಕ್ ಕೊಡುವುದು ಎಂದು ಬ್ಯುಸಿಯಾದರು ಒಬ್ಬಂಟಿಯಾದ ಚಿನ್ನು ತನ್ನ ಬೊಂಬೆಯನ್ನು ಅಪ್ಪಿಕೊಂಡು ಹಾಗೆ ಸಿಟಿಗೆ ಒರಗಿ ಮಲಗಿದಳು. 10 ಗಂಟೆಗೆ ಸರಿಯಾಗಿ ವಂಡರ್ ಲಾ ಮುಂದೆ ಕಾರು ಬಂದು ನಿಂತಿತು ಮಲಗಿದ್ದ ಚಿನ್ನುವನ್ನು ಎಬ್ಬಿಸಿದ ಶೋಭ ‘ಮನೆಯಿಂದ ಹೊರಡುವಾಗ ಕುಣಿತಿದ್ದೆ ಇಗೆನಾಯ್ತು ಏಳು ಬೇಗ ಹೋಗಿ ನೀರಲ್ಲಿ ಆಟಾಡೋಣ, ಎದ್ದೆಳು ಪುಟ್ಟ” ಎಂದು ತಲೆ ಸವರುತ್ತಿದ್ದಂತೆ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ “ಹೆ.. ಮಮ್ಮಿ ಬಂದೆ ಬಿಡ್ತಾ” ಅಂತ ದಡಬಡಾಯಿಸಿ ಕಾರಿನಿಂದ ಇಳಿದಳು.
“ನೀವು ಇಲ್ಲೆ ಇರಿ ನಾನು ಹೋಗಿ ಟಿಕೆಟ್ ತೆಗೆದುಕೊಂಡು ಬರ್ತಿನಿ.”
ಎಂದು ರಮೇಶ ಹೋಗಿ ಟಿಕೆಟ್ ತೆಗೆದುಕೊಂಡು ಬಂದನು. ಎಲ್ಲರೂ ಪಾರ್ಕ್ ಒಳಗಡೆ ಹೊರಟರು ಶೋಭಾ ಪಾರ್ಕಿಗೆ ಬರೋದು ಆರನೇ ಬಾರಿಯಾದ್ದರಿಂದ ಅವಳ ಮುಖದಲ್ಲಿ ಅಂತಹ ಎಕ್ಸೈಟ್ಮೆಂಟ್ ಇರಲಿಲ್ಲ ಆದರೆ ಚಿನ್ನು ಓಡಿ ಹೋಗಿ ಹಾಗೆ ನೀರಿಗೆ ಧುಮುಕಿದಳು.
‘ಪಪ್ಪಾ ಬಾ ಬೇಗಾ.. ಫುಲ್ ಮಜಾ ಬರುತ್ತೆ’ ಎಂದು ಅಪ್ಪನನ್ನು ಕರೆದಳು.
“ಮಗು ಕರಿತಾ ಇದಾಳೆ ಬಾ ಶೋಭಾ ಲೆಟ್ಸ್ ಜಂಪ್ ಇನ್ ವಾಟರ್.”
ಒಲ್ಲದ ಮನಸ್ಸಿನಿಂದ ಶೋಭಾ ನೀರಿಗೆ ಜಿಗಿದಳು.
ಆಗ ತಾನೆ ಶುರುವಾಗಿದ್ದ ಬಿಸಿಲಿನ ತಾಪಕ್ಕೆ ತಣ್ಣನೆಯ ನೀರು ಹಿತ ನೀಡುತ್ತಿತ್ತು. ಎಲ್ಲರೂ ಆಟದಲ್ಲಿ ಮೈಮರೆತರು.
“ಪಪ್ಪಾ ಇಲ್ಲಿ ನೋಡಿಲ್ಲಿ.” ಎನ್ನುತ್ತಾ ಮೇಲಿನಿಂದ ಜಾರಿಕೊಂಡು ಓssss ಎಂದು ಚಿರುತ್ತ ನೀರಿಗೆ ಧುಮುಕುವುದು, ನೀರಿನಲ್ಲಿ ಮುಳುಗೆಳುವುದು ಚಿನ್ನು ತನ್ನ ಪ್ರಪಂಚದಲ್ಲೆ ಇದ್ದಳು. “ನೀರಿನಲ್ಲಿ ಆಟವಾಡುತ್ತ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ,ಚಿನ್ನು ಕಮ್ ಔಟ್ ಊಟ ಮಾಡಿಕೊಂಡು ಮನೆಗೆ ಹೋಗೋಣ.”
