ನನ್ನ ವಿಮಾನ ಪಯಣ
ಚಿಕ್ಕ ವಯಸ್ಸಿನಲ್ಲಿ ವಿಮಾನ ಹಾರುವ ಶಬ್ದ ಕೇಳಿಸಿದಾಕ್ಷಣ ಏನೇ ಕೆಲಸ ಮಾಡುತ್ತಿದ್ದರೂ ಹೊರಗೆ ಓಡಿ ಬಂದು ಬಿಡುತ್ತಿದ್ದೆವು.ಊಟ ಮಾಡುತ್ತಿರಲಿ ,ಓದುತ್ತಿರಲಿ ,ಬರೆಯುತ್ತಿರಲಿ ಮಲಗಿರಲಿ, ಕೆಲಸ ಮಾಡುತ್ತಿರಲಿ ,ಸ್ನಾನ ಮಾಡುತ್ತಿರಲಿ, ಕೊನೆಗೆ ಶೌಚ ಗೃಹದಲ್ಲಿ ಇರಲಿ ಅರ್ಧಕ್ಕೆ ನಿಲ್ಲಿಸಿ ಓಡೋಡಿ ಬಂದು ತಲೆ ಎತ್ತಿ ಆಕಾಶದಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ ವಿಮಾನವನ್ನು ಅದು ಮರೆಯಾಗುವ ತನಕ ಪುಳಕದಿಂದ ನೋಡುತ್ತಿದ್ದೆವು. ಅಷ್ಟು ಪುಟಾಣಿ ವಿಮಾನದಲ್ಲಿ ಜನ ಹೇಗೆ ಕೂರುತ್ತಾರೆ, ಅದನ್ನು ಹೇಗೆ ಹಾರಿಸುತ್ತಾರೆ ಎನುವ ಸಂದೇಹ ಸದಾ ನನ್ನನ್ನು ಆ ವಯಸ್ಸಿನಲ್ಲಿ ಕಾಡುತ್ತಿದ್ದವು. ಆ ಸಂದೇಹ ಸ್ವಲ್ಪ ದೊಡ್ಡವರಾದ ಮೇಲೆ ನಿವಾರಣೆ ಆಯಿತು.
ಸಿನಿಮಾಗಳನ್ನು ನೋಡುವಾಗ ವಿಮಾನ ಬಸ್ ಗಿಂತ ದೊಡ್ಡದು .ಆಕಾಶದ ಮೇಲೆ ಮೇಲೆ ಹೋದಾಗ ನಮಗೆ ಚುಕ್ಕೆಯಂತೆ ಕಾಣಿಸುತ್ತದೆ ಅಂತ ಗೊತ್ತಾಯಿತು. ಆದರೆ ಹೈಸ್ಕೂಲಿಗೆ ಬರುವ ತನಕ ಈ ವಿಮಾನ ಅದು ಹೇಗೆ ಮೇಲೆ ಹಾರುತ್ತದೆ,ಅದು ಹೇಗೆ ಕೆಳಗೆ ಬೀಳದೆ ಇರುತ್ತದೆ ಅನ್ನುವ ಸಂದೇಹ ಮಾತ್ರ ನಿವಾರಣೆ ಆಗಿರಲೇ ಇಲ್ಲ. ವಿಮಾನವನ್ನು ದೂರದಿಂದಲೇ ನೋಡಿ ಖುಷಿಪಡುತ್ತಿದ್ದೆ.ವಿಮಾನ ಪ್ರಯಾಣ ಮಾಡುವವರು ಜೀವದ ಆಸೆ ಬಿಟ್ಟು ಪ್ರಯಾಣ ಮಾಡಬೇಕು ಅನ್ನುವುದು ಮಾತ್ರ ನನಗೆ ಚೆನ್ನಾಗಿ ಮನದಟ್ಟು ಆಗಿಬಿಟ್ಟಿತ್ತು. ನಾನಂತೂ ಯಾವ ಕಾಲಕ್ಕೂ ಜೀವವನ್ನು ಪಣಕ್ಕಿಡುವ ವಿಮಾನವನ್ನು ಹತ್ತಲಾರೆ ಅಂತ ಮನದಲ್ಲಿಯೇ ಶಪಥ ಮಾಡಿದ್ದೆ.ಆದರೆ ಅದನ್ನು ಎಲ್ಲರ ಮುಂದೂ ಹೇಳಲಾದೀತೆ. ಹೇಳಿದರೆ ಆಡಿಕೊಂಡು ನಕ್ಕಾರೆಂದು ಯಾರ ಬಳಿಯೂ ಹೇಳಿರಲಿಲ್ಲ.ಆ ಕಾಲದಲ್ಲಿ ಎರಡು ಚಕ್ರದ ವಾಹನದಲ್ಲಿಯೇ ಕೂರುವುದು ಕನಸು ಎನಿಸಿಕೊಳ್ಳುತ್ತಿದ್ದಾಗ ವಿಮಾನ ಎರಲಾರೆ ಅಂದರೆ ಕೇಳಿದವರು ಹಾಸ್ಯ ಮಾಡುವುದಿಲ್ಲವೆ. ಹಾಗಾಗಿ ನಾನು ಯಾರಿಗೂ ಹೇಳುವ ಧೈರ್ಯ ಮಾಡಲಿಲ್ಲ.
