ಎರಡು ಡುಬ್ಬಗಳುಳ್ಳ ಒಂಟೆ
ಜಮ್ಮು ಕಾಶ್ಮೀರ ರಾಜ್ಯದ ಲಡಾಕ್ ಜಿಲ್ಲೆಯ ಮುಖ್ಯ ನಗರಿಯಾದ ಲೇಹ್ ನಿಂದ ರಸ್ತೆ ಮಾರ್ಗವಾಗಿ ಸುಮಾರು 160 ಕಿ.ಮೀ ಪ್ರಯಾಣಿಸಿದಾಗ ನುಬ್ರಾ ಕಣಿವೆಯ ‘ಹುಂಡರ್’ ಹಳ್ಳಿ ಸಿಗುತ್ತದೆ. ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಹಾಗೂ ರಾಜಸ್ಥಾನದ ಮರುಭೂಮಿಯಲ್ಲಿ ಬೆನ್ನಿನ ಮೇಲೆ ಒಂದು ಡುಬ್ಬ ಇರುವ ಒಂಟೆಗಳನ್ನು ಕಾಣುತ್ತೇವೆ. ಆದರೆ, ಇಲ್ಲಿ ಬೆನ್ನ ಮೇಲೆ ಎರಡು ಡುಬ್ಬಗಳಿರುವ ಒಂಟೆಗಳು ಕಾಣಸಿಗುತ್ತವೆ.
ಮೂಲತ: ಮಂಗೋಲಿಯಾದ ‘ಬಾಕ್ಟ್ರಿಯನ್’ ತಳಿಯ ಈ ಒಂಟೆಗಳಿಗೆ ಹಿಮಾಲಯದ ಚಳಿಯನ್ನು ಎದುರಿಸಿ ಬದುಕುವ ಶಕ್ತಿ ಇದೆ. ಹಿಂದಿನ ಕಾಲದಲ್ಲಿ ವ್ಯಾಪಾರಿಗಳು ಚೀನಾದಿಂದ ಮಧ್ಯಪ್ರಾಚ್ಯ ದೇಶಗಳಿಗೆ ಈ ದಾರಿಯಲ್ಲಿ ಒಂಟೆಗಳ ಮೂಲಕ ರೇಷ್ಮೆಯನ್ನು ಸಾಗಿಸುತ್ತಿದ್ದರು. ಹಾಗಾಗಿ ಈ ವ್ಯಾಪಾರಿ ರಸ್ತೆಗೆ ‘ಸಿಲ್ಕ್ ರೂಟ್ ‘ ಎಂಬ ಹೆಸರಿತ್ತು. ಕಾಲಾನಂತರ ಈ ವ್ಯಾಪಾರ ಪದ್ಧತಿ ಅಳಿದ ಮೇಲೆ ವ್ಯಾಪಾರಸ್ಥರು ಬಿಟ್ಟು ಹೋದ ಒಂಟೆಗಳು ನುಬ್ರಾ ಕಣಿವೆಯಲ್ಲಿಯೇ ಉಳಿದು ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು, ಪ್ರಮುಖ ಪ್ರವಾಸಿ ಆಕರ್ಷಣೆಯಾಗಿವೆ.
– ಹೇಮಮಾಲಾ.ಬಿ, ಮೈಸೂರು.
(10/10/2018ರ ಮಂಗಳ ಪತ್ರಿಕೆಯಲ್ಲಿ ಪ್ರಕಟವಾದ ಬರಹ)
‘
ತುಂಬಾ ಸ್ವಾರಸ್ಯಕರ ವಿಷಯ, ಹೀಗೆ ಹಲವಾರು ಅಚ್ಚರಿಯ ವಿಷಯಗಳನ್ನು ನಮಗೆ ತಲುಪಿಸುತ್ತೀರಿ.ಧನ್ಯವಾದಗಳು
ಒಳ್ಳೆಯ ಮಾಹಿತಿಯುಕ್ತ ಲೇಖನ