“ಹೌದು ರೀ. ನಂದ್ ಸ್ವಲ್ಪ ಆಫೀಸ್ ವರ್ಕ್ ಪೆಂಡಿಂಗ್ ಇದೆ ಮನೆಗೆ ಹೋಗೋಣ.” ಶೋಭಾ ಧ್ವನಿಗೂಡಿಸಿದಳು.
“ಹೋಗಮ್ಮಾ…. ನೀನು ಯಾವಾಗ್ಲೂ ಹಿಂಗೆ ಮಾಡ್ತೀಯಾ” ಎಂದು ಮೂಗು ಮುಗಿಯುತ್ತಾ ಚಿನ್ನು ನೀರಿನಿಂದ ಹೊರಗೆ ಬಂದಳು.
ನೀರಿನಲ್ಲಿ ಆಟವಾಡಿ ಹಸಿದಿದ್ದರಿಂದ ಎಲ್ಲರೂ ಒಂದು ಹೋಟೆಲ್ಗೆ ಬಂದು ಕುಳಿತರು.
“ಸರ್ ಏನ್ ಬೇಕು ಹೇಳಿ.”
“ಮೊದಲು ಟೂ ಬೈ ತ್ರೀ ವೆಜ್ ಸೂಪ್ ಕೊಡಿ, ಆಮೇಲೆ ಆರ್ಡರ್ ಮಾಡ್ತೀವಿ.”
“ಓಕೆ ಸರ್” ಎಂದು ವೇಟರ್ ಅಲ್ಲಿಂದ ಹೊರಟ.
“ರೀ ಇಲ್ಲಿ ನೋಡ್ರಿ ಇವತ್ತು ನಮ್ಮ ಆಫೀಸಲ್ಲಿ ಒಬ್ಬರು ಬರ್ತ್ ಡೇ ಇತ್ತು ಎಷ್ಟು ಗ್ರ್ಯಾಂಡ್ ಆಗಿ ಸೆಲೆಬರೆಟ್ ಮಾಡಿದಾರೆ. ಮಿಸ್ಸಿಂಗ್ ಯು ಅಂತಾ ನಂಗ್ ಮೆಸೇಜ್ ಮಾಡಿದಾರೆ. ಛೇ ನಾನು ಮಿಸ್ ಮಾಡ್ಕೊಂಡೆ ನೋಡ್ರಿ ಇಲ್ಲಿ ಸ್ವಲ್ಪ.”
” ಸ್ವಲ್ಪ ಸುಮ್ನಿರು ಶೋ, ಇವತ್ತು ನಮ್ಮ ಕಂಪನಿ ಹೊಸ ಪ್ರಾಡಕ್ಟ್ ಲಾಂಚ್ ಮಾಡಿದೆ ಅದ್ನಾ ಚೆಕ್ ಮಾಡ್ತಿದಿನಿ.”
ಹೀಗೆ ಇಬ್ಬರು ತಮ್ಮ ತಮ್ಮ ಮೊಬೈಲ್ ನೋಡುತ್ತ ಅದರಲ್ಲಿ ಮುಳುಗಿ ಬಿಟ್ಟರು.ಅವರಿಗೆ ಸೂಪ್ ಬಂದಿದ್ದು ಅರಿವಿಲ್ಲ, ಊಟ ಮಾಡಬೇಕೆಂಬುದರ ಬಗ್ಗೆಯು ಪರಿವಿಲ್ಲಾ. ರಮೇಶ್ ತನ್ನ ಕಂಪನಿಯ ಪ್ರಾಡಕ್ಟಗಳನ್ನು ನೋಡುತ್ತಿದ್ದರೆ ಇತ್ತ ತನ್ನ ಫೋಟೋಗಳಿಗೆ ಬಂದ ಲೈಕುಗಳ ಲೆಕ್ಕ ಹಾಕುತ್ತ ಶೋಭಾ ಕುಳಿತಳು.ಸಮಯ ಹೋಗಿದ್ದೆ ಗೊತ್ತಾಗಲಿಲ್ಲ ಊಟದ ಆರ್ಡರ್ ಮಾಡಬೇಕು ಎಂದು ರಮೇಶ ಮೊಬೈಲ್ ನೋಡುತ್ತಲೆ.
“ಚಿನ್ನು ಏನ್ ಊಟ ಮಾಡ್ತಿಯಾ ಆರ್ಡರ್ ಮಾಡು”
ಎಂದು ಪಕ್ಕಕ್ಕೆ ನೋಡಿದರೆ ಅಲ್ಲಿ ಚಿನ್ನು ಇಲ್ಲದರುವುದನ್ನು ನೋಡಿ ಗಾಬರಿಯಗಿ, “ಹೇ. ಶೋಭಾ ಚಿನ್ನುನ ನೋಡಿದ್ಯಾ.”