ಕಾಲೇಜಿನಲ್ಲಿ ಓದುವಾಗ ಉತ್ತರ ಭಾರತ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ರಾಜಧಾನಿ ದೆಹಲಿಯಲ್ಲಿ ಎಲ್ಲರಿಗೂ ವಿಮಾನದಲ್ಲಿ ನಗರ ಪ್ರದಕ್ಷಿಣೆ ಮಾಡಿಸುತ್ತೆವೆ ಎಂದು ನಮ್ಮ ಅಧ್ಯಾಪಕರು ಹೇಳಿದಾಗ ಆತಂಕವಾಗಿತ್ತು. ಆಗ ನನಗೆ ಹೊಸ ಚಿಂತೆ ಶುರುವಾಗಿತ್ತು. ನಾನು ವಿಮಾನ ಏರಲಾರೆ ಅಂತ ಶಪಥ ಮಾಡಿಬಿಟ್ಟಿದ್ದೆನೆ. ಆದರೆ ಎಲ್ಲರೂ ಹೋಗುವಾಗ ನಾನೊಬ್ಬಳೇ ಬರುವುದಿಲ್ಲ ಅಂತ ಹೇಗೆ ಹೇಳುವುದು.ನನ್ನ ಶಪಥದ ಬಗ್ಗೆಯಾಗಲಿ ವಿಮಾನ ಬಗ್ಗೆ ಇರುವ ಭಯವನ್ನಾಗಲಿ ಹೇಳಲಾದೀತೆ. ಪ್ರವಾಸಕ್ಕೆ ಹೋಗುವುದು ಬೇಡ ಅಂತ ಅಂದುಕೊಂಡಿದ್ದೆ. ಆದರೆ ಗೆಳತಿಯರು ಬಿಡಬೇಕಲ್ಲ.ಅವರ ಬಲವಂತಕ್ಕೆ ಹಾಗೂ ಪ್ರವಾಸ ನನಗೆ ತುಂಬಾ ಇಷ್ಟವಾದ್ದರಿಂದ ಅವಕಾಶ ಮಿಸ್ ಮಾಡಿಕೊಳ್ಳುವ ಮನಸ್ಸಿಲ್ಲದೆ ಹೊರಟಿದ್ದೆ.ವಿಮಾನ ಹತ್ತುವ ಸಮಯದಲ್ಲಿ ಏನೋ ಕಾರಣ ಹೇಳಿ ತಪ್ಪಿಸಿ ಕೊಂಡರಾಯಿತು ಅಂತ ಅಂದು ಕೊಂಡಿದ್ದೆ. ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ. ನಮ್ಮ ಪ್ರಾಧ್ಯಾಪಕರು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಯರು ಪ್ರವಾಸಕ್ಕೆ ಬರಲೆಂದು ವಿಮಾನಯಾನ ಮಾಡಿಸುತ್ತೆವೆ ಎಂದು ಒಂದು ಡೋಸ್ ಕೊಟ್ಟದ್ದರು ಅಂತ ನಂತರ ಗೊತ್ತಾಗಿ ಸಮಾಧಾನದ ಉಸಿರು ಬಿಟ್ಟಿದ್ದೆ. ಬೇರೆಯವರಿಗೆಲ್ಲ ಈ ಮೋಸ ಗೊತ್ತಾಗಿ ನಿರಾಶರಾಗಿದ್ದರು ಅಧ್ಯಾಪಕರ ಮೇಲೆ ಕೋಪಗೊಂಡರೂ ಏನೂ ಪ್ರಯೋಜನ ಇಲ್ಲ ಅಂತ ಸುಮ್ಮನಾಗಿದ್ದರು.ಪ್ರವಾಸ ಮಾತ್ರ ತುಂಬಾ ಚೆನ್ನಾಗಿತ್ತು. ಆ ಮಜದಲ್ಲಿ ವಿಮಾನ ಯಾನದ ವಿಚಾರವನ್ನು ಮರೆತು ಬಿಟ್ಟು ಪ್ರವಾಸದ ಖುಷಿಯಲ್ಲಿ ಮುಳುಗಿ ಹೋದರು.