“ಇಲ್ಲಾ ರೀ. ನಾನು ಸ್ಟೇಟಸ್ ಚೆಕ್ ಮಾಡ್ತಿದ್ದೆ.”
“ನಿನ್ ಸ್ಟೇಟಸ್ ಮನೆ ಹಾಳಾಗಿ ಹೋಗ್ಲಿ. ಪುಟ್ಟಿ ಕಾಣ್ತಿಲ್ಲಾ ಎಲ್ಲಿಗ್ ಹೊದ್ಲೋ ಏನೋ.?”
“ನಂಗ್ ಹೇಳ್ತಿರಲ್ಲಾ ನೀವ್ ನೋಡ್ಬಾರ್ದಾ ಯಾವಾಗ್ಲೂ ಆಫೀಸ್ ವರ್ಕ್ ಅಂತಿರ್ತೀರಾ.”
“ಮಕ್ಕಳನ್ನಾ ನೋಡ್ಕೊಳ್ಳೊದು ನಿನ್ನ ಕೆಲ್ಸಾ ನಾನ್ಸೆನ್ಸ್ ತರ ಮಾತಾಡಬೇಡ, ಮೊಬೈಲ್ ನೋಡೊದು ಬಿಟ್ಟು ಮಗುನಾ ನೋಡಬಾರ್ದಾ.?”
“ನನ್ನಾ ಪಬ್ಲಿಕ್ ಅಲ್ಲಿ ನಾನ್ಸೆನ್ಸ್ ಅಂತಾ ಬೈತಿರಲ್ಲಾ.ಐ ಹೆಟ್ ಯು.”
“ನನ್ನ ಮಗಳು ಕಾಣ್ತಿಲ್ಲಾ, ನಿನ್ನ ಹತ್ರ ಯುಸ್ಲೆಸ್ ಮಾತಾಡ್ತಿದಿನಲ್ಲಾ ನನ್ನ ತಲೆ ಕೆಟ್ಟಿದೆ ಅನ್ಸುತ್ತೆ.”
ಎಂದು ರಮೇಶ ಮಗಳನ್ನು ಹುಡುಕುತ್ತಾ
ಎಲ್ಲಾ ಕಡೆ ಒಡಾಡತೊಡಗಿದ ಅವನ ಹಿಂದೆ ಶೋಭಾ ಕೂಡಾ ಚಿನ್ನುವನ್ನು ಹುಡುಕಲು ಒಳಗೆ ಹೋದಳು. ಎಲ್ಲಿ ಹುಡುಕಿದರು ಚಿನ್ನು ಸಿಗಲಿಲ್ಲ. ‘ಅಯ್ಯೋ ನಮ್ಮಿಂದ ಎಂತಹ ದೊಡ್ಡ ತಪ್ಪಾಯ್ತು ದೇವರೆ’ ಎಂದು ದಂಪತಿಗಳು ಕಣ್ಣಿರಿಡುತ್ತ ಹುಡುಕುತ್ತಿರುವಾಗ ರಮೇಶಗೆ ಒಂದು ಫೋನ್ ಕಾಲ್ ಬಂದಿತು ನೋಡಿದರೆ ಅಪ್ಪ ಕಾಲ್ ಮಾಡಿದ್ದಾರೆ ‘ಅಯ್ಯೋ ಏನ್ ಅಂತಾರೊ ಅಪ್ಪ’ ಎಂದು ಭಯದಿಂದ ರಮೇಶ ಕಾಲ್ ರಿಸಿವ್ ಮಾಡಿದ.
“ಅಲ್ಲಾ ಕಣಪ್ಪಾ ರಮೇಶ ಎನ್ ಮಾಡ್ತಿದಾಳೆ ನನ್ನ ಬಂಗಾರ ಅವಳ ಹತ್ರ ಮಾತಾಡ್ಬೇಕು ಅನ್ನಸ್ತಿದೆ ಫೋನ್ ಕೊಡೊ ಸ್ವಲ್ಪ.”
“ಅಪ್ಪಾ. ಅದು ಅದು.”
“ಏನೋ ಅದು… ಅದು… ಅಂತಿದಿಯಾ ಚಿನ್ನು ಹುಷಾರಾಗಿ ಇದಾಳೆ ತಾನೆ.?
“ಅದು ಅಪ್ಪಾ… ಚಿನ್ನು ಅರ್ಧ ಗಂಟೆಯಿಂದ ಕಾಣ್ತಿಲ್ಲಾ ಅವಳನ್ನೆ ಹುಡುಕ್ತಾ ಇದಿವಿ.”