ನಂತರ ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿ ಮದುವೆಯೂ ಆಯಿತು. ನನ್ನಂತೆಯೇ ನನ್ನ ಪತಿಗೂ ಪ್ರವಾಸದ ಬಗ್ಗೆ ಆಸಕ್ತಿ. ಹಾಗಾಗಿ ಪ್ರತಿ ವರ್ಷ ಪ್ರವಾಸಕ್ಕೆ ಹೋಗುವ ಹವ್ಯಾಸ ಶುರುವಾಯಿತು. ಹಾಗೆ ಪ್ರವಾಸಕ್ಕೆ ಮಂಗಳೂರುಗೆ ಹೋಗಿದ್ದೆವು. ಪ್ರವಾಸ ಮುಗಿಸಿ ವಾಪಸ್ಸು ಬರುವಾಗ ನಮ್ಮ ಟ್ಯಾಕ್ಸಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ನನಗೆ ಅಚ್ಚರಿಯಾಯಿತು. ನನ್ನ ಪತಿ ನಿನ್ನನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೆನೆ ಅಂದಾಗ ಹೌಹಾರಿ ಬಿದ್ದೆದ್ದೆ . ವಿಮಾನ ಪ್ರಯಾಣದ ಸರ್ಫ್ರೈಜ್ ಕೊಡಲಿದ್ದ ನನ್ನ ಪತಿಗೆ ನಾನು ವಿಮಾನ ಹತ್ತುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಅವರಿಗೇ ಸರ್ಫ್ರೈಜ್ ಕೊಟ್ಟು ಬಿಟ್ಟೆ. ನಿರಾಸೆಯಿಂದ ಮತ್ತು ಬೇಸರದಿಂದ ವಿಮಾನ ಹಾರುವ ತನಕ ಅಲ್ಲಿದ್ದು ನನ್ನ ಮೇಲೆ ಕೋಪ ಮಾಡಿ ಕೊಂಡು ವಾಪಸ್ ಟ್ಯಾಕ್ಸಿಯಲ್ಲಿ ನನ್ನ ನ್ನು ಕರೆದುಕೊಂಡು ಬಂದಿದ್ದರು.ಆ ಘಟನೆಯಾದ ಮೇಲೇ ಮತ್ತೆ ವಿಮಾನ ಪ್ರಯಾಣದ ಪ್ರಸ್ತಾಪ ಬಂದಿರಲಿಲ್ಲ . ಕೆಲ ವರ್ಷಗಳ ನಂತರ ನನಗೂ ವಿಮಾನ ಪ್ರಯಾಣ ಮಾಡಬೇಕು ಅನ್ನೊ ಸಣ್ಣ ಆಸೆ ಮನದೊಳಗೇ ಮೊಳೆಯುತ್ತಿತ್ತು.ಆದರೆ ಭಯ ಅದನ್ನು ಚಿವುಟಿ ಹಾಕುತ್ತಿತ್ತು. ಪ್ರತಿ ವರ್ಷದಂತೆ ಈ ಬಾರಿ ಉತ್ತರ ಭಾರತ ಪ್ರವಾಸ ಹೊರಟಾಗ ಸಮಯ ಕಡಿಮೆ ಆಗುತ್ತದೆ ಆನ್ನೊ ಕಾರಣಕ್ಕೆ ದೆಹಲಿಗೆ ವಿಮಾನದಲ್ಲಿ ಹೋಗಲೇ ಬೇಕಾಯಿತು. ತಪ್ಪಿಸಿ ಕೊಳ್ಳುವ ಅವಕಾಶವನ್ನು ನನಗೆ ಕೊಡದೆ ನನ್ನಪತಿ ಟಿಕೆಟ್ ಬುಕ್ ಮಾಡಿಸಿಯೇ ಬಿಟ್ಟರು. ವಿಧಿ ಇಲ್ಲದೆ ಧೈರ್ಯ ಮಾಡಿ ಸಿದ್ಧವಾದೆ. ಒಂದು ಕಡೆ ಮೊದಲ ಬಾರಿ ಆಕಾಶದಲ್ಲಿ ಹಾರುವ ರೋಮಾಂಚನ.ಮತ್ತೊಂದು ಕಡೆ ಜೀವ ಭಯ. ಎರಡೂ ಭಾವದಲ್ಲಿ ಬಳಲಿ ಹೋದೆ.