“ಅಯ್ಯೋ. ಬೆಪ್ಪ ತಕ್ಕಡಿ ನಿಮ್ಮ ಮೊಬೈಲ್ ನೋಡೋ ಹುಚ್ಚಲ್ಲಿ ಚಿನ್ನುನ ಕಳ್ಕೊಂಡ್ರಾ. ಸರಿ ಒಂದು ಕೆಲಸ ಮಾಡು ಅವಳಿಗೆ ಮಿಕ್ಕಿ ಮೌಸ್ ಬೊಂಬೆ ಅಂದ್ರೆ ತುಂಬಾ ಇಷ್ಟ ಅಲ್ಲಿ ಎಲ್ಲಾದ್ರೂ ಬೊಂಬೆ ಅಂಗಡಿ ಇದ್ರೆ ಅಲ್ಲಿಗ್ ಹೋಗಿ ನೋಡು. ”
“ಸರಿ ಅಪ್ಪ.” ಎಂದು ರಮೇಶ್ ಕಾಲ್ ಕಟ್ ಮಾಡಿದ.
ಅಲ್ಲೆ ಹತ್ತಿರದಲ್ಲಿರುವ ಎಲ್ಲ ಗೊಂಬೆಯ ಅಂಗಡಿಗಳನ್ನು ಹುಡುಕುತ್ತಿರುವಾಗ ದೂರದಲ್ಲಿ ಯಾರೋ ಒಬ್ಬ ಮಿಕ್ಕಿ ಮೌಸ್ ವೇಷ ಧರಿಸಿ ಮಕ್ಕಳನ್ನು ರಂಜಿಸುತ್ತಿರುವುದು ಕಂಡಿತು ಹತ್ತಿರ ಹೋಗಿ ನೋಡಿದರೆ ಚಿನ್ನು ಅದರ ಕೈ ಹಿಡಿದುಕೊಂಡು ಆಟವಾಡುತ್ತಿದ್ದಳು.
ಅವಳನ್ನು ನೋಡಿದ ರಮೇಶ ಹಾಗೂ ಶೋಭಾ ಆಕೆಯನ್ನು ಬಿಗಿದಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟರು.
ಆಕೆಗೆ ಏನು ಪ್ರಶ್ನಿಸದೆ ಬಿಗಿದಪ್ಪಿಕೊಂಡು ಅಳಲಾರಂಭಿಸಿದರೂ. ರಮೇಶ ಅಪ್ಪನಿಗೆ ಮನದಲ್ಲಿಯೆ ಥ್ಯಾಂಕ್ಸ್ ಹೇಳಿ ಮುಗುಳ್ನಕ್ಕನು.
ನಾವು ಎಲ್ಲರೂ ಹೀಗೆ ಮಾಡುತ್ತಿದ್ದೆವೆ ನಮ್ಮೊಡನಿರುವ ನಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುವವರೊಂದಿಗೆ ಕಾಲ ಕಳೆಯುವುದ ಬಿಟ್ಟು ಎಲ್ಲೋ ಇರುವ ಕಣ್ಣಿಗೆ ಕಾಣದ ಅಪರಿಚಿತರ ಫೋಟೊಗಳನ್ನು ಲೈಕ್ ಮಾಡುತ್ತ, ಬೇಡದ ವಿಷಯದ ಬಗ್ಗೆ ಕಮೆಂಟ್ ಮಾಡುತ್ತಾ. ಆನ್‌ಲೈನ್ ಸ್ನೇಹ , ಪ್ರೀತಿ , ವಾತ್ಸಲ್ಯದ ಮೊರೆ ಹೋಗುತ್ತಿದ್ದೆವೆ. ನಾವು — ಇರುವುದೆಲ್ಲವ ಬಿಟ್ಟು ಬದುಕುವ ಬದಲು ಇರುವುದರೊಂದಿಗೆ ಬದುಕುವುದನ್ನು ಕಲಿಯಬೇಕಿದೆ…
-ರಾಜೇಶ ಎಸ್ ಜಾಧವ, ಬಾಗಲಕೋಟ.
Good message
ಕತೆ ಬಹಳಷ್ಟು ಚೆನ್ನಾಗಿದೆ. ಈಗಿನ ಕಾಲದಲ್ಲಿ ಆಗುವಂತಹ ಘಟನೆ, ಮೊಬೈಲ್ ನಲ್ಲಿ ಮಗ್ನವಾಗಿದ್ದರೆ ನಿಜ ಸಂಗತಿ ಮರೆತು ಬಿಡುತ್ತಾರೆ,
ಮೊಬೈಲಿನಿಂದಾಗುವ ಅನಾಹುತವನ್ನು ಚೆನ್ನಾಗಿ ವಿವರಿಸಿದ್ದೀರಿ
ಧನ್ಯವಾದಗಳು….