ಪ್ರಯಾಣದ ದಿನ ಬಂದೇ ಬಿಟ್ಟಿತು. ಜೀವವನ್ನು ಕೈಲಿ ಹಿಡಿದುಕೊಂಡು ವಿಮಾನ ನಿಲ್ದಾಣ ತಲುಪಿದೆ. ನನ್ನ ಪತಿ ಅಂತೂ ತುಂಬಾ ಸಡಗರದಿಂದ ಇದ್ದಾರೆ. ನನಗೊ ಎದೆ ಡವ ಡವ ಅನ್ನುತ್ತಿದೆ . ಎಲ್ಲ ಪ್ರಕ್ರಿಯೆಗಳು ಮುಗಿಸಿ ಹೇಗೊ ವಿಮಾನ ಹತ್ತಿ ಸೀಟಿನ ಮೇಲೆ ಕುಳಿತು ಕೊಂಡೆ. ವಿಮಾನ ಹೊರಡುವ ವೇಳೆಯಾಯಿತು. ಆತಂಕ ಹೆಚ್ಚಾಯಿತು. ಗಗನ ಸಖಿ ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಿ ಕೊಟ್ಟಳು. ಮೊದಲ ಬಾರಿ ವಿಮಾನ ಮೇಲೇರುವಾಗ ಏನೇನೂ ಆಗುತ್ತದೆ ಅಂತ ಕೇಳಿದ್ದೆ.ತಲೆ ಸುತ್ತು , ವಾಂತಿ ,ಎದೆಬಡಿತ ತೀವ್ರವಾಗುವಿಕೆ ಹೀಗೇ ಏನೇನೋ ನನಗೂ ಆಗುತ್ತದೆ ಅಂತ ಆತಂಕದಿಂದ ಕಾಯುತ್ತಿದ್ದೆ. ವಿಮಾನ ರನ್ ವೇನಲ್ಲಿ ಓಡುತ್ತಾ ನಿಧಾನವಾಗಿ ಮೇಲೇರ ತೊಡಗಿತು. ನಿಲ್ದಾಣದಲ್ಲಿ ಇದ್ದದ್ದೆಲ್ಲ ಚಿಕ್ಕದಾಗಿ ಕಾಣುತ್ತ ಕೊನೆಗೆ ಏನೂ ಕಾಣದಾಯಿತು. ಆಶ್ಚರ್ಯ, ನನಗೆ ಏನೂ ಆಗಲಿಲ್ಲ. ಹೊಟ್ಟೆ ತೊಳಸೂ ಇಲ್ಲ ,ತಲೆ ಸುತ್ತೂ ಇಲ್ಲ ,ಎದೆ ಬಡಿತದ ತೀವ್ರತೆಯೂ ಇಲ್ಲ. ಯಾವ ಅಹಿತಕರ ಅನುಭವವೂ ಆಗಲಿಲ್ಲ. ಕಿಟಕಿಯ ಹೊರಗೆ ಬರಿ ಮೋಡ ಅಷ್ಟೇ ಕಾಣಿಸುತ್ತಿತ್ತು. ವಿಮಾನ ಒಂಚೂರು ಅಲ್ಲಾಡದ ಹಾಗೆ ಹಾರುತ್ತಿದೆ ಅಥವಾ ಹಾಗೆ ನನಗೆ ಅನಿಸಿತು. ಸುಮಾರು ನಾಲ್ಕು ಗಂಟೆ ಗೋಡನ್ನಿನಲ್ಲಿ ಕುಳಿತಂತಾಗಿ ಯಾವ ರೋಮಾಂಚನವೂ ನನಗಾಗದೆ ವಿಮಾನ ಪ್ರಯಾಣ ನೀರಸವೆನಿಸಿತು. ಯಾವ ತೊಂದರೆಯೂ ಆಗದೆ ಕ್ಷೇಮವಾಗಿ ನನ್ನ ವಿಮಾನ ಪ್ರಯಾಣ ಮುಗಿದಿತ್ತು.
– ಶೈಲಜಾ, ಹಾಸನ
ಕೆಲವರಿಗೆ ಬಸ್ ಪ್ರಯಾಣ ಮಾಡುವಾಗ ವಾಂತಿ ಬರುತ್ತದೆ. ಆದರೆ ಅದೆಲ್ಲ ಒಂದು ಮಾನಸಿಕ ಒತ್ತಡ ಮಾತ್ರ. ಧೈರ್ಯವಾಗಿ ಇದ್ದರೆ ವಿಮಾನ ಪ್ರಯಾಣಕ್ಕೂ ಏನೂ ತೊಂದರೆ ಇಲ್ಲ. ಒಳ್ಳೆಯ ಲೇಖನ,